
HDK vs DKS| ರಾಜಕೀಯ ಪ್ರತಿಷ್ಠೆಗೆ ವೈದ್ಯಕೀಯ ಕಾಲೇಜು! ಬೆಂ. ದಕ್ಷಿಣ ಜಿಲ್ಲೆಗೆ ಒಂದಲ್ಲ, ಎರಡು!!
ರಾಮನಗರ, ಕನಕಪುರ, ಚಿಕ್ಕಬಳ್ಳಾಪುರ ನಡುವೆ ವೈದ್ಯಕೀಯ ಕಾಲೇಜಿಗಾಗಿ ರಾಜಕೀಯ ತಿಕ್ಕಾಟ ನಡೆದಿದ್ದು ಈಗ ಇತಿಹಾಸ. ವೈದ್ಯಕೀಯ ಕಾಲೇಜು ಮೂರು ಕಡೆಯು ಲಭ್ಯವಾಗಿದ್ದು, ರಾಜಕೀಯ ಜಗಳ ಶಮನಗೊಂಡಿದೆ.
ಒಂದು ವೈದ್ಯಕೀಯ ಕಾಲೇಜು, ಮೂರು ಪಟ್ಟಣಗಳು ಮತ್ತು ಘಟಾನುಘಟಿ ನಾಯಕರ ಪ್ರತಿಷ್ಠೆಯ ಜಟಾಪಟಿ. ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ವೈದ್ಯಕೀಯ ಕಾಲೇಜು ಸ್ಥಳಾಂತರದ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆಬಿದ್ದಿದೆ ಎಂದು ಅಂದುಕೊಳ್ಳಬಹುದು.
ಕನಕಪುರ, ರಾಮನಗರ ಹಾಗೂ ಚಿಕ್ಕಬಳ್ಳಾಪುರದ ನಡುವೆ ಪ್ರತಿಷ್ಠೆಯ ವಿಷಯವಾಗಿದ್ದ ಈ ವಿವಾದವು, ಇದೀಗ ಕನಕಪುರಕ್ಕೆ ಹೊಸ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದರೊಂದಿಗೆ ಕೊನೆಯಾಗಿದೆ. ಇದರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದ ಡಾ.ಕೆ. ಸುಧಾಕರ್ ನಡುವಿನ ರಾಜಕೀಯ ತಿಕ್ಕಾಟದಲ್ಲಿ ಸದ್ಯಕ್ಕೆ ಡಿಕೆಶಿಗೆ ಗೆಲವು ಸಿಕ್ಕಿದೆ.
ವೈದ್ಯಕೀಯ ಕಾಲೇಜು ಸ್ಥಳಾಂತರ ವಿವಾದ ತೀವ್ರ ರಾಜಕೀಯ ಬಣ್ಣ ಪಡೆದುಕೊಂಡಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಅದು ಮುಂದುವರಿದು ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಾ.ಕೆ.ಸುಧಾಕರ್ ನಡುವೆಯೂ ರಾಜಕೀಯ ತಿಕ್ಕಾಟ ನಡೆದಿತ್ತು.
ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು ಆರಂಭಗೊಂಡು ತರಗತಿಗಳು ನಡೆಯುತ್ತಿವೆ. ರಾಮನಗರದಲ್ಲಿ ನಿರ್ಮಾಣ ಹಂತದಲ್ಲಿದ್ದು, ಕನಕಪುರಕ್ಕೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಲಾಗಿದೆ. ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ 65 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಭೂಮಿ ಖರೀದಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟದಲ್ಲಿ ನೀಡಿದ ಅನುಮೋದನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಅನುಮತಿಗಾಗಿ ಕಳುಹಿಸಿಕೊಡಲಾಗುತ್ತದೆ. ಎನ್‌ಎಂಸಿ ಅನುಮತಿ ನೀಡಿದ ಬಳಿಕ ಮುಂದಿನ ಕಾರ್ಯಗಳು ಆರಂಭಗೊಳ್ಳಲಿವೆ.
ವೈದ್ಯಕೀಯ ಕಾಲೇಜಿಗೆ ನಡೆದ ರಾಜಕೀಯ ಕಿತ್ತಾಟಗಳೇನು?
ಬೆಂಗಳೂರಿನಲ್ಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸ್ಥಳದ ಅಭಾವ ಕಾರಣ ರಾಮನಗರಕ್ಕೆ ಸ್ಥಳಾಂತರ ಮಾಡುವ ತೀರ್ಮಾನವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೈಗೊಂಡಿದ್ದರು. ಅದರಂತೆ ವಿಶ್ವವಿದ್ಯಾಲಯ ಜತೆಗೆ ವೈದ್ಯಕೀಯ ಕಾಲೇಜು ಸಹ ಆರಂಭಕ್ಕೂ ಒಪ್ಪಿಗೆ ನೀಡಿದ್ದರು. ಆದರೆ ಕಾರಣಾಂತರಗಳಿಂದ ಅದು ಕೈಗೂಡಲಿಲ್ಲ. ನಂತರ ಬಂದ ಕಾಂಗ್ರೆಸ್ ಸರ್ಕಾರ ರಾಮನಗರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಹೈಜಾಕ್ ಮಾಡಿ ಕನಕಪುರಕ್ಕೆ ಕೊಂಡೊಯ್ಯಲಾಯಿತು. ಇದಕ್ಕೆ ರಾಮನಗರದಲ್ಲಿ ಭಾರೀ ಟೀಕೆಗಳು ವ್ಯಕ್ತವಾಯಿತು. ಎಲ್ಲೆಡೆ ಟೀಕೆಗಳು ವ್ಯಕ್ತವಾದಾಗ ಕನಕಪುರ ಮತ್ತು ರಾಮನಗರಕ್ಕೆ ಪ್ರತ್ಯೇಕ ವೈದ್ಯಕೀಯ ಕಾಲೇಜು ನಿರ್ಮಾಣ ಎಂದು ಹೇಳಿಕೆ ನೀಡಿ ಸರ್ಕಾರ ವಿವಾದವನ್ನು ತಣ್ಣಗಾಗಿಸಿತು. ರಾಮನಗರದಿಂದ ಕನಕಪುರಕ್ಕೆ ವೈದ್ಯಕೀಯ ಕಾಲೇಜು ಸ್ಥಳಾಂತರ ಮಾಡುವ ವಿಚಾರವು ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ತೀವ್ರ ಮಾತಿನ ಸಮರಕ್ಕೆ ವೇದಿಕೆಯಾಗಿತ್ತು. ವಾಕ್ಸಮರ ಹತೋಟಿಗೆ ಬಾರದಿದ್ದಾಗ ಎರಡು ಕಡೆ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಸ್ತಾಪದ ಬಳಿಕ ಎಲ್ಲವೂ ತಣ್ಣಗಾಯಿತು.
ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದು ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಯೋಜನೆ. ರಾಜೀವ್‌ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಅವರಣ ಮಾಡಿ ಅದರಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಿ ರಾಮನಗರ ಅಭಿವೃದ್ಧಿ ಪಡಿಸುವ ಕನಸು ಅವರದ್ದಾಗಿದೆ. ರಾಜಕೀಯ ಕಿತ್ತಾಟದ ಕಾರಣದಿಂದಾಗಿ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಸಾಕಾಷ್ಟು ತಡವಾಗಿದೆ. ಇದೀಗ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಈ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರ ಕನಸು ನನಸಾಗಲಿದೆ.
ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇದ್ದಾಗ ರಾಜಕೀಯ ಮೇಲಾಟದಿಂದಾಗಿ ಮೈತ್ರಿ ಸರ್ಕಾರ ಪತನವಾಯಿತು. ಕಾಂಗ್ರೆಸ್‌ನ 17 ಶಾಸಕರು ಬಿಜೆಪಿಗೆ ಸೇರ್ಪಡೆಯಿಂದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಯಿತು. ಈ ವೇಳೆ ಡಾ.ಕೆ.ಸುಧಾಕರ್ ಅವರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನ ನೀಡಲಾಯಿತು. ಈ ವೇಳೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಡಳಿತದ ವೇಳೆ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿಸಿಕೊಂಡರು. ಕನಕಪುರಕ್ಕೆ ನೀಡಲಾಗಿದ್ದ ವೈದ್ಯಕೀಯ ಕಾಲೇಜಿನ ಅನುಮತಿಯನ್ನು ರದ್ದುಗೊಳಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸ್ಥಳಾಂತರವಾಗುವಂತೆ ಮಾಡಿದರು.
ರಾಜಕೀಯಕ್ಕೆ ಕಾರಣವಾದ ಸ್ಥಳಾಂತರ
ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ವೇಳೆ ಡಾ.ಕೆ.ಸುಧಾಕರ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಶಂಕುಸ್ಥಾಪನೆ ನೆರವೇರಿಸಲು ಸಾಕಾಷ್ಟು ಪ್ರಯತ್ನ ಮಾಡಿದರು. ಆದರೆ, ಕನಕಪುರಕ್ಕೆ ನೀಡಿದ್ದ ವೈದ್ಯಕೀಯ ಕಾಲೇಜನ್ನು ರದ್ದು ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೊಂಡೊಯ್ದಿರುವುದಕ್ಕೆ ಡಿ.ಕೆ.ಶಿವಕುಮಾರ್ ತೀವ್ರವಾಗಿ ಟೀಕಿಸಿದರು. ಅಲ್ಲದೇ, ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಪಡಿಸಿರುವ ಅದೇಶವನ್ನು ಹಿಂತೆಗೆದುಕೊಂಡು ಕನಕಪುರದಲ್ಲೇ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮರು ಆದೇಶ ಹೊರಡಿಸಬೇಕು ಎಂದು ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ನೀಡಿ ಒತ್ತಾಯಿಸಿತು.
ನಂಜುಂಡಪ್ಪ ಸಮಿತಿಯು ಕನಕಪುರವನ್ನು ಹಿಂದುಳಿದ ತಾಲೂಕು ಎಂದು ಪರಿಗಣಿಸಿದ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಾಗೂ ಈ ಭಾಗದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಮೂಲ ಸೌಕರ್ಯ ಹೆಚ್ಚಿಸಲು ಮತ್ತು ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ತಲುಪುವಂತೆ ಮಾಡಲು 2018-19ನೇ ಸಾಲಿನ ಬಜೆಟ್‌ನಲ್ಲಿ ಕನಕಪುರ ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡಿತ್ತು. ಕನಕಪುರದ ರಾಯಸಂದ್ರ ಹಳ್ಳಿಯಲ್ಲಿ 25 ಎಕರೆ ಜಮೀನು ನಿಗದಿ ಮಾಡಲಾಗಿತ್ತು. ನಂತರ ಟೆಂಡರ್ ಕರೆದು ಗುದ್ದಲಿ ಪೂಜೆ ಮಾತ್ರ ಬಾಕಿ ಉಳಿದಿತ್ತು. ಈ ಹಂತದಲ್ಲಿರುವ ಯೋಜನೆಯನ್ನು ಹಿಂಪಡೆದು ಹಿಂದಿನ ಸರ್ಕಾರದ ಆದೇಶ ರದ್ದುಗೊಳಿಸಿ ಯೋಜನೆಯನ್ನು ರಾತ್ರೋರಾತ್ರಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿರುವುದು ಅಚ್ಚರಿ ತಂದಿದೆ ಎಂದು ಡಿ.ಕೆ.ಶಿವಕುಮಾರ್ ಟೀಕಾಪ್ರಹಾರ ನಡೆಸಿದ್ದರು.
ಡಿ.ಕೆ.ಶಿವಕುಮಾರ್ ಟೀಕೆಗೆ ಡಾ.ಕೆ.ಸುಧಾಕರ್ ಸೊಪ್ಪು ಹಾಕಲಿಲ್ಲ. ಬಿಜೆಪಿಯಲ್ಲಿ ನಡೆದ ಬೆಳವಣಿಗೆಯಿಂದಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಸಂಸದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಯಡಿಯೂರಪ್ಪ ಅವಧಿಯಲ್ಲಿ ಅನುಮೋದನೆಯಾಗಿದ್ದ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಕಾರ್ಯನಿರ್ವಹಿಸುತ್ತಿದೆ.
ಶಪಥ ಈಡೇರಿಸಿದ ಡಿ.ಕೆ.ಶಿವಕುಮಾರ್
ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನೀಡಿದ ಅನುಮೋದನೆಯನ್ನು ಬಿಜೆಪಿ ಸರ್ಕಾರ ಹಿಂಪಡೆದು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಗೊಂಡಿತ್ತು. ಆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ಅಲ್ಲದೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಗ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿಯೇ ಸ್ಥಾಪಿಸುತ್ತೇನೆ ಎಂದು ಶಪಥಗೈದಿದ್ದರು. ಇದೀಗ ಆ ಶಪಥವನ್ನು ಈಡೇರಿಸುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ. ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಅಧಿಕೃತ ಚಾಲನೆ ನೀಡಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಭೂಮಿ ಖರೀದಿಸಲು ಕರ್ನಾಟಕ ಗೃಹ ಮಂಡಳಿಯಿಂದ ಭೂಮಿ ಖರೀದಿಗೆ 65 ಕೋಟಿ ರು. ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಒಂದೇ ಜಿಲ್ಲೆಗೆ ಎರಡು ವೈದ್ಯಕೀಯ ಕಾಲೇಜು
ರಾಜ್ಯದಲ್ಲಿ 24 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಸಿಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಕೆಲವೆಡೆ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಆರಂಭಿಸುವುದು ಕಷ್ಟಕರ ಎಂಬುದನ್ನು ಅರಿತು ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಪ್ರಸ್ತಾಪವು ಸರ್ಕಾರದ ಮುಂದೆ ಇದೆ.
ಆದರೆ, ರಾಜ್ಯದ ಯಾವುದೇ ಜಿಲ್ಲೆಯಲ್ಲಿಯೂ ಎರಡು ವೈದ್ಯಕೀಯ ಕಾಲೇಜುಗಳಿಲ್ಲ. ರಾಮನಗರ ಜಿಲ್ಲೆಯಲ್ಲಿ ಮಾತ್ರ ಎರಡು ವೈದ್ಯಕೀಯ ಕಾಲೇಜುಗಳು ತಲೆ ಎತ್ತಲಿವೆ. ರಾಮನಗರದಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು ನಿರ್ಮಾಣ ಹಂತದಲ್ಲಿದೆ. ಇದೀಗ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹಸಿರು ನಿಶಾನೆ ತೋರಲಾಗಿದೆ. ಇದು ಎಷ್ಟು ಸಮಂಜಸ ಎಂಬ ಪ್ರಶ್ನೆ ರಾಜಕೀಯವಲಯದಲ್ಲಿ ಕೇಳಿಬಂದಿದೆ. ಬಲಾಢ್ಯ ರಾಜಕಾರಣಗಳು ಮಾತ್ರ ತಮ್ಮ ಕ್ಷೇತ್ರಕ್ಕೆ ಕೊಂಡೊಯ್ಯಲು ಸಾಧ್ಯವೇ? ಅಲ್ಲದೇ, ಸರ್ಕಾರದ ನೀತಿಯನ್ನು ಸರ್ಕಾರವೇ ಉಲ್ಲಂಘಿಸುತ್ತಿದೆಯೇ ಎಂಬ ಪ್ರಶ್ನೆಗಳು ರಾಜಕೀಯ ತಜ್ಞರಲ್ಲಿ ಮೂಡಿದೆ. ಹೀಗಾಗಿ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಚಿವ ಸಂಪುಟ ಒಪ್ಪಿಗೆ :
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನ ಬಗ್ಗೆ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು. ಈ ವೇಳೆ 65 ಕೋಟಿ ರೂ. ವೆಚ್ಚದಲ್ಲಿಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಗೃಹ ಮಂಡಳಿಯಿಂದ ಭೂಮಿ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಕಾಲೇಜು ಸ್ಥಾಪನೆಗೆ ಬೇಕಾಗಿರುವ ಮುಂದಿನ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.