ಮೇಕೆದಾಟು| ಮಿತ್ರ ಪಕ್ಷ ಡಿಎಂಕೆ ಅನುಕೂಲಕ್ಕೆ ಕಾಂಗ್ರೆಸ್‌ ತಾಳ: ಬಿಜೆಪಿ ಟೀಕೆ
x

ಮೇಕೆದಾಟು| ಮಿತ್ರ ಪಕ್ಷ ಡಿಎಂಕೆ ಅನುಕೂಲಕ್ಕೆ ಕಾಂಗ್ರೆಸ್‌ ತಾಳ: ಬಿಜೆಪಿ ಟೀಕೆ


ತನ್ನ ಮಿತ್ರಪಕ್ಷ ಡಿಎಂಕೆ ಜತೆ ಸೇರಿಕೊಂಡು ಮೇಕೆದಾಟು ವಿಚಾರವನ್ನು ಕೋರ್ಟಿಗೆಳೆದು ಅದನ್ನು ಮುಂದೂಡುವುದಷ್ಟೇ ಕಾಂಗ್ರೆಸ್‌ ಯೋಜನೆ. ಇದನ್ನು ಮರೆಮಾಚಿ ಕನ್ನಡಿಗರ ಕಣ್ಣಿಗೆ ಮಣ್ಣೆರಚುವುದಷ್ಟೇ ಕೈ ಪಕ್ಷದ ಉದ್ದೇಶ ಎಂದು ಬಿಜೆಪಿ ಕಿಡಿ ಕಾರಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಯ ಪ್ರಸ್ತಾವನೆ ಕುರಿತು ಚರ್ಚೆ ನಡೆದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ತಮಿಳುನಾಡು ವಿಧಾನಸಭೆಯಲ್ಲಿ ಆಡಳಿತ ಪಕ್ಷ ಡಿಎಂಕೆ ಮತ್ತು ಪ್ರತಿಪಕ್ಷ ಎಐಎಡಿಎಂಕೆ ನಡುವೆ ಭಾರೀ ವಾಗ್ವಾದ ನಡೆದಿತ್ತು. ಆ ವೇಳೆ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್‌ ಸದನಕ್ಕೆ ಮಾಹಿತಿ ನೀಡಿ, ನಮ್ಮ ಒಪ್ಪಿಗೆ ಇಲ್ಲದೆ ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಒಂದೇ ಒಂದು ಇಟ್ಟಿಗೆಯನ್ನು ಕೂಡ ಇಡಲಾಗದು ಎಂದು ಹೇಳಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿ, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ x ಖಾತೆಯಲ್ಲಿ ಕಿಡಿಕಾರಿದೆ.

ತಮ್ಮ ಮೈತ್ರಿಕೂಟದ ಅನುಕೂಲಕ್ಕಾಗಿ ಕೇಳಿದಾಗಲೆಲ್ಲಾ ಕಾವೇರಿ ನೀರನ್ನು ಸ್ಟಾಲಿನ್‌ ನಾಡಿಗೆ ಬೇಕಾಬಿಟ್ಟಿ ಬಿಡುವಾಗ ಸರ್ಕಾರಕ್ಕೆ ಕನ್ನಡಿಗರ ಹಿತವೇ ಕಾಣಲಿಲ್ಲ. ಈಗ ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಸರ್ಕಾರ ಪದೇಪದೆ ತಕರಾರು ತೆಗೆದು ಕರ್ನಾಟಕಕ್ಕೆ ಸ್ಪಷ್ಟ ಸಂದೇಶ ರವಾನಿಸುತ್ತಿದೆ ಎಂದು ಬಿಜೆಪಿ ಹೇಳಿದೆ.

ನಮ್ಮ ಒಪ್ಪಿಗೆಯಿಲ್ಲದೆ ಮೇಕೆದಾಟು ವಿಚಾರವಾಗಿ ಒಂದು ಇಟ್ಟಿಗೆಯೂ ಇಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಜಲ ಸಂಪನ್ಮೂಲ ಸಚಿವ ದುರೈ ಮುರುಗನ್‌ ಅವರು ವಿಧಾನಸಭೆಯಲ್ಲೇ ಹೇಳಿದ್ದಾರೆ! ಅಲ್ಲದೆ ಮೇಕೆದಾಟು ಯೋಜನೆಯನ್ನು ಸುಪ್ರೀಂ ಕೋರ್ಟ್‌ಗೆ ಒಯ್ಯುತ್ತೇವೆ ಎಂದಿರುವುದು ಕಾಂಗ್ರೆಸ್‌ ಪಕ್ಷ ಕನ್ನಡಿಗರಿಗೆ ಯಾವ ರೀತಿ ದ್ರೋಹ ಬಗೆಯುತ್ತಿದೆ ಎಂಬುದಕ್ಕೆ ಕೈಗನ್ನಡಿ ಎಂದಿರುವ ಬಿಜೆಪಿ, ಡಿಎಂಕೆ ಜತೆ ಸೇರಿಕೊಂಡು ಮೇಕೆದಾಟು ವಿಚಾರವನ್ನು ಕೋರ್ಟಿಗೆಳೆದು ಅದನ್ನು ಮುಂದೂಡುವುದಷ್ಟೇ ಕಾಂಗ್ರೆಸ್‌ ಯೋಜನೆ. ಇದನ್ನು ಮರೆಮಾಚಿ ಕನ್ನಡಿಗರ ಕಣ್ಣಿಗೆ ಮಣ್ಣೆರಚುವುದಷ್ಟೇ ಕೈ ಪಕ್ಷದ ಉದ್ದೇಶ ಎಂದು ಕಾಂಗ್ರೆಸ್‌ ವಿರುದ್ಧ ಟೀಕಾಸ್ತ್ರ ಪ್ರಹಾರ ನಡೆಸಿದೆ.

Read More
Next Story