
ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ
ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ, ಬ್ಯಾಂಕ್ ಅಧಿಕಾರಿಗಳಿಗೆ ಸಚಿವ ಹೆಚ್‌ಡಿಕೆ ಸೂಚನೆ
ರೈತರು ಪಡೆಯುವ ಸಾಲಗಳಿಗೆ ಬಡ್ಡಿ ಜಾಸ್ತಿ ಎನ್ನುವ ದೂರುಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಅವರು ಏಕಕಾಲಕ್ಕೆ ತಮ್ಮ ಸಾಲವನ್ನು ಪಾವತಿ ಮಾಡಲು ಮುಂದಾಗುತ್ತಿದ್ದಾರೆ. ಅಂತಹ ರೈತರಿಗೆ ಬ್ಯಾಂಕುಗಳು ಸಹಕರಿಸಬೇಕು ಎಂದು ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬ್ಯಾಂಕುಗಳು ರೈತರ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕಠಿಣವಾಗಿ ನಡೆದುಕೊಳ್ಳಬಾರದು ಎಂದು ಕೇಂದ್ರ ಭಾರಿ ಕೈಗಾರಿಕಾ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಡ್ಯದಲ್ಲಿ ನಡೆದ ಜಿಲ್ಲಾ ಬ್ಯಾಂಕರ್‌ಗಳ ಸಭೆಯಲ್ಲಿ ಆನ್‌ಲೈನ್ ವೇದಿಕೆ ಮೂಲಕ ಭಾಗವಹಿಸಿ ಮಾತನಾಡಿದ ಅವರು, ರೈತರು ವಿವಿಧ ಉದ್ದೇಶಗಳಿಗೆ ಪಡೆಯುವ ಸಾಲಗಳಿಗೆ ಬಡ್ಡಿ ಜಾಸ್ತಿ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಕೃಷಿಕರು ಆರ್ಥಿಕ ಸಂಕಷ್ಟದಲ್ಲಿದ್ದು, ತಮ್ಮ ಸಾಲದ ಬಡ್ಡಿ ಹೆಚ್ಚಾಗಿರುವ ಬಗ್ಗೆ ಪ್ರತಿದಿನವೂ ದೂರುಗಳು ಬರುತ್ತಿವೆ. ಇಂತಹ ಸಂದರ್ಭದಲ್ಲಿ ರೈತರು ಒಮ್ಮೆಲೇ ಹಣ ಪಾವತಿ ಮಾಡಲು ಶ್ರಮಿಸುತ್ತಿದ್ದಾರೆ. ರೈತರು ಏಕಕಾಲಕ್ಕೆ ತಮ್ಮ ಸಾಲವನ್ನು ಪಾವತಿಸಲು (ಒನ್ ಟೈಮ್ ಸೆಟಲ್‌ಮೆಂಟ್ - OTS) ಮುಂದಾಗುತ್ತಿದ್ದಾರೆ. ಅಂತಹ ರೈತರಿಗೆ ಬ್ಯಾಂಕುಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ರೈತರು ತಾವು ಪಡೆದ ಸಾಲವನ್ನು ಒಮ್ಮೆಲೇ ಪಾವತಿ ಮಾಡುವ ಸಂದರ್ಭದಲ್ಲಿ, ಬ್ಯಾಂಕುಗಳು ಸೂಕ್ತ ಮಾರ್ಗದರ್ಶನ ನೀಡಬೇಕು ಹಾಗೂ ಪುನಃ ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ತಿಳಿಸಿದರು. ಇದು ರೈತರಿಗೆ ತಮ್ಮ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಮತ್ತು ಹೊಸದಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕುಗಳಿಗೆ ಮೆಚ್ಚುಗೆ
ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವಾಗುತ್ತಿದ್ದು, ಮಹಿಳಾ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಪ್ರಶಂಸಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಕರು, ಮಹಿಳೆಯರು ಮತ್ತು ರೈತರು ಕೇಂದ್ರದ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಬ್ಯಾಂಕುಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿ, ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು. ಸಭೆಯ ಇದೇ ಸಂದರ್ಭದಲ್ಲಿ, ವಾರ್ಷಿಕ ಆರ್ಥಿಕ ಕ್ರೆಡಿಟ್ ರಿಪೋರ್ಟ್ ಅನ್ನು ಬಿಡುಗಡೆ ಮಾಡಲಾಯಿತು.