
ಪರಿಸರಕ್ಕೆ ಹಾನಿ| ಪಶ್ಚಿಮ ಘಟ್ಟದ ಯೋಜನೆಗಳನ್ನು ಕೈಬಿಡಲು ಮೇಧಾ ಪಾಟ್ಕರ್ ಆಗ್ರಹ
ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಯೋಜನೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡಬೇಕು ಎಂದು ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಆಗ್ರಹಿಸಿದ್ದಾರೆ.
ಜೀವ ವೈವಿಧ್ಯ ನಾಶ, ಸಮಾಜಕ್ಕೆ ದುಷ್ಪರಿಣಾಮವನ್ನುಂಟು ಮಾಡುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಯೋಜನೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಮತ್ತು ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಅವರು ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಎರಡು ಯೋಜನೆಗಳ ಕುರಿತು ಮರುಪರಿಶೀಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಬಳಿಕ ಅವರು, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು), ಫ್ರೈಡೇಸ್ ಫಾರ್ ಪ್ಯೂಚರ್ - ಕರ್ನಾಟಕ (ಎಫ್‌ಎಫ್‌ಎಫ್ - ಕೆ ) ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆ ರೂಪಿಸಿದ ‘ ಸವೆಯುವ ತೀರ, ಶಾಂತಗೊಳಿಸಲ್ಪಟ್ಟ ಹೋರಾಟ; ಹೊನ್ನಾವರ ಬಂದರು ಯೋಜನೆ ನೈಜ ಹುಡುಕಾಟದ ವರದಿ’ ಬಿಡುಗಡೆ ಮಾಡಿ ಮಾತನಾಡಿದರು.
ಕಾಸರಕೋಡಿನ ವಾಣಿಜ್ಯ ಬಂದರನ್ನು ಅಭಿವೃದ್ಧಿಪಡಿಸಲು ಎಚ್‌ಪಿಪಿಎಲ್ ಕಂಪನಿಗೆ ಅನುಮತಿ ನೀಡಿದ ದಿನದಿಂದಲೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪರಿಸರ ಸುರಕ್ಷತಾ ಕ್ರಮಗಳನ್ನು ಮೀರಿ ಹಾಗೂ ವಾಸವಾಗಿರುವ ನಿವಾಸಿಗಳ ಸಂಖ್ಯೆಯನ್ನು ಮರೆಮಾಚಿ ಸುಳ್ಳು ವರದಿಯನ್ನು ರೂಪಿಸಿ ಯೋಜನೆಗೆ ಒಪ್ಪಿಗೆ ಪಡೆಯಲಾಗಿದ್ದು, ಸರ್ಕಾರ ಇದನ್ನು ಗಮನಿಸಬೇಕು. ಯೋಜನೆಗಾಗಿ ಪರಿಸರ ಸೂಕ್ಷ್ಮ ಕಡಲತೀರದ 5 ಕಿ.ಮೀ. ಉದ್ದದ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗದ ನಿರ್ಮಾಣ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಪರಿಸರ ಮತ್ತು ಜನಸಾಮಾನ್ಯರ ಹಿತವನ್ನು ಕಡೆಗಣಿಸಿ, ಸಾಂಪ್ರದಾಯಿಕ ಮೀನುಗಾರಿಕೆ, ಮೀನುಗಾರರ ಜೀವನೋಪಾಯ, ವಸತಿ ನೆಲೆಗಳಿಗೆ ಆತಂಕವಾಗುವಂತೆ ಕರಾವಳಿಯ ಧಾರಣಾ ಸಾಮರ್ಥ್ಯ ಮೀರಿ ಟೊಂಕದಲ್ಲಿ ಮತ್ತು ಅಂಕೋಲೆಯ ಕೇಣಿಯಲ್ಲಿ ಹೊಸದಾಗಿ ನಿರ್ಮಿಸಲು ವಾಣಿಜ್ಯ ಬಂದರು ನಿರ್ಮಾಣ ಯೋಜನೆ ಕೈಗೊಳ್ಳಲಾಗಿದೆ. ಕಾರವಾರದ ಬಂದರನ್ನು ರವೀಂದ್ರನಾಥ ಠಾಗೋರ ಕಡಲತೀರದವರೆಗೆ ವಿಸ್ತರಣೆ ಮಾಡುವ ಕ್ರಮವು ಅವೈಜ್ಞಾನಿಕವಾಗಿದೆ. ಟೊಂಕ ಸೇರಿ ಸುತ್ತಲ ಐದು ಗ್ರಾಮಗಳ 44 ಹೆಕ್ಟೇರ್ ಪ್ರದೇಶದಲ್ಲಿ ಈ ಬಂದರು ಸ್ಥಾಪನೆ ಮಾಡಲಾಗುತ್ತಿದೆ. ಕರಾವಳಿಯ ಶರಾವತಿ, ಅರಬ್ಬಿ ಸಮುದ್ರ ಸೇರುವ ಅಳಿವೆ ಪ್ರದೇಶದಲ್ಲಿ ಇದು ನಿರ್ಮಾಣ ವಾಗುವುದರಿಂದ ಪರಿಸರ ಸೂಕ್ಷ್ಮತೆಗೆ ಧಕ್ಕೆಯಾಗಲಿದೆ. ಅಳಿವಿನಂಚಿಲ್ಲಿರುವ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಸಂರಕ್ಷಿಸ್ಪಟ್ಟ ಆಲಿವ್ ರೆಡ್ಲೆ ಆಮೆಗಳ ತಾಣ ನಾಶವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಡ ಮೀನುಗಾರ ಸಮುದಾಯ ಬಂದರಿನಿಂದ ಸಂಕಷ್ಟಕ್ಕೆ ಸಿಲುಕಲಿದೆ. ಮೀನುಗಾರ ಮಹಿಳೆಯರು ತಮ್ಮ ದುಡಿಮೆ ಕಳೆದುಕೊಳ್ಳಲಿದ್ದಾರೆ. ಜತೆಗೆ ಬಂದರು ಹಾಗೂ ರಾಷ್ಟ್ರೀಯ ಹೆದ್ದಾರಿ 66 ಅನ್ನು ಸಂಪರ್ಕಿಸಲು ಉದ್ದೇಶಿತ ರಸ್ತೆ ನಿರ್ಮಾಣದಿಂದ ಮೀನುಗಾರರು ಸರ್ಕಾರವೇ ನೀಡಿದ್ದ ನೂರಾರು ಆಶ್ರಯ ಮನೆಗಳನ್ನು ಕಳೆದುಕೊಳ್ಳಲಿದ್ದಾರೆ. ನಾಶವಾಗುವ ಮನೆಗಳ ಸಂಖ್ಯೆ, ಜನಜೀವನದ ಮೇಲಾಗುವ ದುಷ್ಪರಿಣಾಮ ಲೆಕ್ಕಿಸದೆ ಸರ್ಕಾರ ಈ ಯೋಜನೆ ಮಾಡಹೊರಟಿವುವುದು ದುರಂತಕ್ಕೆ ಕಾರಣವಾಗಲಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಮಂಕಾಳು ವೈದ್ಯ ಸ್ಥಳಕ್ಕೆ ಭೇಟಿ ನೀಡಿ ಭೂಮಿ ಉಳಿಸಿಕೊಡುವ ಭರವಸೆ ನೀಡಿದ್ದರು. ಆದರೆ , ಈಗ ಸರ್ಕಾರ ಬಂದು ಎರಡೂವರೆ ವರ್ಷವಾಗುತ್ತಿದ್ದರೂ ಈ ಬಗ್ಗೆ ಕ್ರಮ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ಒತ್ತಾಯ:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ 54.155 ಹೆಕ್ಟೆರ್ ಅರಣ್ಯ ಪ್ರದೇಶ, 24.31 ಹೆಕ್ಟೆರ್ ಖಾಸಗಿ ಭೂಮಿ ಬಳಕೆಯಾಗುತ್ತಿದೆ. ಅಳಿವಿನಂಚಿನಲ್ಲಿರುವ ಸಿಂಗಳೀಕಗಳ ಅಭಯಾರಣ್ಯ ಇದಾಗಿದೆ. ಆದರೆ, ಇದೇ ಅಭಯಾರಣ್ಯ ವ್ಯಾಪ್ತಿಯಲ್ಲಿ 16 ಸಾವಿರ ಮರಗಳನ್ನು ಕಡಿಯಲು ಒಪ್ಪಿಗೆಯನ್ನೂ ನೀಡಿರುವುದು ವಿಪರ್ಯಾಸ. ಸರ್ಕಾರದ ಈ ಯೋಜನೆಗೂ ಸ್ಥಳೀಯರ ತೀವ್ರ ವಿರೋಧವಿದೆ. ಜೀವ ವೈವಿದ್ಯ ನಾಶವಾಗಲು ಕಾರಣವಾಗುವ ಈ ಯೋಜನೆ ಜಾರಿ ನಿರ್ಧಾರವನ್ನು ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

