ಮೇಕೆದಾಟು ಯೋಜನೆ: ತಮಿಳುನಾಡಿನ ಕಾನೂನು ಹೋರಾಟಕ್ಕೆ ಹಿನ್ನಡೆ, ಕರ್ನಾಟಕಕ್ಕೆ ಜಯ
x

ಮೇಕೆದಾಟು ಯೋಜನೆ: ತಮಿಳುನಾಡಿನ ಕಾನೂನು ಹೋರಾಟಕ್ಕೆ ಹಿನ್ನಡೆ, ಕರ್ನಾಟಕಕ್ಕೆ ಜಯ

ಬೆಂಗಳೂರು ನಗರದ ಕುಡಿಯುವ ನೀರಿನ ಬೇಡಿಕೆ ಪೂರೈಸುವುದು ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಕರ್ನಾಟಕದ ಪ್ರಮುಖ ಗುರಿಯಾಗಿದೆ.


Click the Play button to hear this message in audio format

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮನಾಂತರ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ. ಯೋಜನೆಯು ಇನ್ನೂ ತಜ್ಞರ ಪರಿಶೀಲನಾ ಹಂತದಲ್ಲಿರುವುದರಿಂದ ಈಗಲೇ ನ್ಯಾಯಾಲಯ ಮಧ್ಯಪ್ರವೇಶಿಸುವುದು ‘ಅಕಾಲಿಕ’ (premature) ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಈ ಮೂಲಕ ಕರ್ನಾಟಕಕ್ಕೆ ದೊಡ್ಡ ಮಟ್ಟದ ತಾತ್ಕಾಲಿಕ ರಿಲೀಫ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ಆದೇಶ ನೀಡಿದೆ. "ಕೇಂದ್ರ ಜಲ ಆಯೋಗವು (CWC) ಸದ್ಯಕ್ಕೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಮಾತ್ರ ಸೂಚಿಸಿದೆ. ಈ ವರದಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಅನುಮೋದನೆ ನೀಡುವುದು ಕಡ್ಡಾಯ. ಈ ಸಂಸ್ಥೆಗಳು ತಮಿಳುನಾಡಿನ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳಲಿವೆ. ಹೀಗಿರುವಾಗ ಈ ಅರ್ಜಿ ಅಕಾಲಿಕವಾಗಿದೆ," ಎಂದು ಪೀಠ ಸ್ಪಷ್ಟಪಡಿಸಿತು.

ತಜ್ಞರ ತೀರ್ಮಾನವೇ ಅಂತಿಮ

ವಿಚಾರಣೆಯ ವೇಳೆ, ನೀರಿನ ಹಂಚಿಕೆಯಂತಹ ತಾಂತ್ರಿಕ ವಿಷಯಗಳಲ್ಲಿ ನ್ಯಾಯಾಲಯಕ್ಕೆ ಪರಿಣತಿ ಇಲ್ಲ ಎಂದು ನ್ಯಾಯಪೀಠ ಪುನರುಚ್ಚರಿಸಿದೆ. "ಈ ಹಿಂದೆ 2023ರ ಆಗಸ್ಟ್‌ನಲ್ಲೇ ನಾವು ಹೇಳಿದಂತೆ, ತಜ್ಞರ ಸಮಿತಿಗಳು ನಿರ್ಧರಿಸಬೇಕಾದ ವಿಷಯಗಳಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈಗಾಗಲೇ ತಜ್ಞರ ಸಂಸ್ಥೆಗಳು ಈ ವಿಷಯವನ್ನು ಪರಿಶೀಲಿಸುತ್ತಿರುವಾಗ, ನ್ಯಾಯಾಲಯದ ಮಧ್ಯಪ್ರವೇಶ ಅನಗತ್ಯ," ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕರ್ನಾಟಕಕ್ಕೆ ಎಚ್ಚರಿಕೆ

ತಮಿಳುನಾಡಿನ ಅರ್ಜಿ ವಜಾಗೊಳಿಸಿದರೂ, ಇದೇ ವೇಳೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಪೀಠವು ಎಚ್ಚರಿಕೆಯೊಂದನ್ನು ರವಾನಿಸಿದೆ. "ನ್ಯಾಯಾಲಯದ ಆದೇಶ ಮತ್ತು ಪ್ರಾಧಿಕಾರಗಳ ನಿರ್ದೇಶನದಂತೆ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಹರಿಸುವುದನ್ನು ಕರ್ನಾಟಕ ಮುಂದುವರಿಸಬೇಕು. ಒಂದು ವೇಳೆ ಆದೇಶ ಪಾಲನೆಯಲ್ಲಿ ವಿಫಲವಾದರೆ, ನ್ಯಾಯಾಂಗ ನಿಂದನೆ ಕ್ರಮ ಎದುರಿಸಬೇಕಾಗುತ್ತದೆ," ಎಂದು ಪೀಠ ಎಚ್ಚರಿಸಿದೆ.

ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದ

ತಮಿಳುನಾಡಿನ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, "ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ಕಾವೇರಿ ಅವಲಂಬಿತ ರೈತರಿಗೆ ಗಂಭೀರ ಅನ್ಯಾಯವಾಗಲಿದೆ. ಬಿಳಿಗುಂಡ್ಲು ಮಾಪನ ಕೇಂದ್ರಕ್ಕಿಂತ ಎತ್ತರದ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸುತ್ತಿರುವುದರಿಂದ ಕೆಳಹರಿವಿನ ರಾಜ್ಯಕ್ಕೆ ನೀರಿನ ಹರಿವಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ," ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ಕರ್ನಾಟಕದ ಪರ ವಾದಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, "ತಮಿಳುನಾಡಿನ ಅರ್ಜಿ ತಪ್ಪುಕಲ್ಪನೆಯಿಂದ ಕೂಡಿದೆ. ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರು ಹರಿಸಲು ಕರ್ನಾಟಕ ಬದ್ಧವಾಗಿದೆ. ಈ ಜವಾಬ್ದಾರಿಯನ್ನು ಪೂರೈಸುತ್ತಲೇ, ಅಗತ್ಯ ಅನುಮತಿಗಳನ್ನು ಪಡೆದು ಜಲಾಶಯ ನಿರ್ಮಿಸಲು ನಮಗೆ ಹಕ್ಕಿದೆ," ಎಂದು ತಮ್ಮ ವಾದವನ್ನು ಮಂಡಿಸಿದರು.

ಒಂದು ವೇಳೆ, ತಜ್ಞರ ಸಮಿತಿಗಳು ಮೇಕೆದಾಟು ಯೋಜನೆಯ ಡಿಪಿಆರ್‌ಗೆ ಅಂತಿಮ ಅನುಮೋದನೆ ನೀಡಿದರೆ, ಅದನ್ನು ಕಾನೂನು ಪ್ರಕಾರ ಪ್ರಶ್ನಿಸಲು ತಮಿಳುನಾಡಿಗೆ ಸಂಪೂರ್ಣ ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ, ಮೇಕೆದಾಟು ಯೋಜನೆಯ ಭವಿಷ್ಯವು ಇದೀಗ ಸಂಪೂರ್ಣವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಯ ತೀರ್ಮಾನವನ್ನು ಅವಲಂಬಿಸಿದೆ.

ನಮ್ಮ ನೀರು, ನಮ್ಮ ಹಕ್ಕು: ಡಿಕೆಶಿ

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, "ನಮ್ಮ ನೀರು, ನಮ್ಮ ಹಕ್ಕು. ನ್ಯಾಯಾಲಯವು ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿರುವುದು ಒಂದು ಒಳ್ಳೆಯ ಸುದ್ದಿ. ಇದರ ಕುರಿತು ಪೂರ್ಣ ಮಾಹಿತಿ ಪಡೆದು ವಿವರವಾಗಿ ಮಾತನಾಡುತ್ತೇನೆ," ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಸರ್ಕಾರಕ್ಕೆ ಈ ಯೋಜನೆ ಅತ್ಯಂತ ಮಹತ್ವಾಕಾಂಕ್ಷಿಯಾಗಿದ್ದು, ಈ ಹಿಂದೆ ಅಧಿಕಾರಕ್ಕಾಗಿ ಬೃಹತ್ ಪಾದಯಾತ್ರೆಯನ್ನೂ ನಡೆಸಿತ್ತು.

Read More
Next Story