
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ
ಆರ್‌ಎಸ್‌ಎಸ್ ನೋಂದಣಿ ಪ್ರಶ್ನಿಸಿದ್ದಕ್ಕೆ ವೈಯಕ್ತಿಕ ನಿಂದನೆ; ಬಿಜೆಪಿ ನಾಯಕರ ವಿರುದ್ಧ ಖರ್ಗೆ ಕಿಡಿ
ಆರ್‌ಎಸ್‌ಎಸ್ ಹೆಸರಿನಲ್ಲಿ ಯಾವುದಾದರೂ ಕಟ್ಟಡವಿದ್ದರೆ ತೋರಿಸಲಿ ಎಂಬ ಬಿಜೆಪಿ ನಾಯಕರ ಪ್ರಶ್ನೆ ಕುರಿತಂತೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, "RSS ಹೆಸರಲ್ಲಿ ಯಾವುದೇ ಕಟ್ಟಡ ಇಲ್ಲ ಎಂಬುದನ್ನು ನಾನೇ ಹೇಳಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಆರ್‌ಎಸ್‌ಎಸ್ ನೋಂದಣಿ, ಹಣಕಾಸು ವ್ಯವಹಾರ ಪ್ರಶ್ನಿಸಿದ ಕಾರಣಕ್ಕೆ ಬಿಜೆಪಿ ನಾಯಕರು ತಮ್ಮ ಬಣ್ಣ, ಕುಟುಂಬ ಹಾಗೂ ಸಮುದಾಯದ ಕುರಿತು ವೈಯಕ್ತಿಕವಾಗಿ ಟೀಕಿಸುವ ಮೂಲಕ ಭೌತಿಕ ದಿವಾಳಿತನ ಪ್ರದರ್ಶಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಆರ್‌ಎಸ್‌ಎಸ್ ಹೆಸರಿನಲ್ಲಿ ಯಾವುದಾದರೂ ಕಟ್ಟಡವಿದ್ದರೆ ತೋರಿಸಲಿ ಎಂಬ ಬಿಜೆಪಿ ನಾಯಕರ ಪ್ರಶ್ನೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, "RSS ಹೆಸರಲ್ಲಿ ಯಾವುದೇ ಕಟ್ಟಡ ಇಲ್ಲ ಎಂಬುದನ್ನು ನಾನೇ ಹೇಳಿದ್ದೇನೆ. ಆರ್‌ಎಸ್‌ಎಸ್ ಸಂಘಟನೆ ನೋಂದಣಿಯೇ ಆಗಿಲ್ಲ, ಅದಕ್ಕಾಗಿಯೇ ಹಣ ಎಲ್ಲಿಂದ ಬರುತ್ತಿದೆ ಎಂದು ಕೇಳುತ್ತಿದ್ದೇವೆ. ಕಾರ್ಯಕ್ರಮ ನಡೆಸಲು ಜನರು ಸ್ವಯಂಪ್ರೇರಿತರಾಗಿ ದೇಣಿಗೆ ನೀಡುತ್ತಾರೆಯೇ ಅಥವಾ ಎಲ್ಲಿಂದ ಹಣ ಬರಲಿದೆ ಎಂಬುದನ್ನು ಹೇಳಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
"ಆರ್‌ಎಸ್‌ಎಸ್ ಕುರಿತು ಪ್ರಶ್ನಿಸಿದರೆ ಬಿಜೆಪಿ ನಾಯಕರು ನನ್ನನ್ನು ವೈಯಕ್ತಿಕ ಟೀಕಿಸುತ್ತಾರೆ. ನನ್ನ ಆಸ್ತಿ ಕುರಿತು ಮಾತನಾಡುತ್ತಾರೆ. ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯವು ನಿಮ್ಮ ಕೈಯಲ್ಲೇ ಇದೆ. ಬೇಕಿದ್ದರೆ ತನಿಖೆ ಮಾಡಲಿ" ಎಂದು ತಿರುಗೇಟು ನೀಡಿದ್ದಾರೆ.
ನ.2 ರಂದು ಭೀಮ್ ಆರ್ಮಿ ಸಂಘಟನೆಯು ರ‍್ಯಾಲಿಗೆ ಅನುಮತಿ ಕೇಳಿರುವ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, "ಅ.24 ರಂದು ನ್ಯಾಯಾಲಯ ಏನು ತೀರ್ಮಾನ ನೀಡಲಿದೆಯೋ ನೋಡಬೇಕು. ಯಾರೇ ಪಥ ಸಂಚಲನ ನಡೆಸಿದರೂ ಅನುಮತಿ ತೆಗೆದುಕೊಂಡು ಮಾಡಬೇಕು ಎಂದು ಹೇಳಿದ್ದಾರೆ.
ಬೆಂಗಾವಲು ವಾಹನ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಜನ ನಮ್ಮೊಂದಿಗಿದ್ದಾರೆ, ಯಾವ ಬೆಂಗಾವಲು ವಾಹನ ಬೇಡ. ಮೂರು ದಿನ ಬೆಂಗಾವಲು ವಾಹನವನ್ನೇ ಬಳಸಿಲ್ಲ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್ ಹೆಸರಿನಲ್ಲಿ ಹಲವರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಗುಪ್ತಚರ ವರದಿ ಆಧರಿಸಿ ಗೃಹ ಇಲಾಖೆಯು ಸಚಿವ ಪ್ರಿಯಾಂಕ್ ಖರ್ಗೆಗೆ ಭದ್ರತೆ ಹೆಚ್ಚಿಸಿತ್ತು.
ಯತೀಂದ್ರ ಹೇಳಿಕೆಗೆ ಸಮರ್ಥನೆ
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದಲ್ಲಿ ಸೈದ್ದಾಂತಿಕವಾಗಿ ಬದ್ಧರಾದವರು ಇದ್ದಾರೆ. ಸತೀಶ್ ಜಾರಕಿಹೊಳಿಯವರು ಮೂಢನಂಬಿಕೆ ನಿವಾರಿಸಲು ಕೆಲಸ ಮಾಡಿದ್ದಾರೆ. ಯತೀಂದ್ರ ಅವರು ಹೇಳಿರುವುದರಲ್ಲಿ ತಪ್ಪೇನಿದೆ?, ಸಂವಿಧಾನ ಪರವಾಗಿ ಮೂಢನಂಬಿಕೆ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ಹಾಗಾಗಿ ಯತೀಂದ್ರ ಹೇಳಿರುವುದರಲ್ಲಿ ತಪ್ಪೇನಿಲ್ಲ. ಸೈದ್ಧಾಂತಿಕವಾಗಿ ಇರುವವರು ಅಧಿಕಾರ ಮುಂದುವರೆಸಬೇಕು. ಸ್ವಾಭಿಮಾನದ ಬದುಕನ್ನು ಎಲ್ಲರಿಗೂ ಕೊಡಬೇಕು, ಅದರ ಬದ್ಧತೆ ನಮ್ಮ ಮೇಲಿದೆ ಎಂದು ಹೇಳುವ ಮೂಲಕ ಯತೀಂದ್ರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.