ಬಾಣಂತಿಯರ ಸರಣಿ ಸಾವು | ಕೇಂದ್ರ ಆರೋಗ್ಯ ಸಚಿವರಿಗೆ ಸಂಸದ ಡಾ.ಸುಧಾಕರ್ ಪತ್ರ
ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. 2024 ರ ನವೆಂಬರ್‌ವರೆಗೆ 348 ತಾಯಂದಿರು ಮೃತಪಟ್ಟಿದ್ದಾರೆ. ಆಗಸ್ಟ್‌ನಿಂದ ನವೆಂಬರ್‌ವರೆಗೆ ಕೇವಲ ನಾಲ್ಕು ತಿಂಗಳಲ್ಲೇ 217 ಪ್ರಕರಣ ವರದಿಯಾಗಿವೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಸದ ಡಾ.ಕೆ.ಸುಧಾಕರ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. 2024 ರ ನವೆಂಬರ್‌ವರೆಗೆ 348 ತಾಯಂದಿರು ಮೃತಪಟ್ಟಿದ್ದಾರೆ. ಆಗಸ್ಟ್‌ನಿಂದ ನವೆಂಬರ್‌ವರೆಗೆ ಕೇವಲ ನಾಲ್ಕು ತಿಂಗಳಲ್ಲೇ 217 ಪ್ರಕರಣ ವರದಿಯಾಗಿವೆ. ಈ 217 ಪ್ರಕರಣಗಳಲ್ಲಿ 179 ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದ್ದಾಗಿವೆ. ಬಾಣಂತಿಯರ ಸಾವಿಗೆ ನ್ಯಾಯ ಕೊಡಿಸಲು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ ಪರಿಶೀಲಿಸಬೇಕೆಂದು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
ಹೆಚ್ಚಿನ ಪ್ರಕರಣಗಳು ಪಿಪಿಎಚ್ ಹಾಗೂ ಎಎಫ್‌ಇ, ಅನೀಮಿಯ ಹಾಗೂ ನಿರ್ವಹಣೆ ಲೋಪಕ್ಕೆ ಸಂಬಂಧಿಸಿವೆ. ಆಂಟಿಬಯೋಟಿಕ್ ಕೊರತೆ, ತರಬೇತಿ ಹೊಂದಿರುವ ಸಿಬ್ಬಂದಿ ಕೊರತೆ ಮೊದಲಾದವು ಕೂಡ ಇದಕ್ಕೆ ಕಾರಣ. ಇದರಲ್ಲಿ ಲಿಂಜರ್ಸ್ ಲ್ಯಾಕ್ಟೇಟ್ ದ್ರಾವಣದಲ್ಲಿ ದೋಷ ಕೂಡ ಕಾರಣ ಎನ್ನಲಾಗುತ್ತಿದೆ. ಆದ್ದರಿಂದ ಈ ಕುರಿತು ಸಮಗ್ರವಾದ ಪರಿಶೀಲನೆ ನಡೆಯುವ ಅಗತ್ಯವಿದೆ. ಮೊದಲಿಗೆ, ತಾಯಂದಿರ ಮರಣಕ್ಕೆ ಕಾರಣಗಳನ್ನು ಪತ್ತೆ ಮಾಡಲು ತುರ್ತಾಗಿ ಕಾರ್ಯಯೋಜನೆ ರೂಪಿಸಬೇಕು. ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ, ಕಾರಣ ಪತ್ತೆ ಜೊತೆಗೆ, ಪರಿಹಾರವನ್ನು ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಗರ್ಭಿಣಿಯರ ಆರೈಕೆ ಹಾಗೂ ಹೆರಿಗೆ ಸಮಯದಲ್ಲಿ ಉತ್ತಮ ಸೇವೆ ನೀಡಲು ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕಿದೆ. ಕಬ್ಬಿಣಾಂಶದ ಆಹಾರ ಸೇವನೆ, ತುರ್ತು ಆರೈಕೆ, ಪ್ರತಿ ದಿನ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗರ್ಭಿಣಿಯರಿಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
ದೇಶದ ಭವಿಷ್ಯದ ದೃಷ್ಟಿಯಿಂದ ನವಜಾತ ಶಿಶು ಹಾಗೂ ತಾಯಂದಿರ ಜೀವ ಕಾಪಾಡುವುದು ಬಹಳ ಅಗತ್ಯ. ಆದ್ದರಿಂದ ತಾವು ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವ ಮೂಲಕ ಕರ್ನಾಟಕದಲ್ಲಿ ಹಾಗೂ ಭಾರತದ ಯಾವುದೇ ಭಾಗದಲ್ಲಿ ತಾಯಂದಿರ ಸಾವು ಸಂಭವಿಸದಂತೆ ಎಚ್ಚರವಹಿಸಲು ಸಾಧ್ಯವಾಗುತ್ತದೆ. ಈ ಎಲ್ಲ ಕಾರ್ಯಗಳಿಗೆ ನಾನು ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.