Minister Kharge hints at the success of the e-asset movement in the Gram Panchayat area
x

ಸಾಂದರ್ಭಿಕ ಚಿತ್ರ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇ-ಸ್ವತ್ತು ಆಂದೋಲನ ಯಶಸ್ಸಿಗೆ ಸಚಿವ ಖರ್ಗೆ ಸೂಚನೆ

ರಾಜ್ಯದ ಲಕ್ಷಾಂತರ ಮಂದಿ ಈ ಯೋಜನೆಯ ಲಾಭ ಹೊಂದಲು ತವಕದಿಂದ ಕಾಯುತ್ತಿದ್ದು, ಸಾರ್ವಜನಿಕರಿಗೆ ಸುಲಲಿತವಾಗಿ ಹಾಗೂ ಪಾರದರ್ಶಕವಾಗಿ ಇ–ಸ್ವತ್ತು ಪ್ರಯೋಜನ ದೊರೆಯುವಂತೆ ಸಿಬ್ಬಂದಿಯನ್ನು ಸಜ್ಜು ಮಾಡಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಸುಮಾರು ಒಂದು ಕೋಟಿ ಆಸ್ತಿಗಳನ್ನು ಇ-ಸ್ವತ್ತು ತೆಕ್ಕೆಗೆ ತರುವ ಮೂಲಕ ಮನೆ ಹಾಗೂ ನಿವೇಶನಗಳನ್ನು ಸಕ್ರಮಗೊಳಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಜಿಲ್ಲಾ ಪಂಚಾಯತಿಗಳ ಸಿಇಒಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದರು.

ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಲಕ್ಷಾಂತರ ಮಂದಿ ಈ ಯೋಜನೆಯ ಲಾಭ ಹೊಂದಲು ತವಕದಿಂದ ಕಾಯುತ್ತಿದ್ದು, ಸಾರ್ವಜನಿಕರಿಗೆ ಸುಲಲಿತವಾಗಿ ಹಾಗೂ ಪಾರದರ್ಶಕವಾಗಿ ಇ–ಸ್ವತ್ತು ಪ್ರಯೋಜನ ದೊರೆಯುವಂತೆ ಸಿಬ್ಬಂದಿಯನ್ನು ಸಜ್ಜು ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ನೆರವನ್ನು ಪಡೆದು ಇ–ಸ್ವತ್ತು ಆಂದೋಲನವನ್ನು ಯಶಸ್ವಿಗೊಳಿಸಬೇಕೆಂದರು.

ಸಂಪನ್ಮೂಲ ಹೆಚ್ಚಿಸುವ ಯೋಜನೆ ರೂಪಿಸಿ

ಗ್ರಾಮ ಪಂಚಾಯತಿಗಳ ಸಂಪನ್ಮೂಲವನ್ನು ವೃದ್ಧಿಸುವ ಮೂಲಕ ಸ್ಥಳೀಯ ಸರ್ಕಾರಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೂತನವಾಗಿ ಅನುಷ್ಠಾನಕ್ಕೆ ತಂದಿರುವ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮದಡಿ (ಲೀಪ್)‌ ಗ್ರಾಮ ಪಂಚಾಯತಿ ಮಟ್ಟದಲ್ಲಿ ಲಭ್ಯವಿರುವ ಆಸ್ತಿಗಳನ್ನು ಪತ್ತೆ ಮಾಡಿ, ಅಂತಹ ಸ್ಥಳದಲ್ಲಿ ಪಂಚಾಯತಿಗಳಿಗೆ ಶಾಶ್ವತ ಆದಾಯ ತಂದು ಕೊಡುವ ಕಟ್ಟಡಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಪ್ರವಾಸಿ ತಾಣಗಳು ಹಾಗೂ ಯಾತ್ರಾಸ್ಥಳಗಳ ಸಮೀಪ ಲಭ್ಯವಿರುವ ಗ್ರಾಮ ಪಂಚಾಯತಿ ಆಸ್ತಿಗಳಲ್ಲಿ ಸಂಪನ್ಮೂಲ ಹೆಚ್ಚಿಸುವ ಯೋಜನೆಗಳನ್ನು ರೂಪಿಸಿದ್ದಲ್ಲಿ ಸರ್ಕಾರ ಅನುದಾನ ನೀಡಲಿದೆ ಎಂದರು.

ತೆರಿಗೆ ವಸೂಲಾತಿಗೆ ಆದ್ಯತೆ ನೀಡಿ

ಕೆಲವು ಜಿಲ್ಲೆಗಳಲ್ಲಿ ಆಸ್ತಿತೆರಿಗೆಯನ್ನು ಸಂಗ್ರಹಿಸುವಲ್ಲಿ ಪ್ರಗತಿ ಕುಂಠಿತವಾಗಿದೆ. ತೆರಿಗೆ ವಸೂಲಾತಿಗೆ ಆದ್ಯತೆ ನೀಡಲು ಗ್ರಾಮ ಪಂಚಾಯತಿ ಸಿಬ್ಬಂದಿಗೆ ಸೂಚನೆ ನೀಡಲು ಹಾಗೂ ಸಭೆ, ವಿಮರ್ಶೆ, ಸ್ಥಳ ಪರೀಕ್ಷೆ ಮೂಲಕ ಗಮನ ಹರಿಸಲು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇತ್ತೀಚೆಗೆ ಸೂಚನೆ ನೀಡಿರುವಂತೆ ಕಾಯಕಗ್ರಾಮ ಯಶಸ್ಸಿಗೆ ಕ್ರಮ ಕೈಗೊಂಡು, ಗ್ರಾಮ ಪಂಚಾಯತಿಗಳನ್ನು ದತ್ತು ತೆಗೆದುಕೊಂಡು ಅವುಗಳ ಸರ್ವತೋಮುಖ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕೆಂದು ತಿಳಿಸಿದರು.

ದೂರುಗಳನ್ನು ಗಂಭೀರವಾಗಿ ಪರಿಗಣಿಸಿ

ಸಾರ್ವಜನಿಕರು ನೀಡುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ಅವರ ಸಮಸ್ಯೆಗೆ ಪ್ರಾಮಾಣಿಕ ಪ್ರಯತ್ನ ಮಾಡಿ, ಕೆಳ ಹಂತದ ಅಧಿಕಾರಿಗಳಿಗೆ ಕಳುಹಿಸಿದ ದೂರುಗಳ ಸ್ಥಿತಿ ಗತಿಗಳ ಬಗ್ಗೆ ವಿವರಗಳನ್ನು ಪಡೆದು, ಸಮಸ್ಯೆ ಬಗೆಹರಿದ ನಂತರ ದೂರುದಾರರಿಗೆ ಉತ್ತರ ನೀಡುವ ಪರಿಪಾಠ ಬೆಳೆಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

Read More
Next Story