MGNREGA v/s VB-G RAM G Part-2| ಪಾವತಿಯಾಗದ 77.50 ಕೋಟಿ ರೂ. ವೇತನ; ಸಂಘರ್ಷದ ಮಧ್ಯೆ ಸಿಲುಕಿದ 1,687 ಕೋಟಿ ಅನುದಾನ
x

MGNREGA v/s VB-G RAM G Part-2| ಪಾವತಿಯಾಗದ 77.50 ಕೋಟಿ ರೂ. ವೇತನ; ಸಂಘರ್ಷದ ಮಧ್ಯೆ ಸಿಲುಕಿದ 1,687 ಕೋಟಿ ಅನುದಾನ

ಸಮರ್ಪಕವಾದ ಕೂಲಿ ಸಿಗದ ಕಾರಣ ಕಾರ್ಮಿಕರು ನರೇಗಾ ಯೋಜನೆಯಿಂದ ವಿಮುಖರಾಗುತ್ತಿದ್ದಾರೆ. ಸುಮಾರು ಶೇ. 60 ರಷ್ಟು ಜನರು ಪರ್ಯಾಯ ಕೆಲಸದತ್ತ ಮುಖ ಮಾಡಿದ್ದಾರೆ. ಕೂಲಿ ಪಾವತಿ ವಿಳಂಬಕ್ಕೆ ರಾಜಕೀಯ ವ್ಯವಸ್ಥೆಯೂ ಪ್ರಮುಖ ಕಾರಣವಾಗಿದೆ.


ಗ್ರಾಮೀಣ ಜನರ ಪಾಲಿನ ಆರ್ಥಿಕ ಸಂಜೀವಿನಿ ಎಂದೇ ಕರೆಯಲಾಗುತ್ತಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮನರೇಗಾ) ಶಕೆ ಅಂತ್ಯವಾಗಿದೆ. ಹೊಸ ಹೆಸರು ಹಾಗೂ ಸ್ವರೂಪದೊಂದಿಗೆ ವಿಕಸಿತ ಭಾರತ ಗ್ರಾಮೀಣ ರೋಜಗಾರ್‌ ಆಜೀವಿಕ ಮಿಷನ್‌ (ಗ್ರಾಮೀಣ) ಯೋಜನೆಯಾಗಿ ಬದಲಾಗಿದೆ.

ಮನರೇಗಾ ರದ್ದತಿಗೂ ಮುನ್ನ ಯೋಜನೆಯಡಿ ದುಡಿದಿದ್ದ ಲಕ್ಷಾಂತರ ಕಾರ್ಮಿಕರಿಗೆ ಎರಡು ತಿಂಗಳಿನಿಂದ ಕೂಲಿ ಪಾವತಿಸಿಲ್ಲ. ಕೂಲಿ ಹಣ ಪಾವತಿಗೂ ಮುನ್ನವೇ ಯೋಜನೆ ಬದಲಿಸಿರುವುದು ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಬಾಕಿ ಹಣ ಕೈ ಸೇರುವುದೇ, ಇಲ್ಲವೇ ಎಂಬ ಭೀತಿ ಕಾಡುತ್ತಿದೆ. ಕರ್ನಾಟಕದಲ್ಲಿ ಮನರೇಗಾ ಯೋಜನೆಯಡಿ ಒಟ್ಟು 3.20 ಲಕ್ಷ ಕಾರ್ಮಿಕರಿಗೆ ಅಂದಾಜು 77.50 ಕೋಟಿ ರೂ. ಕೂಲಿ ಹಣ ಬಾಕಿ ಉಳಿಸಿಕೊಳ್ಳಲಾಗಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಕೇಂದ್ರ ಸರ್ಕಾರ 1,687 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಬೆನ್ನಲ್ಲೇ ಹೊಸ ಯೋಜನೆ ಕುರಿತಂತೆ ಏರ್ಪಟ್ಟಿರುವ ತಿಕ್ಕಾಟದಿಂದ ಬಾಕಿ ಹಣದ ಭವಿಷ್ಯವೂ ಅಯೋಮಯವಾಗಿದೆ. ಕೇಂದ್ರ ಸರ್ಕಾರ ಬಾಕಿ ಹಣ ಪಾವತಿಸಿದರಷ್ಟೇ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಬಹುದು ಎಂಬ ಕರ್ನಾಟಕ ಸರ್ಕಾರದ ನಡೆ, ಬಡ ಕೂಲಿ ಕಾರ್ಮಿಕರ ಬದುಕಿಗೆ ಬರೆ ಎಳೆದಂತಿದೆ.

ಕಾರ್ಮಿಕರ ಬಾಕಿ ಕೂಲಿ ಎಷ್ಟು?

2025ರ ನ.25 ರಿಂದ ಇಲ್ಲಿಯವರೆಗೆ ಕೆಲಸ ಮಾಡಿದ ಕಾರ್ಮಿಕರಿಗೆ ಒಂದೇ ಒಂದು ರೂಪಾಯಿ ಕೂಲಿ ಸಂದಾಯವಾಗಿಲ್ಲ. ಕರ್ನಾಟಕದಲ್ಲಿ 3.20 ಲಕ್ಷ ಕಾರ್ಮಿಕರಿಗೆ ಸುಮಾರು 77.50 ಕೋಟಿ ರೂ. ಕೂಲಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಪಂಚಾಯಿತಿ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಗಳು ಹೇಳಿವೆ.

ರಾಜ್ಯದ 5,894 ಗ್ರಾಮ ಪಂಚಾಯಿತಿಗಳಲ್ಲಿ 81.29 ಲಕ್ಷ ಜಾಬ್ ಕಾರ್ಡ್‌ದಾರರಿದ್ದಾರೆ. ನರೇಗಾ ಕೇವಲ ಉದ್ಯೋಗ ನೀಡುವುದಲ್ಲದೆ, ಗ್ರಾಮೀಣ ಮೂಲಸೌಕರ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿತ್ತು. ಕೆರೆ ಹೂಳೆತ್ತುವುದು, ರಸ್ತೆ, ಚರಂಡಿ, ಚೆಕ್ ಡ್ಯಾಂ, ಕಾಪೌಂಡ್ ಮತ್ತು ಅರಣ್ಯ ವಿಸ್ತರಣೆಯಂತಹ ಕೆಲಸಗಳು ಈಗ ಅರ್ಧಕ್ಕೆ ನಿಂತಿವೆ. ಸಾಮಗ್ರಿ ಪೂರೈಸಿದವರು ಮತ್ತು ವ್ಯಾಪಾರಿಗಳಿಗೆ ಹಣ ಕೊಡಲಾಗುತ್ತಿಲ್ಲ. ಸಾಮಗ್ರಿ ಪೂರೈಸಿದವರು ಸಾಲದ ಸುಳಿಗೆ ಸಿಲುಕಿದ್ದಾರೆ. ಬದು ನಿರ್ಮಾಣ, ದನದ ಶೆಡ್‌ಗಳಂತಹ ವೈಯಕ್ತಿಕ ಕಾಮಗಾರಿಗಳು ಪ್ರಗತಿ ಹಂತದಲ್ಲೇ ನಿಂತಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ ಎಂದು ತಿಳಿದುಬಂದಿದೆ.

ಮನರೇಗಾ ಕೂಲಿ ಸಿಗದ ಕಾರಣ ಕಾರ್ಮಿಕರು ಯೋಜನೆಯಿಂದ ವಿಮುಖರಾಗುತ್ತಿದ್ದಾರೆ. ಸುಮಾರು ಶೇ. 60 ರಷ್ಟು ಜನರು ಪರ್ಯಾಯ ಕೆಲಸಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್‌, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಕಾರ್ಮಿಕರು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರ ಅಥವಾ ಅಕ್ಕಪಕ್ಕದ ಜಿಲ್ಲೆಗಳಿಗೆ ಕೆಲಸಕ್ಕೆ ವಲಸೆ ಹೋಗುತ್ತಿದ್ದಾರೆ. ನರೇಗಾ ನಂಬಿದರೆ ಜೀವನ ಸಾಗುವುದಿಲ್ಲ ಎಂಬ ಭೀತಿ ಜನರಲ್ಲಿ ಮನೆ ಮಾಡಿದೆ.

ಕೂಲಿ ಬಿಕ್ಕಟ್ಟಿಗೆ ಕಾರಣಯೇನು?

ಮನರೇಗಾ ಕೂಲಿ ಪಾವತಿ ವಿಳಂಬಕ್ಕೆ ಕೇವಲ ಹಣದ ಕೊರತೆ ಒಂದೇ ಕಾರಣವಲ್ಲ. ಸರ್ಕಾರದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು ಕೂಡ ಪ್ರಮುಖ ಪಾತ್ರ ವಹಿಸಿವೆ. ಆಧಾರ್ ಲಿಂಕ್ ಮತ್ತು ತಾಂತ್ರಿಕ ದಾಖಲಾತಿಗಳ ನೆಪವೊಡ್ಡಿ ಹಣ ಬಿಡುಗಡೆ ತಡೆಹಿಡಿಯಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಆಡಳಿತಾತ್ಮಕ ಲೋಪಗಳು ಹಲವು ವರ್ಷಗಳಿಂದ ಇದ್ದು, ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಾಗಿದೆ.

ಕೇಂದ್ರ ಸರ್ಕಾರದ ಹೊಸ ಯೋಜನೆಯ ಜಾರಿ ಮತ್ತು ಅದರ ವಿರುದ್ಧ ರಾಜ್ಯ ಸರ್ಕಾರದ ಹೋರಾಟ ಕೂಡ ಆಡಳಿತಾತ್ಮಕ ಗೊಂದಲಗಳನ್ನು ಸೃಷ್ಟಿಸಿದೆ. ಈ ರಾಜಕೀಯ ತಿಕ್ಕಾಟದಲ್ಲಿ ಅನುದಾನದ ಹರಿವು ಕಡಿತಗೊಂಡಿದೆ ಎನ್ನುವುದು ತಜ್ಞರ ಮಾತು.

ಅಭಿವೃದ್ಧಿಗೆ ಹಿನ್ನಡೆ

ಮನರೇಗಾ ಕೇವಲ ಗುಂಡಿ ತೆಗೆಯುವ ಕೆಲಸವಲ್ಲ, ಅದರಲ್ಲಿ ಶಾಶ್ವತ ಆಸ್ತಿಗಳ ನಿರ್ಮಾಣವೂ ಸೇರಿದೆ. ಬಾಕಿ ಇರುವ 593 ಕೋಟಿ ರೂ.ಗಳಿಂದ ಹಲವು ಕೆಲಸಗಳು ಅರ್ಧಕ್ಕೆ ನಿಂತಿವೆ. ಶಾಲಾ ಕಾಂಪೌಂಡ್ ಮತ್ತು ಅಂಗನವಾಡಿ ಕಟ್ಟಡಗಳ ನವೀಕರಣ, ದನದ ಕೊಟ್ಟಿಗೆ, ಗ್ರಂಥಾಲಯ ಮತ್ತು ಚರಂಡಿ ನಿರ್ಮಾಣ, ರಸ್ತೆ ಮತ್ತು ಚೆಕ್ ಡ್ಯಾಂಗಳ ನಿರ್ಮಾಣ ಕಾರ್ಯಗಳು ನಿಂತಿವೆ. ಅನುದಾನದ ಕೊರತೆ ಮತ್ತು ತಾಂತ್ರಿಕ ಸಮಸ್ಯೆಯಿಂದಾಗಿ ಗುತ್ತಿಗೆದಾರರು ಈಗ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಹೊಡೆತ ನೀಡಿದೆ.

ಕೇಂದ್ರ-ರಾಜ್ಯದ ನಡುವಿನ ಸಂಘರ್ಷ

ಕೇಂದ್ರ ಸರ್ಕಾರವು ನರೇಗಾ ಯೋಜನೆ ರದ್ದುಗೊಳಿಸಿ 'ವಿಬಿ ಜಿ ರಾಮ್ ಜಿ' ಎಂಬ ಹೊಸ ಯೋಜನೆ ಜಾರಿಗೆ ತಂದಿರುವುದು ರಾಜಕೀಯ ವಿವಾದ ಸೃಷ್ಟಿಸಿದೆ. ಕೇಂದ್ರದ ಈ ನಡೆಯ ವಿರುದ್ಧ ರಾಜ್ಯ ಸರ್ಕಾರ ಹೋರಾಟಕ್ಕೆ ಮುಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟದಲ್ಲಿ ಬಡ ಕಾರ್ಮಿಕರು ಬಲಿಪಶುಗಳಾಗುತ್ತಿದ್ದಾರೆ. ಆಧಾರ್ ಕಾರ್ಡ್ ಲಿಂಕ್ ಸಮಸ್ಯೆ, ತಾಂತ್ರಿಕ ದೋಷಗಳು ಮತ್ತು ಪಾವತಿ ವ್ಯವಸ್ಥೆಯ ಬದಲಾವಣೆಗಳು ಹಣ ಬಿಡುಗಡೆ ಆಗದಿರಲು ಮುಖ್ಯ ಕಾರಣಗಳಾಗಿವೆ.

ರಾಜಕಾರಣ ಬಿಟ್ಟರೆ ಬೇರೇನೂ ಅಲ್ಲ

ವಿಬಿ ಜಿ ರಾಮ್‌ ಜಿ ಯೋಜನೆ ಕುರಿತು ʼದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸಾಕ್) ನಿವೃತ್ತ ನಿರ್ದೇಶಕ ಆರ್‌.ಎಸ್‌.ದೇಶಪಾಂಡೆ, ಕೇಂದ್ರ ಸರ್ಕಾರವು ಯೋಜನೆಯ ಹೆಸರು ಬದಲಿಸುವ ಅಗತ್ಯ ಇರಲಿಲ್ಲ. ಈ ಹಿಂದೆ ಕಾಂಗ್ರೆಸ್‌ ಕೂಡ ಯೋಜನೆಯ ಹೆಸರು ಬದಲಿಸಿತ್ತು. ಈಗ ಬಿಜೆಪಿ ನೇತೃತ್ವದ ಸರ್ಕಾರ ಅದೇ ಕೆಲಸ ಮಾಡಿದೆಯಷ್ಟೇ. ಯೋಜನೆಯ ಹೆಸರು ಬದಲಾವಣೆಯಲ್ಲಿ ರಾಜಕಾರಣ ಬಿಟ್ಟರೆ ಬೇರೇನೂ ಇಲ್ಲ, ಕಾಲಕಾಲಕ್ಕೆ ಕಾರ್ಮಿಕರಿಗೆ ಕೂಲಿ ಪಾವತಿಸಿದರೆ ಗ್ರಾಮೀಣ ಭಾಗದ ಆರ್ಥಿಕತೆ ಪುಟಿದೇಳಲಿದೆ ಎಂದು ಹೇಳಿದರು.

ಮನರೇಗಾದಲ್ಲಿ 100 ದಿನಗಳ ಕೆಲಸ ಇದ್ದರೂ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರಲಿಲ್ಲ. ಈಗ ಹೆಚ್ಚಳ ಮಾಡಿ ಪ್ರಯೋಜನವಿಲ್ಲ. ಒಂದು ವೇಳೆ ಮನರೇಗಾ ಯೋಜನೆ ಯಶಸ್ವಿಯಾಗಿದ್ದರೆ ಕೋವಿಡ್‌ ಸಮಯದಲ್ಲಿ ಅನುಕೂಲ ಆಗಬೇಕಿತ್ತು. ಆದರೆ, ಅದಾಗಲಿಲ್ಲ. ಯೋಜನೆಯ ಹೆಸರು ಬದಲಾವಣೆ ಬಗ್ಗೆ ಕೇಂದ್ರವು ರಾಜ್ಯಗಳ ಜತೆ ಸಮಾಲೋಚನೆ ನಡೆಸದೆ ಏಕಾಏಕಿ ತೀರ್ಮಾನ ಕೈಗೊಂಡಿದೆ. ಯಾವುದೇ ಯೋಜನೆಯಿಂದ ಜನರಿಗೆ ಒಳಿತಾಗಬೇಕು. ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ ಯೋಜನೆಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರದಿಂದ 1,687 ಕೋಟಿ ರೂ. ಬಾಕಿ

ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 1,687 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಮನರೇಗಾ ಯೋಜನೆಯಡಿ ಕೆಲಸ ಮುಗಿದ 15 ದಿನಗಳೊಳಗೆ ಕಾರ್ಮಿಕರಿಗೆ ಕೂಲಿ ಪಾವತಿಯಾಗಬೇಕು. ಆದರೆ, ಕೇಂದ್ರದಿಂದ ಹಣ ಬಿಡುಗಡೆಯಾಗದ ಕಾರಣ ಖಾತೆಗೆ ಹಣ ಜಮೆಯಾಗಿಲ್ಲ. ಸಾಮಗ್ರಿ ವೆಚ್ಚವು ಸುಮಾರು 787 ಕೋಟಿ ರೂ ಬಾಕಿ ಇದೆ. ಇದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಬಳಸಿದ ಸಿಮೆಂಟ್, ಮರಳು, ಕಲ್ಲು ಮುಂತಾದ ಸಾಮಗ್ರಿಗಳ ಬಿಲ್ ಆಗಿದೆ.

ಯೋಜನೆ ನಿರ್ವಹಿಸುವ ಸಿಬ್ಬಂದಿ ವೇತನ, ಕಚೇರಿ ವೆಚ್ಚ ಮತ್ತು ತಾಂತ್ರಿಕ ನಿರ್ವಹಣೆಗಾಗಿ ಸುಮಾರು 300 ಕೋಟಿ ರೂ. ಆಡಳಿತಾತ್ಮಕ ವೆಚ್ಚವಾಗಿದೆ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ. ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದ್ದು, ಕೆಲವು ಕಾರ್ಮಿಕರ ಬ್ಯಾಂಕ್ ಖಾತೆಗಳು ಆಧಾರ್‌ಗೆ ಸರಿಯಾಗಿ ಲಿಂಕ್ ಆಗದ ಹಿನ್ನೆಲೆಯಲ್ಲಿ ಹಣ ಬಿಡುಗಡೆ ತಡೆಹಿಡಿಯಲಾಗಿದೆ. ರಾಜ್ಯ ಸರ್ಕಾರಗಳು ಸಲ್ಲಿಸುವ ಸಾಮಾಜಿಕ ಲೆಕ್ಕಪರಿಶೋಧನಾ ವರದಿಗಳಲ್ಲಿನ ಲೋಪದೋಷಗಳಿಂದಲೂ ಕೆಲವೊಮ್ಮೆ ಹಣ ಬಿಡುಗಡೆ ತಡೆಹಿಡಿಯಲಾಗಿದೆ ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರವು ಈಗಾಗಲೇ ಹಲವು ಬಾರಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದು ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿದೆ. ಆದರೆ ಹಣ ಬಿಡುಗಡೆ ವಿಳಂಬದಿಂದಾಗಿ ಗ್ರಾಮೀಣ ಜನರಿಗೆ ಕೂಲಿ ಪಾವತಿ ಸಾಧ್ಯವಾಗಿಲ್ಲ. ಇದರಿಂದ ಆ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ದೇಶಾದ್ಯಂತ ಸುಮಾರು 10 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

Read More
Next Story