Waqf Controversy | 'ಸಚಿವ ಜಮೀರ್ ಅಯೋಗ್ಯʼ, ಏಕವಚನದಲ್ಲೇ ವಾಗ್ದಾಳಿ ನಡೆಸಿದ ಬಿವೈ ವಿಜಯೇಂದ್ರ
ಬಳ್ಳಾರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜಮೀರ್ ಅವರನ್ನೇ ಗುರಿಯಾಗಿಸಿ ವಾಗ್ಬಾಣಗಳನ್ನು ಬಿಟ್ಟರು.
ವಕ್ಫ್ ಆಸ್ತಿ ವಿವಾದ ಸರ್ಕಾರದ ವಿರುದ್ಧ ದಾಳಿ ನಡೆಸಲು ಪ್ರತಿಪಕ್ಷ ಬಿಜೆಪಿಗೆ ಉತ್ತಮ ಅಸ್ತ್ರವಾಗಿ ಲಭಿಸಿದೆ. ಅದರಲ್ಲೂ ವಕ್ಫ್ ಸಚಿವ ಜಮೀರ್ ಅಹಮದ್ ಬಿಜೆಪಿ ಮುಖಂಡರಿಂದ ಸತತವಾಗಿ ವಾಗ್ದಾಳಿಗೆ ಒಳಗಾಗುತ್ತಿದ್ದಾರೆ. ಅಂತೆಯೇ ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜಮೀರ್ ಅಹಮದ್ ವಿರುದ್ಧ ಏಕವಚದಲ್ಲಿ ಟೀಕಾಪ್ರಹಾರ ಮಾಡಿದ್ದಾರೆ.
ಬಳ್ಳಾರಿಯ ಸಂಡೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜಿಲ್ಲಾಧಿಕಾರಿಗಳಿಗೆ ಬೆದರಿಸಿ, ರೈತರಿಗೆ ನೋಟಿಸ್ ಕೊಡಿಸುತ್ತಿರುವ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಅಯೋಗ್ಯ ಮಂತ್ರಿ. ಆತನನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ಅಯೋಗ್ಯ ಸಚಿವ ಜಮೀರ್ ರಾಜ್ಯದ ಎಲ್ಲಾ ಕಡೆ ಸುತ್ತುತ್ತಿದ್ದಾನೆ. ರೈತರ ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ಕೊಡಿಸುತ್ತಿರುವ ಆತ ಒಬ್ಬ ಪುಡಾರಿ ಎಂದು ಹೇಳಿದ್ದಾರೆ.
ದೇವಸ್ಥಾನ, ಮಠಗಳಿಗೂ ನೋಟಿಸ್ ಕೊಡಲು ಅವನು ಹೇಳುತ್ತಿದ್ದಾನೆ. ನೋಟಿಸ್ ಕೊಡದಿದ್ದರೆ ನಿಮ್ಮ ವಿರುದ್ಧ ಕ್ರಮ ಜರುಗಿಸುತ್ತೇನೆ ಎಂದು ಹೆದರಿಸುತ್ತಿದ್ದಾನೆ. ಸಮಾಜಕ್ಕೆ ಬೆಂಕಿ ಹಚ್ಚುವ ಮನಸ್ಥಿತಿಯ ಅವನೊಬ್ಬ ಅಯೋಗ್ಯ ಎಂದು ವಿಜಯೇಂದ್ರ ಹೇಳಿದ್ದಾರೆ., ಜಮೀರ್‌ನಂಥ ಅಯೋಗ್ಯ ಸಚಿವನಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅಂಥವನಿಂದ ಜನರ ಕಣ್ಣೀರು ಒರೆಸುವುದು ಸಾಧ್ಯವೇ ಇಲ್ಲ, ಅದೇ ರೀತಿ ಅಯೋಗ್ಯ ಸರ್ಕಾರ ಎಂದು ವಿಜಯೇಂದ್ರ ಟೀಕಿಸಿದ್ದಾರೆ.