
ನಷ್ಟದ ಸುಳಿಯಲ್ಲಿ ಎನ್‌ಜಿಇಎಫ್ ; ವಿದ್ಯುತ್ ಕಂಪನಿಗಳು ಉಳಿಸಿಕೊಂಡ ಬಾಕಿ ಎಷ್ಟು?
ಹುಬ್ಬಳ್ಳಿಯಲ್ಲಿರುವ ಎನ್‌ಜಿಇಎಫ್ ಕಾರ್ಖಾನೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ನಷ್ಟದಲ್ಲಿ ಮುಳುಗಿದೆ. ಟ್ರಾನ್ಸ್‌ಫಾರ್ಮರ್ ಉತ್ಪಾದನೆಯ ಪ್ರಮಾಣ ಕುಸಿದಿದೆ. ಹೊಸ ಗುತ್ತಿಗೆಗಳು ಸಿಗದಿರುವುದು ಹಿನ್ನಡೆಗೆ ಕಾರಣವಾಗಿದೆ.
ವಿದ್ಯುತ್ ಮೋಟರ್ ಹಾಗೂ ಪರಿವರ್ತಕಗಳ ಉತ್ಪಾದನೆಯಲ್ಲಿ ಹೆಸರು ಮಾಡಿದ್ದ ಹುಬ್ಬಳ್ಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಕಾರ್ಖಾನೆಯು ನಷ್ಟದ ಹಾದಿಯಲ್ಲಿ ತೆವಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಉತ್ಪಾದನೆ ಕುಸಿತದಿಂದ ವಹಿವಾಟು ಕ್ಷೀಣಿಸಿದೆ.
1988ರಲ್ಲಿ ಆರಂಭವಾದ ಎನ್‌ಜಿಎಫ್ ಕಾರ್ಖಾನೆಯು ಶಿಥಿಲಾವಸ್ಥೆ ತಲುಪಿದೆ. 60 ವರ್ಷಗಳಷ್ಟು ಹಳೆಯ ಯಂತ್ರಗಳ ನಿರ್ವಹಣೆ ದೊಡ್ಡ ತಲೆ ನೋವಾಗಿದೆ. ರಾಜ್ಯ ಸರ್ಕಾರದಿಂದ ಯಾವುದೇ ವಿನಾಯ್ತಿ ಸಿಗದಿರುವುದರಿಂದ ನೌಕರರಿಗೆ ಸಂಬಳ, ನಿವೃತ್ತರಿಗೆ ಅಗತ್ಯ ಸೌಲಭ್ಯ ಒದಗಿಸುವುದೂ ಕಷ್ಟಕರವಾಗಿದೆ. ಪ್ರಸ್ತುತ, ಕಂಪನಿಯ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಇತ್ತೀಚೆಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಜಪಾನ್ ಪ್ರವಾಸ ಕೈಗೊಂಡಿದ್ದ ವೇಳೆ ಎನ್‌ಜಿಇಎಫ್ ಪುನಶ್ಚೇತನ ಕಾಯಕ್ರಮ ಘೋಷಿಸಿದ್ದರು.
8ಕೋಟಿ ಬಾಕಿ ಉಳಿಸಿಕೊಂಡ ವಿದ್ಯುತ್ ಕಂಪೆನಿಗಳು
ರಾಜ್ಯದ ವಿದ್ಯುತ್ ನಿಗಮಗಳು ಎನ್‌ಜಿಇಎಫ್ ಬಳಿ ಟ್ರಾನ್ಸ್‌ಫಾರ್ಮರ್ ಖರೀದಿಸಿವೆ. ಆದರೆ, ಸುಮಾರು 8 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ನಷ್ಟದಲ್ಲಿರುವ ಕಂಪನಿಗೆ ಕೂಡಲೇ ಬಾಕಿ ಹಣ ಪಾವತಿ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೂಚನೆ ನೀಡಿದ್ದಾರೆ.
ಎನ್‌ಜಿಇಎಫ್ ಕಾರ್ಖಾನೆಯ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮುಂತಾದ ವಿದ್ಯುತ್ ನಿಗಮಗಳು ತಲಾ 2 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿವೆ. ರಾಜ್ಯ ಸರ್ಕಾರವು ಹುಬ್ಬಳ್ಳಿ ಎನ್.ಜಿ.ಇ.ಎಫ್ ಪುನಶ್ಚೇತನಕ್ಕೆ ತೀರ್ಮಾನಿಸಿದೆ. ಆದರೆ ಬಾಕಿ ವಸೂಲಾತಿ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಸಂಸತ್ ಕಟ್ಟಡಕ್ಕೂ ಎನ್‌ಜಿಎಎಫ್ ಟ್ರಾನ್ಸ್ ಫಾರ್ಮರ್ ಪೂರೈಕೆ
ಎನ್‌ಜಿಇಎಫ್ ಅತ್ಯುತ್ಕೃಷ್ಟ ಗುಣಮಟ್ಟದ ವಿದ್ಯುತ್ ಪರಿವರ್ತಕಗಳ ತಯಾರಿಕೆಗೆ ಹೆಸರಾಗಿದೆ. ನೂತನ ಸಂಸತ್ ಭವನದಲ್ಲೂ ಎನ್‌ಜಿಇಎಫ್ ಪರಿವರ್ತಕಗಳೇ ಇವೆ. ರೈಲ್ವೆ ಇಲಾಖೆ ಕೂಡ ಇಲ್ಲಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸುತ್ತದೆ. ಆಫ್ರಿಕಾ ಖಂಡದ ಉಗಾಂಡ ಸೇರಿದಂತೆ ಹಲವು ದೇಶಗಳಿಗೆ ಎನ್‌ಜಿಇಎಫ್ ಪರಿವರ್ತಕಗಳನ್ನು ರಫ್ತು ಮಾಡುತ್ತಿದೆ.
ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನ ಪಡೆದವರು ಕಟ್ಟಡದ ಸುತ್ತ ಸುರಕ್ಷತಾ ದೃಷ್ಟಿಯಿಂದ 6-7 ಮೀಟರ್ ಜಾಗ ಬಿಡಬೇಕು ಎಂಬ ನಿಯಮ ಸಡಿಲಿಕೆಗೆ ಚಿಂತನೆ ನಡೆದಿದೆ. ಏಕೆಂದರೆ, ಇಷ್ಟು ಜಾಗ ಬಿಟ್ಟರೆ ಉದ್ಯಮಿಗಳಿಗೆ ತುಂಬಾ ನಷ್ಟವಾಗುತ್ತದೆ. ಈ ದೃಷ್ಟಿಯಿಂದ ಬೇರೆ ಬೇರೆ ರಾಜ್ಯಗಳು ಮತ್ತು ವಿದೇಶಗಳಲ್ಲಿ ಇರುವ ನೀತಿ ನಿಯಮ ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಪುನಶ್ಚೇತನಕ್ಕೆ ಸಾಲ ಕೋರಿ ಪ್ರಸ್ತಾವ
ಎನ್‌ಜಿಇಎಫ್ ಸಂಸ್ಥೆಯ ಪುನಃಶ್ಚೇತನಕ್ಕೆ 30 ಕೋಟಿ ರೂ.ಬಡ್ಡಿರಹಿತ ಸಾಲ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಟ್ಟಡ ದುರಸ್ತಿ, ಆಧುನಿಕ ಯಂತ್ರೋಪಕರಣ ಮೊದಲಾದ ವ್ಯವಸ್ಥೆ ಮಾಡಿದರೆ ಸಂಸ್ಥೆ ಇನ್ನಷ್ಟು ವರ್ಷಗಳವರೆಗೆ ಉಳಿಯುತ್ತದೆ. ಜತೆಗೆ ಉದ್ಯೋಗಾವಕಾಶ ಕೂಡ ಹೆಚ್ಚುತ್ತದೆ. ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಿದ ಬಳಿಕ ಸರ್ಕಾರ ಹಣ ಹಿಂದಿರುಗಿಸಲಾಗುವುದು ಎಂದು ಎನ್‌ಜಿಇಎಫ್ ನಿರ್ದೇಶಕ ಎಸ್.ಎಚ್. ನರೇಗಲ್ ಒತ್ತಾಯಿಸಿದ್ದಾರೆ.
ಕಂಪನಿಯ ವಹಿವಾಟು ಎಲ್ಲೆಲ್ಲಿ?
ಕಂಪನಿಯರ ಉತ್ಪನ್ನಗಳನ್ನು 15-20 ವರ್ಷದವರೆಗೆ ನಿರ್ವಹಣೆ ಮಾಡುವ ಅಗತ್ಯ ಬರುವುದಿಲ್ಲ. ಆದ್ದರಿಂದ ಎನ್‌ಜಿಇಎಫ್ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ರಾಯಘಡದ ಇಸ್ರೋ, ಕೋಲ್ಕತ್ತದ ಭಾರತೀಯ ಫ್ಯಾನ್ ಕಾರ್ಪೊರೇಷನ್, ಹೈದರಾಬಾದ್‌ನ ಎಚ್ಎಂಟಿ ಮಷಿನ್ಸ್ ಟೂಲ್ಸ್, ಪುಣೆಯ ಪಿಎಂಟಿ ಮಷಿನ್ಸ್, ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್, ಗುಜರಾತ್ ರೈಲ್ವೆ ಇಲಾಖೆ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ವಹಿವಾಟು ನಡೆಸಿದೆ.
ಪಂಜಾಬಿನ ಭಟಿಂಡಾದಲ್ಲಿರುವ ಟ್ರೈಫೊ ಟೆಕ್ ಕಾರ್ಖಾನೆ ಮೂಲಕ ವಿದ್ಯುತ್ ಪರಿವರ್ತಕ ಉತ್ಪಾದನೆ ಮಾಡಿ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಪೂರೈಸುತ್ತದೆ. ನೇಪಾಳ ಅಂಡಮಾನ್ ನಿಕೊಬಾರ್ ನೈಜೀರಿಯಾಕ್ಕೂ ಉತ್ಪನ್ನ ರಫ್ತು ಮಾಡಲಾಗಿದೆ. ಸಂಸತ್ ಭವನಕ್ಕೆ 9 ಪರಿವರ್ತಕ ನೀಡಿದ ಬಳಿಕ ಗ್ರೇಟರ್ ನೊಯ್ದಾ ವಿಮಾನ ನಿಲ್ದಾಣ, ದಿಗ್ವಿಜಯ ಸಿಮೆಂಟ್, ಕರ್ನಾಟಕ ಭವನಕ್ಕೂ ಪೂರೈಸಲು ಬೇಡಿಕೆ ಬಂದಿದೆ. ಸದ್ಯ 30 ಕೋಟಿ ರೂ. ಮೊತ್ತದ ಉತ್ಪನ್ನಗಳಿಕೆ ಬೇಡಿಕೆ ಬಂದಿದೆ.