ಸಂಡೂರು ಗಣಿ ಹಗರಣ | 420 ಕುಮಾರ, ತಮ್ಮ ಹುಳುಕು ಹೊರಬಿದ್ದಿದೆ: ಕಾಂಗ್ರೆಸ್ ಕಿಡಿ
x

ಸಂಡೂರು ಗಣಿ ಹಗರಣ | "420 ಕುಮಾರ, ತಮ್ಮ ಹುಳುಕು ಹೊರಬಿದ್ದಿದೆ": ಕಾಂಗ್ರೆಸ್ ಕಿಡಿ


ʻʻಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ ಬಂದು ಎದೆ ಮೇಲೆ ಒದ್ದನಂತೆ ಎನ್ನುವ ಆಡು ಮಾತಿನಂತೆ 420ಕುಮಾರ ಅವರು ತಮ್ಮ ಹುಳುಕು ಹೊರಬಿದ್ದಾಗ ಎಗರಿ ಬೀಳುತ್ತಿದ್ದಾರೆʼʼ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಕುಮಾರಸ್ವಾಮಿ ಅವರು ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ರಾಜ್ಯ ಘಟಕ, ಎಕ್‌ನಲ್ಲಿ ಹೀಗೆ ಪೋಸ್ಟ್‌ ಮಾಡಿದೆ. ʻʻಹೆಚ್‌ಡಿ ಕುಮಾರಸ್ವಾಮಿ ಅವರೇ, ಸಾಯಿ ವೆಂಕಟೇಶ್ವರ ಕಂಪೆನಿಗೆ ಕಾನೂನುಬಾಹಿರವಾಗಿ ತಾವು ಗಣಿ ಗುತ್ತಿಗೆ ನೀಡಿದ್ದು ಏಕೆ?ʼʼ ಎಂದು ಪ್ರಶ್ನೆ ಮಾಡಿದೆ.

ʻʻನಿಮ್ಮ ಈ ಹಗರಣದ ಬಗ್ಗೆ ನಿಮ್ಮ ದೋಸ್ತಿ ನಾಯಕರಾದ ಯಡಿಯೂರಪ್ಪನವರೇ ಸದನದಲ್ಲಿ ಆರೋಪ ಮಾಡಿದ್ದಾರೆ. ಅದಕ್ಕೆ ತಮ್ಮ ಉತ್ತರವೇನು? ಲೋಕಾಯುಕ್ತದ ಪತ್ರ ಹೇಗೆ ಹೊರಬಿತ್ತು ಎಂದು ಕೇಳುವ ತಮ್ಮ ಡೋಂಗಿ ಪಾರದರ್ಶಕತೆ ಬಯಲಾಗಿದೆಯಲ್ಲವೇ? ಟೆಂಡರ್ ಅಧಿಕಾರಿಗಳು ಕೊಟ್ಟಿದ್ದು, ನಾನು ಕೇವಲ ರೆಕಮೆಂಡ್ ಮಾಡಿದ್ದು ಎನ್ನುತ್ತಿದ್ದೀರಿ, ಮುಖ್ಯಮಂತ್ರಿ ರೆಕಮೆಂಡ್ ಮಾಡಿದ್ದಕ್ಕೆ ಅಧಿಕಾರಿಗಳು ಮಣೆ ಹಾಕಿದ್ದಾರೆ ಎನ್ನುವುದನ್ನು ಏಕೆ ಮರೆಮಾಚುವಿರಿ? ಎಂದು ಕೇಳಿದೆ.

ʻʻದಶಕದ ಹಿಂದಿನ ಹಗರಣದ ವಿಷಯ ಈಗ ಕೆದಕಿದ್ದು ತಪ್ಪು ಎಂಬಂತೆ ಮಾತಾಡುತ್ತಿದ್ದೀರಿ, ದಶಕದ ಹಿಂದೆ ಸಿದ್ದರಾಮಯ್ಯನವರ ಕುಟುಂಬಕ್ಕೆ ಬಿಜೆಪಿ ಸರ್ಕಾರವೇ ಇದ್ದಾಗ ಮಂಜೂರಾದ ಸೈಟ್ ಗಳ ಬಗ್ಗೆ ತಾವು ಈಗ ಕೆದಕಿದ್ದೀರಿ, ಏಕೆ?" ಎಂದು ಕಾಂಗ್ರೆಸ್ ಮರು ಪ್ರಶ್ನೆ ಕೇಳಿದೆ.‌

ʻʻಈ ಹಿಂದೆ ಇದೇ ನಿಮ್ಮ ರೆಕಮೆಂಡೇಷನ್ ಸಹಿ ನನ್ನದಲ್ಲ ಎಂದು ಸುಳ್ಳು ಹೇಳಿದ್ದಿರಿ ಅಲ್ಲವೇ? ಮಾನ್ಯ 420ಕುಮಾರ ಅವರೇ, ನಿಮ್ಮ ಸಾಚಾತನದ ಮುಖವಾಡ ನಾಡಿನ ಜನರ ಮುಂದೆ ಕಳಚಿದೆ, ರಾಜೀನಾಮೆ ಯಾವಾಗ ಕೊಡುವಿರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿʼʼ ಎಂದು ಕಾಂಗ್ರೆಸ್‌ ಕೇಳಿದೆ.

ಮತ್ತೊಂದು ಪೋಸ್ಟ್‌ನಲ್ಲಿ ʼ420ಸ್ವಾಮಿʼ ಎಂಬ ಅಡಿಬರಹದಲ್ಲಿ ಕುಮಾರಸ್ವಾಮಿ ಅವರ ಫೋಟೊ ಹಂಚಿಕೊಂಡು, ʻʻಸಿದ್ದರಾಮಯ್ಯನವರ ವಿರುದ್ಧ ಬಿಜೆಪಿಗರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸೈಟ್ ಪಡೆಯುವ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯನವರು ಹಸ್ತಕ್ಷೇಪ ಮಾಡಿದ್ದಕ್ಕಾಗಲಿ, ಪ್ರಭಾವ ಬೀರಿದ್ದಕ್ಕಾಗಲಿ ಯಾವುದೇ ದಾಖಲೆಗಳಿಲ್ಲ. ಮೂಡ ನಿವೇಶನ ಹಂಚಿಕೆಯ ಸಂದರ್ಭದಲ್ಲಿ ಅಧಿಕಾರದಲ್ಲಿದ್ದಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲʼʼ ಎಂದು ಹೇಳಿದೆ.

ʻʻಒಂದು ಖಾಸಗಿ ದೂರಿನ ಆಧಾರದಲ್ಲಿ ತುರಾತುರಿಯಲ್ಲಿ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದ ರಾಜ್ಯಪಾಲರು ಕುಮಾರಸ್ವಾಮಿಯವರ ವಿರುದ್ಧದ ದೂರಿಗೆ ಸ್ಪಂದನೆ ಇಲ್ಲದೆ ಕುಳಿತಿರುವುದೇಕೆ? ಸಂವಿಧಾನತ್ಮಕವಾಗಿರುವ ಲೋಕಾಯುಕ್ತ ಸಂಸ್ಥೆಯೇ ತನಿಖೆಗೆ ಅನುಮತಿ ಕೇಳಿರುವಾಗ ರಾಜ್ಯಪಾಲರು ಯಾವುದೇ ಕ್ರಮ ವಹಿಸದೆ 9 ತಿಂಗಳಿಂದ ಕಡತವನ್ನು ಮುಚ್ಚಿಟ್ಟು ಕುಳಿತಿರುವುದೇಕೆ?" ರಾಜ್ಯಪಾಲರ ಇಬ್ಬಂದಿತನವನ್ನೂ ಪ್ರಶ್ನೆ ಮಾಡಿದೆ.

ʻʻಹೆಚ್‌ಡಿ ಕುಮಾರಸ್ವಾಮಿ ಅವರೇ, ಡಿನೋಟಿಫಿಕೇಶನ್ ಹಗರಣ, ಗಣಿ ಹಗರಣ ಸೇರಿದಂತೆ ನಿಮ್ಮ ವಿರುದ್ಧ ಹಲವು ಪ್ರಕರಣಗಳಿವೆ, ಸೆಕ್ಷನ್ 420 ಅಡಿಯಲ್ಲೂ ದೂರು ದಾಖಲಾಗಿದೆ. ಹೀಗಿದ್ದೂ ಯಾವ ನೈತಿಕತೆಯಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತಾಡುವಿರಿ ಮಿಸ್ಟರ್ 420ಸ್ವಾಮಿಗಳೇ ?ʼʼ ಕಾಲೆಳೆದಿದೆ.

Read More
Next Story