Namma Nandini Brand | ದೋಸೆ, ಇಡ್ಲಿ ಹಿಟ್ಟಿಗೆ ಹಾಲಿನ ಪುಡಿ ಬಳಕೆ; ʼವೇ ಪ್ರೋಟಿನ್ʼ ಉತ್ಪನ್ನಕ್ಕೆ ಗ್ರಾಹಕರು ಫಿದಾ !
ನಂದಿನಿ ಬ್ರ್ಯಾಂಡಿನ ದೋಸೆ ಹಾಗೂ ಇಡ್ಲಿ ಹಿಟ್ಟು ಶೇ.5 ರಷ್ಟು ʼವೇ ಪ್ರೋಟಿನ್ʼ (ಪ್ರೋಟಿನ್‌ಯುಕ್ತ) ಆಧಾರಿತವಾಗಿದೆ. ಕೆಎಂಎಫ್ ಉತ್ಪನ್ನವಾದ ಹಾಲಿನ ಪುಡಿಯನ್ನೇ ಹಿಟ್ಟಿನಲ್ಲಿ ಬಳಸಲಾಗಿದೆ ಎಂದು ಕೆಎಂಎಫ್ ಹೇಳಿದೆ.
ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ಬ್ರ್ಯಾಂಡಿನ ಹಲವು ಹಾಲಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಮೊಸರು, ತುಪ್ಪ, ಮಜ್ಜಿಗೆ, ಚಾಕೊಲೇಟ್, ಬೆಣ್ಣೆ, ಐಸ್ಕ್ರೀಮ್ ಸೇರಿ ಹಾಲಿಗೆ ಸಂಬಂಧಿಸಿದ ಉತ್ಪನ್ನಗಳು ಭಾರೀ ಬೇಡಿಕೆಯೊಂದಿಗೆ ಮಾರಾಟವಾಗುತ್ತಿವೆ. ಆದರೆ, ಕೆಎಂಎಫ್ ಹೊಸದಾಗಿ ಆರಂಭಿಸಿರುವ ದೋಸೆ ಹಾಗೂ ಇಡ್ಲಿ ಹಿಟ್ಟಿನ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿವೆ. ಇಡ್ಲಿ, ದೋಸೆ ಹಿಟ್ಟಿಗೂ-ಹಾಲಿನ ಉತ್ಪನ್ನಕ್ಕೂ ಎತ್ತಣಿಂದೆತ್ತ ಸಂಬಂಧ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿತ್ತು. ಈಗ ಸಾರ್ವಜನಿಕರ ಎಲ್ಲಾ ಅನುಮಾನಗಳಿಗೆ ಕೆಎಂಎಫ್ ತೆರೆ ಎಳೆದಿದೆ.
ನಂದಿನಿ ಬ್ರ್ಯಾಂಡಿನ ದೋಸೆ ಹಾಗೂ ಇಡ್ಲಿ ಹಿಟ್ಟು ಸಹ ಹಾಲಿನ ಉತ್ಪನ್ನವಾಗಿಯೇ ಮಾರುಕಟ್ಟೆಗೆ ಬಿಡಲಾಗಿದೆ. ದೋಸೆ ಹಾಗೂ ಇಡ್ಲಿ ಹಿಟ್ಟು ಶೇ.5 ರಷ್ಟು ʼವೇ ಪ್ರೋಟಿನ್ʼ (ಪ್ರೋಟಿನ್‌ಯುಕ್ತ) ಆಧಾರಿತವಾಗಿದೆ. ಕೆಎಂಎಫ್ ಉತ್ಪನ್ನವಾದ ಹಾಲಿನ ಪುಡಿಯನ್ನೇ ಹಿಟ್ಟಿನಲ್ಲಿ ಬಳಸಲಾಗಿದೆ. ಹಾಗಾಗಿ ದೋಸೆ ಹಾಗೂ ಇಡ್ಲಿ ಹಿಟ್ಟು ಕೂಡ ಕೆಎಂಎಫ್ ಹಾಲಿನ ಉತ್ಪನ್ನ ಎಂಬುದು ಹಿರಿಯ ಅಧಿಕಾರಿಗಳ ಮಾತು.
ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳು ಈಗಾಗಲೇ ಪೌಷ್ಟಿಕತೆಗೆ ಹೆಸರಾಗಿವೆ. ಈಗ ದೋಸೆ ಹಾಗೂ ಇಡ್ಲಿ ಹಿಟ್ಟಿನಲ್ಲೂ ಅದರ ಮಿಶ್ರಣ ಇರುವುದರಿಂದ ಹೆಚ್ಚು ಜನರು ಹಿಟ್ಟು ಖರೀದಿಗೆ ಒಲವು ತೋರುತ್ತಿದ್ದಾರೆ.
ʼವೇ ಪ್ರೋಟಿನ್ʼನಲ್ಲಿ ಏನಿರುತ್ತದೆ?
ಬೀಟಾ ಲ್ಯಾಕ್ಟೋಗ್ಲೋಬ್ಯುಲಿನ್, ಆಲ್ಫಾ ಲ್ಯಾಕ್ಟಾಲ್ಬುಮಿನ್, ಬೋವಿನ್ ಸೀರಮ್ ಅಲ್ಬುಮಿನ್ ಹಾಗೂ ಇಮ್ಯುನೊ ಗ್ಲೋಬಿನ್‌ಗಳ ಮಿಶ್ರಣವೇ ʼವೇ ಪ್ರೋಟಿನ್ʼ. ಸರಳವಾಗಿ ಹೇಳಬೇಕೆಂದರೆ ʼವೇ ಪ್ರೋಟಿನ್ʼ ಎಂಬುದು ಸಂಸ್ಕರಿತ ಪ್ರೋಟಿನ್ ಆಗಿದೆ. ʼವೇ ಪ್ರೋಟಿನ್ʼ ಬಳಸುವುದರಿಂದ ಹಲವು ಅನುಕೂಲಗಳಿವೆ. ಬೊಜ್ಜು ಕರಗಿಸಬಹುದು, ತೂಕ ಇಳಿಸುವುದು, ವಾಕರಿಕೆ, ತಲೆನೋವಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂಬುದು ಇಂಟರ್ ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷಿಯನ್ ಅಧ್ಯಯನದಿಂದ ತಿಳಿದುಬಂದಿದೆ.
ಆಸ್ತಮಾ ರೋಗಿಗಳಲ್ಲಿ ʼವೇ ಪ್ರೋಟಿನ್ʼ ಪ್ರತಿಕಾಯದಂತೆ ರಕ್ಷಣೆ ನೀಡಲಿದೆ. ರಕ್ತದೊತ್ತಡ ಹಾಗೂ ಹೃದಯ ರಕ್ತನಾಳದ ಕಾಯಿಲೆಗೂ ʼವೇ ಪ್ರೋಟೀನ್ʼ ಪೂರಕ ಪಾನೀಯವಾಗಿದೆ. ಪಾರ್ಶ್ವವಾಯು ಸಾಧ್ಯತೆಯನ್ನು ಕಡಿಮೆ ಮಾಡಲಿದೆ ಎಂದು ಈ ಅಧ್ಯಯನ ಹೇಳಿದೆ.
ಹಾಲಿನಲ್ಲಿ ʼವೇ ಪ್ರೋಟಿನ್ʼ ಉತ್ಪತ್ತಿ ಹೇಗೆ?
ಒಡೆದ ಹಾಲಿನಿಂದ(ಹಾಲೊಡಕು) ಮೊಸರು ಬೇರ್ಪಡಿಸಲು ಕಿಣ್ವಗಳನ್ನು ಸೇರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬರುವ ದ್ರವವನ್ನು ಪಾಶ್ಚೀಕರಿಸಿ ಬೆಣ್ಣೆ ತಯಾರಿಸಲಾಗುತ್ತದೆ. ಅದಾದ ಬಳಿಕ ಉಳಿಯುವ ದ್ರವವನ್ನು ಮೆಂಬರೇನ್ ಫಿಲ್ಟರೇಷನ್ ಹಾಗೂ ಅಯಾನು ವಿನಿಮಯ ತಂತ್ರಜ್ಞಾನದಿಂದ ಸಂಸ್ಕರಿಸಿ ʼವೇ ಪ್ರೋಟಿನ್ʼ ಪಡೆಯಲಾಗುತ್ತದೆ. ಅದೇ ರೀತಿ ಪಾಶ್ಚರೀಕರಿಸಿದ ಕೆನೆರಹಿತ ಹಾಲಿನಿಂದ ನೀರಿನ ಅಂಶವನ್ನು ಸಂಪೂರ್ಣ ಹೊರತೆಗೆದು ಹಾಲಿನ ಪುಡಿ ತಯಾರಿಸಲಾಗುತ್ತದೆ. ಸ್ಪೇ ಡ್ರೈಯಿಂಗ್ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಕೆಎಂಎಫ್ ಹಿರಿಯ ಅಧಿಕಾರಿ ಅಶೋಕ್, ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಹಾಲಿನ ಪುಡಿಯನ್ನು ಪೌಷ್ಠಿಕ ಪದಾರ್ಥವಾಗಿ ಬಳಸಲಾಗುತ್ತಿದೆ. ಹಾಲಿನ ಪುಡಿಯೇ ʼವೇ ಪ್ರೋಟಿನ್ʼನಲ್ಲಿದೆ. ʼವೇ ಪ್ರೋಟಿನ್ʼ ಬಳಕೆಯಿಂದ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಭಾರೀ ಬೇಡಿಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಪ್ರತಿ ದಿನ 2.25 ಟನ್ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರಾಟವಾಗುತ್ತಿದೆ. ಬೆಂಗಳೂರಿನ ಎಲ್ಲ ಭಾಗಗಳಲ್ಲಿ ಮಾರಾಟ ಆರಂಭಿಸಿದ ನಂತರ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.