Namma Metro | ವರ್ಷದೊಳಗೆ ಗುಲಾಬಿ ಮಾರ್ಗದ ಮೆಟ್ರೋ ಸಂಚಾರ ಆರಂಭ
x

Namma Metro | ವರ್ಷದೊಳಗೆ ಗುಲಾಬಿ ಮಾರ್ಗದ ಮೆಟ್ರೋ ಸಂಚಾರ ಆರಂಭ

ಗುಲಾಬಿ ಮಾರ್ಗದಲ್ಲಿ ಸಂಚರಿಸುವ ಮೊದಲ ಮೆಟ್ರೋ ರೈಲನ್ನು ಬಿಇಎಂಎಲ್ ಸಂಸ್ಥೆ ಮುಂದಿನ ವರ್ಷದ ಮಧ್ಯಭಾಗದಲ್ಲಿ ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಿದೆ.


ಗೊಟ್ಟಿಗೆರೆಯಿಂದ (ಕಾಳೇನ ಅಗ್ರಹಾರ) ನಾಗವಾರದವರೆಗಿನ 21.26 ಕಿಮೀ ಉದ್ದದ ಎತ್ತರಿಸಿದ ಗುಲಾಬಿ ಮಾರ್ಗದಲ್ಲಿ ಡಿ.2025 ರ ವೇಳೆಗೆ ಮೇಟ್ರೋ ರೈಲು ಸಂಚಾರ ಆರಂಭವಾಗಲಿದೆ.

ಗುಲಾಬಿ ಮಾರ್ಗದಲ್ಲಿ ಸಂಚರಿಸುವ ಮೊದಲ ರೈಲನ್ನು ಬಿಇಎಂಎಲ್ ಸಂಸ್ಥೆ ಮುಂದಿನ ವರ್ಷದ ಮಧ್ಯಭಾಗದಲ್ಲಿ ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಿದೆ. 2025 ಡಿಸೆಂಬರ್‌ ವೇಳೆಗೆ ಬಿಇಎಂಎಲ್‌ ಸಂಸ್ಥೆ 53 ರೈಲು ಸೆಟ್‌ಗಳನ್ನು ನೀಡಬೇಕಿದೆ. ಜುಲೈ ತಿಂಗಳಲ್ಲಿ ಒಂದು ಹಾಗೂ ಡಿಸೆಂಬರ್ ವೇಳೆಗೆ ಎರಡು ಸೆಟ್ ರೈಲು ಮೆಟ್ರೋ ನಿಗಮದ ಕೈ ಸೇರಲಿವೆ. ಆದರೆ, ಗುಲಾಬಿ ಮಾರ್ಗದ ಉದ್ಘಾಟನೆ ವೇಳೆಗೆ 9-10 ಸೆಟ್ ರೈಲುಗಳು ಮಾತ್ರ ಸಿದ್ಧವಾಗಿರಲಿವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಇನ್ನು ತಾವರೆಕೆರೆ-ಕಾಳೇನ ಅಗ್ರಹಾರ ನಡುವಿನ 7.5 ಕಿ. ಮೀ. ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ತಾವರೆಕೆರೆ, ಜಯದೇವ ಇಂಟರ್ಚೇಂಜ್ ನಿಲ್ದಾಣ, ಜೆಪಿ ನಗರ 4ನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ ನಿಲ್ದಾಣಗಳು ಗುಲಾಬಿ ಮಾರ್ಗದಲ್ಲಿ ಬರಲಿವೆ. ರೈಲು ನಿಲುಗಡೆಯ ವಯಾಡಕ್ಟ್ ಬ್ರಿಡ್ಜ್ ಸಿದ್ಧವಾಗಿದೆ. ರೈಲು ಹಳಿ ಹಾಕುವ ಕಾರ್ಯ ಶೇ.70ರಷ್ಟು ಪ್ರಗತಿಯಲ್ಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ನಿಲ್ದಾಣಗಳಿಗೆ ಆರ್ಕಿಟೆಕ್ಚರ್ ಅಂತಿಮ ರೂಪ ನೀಡುತ್ತಿದ್ದಾರೆ. ಜೆ.ಪಿ.ನಗರ ನಿಲ್ದಾಣವು ಮೆಟ್ರೋ ಹಂತ-3ರ ವ್ಯಾಪ್ತಿಗೂ ಒಳಪಡಲಿದೆ. ಮಾರ್ಚ್ 2025ಕ್ಕೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಕಾಳೇನ ಅಗ್ರಹಾರದಲ್ಲಿ ಪ್ಲಾಟ್ ಫಾರ್ಮ್‌ ಶೇ. 50 ರಷ್ಟು ಕಾಮಗಾರಿ ಮುಗಿದಿದ್ದು, ಬಲಭಾಗದ ಕಾಮಗಾರಿ ನಡೆಯಬೇಕಿದೆ. ಗುಲಾಬಿ ಮಾರ್ಗದ ರೈಲುಗಳು ಕೊತ್ತನೂರು ಡಿಪೋದಿಂದ ಸಂಚಾರ ನಡೆಸಲಿವೆ. ಈ ಡಿಪೋದ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ವಿವರಿಸಿದ್ದಾರೆ.

ಬಿಎಂಆರ್‌ಸಿಲ್ 2025 ರೊಳಗೆ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಸಿಗ್ನಲಿಂಗ್, ಟೆಲಿ ಕಮ್ಯನಿಕೇಶನ್ ಮುಂತಾದ ಕಾಮಗಾರಿಗಳನ್ನು ನಂತರ ಕೈಗೊಳ್ಳಲಾಗುವುದು. ಕಳೆದ ಅ.30 ರಂದು 9ನೇ ಮತ್ತು ಅಂತಿಮ ಸುರಂಗ ಕೊರೆಯುವ ಕೆಲಸ ಮುಗಿದಿದೆ. ಯಂತ್ರವು 13.86-ಕಿಮೀ ಸುರಂಗ ಕೊರೆಯುವ ಕಾರ್ಯವನ್ನು ಪೂರ್ಣಗೊಳಿಸಿದೆ. ಈಗ ಹಳಿ ಹಾಕುವ ಕಾಮಗಾರಿ ಆರಂಭವಾಗಿದೆ. ಟೆಕ್ಸ್ ಮೋ ಕೋ ರೈಲ್ವೆ ಎಂಜಿನಿಯರಿಂಗ್ ಲಿಮಿಟೆಡ್ ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿತ್ತು. ಈಗ ಎಲ್ ಆಂಡ್ ಟಿ ಲಿಮಿಟೆಡ್ ಕೈ ಜೋಡಿಸಿದೆ. ಗುಲಾಬಿ ಮಾರ್ಗದ ಪೂರ್ಣ ಪ್ರಮಾಣದ ಸುರಂಗ ಮಾರ್ಗ ನಿರ್ಮಾಣ ಕಾರ್ಯ 2026ಕ್ಕೆ ಮುಗಿಯಲಿದೆ ಎಂದು ಬಿಎಂಆರ್‌ಸಿಲ್‌ ತಿಳಿಸಿದೆ.


ಸುರಂಗ ಮಾರ್ಗ ಭಾಗಶಃ ಪೂರ್ಣ

ಗುಲಾಬಿ ಮಾರ್ಗದ ಮೆಟ್ರೋ ಕಾಮಗಾರಿ ಮೂರು ಹಂತಗಳಲ್ಲಿ ನಡೆಯುತ್ತಿದೆ. ಎತ್ತರಿಸಿದ ಮಾರ್ಗ, ಸುರಂಗ ಮಾರ್ಗ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಭದ್ರಾ ಟಿಬಿಎಂ ಯಂತ್ರವು 937 ಮೀಟರ್ ಸುರಂಗ ಕೊರೆದು ನಾಗವಾರ ನಿಲ್ದಾಣದಲ್ಲಿ ತನ್ನ ಕೆಲಸ ಪೂರ್ಣಗೊಳಿಸಿದೆ. ಭದ್ರಾ ಟಿಬಿಎಂ ಯಂತ್ರವನ್ನು 2024ರ ಏಪ್ರಿಲ್ 2ರಂದು ಕೆ.ಜಿ.ಹಳ್ಳಿ ನಿಲ್ದಾಣದಿಂದ ನಾಗವಾರದವರೆಗೆ ಸುರಂಗ ಕೊರೆಯಲು ನಿಯೋಜಿಸಲಾಗಿತ್ತು.

ಇನ್ನು ಮೆಟ್ರೋ ನಿಗಮವು ಒಟ್ಟು 13 ಕಿ.ಮೀ. ಸುರಂಗ ಮಾರ್ಗವನ್ನು ಮೂರು ಹಂತಗಳಲ್ಲಿ ಕೊರೆಯುವ ಕೆಲಸ ನಡೆಸಿತ್ತು. ಮೊದಲ ಹಂತದಲ್ಲಿ ಶಾದಿಮಹಲ್‌ನಿಂದ ವೆಂಕಟೇಶಪುರದವರೆಗೆ, ಎರಡನೇ ಹಂತದಲ್ಲಿ ವೆಂಕಟೇಶಪುರದಿಂದ ಕೆಜಿ ಹಳ್ಳಿವರೆಗೆ ಹಾಗೂ ಮೂರನೇ ಹಂತದಲ್ಲಿ ಕೆಜಿ ಹಳ್ಳಿಯಿಂದ ನಾಗವಾರವರೆಗಿನ ಸುರಂಗ ಕೊರೆಯುವ ಕೆಲಸವನ್ನು ತುಂಗಾ ಮತ್ತು ಭದ್ರಾ ಟಿಬಿಎಂ ಯಂತ್ರಗಳು ಯಶಸ್ವಿಯಾಗಿ ಪೂರ್ಣಗೊಳಿಸಿವೆ.

ಗುಲಾಬಿ ಮಾರ್ಗದಲ್ಲಿ18 ನಿಲ್ದಾಣ

ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯ ರೀಚ್ -6ರ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿ.ಮೀ. ಇದೆ. ಇದರಲ್ಲಿ ಒಟ್ಟು 18 ನಿಲ್ದಾಣಗಳು ಬರಲಿವೆ. ಈ ಮಾರ್ಗದಲ್ಲಿ 7.5 ಕಿ.ಮೀ. ಎತ್ತರಿಸಿದ ಮಾರ್ಗವಿದೆ. ಕಾಳೇನ ಅಗ್ರಹಾರದಿಂದ ಸ್ವಾಗತ್ ರಸ್ತೆಯವರೆಗೆ 6 ನಿಲ್ದಾಣ ಮತ್ತು 13.76 ಕಿ.ಮೀ. ಸುರಂಗ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ 12 ನಿಲ್ದಾಣಗಳು ಒಳಗೊಂಡಿವೆ.

Read More
Next Story