Metro Fare Hike | ಪ್ರಯಾಣ ದರ ಶೇ 50 ರಷ್ಟು ಹೆಚ್ಚಳ; ಮೆಟ್ರೋ ದುಬಾರಿ ಸವಾರಿಗೆ  ಪ್ರಯಾಣಿಕರ ಹಿಂದೇಟು
x
ಮೆಟ್ರೋ ರೈಲು

Metro Fare Hike | ಪ್ರಯಾಣ ದರ ಶೇ 50 ರಷ್ಟು ಹೆಚ್ಚಳ; ಮೆಟ್ರೋ ದುಬಾರಿ ಸವಾರಿಗೆ ಪ್ರಯಾಣಿಕರ ಹಿಂದೇಟು

ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಬಿಎಂಆರ್‌ಸಿಎಲ್‌ ಪ್ರಯಾಣ ದರ ಪರಿಷ್ಕರಿಸಿದೆ. ಆದರೆ, ಏಕಾಏಕಿ ಶೇ 50 ರಷ್ಟು ಪ್ರಯಾಣ ದರ ಏರಿಕೆ ಮಾಡಿರುವುದು ಪ್ರಯಾಣಿಕರನ್ನು ಏದುಸಿರು ಬಿಡುವಂತೆ ಮಾಡಿದೆ.


ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ಏರಿಕೆಯಿಂದ ಕಂಗಾಲಾಗಿರುವ ಪ್ರಯಾಣಿಕರಿಗೆ ಈಗ ಮೆಟ್ರೋ ರೈಲು ಪ್ರಯಾಣ ದರ ಏರಿಕೆಯ ಬಿಸಿ ತಟ್ಟಿದೆ. ಪ್ರಯಾಣ ದರ ಶೇ 50ರಷ್ಟು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಕ್ಕೆ ಜನರು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಬಿಎಂಆರ್‌ಸಿಎಲ್‌ ಪ್ರಯಾಣ ದರ ಪರಿಷ್ಕರಿಸಿದೆ. ಆದರೆ, ಏಕಾಏಕಿ ಶೇ 50 ರಷ್ಟು ಪ್ರಯಾಣ ದರ ಏರಿಕೆ ಮಾಡಿರುವುದು ಪ್ರಯಾಣಿಕರನ್ನು ಏದುಸಿರು ಬಿಡುವಂತೆ ಮಾಡಿದೆ. ಪ್ರಸ್ತುತ, ಮೆಟ್ರೋ ದರಗಳು ಕನಿಷ್ಠ 10ರೂ.ನಿಂದ ಹಿಡಿದು ಗರಿಷ್ಠ 90 ರೂ. ರವರೆಗೆ ಇದೆ. ಕೆಲ ಮಾರ್ಗಗಳಲ್ಲಿ ಗರಿಷ್ಠ ಪ್ರಯಾಣದ ದರ ಶೇ 51ರಷ್ಟು ಏರಿಕೆಯಾಗಿದೆ.

ಪ್ರಯಾಣಿಕರ ನಿರಾಸಕ್ತಿ

ಮೆಟ್ರೋ ಹಸಿರು ಮಾರ್ಗದಲ್ಲಿ ಮಾದಾವರದಿಂದ ಸಿಲ್ಕ್‌ ಬೋ‌ರ್ಡ್‌ವರೆಗೂ 90 ರೂ. ಇದೆ. ಈ ಮೊದಲು ಪ್ರಯಾಣ ದರ 60ರೂ. ಇತ್ತು. ಅದೇ ರೀತಿ ಕಾಡುಗೋಡಿಯಿಂದ ಕೆಂಗೇರಿಗೆ 90 ರೂ. ಪ್ರಯಾಣ ದರವಿದೆ. ಹಸಿರು ಮಾರ್ಗದಲ್ಲಿ ನಿತ್ಯ ಲಕ್ಷಾಂತರ ಜನರು ವಿವಿಧೆಡೆ ಕೆಲಸಗಳಿಗೆ ತೆರಳುತ್ತಿದ್ದು, ದುಬಾರಿ ಪ್ರಯಾಣ ದರದ ಪರಿಣಾಮ ಮತ್ತೆ ಬಸ್‌ ಪ್ರಯಾಣವನ್ನೇ ಅವಲಂಬಿಸುವಂತಾಗಿದೆ. ಅಂಕಿ ಅಂಶಗಳ ಪ್ರಕಾರ ಪ್ರತಿ ದಿನ ಹಸಿರು ಹಾಗೂ ನೇರಳೆ ಮಾರ್ಗದ ಮೆಟ್ರೋದಲ್ಲಿ 9.2 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ವಾರಂತ್ಯದಲ್ಲಿ ನಿತ್ಯ 2 ಕೋಟಿ ರೂ. ಕಾರ್ಯಾಚರಣೆಯ ಆದಾಯ ಬರುತ್ತಿದೆ.

"ಸಂಚಾರ ದಟ್ಟಣೆಯ ಕಿರಿಕಿರಿ ಇಲ್ಲದೇ ಸಿಲ್ಕ್‌ ಇನ್‌ಸ್ಟಿಟ್ಯೂಟ್‌ಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೆ. ಈಗ ದಿಢೀರನೇ ಶೇ 50ರಷ್ಟು ಪ್ರಯಾಣ ದರ ಏರಿಕೆ ಮಾಡಿದ್ದು, ಓಡಾಡುವುದೇ ಕಷ್ಟವಾಗಿದೆ. ಕೆಲಸಕ್ಕೆ ಹೋಗಿ ಬರಬೇಕಾದರೆ ನಿತ್ಯ 180 ರೂ. ಪಾವತಿಸಬೇಕು. ಹಾಗಾಗಿ ಬಸ್ಸಿನಲ್ಲೇ ಪ್ರಯಾಣಿಸಲು ನಿರ್ಧರಿಸಿದ್ದೇನೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಇದು ದುಬಾರಿಯಾಗಿದೆ" ಎಂದು ನಾಗಸಂದ್ರ ನಿವಾಸಿ ಶ್ರೀನಿವಾಸ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಮೆಟ್ರೋ ಮಾರ್ಗ ಇರುವ ಹಿನ್ನೆಲೆಯಲ್ಲಿ ಪೂರ್ವ ಬೆಂಗಳೂರಿನ ವಿವಿಧೆಡೆ ಕೆಲಸ ಮಾಡುವವರು ಜಾಲಹಳ್ಳಿ, ಯಶವಂತಪುರ, ಮಾದಾವರ, ನಾಗಸಂದ್ರ ಕಡೆಗೆ ಮನೆಗಳನ್ನು ಮಾಡಿಕೊಂಡಿದ್ದರು. ಆದರೆ, ಈಗ ಪ್ರಯಾಣ ದರ ಏರಿಕೆಯಾಗಿರುವುದರಿಂದ ತಿಂಗಳಿಗೆ 6000ರೂ. ಪ್ರಯಾಣ ವೆಚ್ಚ ತಗುಲುತ್ತದೆ. ವಿಧಿಯಿಲ್ಲದೇ ಬಸ್‌ ಪ್ರಯಾಣವನ್ನೇ ಅವಲಂಬಿಸಬೇಕಾಗಿದೆ ಎಂಬುದು ಹಲವರ ಅಭಿಪ್ರಾಯ.

ಪ್ರಯಾಣಿಕರ ಸಂಖ್ಯೆ ಕುಸಿಯುವ ಸಾಧ್ಯತೆ

ಶೇ 50ರಷ್ಟು ಪ್ರಯಾಣ ದರ ಏರಿಕೆಯಿಂದಾಗಿ ದೈನಂದಿನ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ದುಬಾರಿ ಪ್ರಯಾಣ ತೆರಲು ಒಲ್ಲದವರು ಬಿಎಂಟಿಸಿ, ಸ್ವಂತ ವಾಹನದಂತಹ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಲಿದೆ. ಬಿಎಂಆರ್‌ಸಿಎಲ್‌ ಅಧಿಕಾರಿಗಳ ಅಂದಾಜಿನ ಪ್ರಕಾರ ಹೊಸ ದರ ಪರಿಷ್ಕರಣೆಯಿಂದ ಮೆಟ್ರೋ ರೈಲಿನಲ್ಲಿ ಸಂಚರಿಸುವವರ ಸಂಖ್ಯೆ ಶೇ 1 ರಿಂದ 2ರಷ್ಟು ಕುಸಿಯಬಹುದು ಎಂದು ನಿರೀಕ್ಷಿಸಿದ್ದಾರೆ.

ದರ ಪರಿಷ್ಕರಣೆ ಮಾಡುವುದು ಯಾರು?

ಮೆಟ್ರೋ ಪ್ರಯಾಣ ದರ ಪರಿಷ್ಕರಣೆಗಾಗಿ ದರ ನಿಗದಿ ಸಮಿತಿ(ಎಫ್‌ಎಫ್‌ಸಿ) ರಚಿಸಲಾಗಿದೆ. ಇದು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಕರ್ನಾಟಕದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮೆಟ್ರೋ ಪ್ರಯಾಣ ದರವನ್ನು ಶೇ. 45 ರಷ್ಟು ಮಾಡುವಂತೆ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಫೆ.1 ರಂದು ಕೇಂದ್ರ ಸರ್ಕಾರ ಬೆಲೆ ಏರಿಕೆ ಪ್ರಸ್ತಾವನೆಗೆ ತಡೆ ನೀಡಿತ್ತು. ಈಗ ಶೇ 50 ರಷ್ಟು ಪ್ರಯಾಣ ದರ ಏರಿಕೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡ ಬಿಎಂಆರ್‌ಸಿಎಲ್‌ ಮಂಡಳಿಯು ಪ್ರಯಾಣ ದರ ಏರಿಕೆಗೆ ಅನುಮೋದನೆ ನೀಡಿದೆ.

ದರ ಹಿಂಪಡೆಯಲು ಆಗ್ರಹ

ಮೆಟ್ರೋ ದರವನ್ನು ಶೇ 50 ಏರಿಕೆ ಮಾಡಿರುವುದರಿಂದ ಜನಸಾಮಾನ್ಯರಿಗೆ ಮೆಟ್ರೋ ಸಂಚಾರ ಕೈಗೆಟುಕದಂತಾಗುತ್ತದೆ. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಲಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಹಾಗೂ ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ರಾಜ್ಯ ಸರ್ಕಾರ ಪ್ರಯಾಣ ದರ ಏರಿಕೆಯನ್ನು ಅನುಮೋದಿಸಿದೆ. ಇದು ಜನರನ್ನು ಮೆಟ್ರೋದಿಂದ ವಿಮುಖರನ್ನಾಗಿ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರೋ. ಅಶೋಕ್‌ ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಕೂಡಲೇ ಮೆಟ್ರೋ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಅತಿ ಹೆಚ್ಚು ಆದಾಯ ತರುವ ಬೆಂಗಳೂರು ಮೆಟ್ರೋ

ದೇಶದ ಹಲವು ನಗರಗಳಲ್ಲಿ ಕಾರ್ಯಾಚರಿಸುವ ಮೆಟ್ರೋಗಿಂತ ಬೆಂಗಳೂರಿನ ನಮ್ಮ ಮೆಟ್ರೋ ಅತಿ ಹೆಚ್ಚು ಆದಾಯ ತಂದುಕೊಡುವ ಸಂಸ್ಥೆಯಾಗಿದೆ. 2023-24 ರಲ್ಲಿ ನಮ್ಮ ಮೆಟ್ರೋ 129.3 ಕೋಟಿ ಕಾರ್ಯಾಚರಣೆಯ ಆದಾಯ ಗಳಿಸಿದೆ. ದೇಶದ ಬೇರಾವ ಮೆಟ್ರೋಗಳಲ್ಲಿ ಇಷ್ಟೊಂದು ಕಾಯಾಚರಣೆಯ ಲಾಭ ಸಿಕ್ಕಿರಲಿಲ್ಲ.

ಸ್ಮಾರ್ಟ್‌ ಕಾರ್ಡ್‌ಗೆ ರಿಯಾಯ್ತಿ, ಕ್ಯೂಆರ್‌ ಕೋಡ್‌ಗೆ ರದ್ದು

ಸ್ಮಾರ್ಟ್‌ ಕಾರ್ಡ್‌ ಬಳಕೆದಾರರಿಗೆ ಶೇ 5 ರಷ್ಟು ರಿಯಾಯ್ತಿ ನೀಡಲಾಗಿದೆ. ಆದರೆ, ಸ್ಮಾರ್ಟ್‌ ಕಾರ್ಡ್‌ನಲ್ಲಿ ಕನಿಷ್ಠ ಮೊತ್ತ 50 ರೂ. ಬದಲು ಈಗ 90 ರೂ. ಇರಬೇಕಾಗಿದೆ. ಇದರಿಂದ ಸ್ಮಾರ್ಟ್‌ ಬೆಲೆ ಏರಿಕೆಯಲ್ಲಿ ಶೇ 80 ರಷ್ಟು ಹೆಚ್ಚಳವಾದಂತಾಗಿದೆ.

ವಾರಾಂತ್ಯ ಹಾಗೂ ಜನದಟ್ಟಣೆ ಕಡಿಮೆ ಇರುವ ಅವಧಿಯಲ್ಲಿ ಹೆಚ್ಚು ರಿಯಾಯಿತಿಗಳನ್ನು ಪ್ರಕಟಿಸಿದೆ. ಹೊಸ ದರ ಹೆಚ್ಚಳದಿಂದ ಬಿಎಂಆರ್‌ಸಿಎಲ್‌ ದೈನಂದಿನ ಆದಾಯದಲ್ಲಿ ಹೆಚ್ಚುವರಿ 55-60 ಲಕ್ಷ ರೂ. ಏರಿಕೆಯಾಗುವ ನಿರೀಕ್ಷೆಯಿದೆ.

ಇನ್ನು ಭಾನುವಾರ ಹಾಗೂ ಪ್ರಮುಖ ಮೂರು ರಾಷ್ಟ್ರೀಯ ರಜಾದಿನಗಳಲ್ಲಿ (ಜ.26, ಆ. 15 ಹಾಗೂ ಅ. 2) ಪ್ರಯಾಣಿಕರಿಗೆ ಶೇ. 10 ರಷ್ಟು ರಿಯಾಯಿತಿ ಸಿಗಲಿದೆ. WhatsApp QR ಕೋಡ್ ಟಿಕೆಟ್‌ಗಳಿಗೆ ಯಾವುದೇ ರಿಯಾಯಿತಿ ನೀಡಿಲ್ಲ. ಈ ಮೊದಲು ಕನಿಷ್ಠ ೩ ರೂ ರಿಯಾಯಿತಿ ನೀಡಲಾಗಿತ್ತು.

ಪಾಸ್‌ ದರದಲ್ಲೂ ಬದಲಾವಣೆ

ಮೆಟ್ರೋ ಪ್ರವಾಸಿ ಪಾಸ್‌ ಹಾಗೂ ಗುಂಪು ಟಿಕೆಟ್‌ಗಳ ದರವನ್ನೂ ಪರಿಷ್ಕರಿಸಲಾಗಿದೆ.

ದಿನದ ಪಾಸ್‌ ಬೆಲೆ 300 ರೂ. ಆಗಿದೆ. ಮೂರು ದಿನದ ಪಾಸ್‌ 600 ರೂ., ಐದು ದಿನಗಳ ಪಾಸ್ 800 ರೂ. ಆಗಿದೆ.

ಗುಂಪು ಟಿಕೆಟ್‌ಗಳಿಗೆ, 25 ರಿಂದ 99 ಜನರ ಗುಂಪುಗಳು ಒಂದೇ ನಿಲ್ದಾಣದಿಂದ ಒಟ್ಟಿಗೆ ಪ್ರವೇಶಿಸಿದರೆ ಮತ್ತು ನಿರ್ಗಮಿಸಿದರೆ ಶೇ 10 ರಿಂದ 15 ರವರೆಗೆ ರಿಯಾಯಿತಿ ನೀಡಲಾಗಿದೆ. 100-1,000 ಜನರ ಗುಂಪುಗಳಿಗೆ ಫ್ಲಾಟ್ ದರವು ಪ್ರತಿ ವ್ಯಕ್ತಿಗೆ ರೂ 60 ಆಗಿದ್ದರೆ, 1,000 ಕ್ಕಿಂತ ಹೆಚ್ಚು ಜನರ ಗುಂಪುಗಳಿಗೆ ಪ್ರತಿ ವ್ಯಕ್ತಿಗೆ 50 ರೂ. ಆಗಿರಲಿದೆ.

Read More
Next Story