ಸೂಲಗಿತ್ತಿ, ಪೌರ ಕಾರ್ಮಿಕ ಮಹಿಳೆ, ವೀಣೆ ತಯಾರಕರಿಗೂ ರಾಜ್ಯೋತ್ಸವ ಮನ್ನಣೆ;  ಪ್ರಶಸ್ತಿಗೆ ಹೆಚ್ಚಿದ ಗೌರವ
x

ಸೂಲಗಿತ್ತಿ, ಪೌರ ಕಾರ್ಮಿಕ ಮಹಿಳೆ, ವೀಣೆ ತಯಾರಕರಿಗೂ ರಾಜ್ಯೋತ್ಸವ ಮನ್ನಣೆ; ಪ್ರಶಸ್ತಿಗೆ ಹೆಚ್ಚಿದ ಗೌರವ

ವೀಣೆಗಳು ತಯಾರಾಗುವ ಕರ್ನಾಟಕದ ಏಕೈಕ ಊರು ಸಿಂಪಾಡಿಪುರ. ಇಲ್ಲಿ ತಯಾರಾಗುವ ವೀಣೆಗಳು ಸಂಗೀತ ವಿದ್ಯಾರ್ಥಿಗಳ ಕೈಯಲ್ಲಿ ನುಡಿಯುತ್ತಿವೆ. ತಂಜಾವೂರಿನ ವೀಣೆಗಳಿಗೆ ಇಲ್ಲದ ಎರಡು ವಿಶೇಷತೆಗಳು ಸಿಂಪಾಡಿಪುರದ ವೀಣೆಗಳಿಗಿದೆ. ಇವುಗಳ ತಯಾರಿಕೆಯಲ್ಲಿ ಒಂದಿನಿತು ಯಂತ್ರ ಬಳಸುವುದಿಲ್ಲ.


ನಾಡಿನ ಮೂಲೆ ಮೂಲೆಯಲ್ಲಿ ಮುಖ್ಯವಾಹಿನಿಯಿಂದ ಹೊರಗುಳಿದ ಹಲವು ಸಾಧಕರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರವು ತನ್ನ ಪ್ರಶಸ್ತಿಯ ಗೌರವ ಹೆಚ್ಚಿಸಿಕೊಂಡಿದೆ. ಗಣಿ ನಾಡು ಬಳ್ಳಾರಿಯ ‌ಕೂಡ್ಲಗಿಯ ಸೂಲಗಿತ್ತಿ ಈರಮ್ಮ ಅವರು ಗರ್ಭಿಣಿಯರ ಪಾಲಿನ ಮಹಾತಾಯಿ. ಶತಾಯುಷಿ (103) ಈರಮ್ಮ ಅವರು ಮೂರು ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸುವ ಮೂಲಕ ಬಡವರ ಪಾಲಿನ ಸಂಚಾರಿ ಆಸ್ಪತ್ರೆ ಎಂದೇ ಪ್ರಖ್ಯಾತಿ ಪಡೆದಿದ್ದರು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಗಿಹಾಳ ಗ್ರಾಮದ ಬಸಪ್ಪ ಬರಮಪ್ಪ ಚೌಡ್ಕಿ ಅವರು ಚೌಡಿಕೆ ಪದಗಳನ್ನು ಹಾಡುತ್ತಾ, ತುಂತುಣಿ ವಾದ್ಯ ನುಡಿಸುತ್ತಾ, ಮೂಲ ಚೌಡಿಕೆ ಪದಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗೀಗೀ ಪದ, ರಿವಾಯತ್‌ ಪದ, ತತ್ವ ಪದಗಳನ್ನು ಹಾಡುವುದರಲ್ಲದೇ ನೂರಾರು ಸಣ್ಣಾಟಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಇವರ ಕಲಾ ಸೇವೆಗೆ ಇದೀಗ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಒಂದು ಮುಕುಟವಾಗಿದೆ. ರಾಜ್ಯೋತ್ಸವಕ್ಕೆ ಭಾಜನರಾದ ಕೆಲ ಸಾಧಕರ ವಿವರ ಇಲ್ಲಿದೆ.

ಪೌರ ಕಾರ್ಮಿಕ ಮಹಿಳೆಗೆ ಸಂದ ಸಮ್ಮಾನ

ಬೆಂಗಳೂರಿನ ರಸ್ತೆಗಳಲ್ಲಿ ನಿತ್ಯ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕ ಮಹಿಳೆಯನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಿಸಲಾಗಿದೆ. 72 ವರ್ಷ ವಯಸ್ಸಿನ ಫಕ್ಕೀರಿ ಅವರು ಇಡೀ ತಮ್ಮ ಬದುಕನ್ನೇ ನಗರದ ಸ್ವಚ್ಛತೆಗೆ ಮೀಸಲಿಟ್ಟಿದ್ದರು. ರಸ್ತೆ ಗುಡಿಸುವುದು, ಒಳಚರಂಡಿ ಸ್ವಚ್ಛ ಮಾಡುವುದರಲ್ಲೇ ಜೀವನ ಸವೆಸಿದ್ದರು.

ವೀಣೆ ತಯಾರಿಕೆಯಲ್ಲಿ ತಲೆಮಾರುಗಳಿಂದ ತೊಡಗಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸಿಂಪಾಡಿಪುರದ ಪೆನ್ನ ಒಬಳಯ್ಯ(70) ಅವರಿಗೂ ಪ್ರಶಸ್ತಿ ಸಂದಿದೆ. ವೀಣೆಗಳು ತಯಾರಾಗುವ ಕರ್ನಾಟಕದ ಏಕೈಕ ಊರು ಸಿಂಪಾಡಿಪುರ. ಇಲ್ಲಿ ತಯಾರಾಗುವ ವೀಣೆಗಳು ಸಂಗೀತ ವಿದ್ಯಾರ್ಥಿಗಳ ಕೈಯಲ್ಲಿ ನುಡಿಯುತ್ತಿವೆ. ತಂಜಾವೂರಿನ ವೀಣೆಗಳಿಗೆ ಇಲ್ಲದ ಎರಡು ವಿಶೇಷತೆಗಳು ಸಿಂಪಾಡಿಪುರದ ವೀಣೆಗಳಿಗಿದೆ. ಇವುಗಳ ತಯಾರಿಕೆಯಲ್ಲಿ ಒಂದಿನಿತು ಯಂತ್ರ ಬಳಸುವುದಿಲ್ಲ.

ಕೋರಿನ್‌ ಆಂಟೊನಿಯಟ್‌ ರಸ್ಕೀನಾ: ಮಂಗಳೂರಿನ ನಿವಾಸಿ ಕೋರಿನ್‌ ಆಂಟೋನಿಯಟ್‌ ರಸ್ಕೀನಾ ಅವರು ಕಳೆದ 31 ವರ್ಷಗಳಿಂದ ನಿರಂತರವಾಗಿ ಕಷ್ಟದಲ್ಲಿರುವ ನಿರ್ಗತಿಕರು, ಮಾನಸಿಕ ಅಸ್ವಸ್ಥರನ್ನು ಯಾವುದೇ ಜಾತಿ, ಮತ ಲಿಂಗಭೇದವಿಲ್ಲದೆ ಆರೈಕೆ ಮಾಡುತ್ತಾ ಅವರ ಬಾಳಿಗೆ ಹೊಸ ಅರ್ಥ ನೀಡಿದ್ದಾರೆ. ಸಂಗೀತ ಬರಹಗಾರರೂ ಆಗಿರುವ ಇವರಿಗೆ 2021ರಲ್ಲಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2022ರಲ್ಲಿ ವಿಶ್ವ ಕೊಂಕಣಿ ಪ್ರಶಸ್ತಿ ಲಭಿಸಿದೆ.

ಡಾ. ಎನ್‌ ಸೀತಾರಾಮ ಶೆಟ್ಟಿ: ಉಡುಪಿ ಜಿಲ್ಲೆಯವರಾದ ಸೀತಾರಾಮ ಶೆಟ್ಟಿ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಎಲೆ ಮರೆ ಕಾಯಿಯಂತೆ ದುಡಿಯುತ್ತಿದ್ದರು.

ಕೋಣಂದೂರು ಲಿಂಗಪ್ಪ: ಶಿವಮೊಗ್ಗ ಜಿಲ್ಲೆಯ ಕೋಣಂದೂರು ಲಿಂಗಪ್ಪ ಅವರು ಉಳುವವನೇ ಹೊಲದೊಡೆಯ ಚಳವಳಿಯ ಮೂಲಕ ಗೇಣಿದಾರರ ರೈತರಿಗೆ ಭೂ ಒಡೆತನ ಸಿಗುವಂತೆ ಮಾಡಿದ ಅಪ್ಪಟ ಸಮಾಜವಾದಿ ಹೋರಾಟಗಾರ.

ಉಮೇಶ್‌ ಪಂಬದ: ಮಂಗಳೂರಿನ ಕೊಂಚಾಡಿಯಲ್ಲಿ ಜನಿಸಿದ ಉಮೇಶ್‌ ಪಂಬದ ಅವರು ಕರಾವಳಿ ಕರ್ನಾಟಕದ ದೈವಾರಾಧನೆ ಕ್ಷೇತ್ರದಲ್ಲಿ ಹಿರಿಯರಿಂದ ಬಳುವಳಿಯಾಗಿ ಪಡೆದು ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ರವೀಂದ್ರ ಕೋರಿ ಶೆಟ್ಟರ್: 1952ರಲ್ಲಿ ಧಾರವಾಡದಲ್ಲಿ ಜನಿಸಿದ ಡಾ. ರವೀಂದ್ರ ಕೋರಿ ಶೆಟ್ಟರ್‌ ಅವರು ಉನ್ನತ ಶಿಕ್ಷಣವನ್ನು ಪುಣೆ ವಿಶ್ವವಿದ್ಯಾಲಯದಿಂದ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಚ್ಯಾವಸ್ತು ಇತಿಹಾಸ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಭಾರತದ ಇತಿಹಾಸ ಪೂರ್ವ ಮತ್ತು ಕರ್ನಾಟಕ ಸಂಸ್ಕೃತಿಯ ಪರಂಪರೆ ಗುರುತಿಸುವ ಕೆಲವೇ ಕೆಲವು ಮಹನೀಯರಲ್ಲಿ ಇವರು ಒಬ್ಬರು.

ಕೆ. ದಿನೇಶ್: ಬೆಂಗಳೂರು ಜಿಲ್ಲೆಯವರಾದ ಇವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶಾಂತರಾಜು: ತುಮಕೂರು ಜಿಲ್ಲೆಯವರಾದ ಇವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಪುಂಡಲೀಕ ಶಾಸ್ತ್ರೀ (ಬುಡಬುಡಕೆ) :ಬೆಳಗಾವಿ ಜಿಲ್ಲೆಯವರಾದ ಇವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

ಶಾಂತಾ ಬಾಯಿ: ಬಳ್ಳಾರಿ ಜಿಲ್ಲೆಯವರಾಗಿದ್ದು, ಸಾಂಪ್ರದಾಯಿಕ ಕಸೂತಿ ಕಲೆಯಲ್ಲಿ ನಿಪುಣರಾಗಿದ್ದಾರೆ. ಹಲವಾರು ಜನರಿಗೆ ಕಸೂತಿ ಕಲೆಯ ತರಬೇತಿ ನೀಡುತ್ತಿದ್ದಾರೆ.

ರಾಮೇಗೌಡ: ಸೋಲಿಗ ಸಮುದಾಯದ ಇವರು ಅರಣ್ಯ ವೃಕ್ಷಗಳ ಬೀಜಗಳನ್ನು ಸಂಗ್ರಹಿಸಿ, ಅವುಗಳನ್ನು ಬಿತ್ತಿ ಮೊಳಕೆಯೊಡೆಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅಪಾಯದ ಅಂಚಿನಲ್ಲಿರುವ ಮತ್ತು ಅಪರೂಪದ ಸಸ್ಯ ಸಂತತಿ ನಶಿಸಿ ಹೋಗದಂತೆ ಅವುಗಳ ಬೀಜಗಳಿಂದ ಅಸಂಖ್ಯಾತ ಸಸಿಗಳನ್ನು ಬೆಳೆಸಿ ನಾಡಿನ ವಿವಿಧ ಸಂಸ್ಥೆಗಳಿಗೆ ವಿತರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 26 ವರ್ಷಗಳಿಂದಲೂ ಇದಕ್ಕಾಗಿ ತಮ್ಮ ಇಡೀ ಜೀವನ ಮುಡಿಪಿಟ್ಟಿದ್ದಾರೆ.

ಮಲ್ಲಿಕಾರ್ಜುನ ನಿಂಗಪ್ಪ : ಯಾದಗಿರಿ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಗಾಗಿ ಬದುಕು ಮುಡುಪಿಟ್ಟಿದ್ದಾರೆ. ಸುಮಾರು 100 ಎಕರೆಗಿಂತಲೂ ಹೆಚ್ಚು ಅರಣ್ಯ ಪ್ರದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಪಾಲನೆ-ಪೋಷಣೆ ಮಾಡಿ ದಟ್ಟ ಅರಣ್ಯ ಪ್ರದೇಶವಾಗಲು ಇವರ ಕೊಡುಗೆ ಅನನ್ಯ.

ಆನಂದ ಶೆಟ್ಟಿ, ಐರಬೈಲು : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆಳಕಳಿ ದೊಡ್ಡಮನೆಯಲ್ಲಿ 1960ರಲ್ಲಿ ಜನಿಸಿದ ಆನಂದ ಶೆಟ್ಟಿ ಅವರು ಯಕ್ಷಗಾನ ಕಲಾವಿದರಾದರು. ಇವರು ಪೀಠಿಕೆ ಸ್ತ್ರೀ ವೇಷಧಾರಿ, ತುಂಡುವೇಷ, ಪುರುಷ ವೇಷದ ಮೂಲಕ ಯಕ್ಷಗಾನದ ಗೆಜ್ಜೆ ಕಟ್ಟಿದ ಇವರು 65ನೇ ವಯಸ್ಸಿನಲ್ಲಿಯೂ ಕಲಾ ತಿರುಗಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಗುಂಡೂರಾಜ್‌ : ಹಾಸನ ಜಿಲ್ಲೆಯ ಹೂವಿನಹಳ್ಳಿಕಾವಲು ಗ್ರಾಮದ ಇವರು ತೊಗಲುಗೊಂಬೆಯಾಟ ವೃತ್ತಿ ಕಲಾವಿದರಾಗಿದ್ದಾರೆ. ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ ಮುಂತಾದ ರಾಜ್ಯಗಳು, ಅಮೆರಿಕಾ, ಕುವೈತ್‌, ಕೊರಿಯಾ, ಫ್ರಾನ್ಸ್‌ ಮುಂತಾದ ದೇಶಗಳಲ್ಲಿ ತೊಗಲುಗೊಂಬೆಯಾಟ ಪ್ರದರ್ಶನ ನೀಡಿದ್ದಾರೆ. 2009ರಲ್ಲಿ ಕೋರಿಯಾ ದೇಶದಲ್ಲಿ ನಡೆದ 3ನೇ ಡೆಲ್ಲಿಪಿಕ್‌ ಗೇಮ್‌ನಲ್ಲಿ ಡೆಲ್ಲಿ ಪದಕ ಪಡೆದಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ, ಕೋರಿಯಾ ದೇಶವು ನೀಡಿದ ಹೆರಿಟೇಜ್‌ ಪ್ರಶಸ್ತಿ, ಅಮೇರಿಕಾದ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದವರು ನೀಡಿದ ಗೌರವ ಸಮರ್ಪಣೆ ಮುಂತಾದ ಪ್ರಶಸ್ತಿ ಪಡೆದಿದ್ದಾರೆ.

ನ್ಯಾ. ಶ್ರೀ ಪಿ.ಬಿ. ಭಜಂತ್ರಿ ( ಪವನ್‌ಕುಮಾರ್‌ ಭಜಂತ್ರಿ ) : ಬೆಂಗಳೂರು ನಗರದ ಇವರು, 1990ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿ, 2015ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ತದನಂತರ ಪಂಜಾಬ್‌, ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಂಡು ನಂತರ ಬಿಹಾರದ ಪಾಟ್ನಾ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

ಬಸವಣ್ಣ ಮೌನಪ್ಪ ಬಡಿಗೇರ: ಕಲಬುರಗಿ ಜಿಲ್ಲೆಯ ಸುರಪುರ ತಾಲೂಕಿನ ಅಂದ್ರಾಳ ಗ್ರಾಮದ ಬಸವಣ್ಣ ಮೌನಪ್ಪ ಬಡಿಗೇರ ಅವರು, ಕಾಷ್ಠ ಶಿಲ್ಪದಲ್ಲಿ ಪರಿಣಿತಿ ಹೊಂದಿದ್ದಾರೆ. ಅನೇಕ ಕಲಾತ್ಮಕ ಮನೆಗಳನ್ನು ನಿರ್ಮಿಸಿದ್ದು, ಇವುಗಳಲ್ಲಿ ಚದರಂಗ ಪಡಶಾಲೆ, ಐದು ಮತ್ತು ಏಳು ಅಂಕಣ ಪಡಶಾಲೆ, ಇದರಲ್ಲಿ ತೊಲೆ, ಬೋದು, ತೋರಣ, ಪ್ರಾಣಿ, ಪಕ್ಷಿ, ದೇವತೆಗಳ ಅನೇಕ ಕಲಾತ್ಮಕ ಶಿಲ್ಪಗಳನ್ನು ನಿರ್ಮಿಸಿ ಮನೆ ಮಾತಾಗಿದ್ದಾರೆ.

ಬಿ. ಟಾಕಪ್ಪ ಕಣ್ಣೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಜನಿಸಿದರು. 75 ವರ್ಷ ವಯಸ್ಸಿನ ಇವರು, ಕೃಷಿ ಕುಟುಂಬದವರಾದರೂ ಜಾನಪದ ಕಲೆಯನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಂಡು ಬೆಳೆದವರು. ವಿಶೇಷವಾಗಿ ಡೊಳ್ಳು ಕಲೆಯನ್ನು ಬಾಲ್ಯದಲ್ಲಿಯೇ ಕಲಿತು ಈ ಕಲೆಯಲ್ಲಿ ಪರಿಣಿತರಾಗಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಕಲಾವಿದರಿಗೆ ಡೊಳ್ಳು ತರಬೇತಿ ನೀಡಿ ಹಲವಾರು ಕಲಾವಿದರನ್ನು ರೂಪಿಸಿದ್ದಾರೆ. ಸಣ್ಣನಿಂಗಪ್ಪ ಸತ್ತೆಪ್ಪಾ ಮುಶನ್ನಗೋಳ: ಬಾಲ್ಯದಲ್ಲಿಯೇ ಡೊಳ್ಳಿನ ಹಾಡು ಹಾಡುತ್ತಾ ಬೆಳೆದವರು. ಡೊಳ್ಳಿನ ಹಾಡಿನ ಮೂಲಕ ಪ್ರಸಿದ್ದರಾದ ಇವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹಾಗೂ ಹಲವಾರು ಜನಪ್ರಿಯ ವೇದಿಕೆಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ.

ಹನುಮಂತಪ್ಪ ಮಾರಪ್ಪ ಚೀಳಂಗಿ : ಕಡು ಬಡತನದಲ್ಲಿ ಬೆಳೆದ ಇವರು ವಂಶ ಪಾರಂಪರ್ಯವಾಗಿ ಬಂದ ಉರುಮೆ, ಕಹಳೆ ಕಲೆಯನ್ನು ತಂದೆಯಿಂದ ಬಳುವಳಿಯಾಗಿ ಪಡೆದು ಸುಮಾರು 60 ವರ್ಷಗಳಿಂದ ಕಲಾ ಸೇವೆ ತೊಡಗಿಕೊಂಡಿದ್ದಾರೆ.

ಎಂ. ತೋಪಣ್ಣ : ಕೋಲಾರ ಜಿಲ್ಲೆಯವರಾದ ತೋಪಣ್ಣ ಅವರು, ಕೀಲುಕುದುರೆ, ಗಾರುಡಿ ಗೊಂಬೆ, ಜಾನಪದ ನೃತ್ಯ ಕಲಾ ಸೇವೆಯನ್ನು ಬಾಲ್ಯದಲ್ಲಿಯೇ ರೂಡಿಸಿಕೊಂಡು ಬೆಳೆದವರು. ಇವರು ಕಲೆಯನ್ನು ವಿವಿಧ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಾರೆ.

ಸಿಂಧು ಗುಜರನ್: ದಕ್ಷಿಣ ಕನ್ನಡ ಜಿಲ್ಲೆಯ ಸಿಂಧು ಅವರು ದೈವಾರಾಧನೆಗೆ ಸಂಬಂಧಿಸಿದ ಹಾಡುಗಳನ್ನು ಬಾಲ್ಯದಿಂದಲೇ ಕಲಿತು ಕಲೆಯಲ್ಲಿ ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ. ದೈವಾರಾಧನೆಯ ಅಣ್ಣಪ್ಪ ಪಂಜುರ್ಲಿ, ಕೋಟಿ ಚೆನ್ನಯ್ಯ, ನಡಿಬೆಟ್ಟು ಜಮಾದಿ, ಪಡುಬಿದ್ರಿ ಪಡ್ಡಯ್ಯ ಮುಂತಾದ ದೈವಾರಾಧನೆ ಹಾಡುಗಳಲ್ಲಿ ಪ್ರಸಿದ್ದರು.

ಡಿ. ರತ್ನಮ್ಮ ದೇಸಾಯಿ : ರಾಯಚೂರು ಜಿಲ್ಲೆಯವರಾದ ಇವರು ರಂಗಭೂಮಿ ಕ್ಷೇತ್ರದಲ್ಲಿ ನಟಿಯಾಗಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ನಾಟಕಗಳಲ್ಲಿ ನಟಿಸಿರುತ್ತಾರೆ.

Read More
Next Story