ವಾಲ್ಮೀಕಿ ನಿಗಮ ಹಗರಣ | ಸಚಿವ ಬಿ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಎಸ್ಐಟಿ ವಶಕ್ಕೆ
x
ಸಚಿವ ನಾಗೇಂದ್ರ ಅವರ ಆಪ್ತ, ಕಾಂಗ್ರೆಸ್‌ ಮುಖಂಡ ನೆಕ್ಕಂಟಿ ನಾಗರಾಜ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ವಾಲ್ಮೀಕಿ ನಿಗಮ ಹಗರಣ | ಸಚಿವ ಬಿ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಎಸ್ಐಟಿ ವಶಕ್ಕೆ

ಬಹುಕೋಟಿ ಹಣಕಾಸು ಅಕ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡ ನೆಕ್ಕಂಟಿ ನಾಗರಾಜ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.


Click the Play button to hear this message in audio format

ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಸಚಿವ ನಾಗೇಂದ್ರ ಅವರ ಆಪ್ತ, ಕಾಂಗ್ರೆಸ್‌ ಮುಖಂಡ ನೆಕ್ಕಂಟಿ ನಾಗರಾಜ್‌ ಅವರನ್ನು ಸೋಮವಾರ (ಜೂ.3) ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನೆಕ್ಕಂಟಿ ನಾಗರಾಜ್ ವಾಲ್ಮೀಕಿ ನಿಗಮದ ಕಚೇರಿಗೆ ಹೋಗಿ ಸಚಿವರೊಂದಿಗೆ ಅಧಿಕಾರಿಗಳಿಗೆ ಫೋನ್ ಮೂಲಕ ಮಾತನಾಡಿಸಿದ್ದ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ನೆಕ್ಕಂಟಿ ನಾಗರಾಜ್ ಅವರನ್ನ ವಶಕ್ಕೆ ಪಡೆದ ಎಸ್.ಐ.ಟಿ, ಹಗರಣದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಮುಂದಾಗಿದೆ.

ಸದ್ಯ ಈಗಾಗಲೇ ಎಸ್.ಐ.ಟಿ ವಶದಲ್ಲಿರೋ ವಾಲ್ಮೀಕಿ ನಿಗಮ ಎಂ.ಡಿ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ನೀಡಿದ ಮಾಹಿತಿ ಮೇರೆಗೆ ನೆಕ್ಕಂಟಿ ನಾಗರಾಜನನ್ನು ವಶಕ್ಕೆ ಪಡೆದ ಎಸ್.ಐ.ಟಿ ತನಿಖೆ ಚುರುಕುಗೊಳಿಸಿದೆ.

ಆರು ದಿನಗಳ ಅವಧಿಗೆ ಕಸ್ಟಡಿಗೆ

ಇನ್ನು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಲ್ಲಿದ್ದ ಕೋಟ್ಯಂತರ ರೂ.ಗಳನ್ನು ಅಕ್ರಮವಾಗಿ ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿನ ಆರ್‌ಬಿಎಲ್‌ ಬ್ಯಾಂಕ್‌ನಲ್ಲಿನ ಖಾತೆಗಳಿಗೆ ವರ್ಗಾವಣೆ ಮಾಡಿರುವ ಹಗರಣದಲ್ಲಿ ಬಂಧಿತರಾಗಿರುವ ನಿಗಮದ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ್‌ ಜಿ.ದುರುಗಣ್ಣವರ್‌ ಅವರನ್ನು 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ನಿಗಮದ ಖಾತೆಯಲ್ಲಿದ್ದ 187.33 ಕೋಟಿ ರೂ.ಗಳ ಅಕ್ರಮ ವರ್ಗಾವಣೆ ರಹಸ್ಯ ಭೇದಿಸುವ ಪ್ರಯತ್ನ ನಡೆಸಿದ್ದಾರೆ.

ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೊಟ್ಯಾಂತರ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರು ಭಾನುವಾರ ಸಂಜೆ (ಮೇ 26) ಆತ್ಮಹತ್ಯೆಗೆ ಶರಣಾಗಿದ್ದು, ಅವರ ಡೆತ್‌ ನೋಟ್‌ನಲ್ಲಿ ನಿಗಮದ ಬ್ಯಾಂಕ್ ಖಾತೆಯಿಂದ 89.62 ಕೋಟಿ ರೂ.ಗಳನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬಾ ನಗರದ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರನ್ ಅವರ ಪತ್ನಿ ದಾಖಲಿಸಿರುವ ದೂರು ಹಾಗೂ ಮೃತ ಅಧಿಕಾರಿಯ ಡೆತ್ ನೋಟ್ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಸುತ್ತಿದೆ.

Read More
Next Story