ಮೈಕ್ರೋ ಫೈನಾನ್ಸ್‌ ಕಿರುಕುಳ | ಮಾಂಗಲ್ಯ ಉಳಿಸಿ ಅಭಿಯಾನ: ಸಿಎಂ, ಗೃಹ ಸಚಿವರಿಗೆ ಮಾಂಗಲ್ಯಸರ ಕಳಿಸಿ ಆಕ್ರೋಶ
x

ಮೈಕ್ರೋ ಫೈನಾನ್ಸ್‌ ಕಿರುಕುಳ | ಮಾಂಗಲ್ಯ ಉಳಿಸಿ ಅಭಿಯಾನ: ಸಿಎಂ, ಗೃಹ ಸಚಿವರಿಗೆ ಮಾಂಗಲ್ಯಸರ ಕಳಿಸಿ ಆಕ್ರೋಶ


ಮೈಕ್ರೋ ಫೈನಾನ್ಸ್ ಕಂಪನಿಗಳು ಗ್ರಾಮೀಣ ಮಹಿಳೆಯರಿಗೆ ನೀಡುತ್ತಿರುವ ಕಿರುಕುಳ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ನೊಂದ ಮಹಿಳೆಯರು ಇದೀಗ ಮಾಂಗಲ್ಯ ಸರ ಉಳಿಸಿ ಅಭಿಯಾನ ಆರಂಭಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ತಮ್ಮ ಪತಿಯನ್ನು ಕಳೆದುಕೊಂಡಿರುವ ಹಲವು ಮಹಿಳೆಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಗೆ ತಮ್ಮ ತಾಳಿಯನ್ನು ಅಂಚೆ ಮೂಲಕ ಕಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯಿಂದಾಗಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹಳಷ್ಟು ಕುಟುಂಬಗಳು ಮನೆ ಬಿಟ್ಟು ಗುಳೇ ಹೋಗುತ್ತಿವೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಸರ್ಕಾರದ ಹಲವು ಪ್ರಮುಖ ಖಡಕ್ ಎಚ್ಚರಿಕೆ ನೀಡಿದರೂ, ಅಂತಹ ಎಚ್ಚರಿಕೆಗಳ ಬೆನ್ನಲ್ಲೇ ಆತ್ಮಹತ್ಯೆ, ಗುಳೇ ಪ್ರಕರಣಗಳು ಹೆಚ್ಚುತ್ತಿವೆ.

ಆ ಹಿನ್ನೆಲೆಯಲ್ಲಿ ರಾಜ್ಯದ ರಾಯಚೂರು ಮತ್ತು ಹಾವೇರಿಯ ನೊಂದ ಮಹಿಳೆಯರು ಅಂಚೆ ಮೂಲಕ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ತಮ್ಮ ಮಾಂಗಲ್ಯ ಸರ ಕಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವರಿಗೆ ಮಾಂಗಲ್ಯ ಕಳಿಸಿದ ರಾಯಚೂರು ಮಹಿಳೆ

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನಲ್ಲಿ ಕಪಗಲ್ನಲ್ಲಿ ಇತ್ತೀಚೆಗೆ 30 ವರ್ಷದ ಶರಣಬಸವ ಎಂಬಾತ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ.

ಆ ಹಿನ್ನೆಲೆಯಲ್ಲಿ ತನ್ನ ಮಾಂಗಲ್ಯ ಉಳಿಸದೆ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಮಹಿಳೆ, ಅದೇ ಮಾಂಗಲ್ಯವನ್ನು ಸರ್ಕಾರಕ್ಕೆ ಕಳಿಸುವ ಮೂಲಕ ತನ್ನ ಪತಿಯ ಸಾವಿಗೆ ನ್ಯಾಯ ಕೋರಿದ್ದಾರೆ.

ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಬ್ಯಾಂಕ್ ಗಳು ಕಿರುಕುಳ ನೀಡುತ್ತಿದ್ದು, ನೀಡಿದ್ದ ಐದು ಲಕ್ಷ ಸಾಲಕ್ಕೆ ಬಡ್ಡಿ ಹಾಗೂ ಅಸಲು ಕಟ್ಟುವಂತೆ ಕಿರುಕುಳ ನೀಡುತ್ತಿವೆ. ಹಗಲು ರಾತ್ರಿ ಎನ್ನದೆ ಕಾಡಿದ್ದರಿಂದ ಶರಣಬಸವ ಅವರು ಮನೆ ಬಿಟ್ಟು ಹೋಗಿದ್ದರು. ಕೊನೆಗೂ ಮನವೊಲಿಸಿ ಮನೆಗೆ ಕರೆತಂದಾಗ ಬಾಯಿಗೆ ಬಂದಂತೆ ಬೈದು ಮೈಕ್ರೋಫೈನಾನ್ಸ್ ಸಿಬ್ಬಂದಿ ಅವಮಾನಿಸಿದ್ದರಂತೆ. ಸಮಯ ಕೇಳಿದರೂ ನೀಡದೇ ಮನಬಂದಂತೆ ಬೈದ ಪರಿಣಾಮ ಶರಣಬಸವ ಅವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.

ಈ ಹಿನ್ನೆಲೆ ಪತಿಯ ಸಾವಿಗೆ ಸರ್ಕಾರವೇ ಹೊಣೆ ಎಂದು ಆರೊಪಿಸಿ ಗೃಹಸಚಿವ ಜಿ ಪರಮೇಶ್ವರ್ ಅವರಿಗೆ ಮಾಂಗಲ್ಯ ಸರ ಕಳುಹಿಸಿರುವ ಪತ್ನಿ ಪಾರ್ವತಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಿಎಂಗೆ ಮಾಂಗಲ್ಯ ಪೋಸ್ಟ್ ಮಾಡಿದ ಹಾವೇರಿ ಮಹಿಳೆಯರು

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ದಿಕ್ಕೆಟ್ಟಿರುವ ಹಾವೇರಿ ಜಿಲ್ಲೆಯ ನೊಂದ ಮಹಿಳೆಯರು ಹಾಗೂ ರೈತ ಮುಖಂಡರು ‘ಮಾಂಗಲ್ಯ ಸರ ಉಳಿಸಿ’ ಅಭಿಯಾನ ಆರಂಭಿಸಿದ್ದಾರೆ.

ಹಾವೇರಿ ನಗರದ ಅಂಚೆ ಕಚೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಂಗಲ್ಯ ಸರ ರವಾನೆ ಮಾಡಿದ್ದಾರೆ.

ಅಲ್ಲದೆ, ಮಾಂಗ ಲ್ಯ ಉಳಿಸಿ ಎಂದು ಮಹಿಳೆಯರ ಒತ್ತಾಯಿಸಿ, ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮಹಿಳೆಯರು ಮನವಿ ಸಲ್ಲಿಸಿದ್ದಾರೆ.

ಸಭೆ ಕರೆದ ಸಿಎಂ ಸಿದ್ದರಾಮಯ್ಯ

ಈ ನಡುವೆ, ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್‌ ಕಿರುಕುಳದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆ ಕುರಿತ ಚರ್ಚೆಗೆ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಜ.25ರಂದು ಬೆಳಿಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹ ಸಚಿವರು, ಸಹಕಾರ ಸಚಿವರು, ಕಂದಾಯ ಸಚಿವರು ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದು, ಸಭೆಯಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳಿಗೆ ಕಡಿವಾಣ ಹಾಕಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳ ಕಿರುಕುಳದಿಂದ ಸರಣಿ ಆತ್ಮಹತ್ಯೆಗಳು ಸಂಭವಿಸುತ್ತಿರುವುದು ಮತ್ತು ಜನ ಗುಳೇ ಹೋಗುತ್ತಿರುವ ಬಗ್ಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಕೂಡ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ಮೌನವನ್ನು ಕಟು ಟೀಕೆ ಮಾಡಿದ್ದವು.

Read More
Next Story