The Federal Series- 3 | ಹಿಗ್ಗಲಿದೆ ಮೆಟ್ರೋ ಜಾಲ; ಸಂಚಾರ ದಟ್ಟಣೆ ತಗ್ಗಲು ಕಾಯಬೇಕು  2041 ರವರೆಗೆ!
x

The Federal Series- 3 | ಹಿಗ್ಗಲಿದೆ ಮೆಟ್ರೋ ಜಾಲ; ಸಂಚಾರ ದಟ್ಟಣೆ ತಗ್ಗಲು ಕಾಯಬೇಕು 2041 ರವರೆಗೆ!

ಮೆಟ್ರೋ ಹಂತ 3 ಮತ್ತು 3A ನಿರ್ಮಾಣ ಯೋಜನೆ ಸಿದ್ಧವಾಗಿದ್ದು, ಕಾಮಗಾರಿ ಆರಂಭಿಸಲು ಸಿದ್ಧತೆ ನಡೆದಿದೆ. ಈ ಎಲ್ಲ ಮೆಟ್ರೋ ಸಂಪರ್ಕ ಜಾಲ ಪೂರ್ಣವಾದರೆ 2041ರ ವೇಳೆ ಮೆಟ್ರೋ ಜಾಲ 371ಕಿ.ಮೀ.ಗೆ ಹಿಗ್ಗಲಿದೆ.


ಪ್ರಯಾಣ ದರ ಏರಿಕೆಯ ಬಳಿಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ʼನಮ್ಮ ಮೆಟ್ರೋʼ ಸಿಲಿಕಾನ್‌ ಸಿಟಿಯಲ್ಲಿ ತನ್ನ ಜಾಲ ವಿಸ್ತರಿಸಿಕೊಂಡು ಸಂಚಾರ ದಟ್ಟಣೆ ನಿವಾರಣೆಗೆ ಶ್ರಮಿಸಲಿದೆ.

ಸುಲಭ ಹಾಗೂ ಆರಾಮದಾಯಕ ಪ್ರಯಾಣ ಸೌಲಭ್ಯ ಒದಗಿಸುವ ʼನಮ್ಮ ಮೆಟ್ರೋʼ ಸದ್ಯ 77 ಕಿ.ಮೀ. ಉದ್ದದ ಜಾಲ ಹೊಂದಿದೆ. ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತೀಚೆಗೆ ದರ ಏರಿಕೆಯಿಂದ ಪ್ರಯಾಣಿಕರನ್ನೂ ಕಳೆದುಕೊಂಡಿದೆ. ಆದರೂ, ಪರಿಣಾಮಕಾರಿ ಹಸಿರುಸ್ನೇಹಿ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಲು ʼಜಾಲ ವಿಸ್ತರಣೆ ಯೋಜನೆʼ ಹಾಕಿಕೊಂಡಿದೆ.

ಮೆಟ್ರೋ ವಿಸ್ತರಣೆಯ ಭಾಗವಾಗಿ ಹಲವು ಹಂತದ ಕಾರಿಡಾರ್‌ಗಳು ನಿರ್ಮಾಣ ಹಂತದಲ್ಲಿವೆ. ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗ ಪೂರ್ಣಗೊಂಡು, ಪ್ರಾಯೋಗಿಕ ಸಂಚಾರವೂ ನಡೆದಿದೆ. ರೈಲು ಕೋಚ್‌ಗಳ ಪೂರೈಕೆಗಾಗಿ ಕಾಯುತ್ತಿದೆ.

ಇನ್ನು ನಾಗವಾರದಿಂದ ಕಾಳೇನ ಅಗ್ರಹಾರ ನಡುವಿನ ಗುಲಾಬಿ ಮಾರ್ಗ, ಸಿಲ್ಕ್ ಬೋರ್ಡ್- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡುವಿನ ನೀಲಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಮೆಟ್ರೋ ಹಂತ 3 ಮತ್ತು 3A ನಿರ್ಮಾಣ ಯೋಜನೆ ಸಿದ್ಧವಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ.

ಈ ಎಲ್ಲ ಮಾರ್ಗದ ಮೆಟ್ರೋ ಸಂಪರ್ಕ ಜಾಲ ಪೂರ್ಣಗೊಂಡರೆ 2041 ರ ಹೊತ್ತಿಗೆ ಒಟ್ಟು ಮೆಟ್ರೋ ಜಾಲ 371ಕಿ.ಮೀ.ಗೆ ಹಿಗ್ಗಲಿದೆ.

ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು NIMHANS ನಂತಹ ಪ್ರಮುಖ ಸಂಸ್ಥೆಗಳಿಗೂ ಮೆಟ್ರೋ ಸಂಪರ್ಕ ಕಲ್ಪಿಸಲು ಪ್ರಸ್ತಾಪಿಸಿದ್ದು, ಇನ್ನರ್ ರಿಂಗ್ ಮೆಟ್ರೋ ಜಾಲ ಆರಂಭದ ಉದ್ದೇಶ ಹೊಂದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ(IISc) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರಸ್ತುತ ಇರುವ 77 ಕಿ.ಮೀ ಉದ್ದದ ಮೆಟ್ರೋ ಮಾರ್ಗವು 2031ಕ್ಕೆ ಒಟ್ಟು 171.5 ಕಿ.ಮೀ ಆಗಲಿದೆ. ಇದರಲ್ಲಿ ನೀಲಿ ಮಾರ್ಗ (ಸಿಲ್ಕ್ ಇನ್ಸ್ಟಿಟ್ಯೂಟ್ ನಿಂದ KIAL) ಇರಲಿದೆ. ಗುಲಾಬಿ ಮಾರ್ಗವು (ಹೆಬ್ಬಾಳದಿಂದ ಕಾಳೇನ ಅಗ್ರಹಾರ), ಹಳದಿ ಮಾರ್ಗದ (RV ರಸ್ತೆಯಿಂದ ಬೊಮ್ಮಸಂದ್ರದವರೆಗೆ ವಿಸ್ತರಣೆ ಆಗಲಿದೆ. 2041ರ ವೇಳೆಗೆ ಮೆಟ್ರೋ ಮಾರ್ಗದ ಒಟ್ಟು ಉದ್ದ 317 ಕಿ.ಮೀಗೆ ವಿಸ್ತರಿಸಲಿದೆ ಎಂದು ಅಂದಾಜಿಸಲಾಗಿದೆ.

ಮೆಟ್ರೋ ರೈಲು ಜಾಲ

(ಪ್ರಯಾಣಿಕರ ಸಂಖ್ಯೆ)

2027 2031 2041

75.3 ಕಿ.ಮೀ 171.5 ಕಿ.ಮೀ 317 ಕಿ.ಮೀ

ನೇರಳೆ ಮಾರ್ಗ(ಕೆಂಗೇರಿ - ವೈಟ್‌ಫೀಲ್ಡ್‌)

7.59

7.95

6.76

ಹಸಿರು ಮಾರ್ಗ (ಮಾದಾವರ - ಸಿಲ್ಕ್ ಇನ್‌ಸ್ಟಿಟ್ಯೂಟ್‌)

6.92

7.66

7.34

ಹಳದಿ ಮಾರ್ಗ (ಆರ್‌.ವಿ. ರಸ್ತೆ- ಬೊಮ್ಮಸಂದ್ರ)

-

3.48

5.33

ಗುಲಾಬಿ ಮಾರ್ಗ (ಗೊಟ್ಟಿಗೆರೆ – ನಾಗವಾರ)

-

3.06

2.79

ನೀಲಿ ಮಾರ್ಗ (ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆಆರ್.ಪುರಂ)

-

2.89

3.08

ನೀಲಿ ಮಾರ್ಗ (ಕೆಆರ್ ಪುರಂ - ಹೆಬ್ಬಾಳ - ವಿಮಾನ ನಿಲ್ದಾಣ)

-

5.03

8.14

ಒಆರ್‌ಆರ್‌ ಪಶ್ಚಿಮ ಮಾರ್ಗ

-

-

3.08

ಮೆಟ್ರೋಲೈಟ್ ಪ್ರಯಾಣಿಕರ ಸಂಖ್ಯೆ

(ಮಾಗಡಿ ರಸ್ತೆ)

-

-

2.29

(ವೈಟ್‌ಫೀಲ್ಡ್‌ - ದೊಮ್ಮಲೂರು)

-

-

1.30

(ಕಟಮನಲ್ಲೂರು ಗೇಟ್ -ಸರ್ಜಾಪುರ ರಸ್ತೆ - ಹೆಬ್ಬಾಳ)

-

-

5.90

ಇನ್ನರ್ ರಿಂಗ್ ಮೆಟ್ರೋ

-

-

3.68

ಒಟ್ಟು ದೈನಂದಿನ ಪ್ರಯಾಣಿಕರ ಸಂಖ್ಯೆ

14.51

30.06

49.72

ಮೆಟ್ರೋ ವಿಸ್ತರಣೆ ಸುಲಭ

ವಿಶ್ವದ ಹಲವು ರಾಷ್ಟ್ರಗಳಲ್ಲಿ ದಶಕಗಳ ಹಿಂದೆಯೇ ಮೆಟ್ರೋ ಸೇವೆ ಚಾಲ್ತಿಯಲ್ಲಿದೆ. ತಂತ್ರಜ್ಞಾನವೂ ಸುಲಭವಾಗಿ ಸಿಗುವುದರಿಂದ ವಿಸ್ತರಣೆ ಕಷ್ಟವಾಗುವುದಿಲ್ಲ. ಬೇಡಿಕೆ, ಕಾರ್ಯಾಚರಿಸುವ ದಿಕ್ಕು, ಒಡಿ(ಆರಿಜನ್ ಡೆಸ್ಟಿನೇಷನ್) ಅಧ್ಯಯನ ( ಆರಂಭ ಮತ್ತು ಕೊನೆ ಮೈಲಿನ ಪ್ರಯಾಣ ಮಾದರಿ) ಮಾಡಬೇಕು. ಯಾವ ದಿಕ್ಕಿನಲ್ಲಿ ಹಾಕಿದರೆ ಜನರಿಗೆ ಅನುಕೂಲವಾಗಲಿದೆ ಎಂಬುದನ್ನು ಅರ್ಥ ಮಾಡಿಕೊಂಡು ಮಾರ್ಗ ನಿಗದಿಪಡಿಸಬೇಕು ಎಂದು ನಗರ ತಜ್ಞ ಪ್ರೊ.ಎಂ.ಎನ್. ಶ್ರೀಹರಿ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ಮೆಟ್ರೋ, ಸಬ್ ಅರ್ಬನ್ ಸಾರಿಗೆಯನ್ನು ಮಾಸ್ ರಾಪಿಡ್ ಟ್ರಾನ್ಸ್ಪೊರ್ಟ್‌ನಲ್ಲಿ ಒದಗಿಸಿದರೆ ಸಂಚಾರ ವ್ಯವಸ್ಥೆ ಮತ್ತಷ್ಟು ಅಗ್ಗವಾಗಲಿದೆ. ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್ ಅವಧಿಯಲ್ಲಿ ಯೋಜನೆ ಕಾರ್ಯಗತಗೊಳಿಸಿದ್ದೆವು. ಬಹು ಮಾದರಿಯ ಸಾರಿಗೆ ವ್ಯವಸ್ಥೆಯಿಂದ ದಟ್ಟಣೆ ನಿವಾರಣೆಯಾಗಲಿದೆ. ಸರ್ಕಾರಗಳು ಪ್ರತ್ಯೇಕವಾಗಿ ಯೋಜನೆ ರೂಪಿಸುವುದಕ್ಕಿಂತ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕೈಗೆಟುಕುವ ದರವಿದ್ದರೆ ಒಳಿತು

ಮೆಟ್ರೋ ಪ್ರಯಾಣ ದರ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ದಿನೇ ದಿನೇ ಮೆಟ್ರೋದಿಂದ ವಿಮುಖರಾಗುತ್ತಿದ್ದಾರೆ. ಮುಂದಿನ 15 ವರ್ಷಗಳಲ್ಲಿ ಮೆಟ್ರೋ ಜಾಲ 371 ಕಿ.ಮೀ.ಗೆ ವಿಸ್ತರಿಸಿದರೂ ಸಾರ್ವಜನಿಕರು ಕೈಗೆಟುವ ದರದಲ್ಲಿ ಪ್ರಯಾಣ ದರ ಇರಬೇಕು. ದುಬಾರಿ ದರ ಏರಿಕೆ ಮಾಡಿದರೆ ಜಾಲ ವಿಸ್ತರಿಸಿಯೂ ಪ್ರಯೋಜನ ಇಲ್ಲದಂತಾಗುತ್ತದೆ. ಬಿಎಂಆರ್ಸಿಎಲ್ ಅಧಿಕಾರಿಗಳ ಪ್ರಯಾಣ ಏರಿಕೆಯ ಕುರಿತು ಯಾವುದೇ ಸುಳಿವು ನೀಡದೇ, ಪರಿಷ್ಕರಿಸದೇ ಲಾಭದ ದೃಷ್ಟಿಯಲ್ಲೇ ಮುಂದುವರಿದರೆ ಯೋಜನೆ ಪರಿಣಾಮಕಾರಿಯಾಗಲಿದೆ ಎಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ ಅಧ್ಯಕ್ಷ ರಾಜೇಶ್ ಭಟ್ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

Read More
Next Story