ಕುಮಾರಸ್ವಾಮಿ ವಿರುದ್ಧ ಕೆಟ್ಟಪದ ಬಳಕೆ; ಲೋಕಾಯುಕ್ತ ಎಡಿಜಿಪಿ ವಿರುದ್ಧ ಕ್ರಮಕ್ಕೆ ಪ್ರಹ್ಲಾದ ಜೋಷಿ ಆಗ್ರಹ
ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅವಹೇಳನಾಕಾರಿ ಪದ ಬಳಸಿರುವುದು ಅಧಿಕಾರಿಯ ಅಹಂಕಾರದ ಪರಮಾವಧಿ ಸೂಚಿಸುತ್ತದೆ. ತಮ್ಮ ಅಹಂಕಾರದ ನುಡಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ʼಹಂದಿʼ ಪದ ಬಳಸಿ ಅವಹೇಳನ ಮಾಡಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಸೂಕ್ತ ಕ್ರಮ ಜರುಗಿಸಲಾಗುವುದು. ಸೇವಾ ಸನ್ನಡತೆಯ ನಿಯಮಗಳ ಬಗ್ಗೆ ಕಿಂಚಿತ್ತು ಪರಿಜ್ಙಾನವಿದ್ದರೇ ಕೂಡಲೇ ಸಚಿವರ ಕ್ಷಮಾಪಣೆ ಕೇಳಬೇಕು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅವಹೇಳನಾಕಾರಿ ಪದ ಬಳಸಿರುವುದು ಅಧಿಕಾರಿಯ ಅಹಂಕಾರದ ಪರಮಾವಧಿ ಸೂಚಿಸುತ್ತದೆ. ತಮ್ಮ ಅಹಂಕಾರದ ನುಡಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕುಮಾರಸ್ವಾಮಿ ವಿರುದ್ಧ ತನಿಖೆಗೆ ಸರ್ಕಾರ ಆದೇಶಿಸಿದರೆ ಅಗತ್ಯವಾಗಿ ತನಿಖೆ ನಡೆಸಬಹುದು. ಕುಮಾರಸ್ವಾಮಿ ಅವರು ಚಂದ್ರಶೇಖರ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಚಿವರ ಆರೋಪಕ್ಕೆ ಸಭ್ಯ ಭಾಷೆಯಲ್ಲಿ ಸ್ಪಷ್ಟನೆ ಕೊಡಬೇಕಿತ್ತು. ಆದರೆ, ಕೆಟ್ಟದಾಗಿ ಸಂಬೋಧಿಸುವುದು ಲೋಕಾಯುಕ್ತ ವಿಶೇಷ ತನಿಖಾ ತಂಡದ ಅಧಿಕಾರಿಗೆ ಶೋಭೆ ತರುವುದಿಲ್ಲ. ಅಧಿಕಾರಿಗಳ ಈ ವರ್ತನೆ ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ದುರಂಹಕಾರದ ಹೇಳಿಕೆಗಳು ಕಾಂಗ್ರೆಸ್ ಸರ್ಕಾರಕ್ಕೆ ಮುಳುವಾಗಲಿವೆ. ಕಾಂಗ್ರೆಸ್ ಎಂಥೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆ ಎಂಬುದು ಜನರಿಗೆ ತಿಳಿಯುತ್ತಿದೆ . ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಶಾಶ್ವತವಲ್ಲ. ಸ್ವಲ್ಪ ಎಚ್ಚರ ವಹಿಸಿ ಮಾತನಾಡಿ, ಕೆಲಸ ಮಾಡುವುದನ್ನು ಕಲಿಯಬೇಕು ಎಂದು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರಿಗೆ ಸಚಿವ ಜೋಷಿ ಅವರು ಚಾಟಿ ಬೀಸಿದರು.