ಲೋಕ ಸಮರ: ಮೇಕೆದಾಟು ಯೋಜನೆ ವಿವಾದಕ್ಕೆ ಹೊಸ ಸ್ವರೂಪ?
ಕಾವೇರಿ (Kaveri River) ನೀರು ಹಂಚಿಕೆಯ ನಂತರ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ವಿವಾದಕ್ಕೆ ಕಾರಣವಾಗಿರುವ ಮೇಕೆದಾಟು (Mekedatu) ಯೋಜನೆ, ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಹೊಸ ಸ್ವರೂಪ ಪಡೆದುಕೊಂಡಿದೆ.
ಮೇಕೆದಾಟು ಯೋಜನೆಯನ್ನು ಕರ್ನಾಟಕ ಪ್ರಸ್ತಾಪಿಸಿದಾಗಿನಿಂದಲೂ ತಮಿಳುನಾಡು ಸರ್ಕಾರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಲ್ಲೇ ಇದೆ. ಲೋಕ ಸಮರದ ಈ ಸಂದರ್ಭದಲ್ಲಿ ಮೇಕೆದಾಟು ವಿವಾದ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ವಿಷಯವಾಗಿದೆ. ಮೇಕೆದಾಟು ಯೋಜನೆ ವಿವಾದ ಮತ್ತೆ ರಾಜಕೀಯ ಕೇಂದ್ರ ಬಿಂದುವಾಗಲು ಮುಖ್ಯ ಕಾರಣ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ತನ್ನ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವುದು. 2024 ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬಂದರೆ, ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೈಬಿಡುವುದಾಗಿ ಹೇಳಿಕೊಂಡಿದೆ. ಇದು ಇಂಡಿಯಾ ಮೈತ್ರಿ ಕೂಟದ ಭಾಗವಾಗಿರುವ ಕಾಂಗ್ರೆಸ್‌ಗೆ ಮುಜುಗರವನ್ನುಂಟು ಮಾಡಿದ್ದು, ಬಿಜೆಪಿ ಇದನ್ನೇ ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿದೆ.
ಮೇಕೆದಾಟು ಯೋಜನೆ ಜಾರಿ ಮಾಡುವುದಾಗಿ ಕರ್ನಾಟಕ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಹೇಳಿತ್ತು. ಇದಕ್ಕಾಗಿ ಕೊರೊನಾ ಅಲೆಯ ಸಂದರ್ಭದಲ್ಲೂ “ನಮ್ಮ ನೀರು ನಮ್ಮ ಹಕ್ಕು” ಎನ್ನುವ ಅಭಿಯಾನದ ಅಡಿ ಪಾದಯಾತ್ರೆ ಮಾಡಿತ್ತು. ಇದೀಗ ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಎರಡೂ ಪಕ್ಷಗಳಿದ್ದು, ಈ ಪಕ್ಷಗಳನ್ನು ಮೇಕೆದಾಟಿನ ವಿಚಾರದ ಮೂಲಕ ಕಟ್ಟಿ ಹಾಕಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.
ಕರ್ನಾಟಕದಲ್ಲಿ ಒಂದು ನಿಲುವು; ತಮಿಳುನಾಡಿನಲ್ಲಿ ಒಂದು ನಿಲುವು
ಮೇಕೆದಾಟು ಯೋಜನೆ ಜಾರಿ ಹಾಗೂ ವಿರೋಧಕ್ಕೆ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಭಿನ್ನ ನಿಲುವು ಹೊಂದಿವೆ. ಇಂಡಿಯಾ ಮೈತ್ರಿ ಕೂಟದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ಕರ್ನಾಟಕ ಕಾಂಗ್ರೆಸ್ ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಸಿದ್ಧ ಎನ್ನುತ್ತಿದೆ, ಇದಕ್ಕೆ ರಾಜ್ಯ ಬಿಜೆಪಿಯು ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿದೆ. ಇನ್ನು ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿ ಕೂಟದ ಭಾಗವೇ ಆಗಿರುವ ಡಿಎಂಕೆ ಈ ಯೋಜನೆ ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದು, ಇದಕ್ಕೆ ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಬೆಂಬಲ ಸೂಚಿಸಿದ್ದಾರೆ.
ಮೇಕೆದಾಟು ಯೋಜನೆಯ ಹಿನ್ನೆಲೆ
ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದು ಮೇಕೆದಾಟು ಯೋಜನೆಯ ಪ್ರಮುಖ ಉದ್ದೇಶ. ಕಾವೇರಿ ಕಣಿವೆಯ ಮೇಕೆದಾಟು ವ್ಯಾಪ್ತಿಯಲ್ಲಿ ಜಲಾಶಯ ನಿರ್ಮಿಸುವುದು ಹಾಗೂ ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ಅಂದಾಜು 65ರಿಂದ 70 ಟಿಎಂಸಿ ನೀರನ್ನು ಸಂಗ್ರಹಿಸಬೇಕು ಎನ್ನುವುದು ಕರ್ನಾಟಕದ ಉದ್ದೇಶವಾಗಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವುದರೊಂದಿಗೆ ಈ ಯೋಜನೆಯಿಂದ ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆ ಮಾಡುವುದಕ್ಕೂ ಅನುಕೂಲವಾಗಲಿದೆ ಎನ್ನುವುದು ರಾಜ್ಯದ ವಾದವಾಗಿದೆ.
ಮೇಕೆದಾಟು ವಿವಾದದ ಹಿನ್ನೆಲೆ
ಮೊದಲಿನಿಂದಲೂ ಈ ಯೋಜನೆಗೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಲ್ಲೇ ಇದೆ. ಈಚೆಗೆ ತಮಿಳುನಾಡು ಸರ್ಕಾರವು ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆದಿತ್ತು. ಮೇಕೆದಾಟಿನಲ್ಲಿ 67.16 ಟಿಎಂಸಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟನ್ನು ನಿರ್ಮಿಸುವುದು ಕರ್ನಾಟಕದ ಉದ್ದೇಶವಾಗಿದೆ. ಆದರೆ, ಅಣೆಕಟ್ಟನ್ನು ನಿರ್ಮಾಣ ಮಾಡುವುದರಿಂದ ತಮಿಳುನಾಡಿನ ರೈತರಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಿಸುತ್ತಿರುವ ಪ್ರದೇಶವೂ ಬೆಂಗಳೂರಿಗಿಂತ ಬಹಳ ದೂರದಲ್ಲಿದ್ದು, ಯೋಜನೆಯ ಉದ್ದೇಶ ಬೆಂಗಳೂರಿಗೆ ನೀರು ಪೂರೈಸುವುದು ಎಂದು ಒಪ್ಪಲಾಗದು ಎನ್ನುತ್ತದೆ ತಮಿಳುನಾಡು.
ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆ
ಇಂಡಿಯಾ ಮೈತ್ರಿ ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು ಕೈಬಿಡುವುದಾಗಿ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿಯ ನಾಯಕರು ಕಾಂಗ್ರೆಸ್‌ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಈ ಹಿಂದೆ ರಾಜ್ಯ ಕಾಂಗ್ರೆಸ್ ನಾಯಕರು ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ದರು. ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಸಿದ್ಧ ಎಂದು ಹೇಳಿದ್ದರು. ಈಗ ಚೆನ್ನೈನ ಡಿಎಂಕೆ ಕಚೇರಿಯ ಮುಂದೆ ಹೋಗಿ ಪ್ರತಿಭಟನೆ ಮಾಡಿಲಿ, ನೀವು (ಕಾಂಗ್ರೆಸ್) ಕರ್ನಾಟಕದ ಪರವೋ ಇಲ್ಲ ತಮಿಳುನಾಡಿನ ಪರವೋ ಎನ್ನುವುದನ್ನು ಸಾಬೀತು ಮಾಡಿ. ರಾಜ್ಯದ ಹಿತ ಮುಖ್ಯವೋ ಇಂಡಿಯಾ ಮೈತ್ರಿ ಮುಖ್ಯವೋ ಎನ್ನುವುದನ್ನು ಜನರಿಗೆ ತಿಳಿಸಿ” ಎಂದು ರಾಜ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸವಾಲು ಹಾಕಿದ್ದಾರೆ.
ಇನ್ನು ಕರ್ನಾಟಕದ ಬಿಜೆಪಿಯು ಈ ವಿಚಾರದಲ್ಲಿ ನೇರವಾಗಿ ಇಂಡಿಯಾ ಮೈತ್ರಿಕೂಟವನ್ನೇ ಟಾರ್ಗೆಟ್ ಮಾಡಿದೆ. “ಕರ್ನಾಟಕಕ್ಕೆ ಮಹದಾಯಿಯ ಹನಿ ನೀರು ಬಿಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಹೇಳಿದ್ದರು. ಈಗ ಮೇಕೆದಾಟಿನಲ್ಲಿ ಕರ್ನಾಟಕಕ್ಕೆ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡುವುದಿಲ್ಲ ಎಂದು ಇಂಡಿಯಾ ಮೈತ್ರಿಕೂಟದ ಪ್ರಮುಖರಾದ ಎಂ. ಕೆ. ಸ್ಟಾಲಿನ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟು ಕೆ.ಆರ್.ಎಸ್. ಖಾಲಿ ಮಾಡಿಯಾಗಿದೆ. ಕನ್ನಡಿಗರಿಗೆ ಹನಿ ನೀರು ಸಹ ಸಿಗದ ವಾತಾವರಣ ನಿರ್ಮಾಣವಾಗಿದೆ. ಕನ್ನಡಿಗರಿಗೆ ಹಾಗೂ ಕರ್ನಾಟಕಕ್ಕೆ ನಿಮ್ಮ ಇಂಡಿಯಾ ಮೈತ್ರಿಕೂಟದಿಂದ ಆಗುತ್ತಿರುವ ದ್ರೋಹಗಳಿಗೆ ಕೊನೆಯಾವಾಗ” ಎಂದು ಪ್ರಶ್ನೆ ಮಾಡಿದೆ.
ಸ್ಟಾಲಿನ್ ಅನುಮತಿಗಾಗಿ ಕಾಯುತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೇಕೆದಾಟು ಯೋಜನೆ ಜಾರಿಗೆ ನಾವು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅನುಮತಿಗಾಗಿ ಕಾಯುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೇ ಬಿಜೆಪಿಯ ಆರೋಪಗಳಿಗೆ ಕೆಂಡಕಾರಿದ್ದಾರೆ.
“ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ನಮ್ಮ (ಕಾಂಗ್ರೆಸ್) ಮೇಲೆ ಮೊಕದ್ದಮೆ ದಾಖಲಿಸಿದವರು ನೀವೇ, ಕಾವೇರಿ ನೀರು ಹಂಚಿಕೆಯಲ್ಲಿ ನಾಡಿಗೆ ಅನ್ಯಾಯ ಆಗುತ್ತಿದ್ದಾಗ ಹಲವು ಬಾರಿ ಮನವಿ ಮಾಡಿದರೂ, ಮಧ್ಯಪ್ರವೇಶ ಮಾಡದೆ ಕನ್ನಡಿಗರನ್ನು ಸಂಕಷ್ಟಕ್ಕೆ ತಳ್ಳಿದವರು ನಿಮ್ಮದೇ ಪ್ರಧಾನಿಗಳು, ನಿಮ್ಮದೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ (ಅಣ್ಣಾಮಲೈ) ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಾರೆ, ಮೇಕೆದಾಟು ಯೋಜನೆ ವಿರುದ್ಧ ಉಪವಾಸ ಸತ್ಯಾಗ್ರಹ ಕೂರುತ್ತಾರೆ ”ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೇಕೆದಾಟು ಯೋಜನೆಯ ಜಾರಿಗೆ ಕಾಂಗ್ರೆಸ್, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಅನುಮತಿಗಾಗಿ ಕಾಯುತ್ತಿಲ್ಲ. ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿಸಿದರೆ, ನಾಳೆಯಿಂದಲೇ ಅಣೆಕಟ್ಟು ಕೆಲಸವನ್ನು ಪ್ರಾರಂಭಿಸಲು ನಾವು ಸಿದ್ಧರಿದ್ದೇವೆ. ಇನ್ನು BJP Karnataka ನನ್ನ ಭಾವಚಿತ್ರಕ್ಕೆ ಹಳದಿ ಬಣ್ಣದ ಜೆರ್ಸಿ ಹಾಕಿ ನನ್ನ ಬದ್ಧತೆಯನ್ನು ಅವಮಾನಿಸಬೇಡಿ, ನಾನು ಬದುಕಿರುವವರೆಗೆ ಕನ್ನಡಿಗ, ಆರ್.ಸಿ.ಬಿಯ ಹೆಮ್ಮೆಯ ಅಭಿಮಾನಿ ಎಂದು ಹೇಳುವ ಮೂಲಕ ಬಿಜೆಪಿಯ ಟ್ರೋಲ್‌ಗೂ ತಿರುಗೇಟು ನೀಡಿದ್ದಾರೆ.
ಮೇಕೆದಾಟು ಜಾರಿ ಮಾಡಿಯೇ ಸಿದ್ಧ: ಡಿ.ಕೆ ಶಿವಕುಮಾರ್
“ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಏನಾದರೂ ಮಾಡಿಕೊಳ್ಳಲಿ, ನಾವು ಮೇಕೆದಾಟು ಅಣೆಕಟ್ಟು ಕಟ್ಟುವುದು ಖಚಿತ” ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
“ಮೇಕೆದಾಟು ಅಣೆಕಟ್ಟು ಕಟ್ಟುವುದಕ್ಕಾಗಿಯೇ ನಾನು ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ತಮಿಳುನಾಡಿನವರು ಅವರ ಹೋರಾಟ ಮಾಡಲಿ. ಆದರೆ, ಕಾವೇರಿ ನೀರು ನಿರ್ವಹಣಾ ಸಮಿತಿಗೆ ನೀರಿನ ಸಮಸ್ಯೆಯ ಬಗ್ಗೆ ತಿಳಿದಿದೆ. ಹೀಗಾಗಿ, ಅವರು ನಮಗೆ ನ್ಯಾಯ ನೀಡಲೇ ಬೇಕು” ಎಂದಿದ್ದಾರೆ.
“ಇಂಡಿಯಾ ಮೈತ್ರಿಕೂಟ ಪ್ರಣಾಳಿಕೆ ಅಲ್ಲ”
“ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಕೋರ್ಟ್‌ನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಲಿದೆ. ಡಿಎಂಕೆ ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿದೆ. ಅದು ಅವರ ರಾಜಕೀಯ ಬಯಕೆ, ಮೈತ್ರಿಕೂಟದ ಪ್ರಣಾಳಿಕೆಯಲ್ಲ. ಇನ್ನು ಮೇಕೆದಾಟು ಯೋಜನೆಯಿಂದ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಕ್ಕೂ ಅನುಕೂಲವಾಗಲಿದೆ. ನಮ್ಮ ಸಹೋದರರು (ತಮಿಳುನಾಡಿನವರು) ಬೆಂಗಳೂರಿನಲ್ಲೂ ಇದ್ದಾರೆ. ಅವರಿಗೂ ಒಳಿತಾಗಲಿ. ತಮಿಳುನಾಡು ಸಹ ಮೇಕೆದಾಟಿನ ಪರವಾಗಿ ಮಾತನಾಡುವ ಕಾಲ ಬರಲಿದೆ” ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಹಿನ್ನಡೆ
ಮೇಕೆದಾಟು ಯೋಜನೆ ವಿಚಾರದಲ್ಲಿ ಈಚೆಗೆ ಕರ್ನಾಟಕಕ್ಕೆ ಹಿನ್ನಡೆ ಆಗಿತ್ತು. ಈ ಯೋಜನೆಯ ಪ್ರಸ್ತಾವನೆಯನ್ನು ಕಾವೇರಿ ಜಲ ಆಯೋಗಕ್ಕೆ ಹಿಂತಿರುಗಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಹಲವು ಸದಸ್ಯರು ವ್ಯಕ್ತಪಡಿಸಿದ್ದರು. ಈಚೆಗೆ ನಡೆದ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕವು ಸಭೆಯ ಕಾರ್ಯಸೂಚಿ ಮುಂದೂಡದೆ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿತ್ತು. ಆದರೆ, ಯೋಜನೆಯ ಚರ್ಚೆಗೆ ತಮಿಳುನಾಡು, ಪುದುಚೇರಿಯಿಂದ ಆಕ್ಷೇಪ ವ್ಯಕ್ತವಾಗಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನ
ಮೇಕೆದಾಟು ಯೋಜನೆಯ ಬಗ್ಗೆ ಈಚೆಗೆ ಸುಪ್ರೀಂ ಕೋರ್ಟ್ ಸಹ ಮಹತ್ವದ ಆದೇಶವನ್ನು ನೀಡಿತ್ತು. ಕರ್ನಾಟಕ ಸರ್ಕಾ ಸಲ್ಲಿಸಿರುವ ವಿಸ್ತ್ರತ ಯೋಜನಾ ವರದಿಯ (ಡಿಪಿಆರ್) ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಚರ್ಚೆಗಳನ್ನು ಮಾಡಬಹುದು. ಆದರೆ, ಕರ್ನಾಟಕದ ಪ್ರಸ್ತಾವನೆಯ ಮೇಲೆ ಅಧಿಕೃತವಾಗಿ ಯಾವುದೇ ಅಭಿಪ್ರಾಯಕ್ಕೆ ಬರಬಾರದು ಎಂದು ತಿಳಿಸಿತ್ತು. ಇನ್ನು ಮೇಕೆದಾಟು ಯೋಜನೆಯ ಡಿಪಿಆರ್‌ಗೆ ಕಾವೇರಿ ಪ್ರಾಧಿಕಾರದಿಂದ ಅಭಿಪ್ರಾಯ ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಜಲ ಆಯೋಗವು ನಿರ್ದೇಶನ ನೀಡಿತ್ತು. ಮೇಕೆದಾಟು ಯೋಜನೆಯ ಡಿಪಿಆರ್‌ಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದು ಬಾಕಿ ಉಳಿದಿದೆ. ಡಿಪಿಆರ್‌ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ನಾಳೆಯೇ ನಾವು ಯೋಜನೆ ಪ್ರಾರಂಭಿಸಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ.