ಬಾಣಂತಿಯರ ಸಾವಿನಲ್ಲೂ ರಾಜಕೀಯ ಮೇಲಾಟ | ಬಿಜೆಪಿ ಅವಧಿಯ ಪ್ರಕರಣಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಬಿಜೆಪಿ ಹಾಗೂ ಕಾಂಗ್ರೆಸ್ ಅವಧಿಯಲ್ಲಿನ ತಾಯಿ ಮರಣ ಪ್ರಮಾಣದ ಅಂಕಿ ಅಂಶಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಆ ಮೂಲಕ ಬಿಜೆಪಿ ಅವಧಿಯಲ್ಲೇ ತಾಯಂದಿರ ಮರಣ ಪ್ರಮಾಣ ಹೆಚ್ಚಿದೆ ಎಂದು ಆರೋಪಿಸಿದೆ.
ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಬೆಳಗಾವಿ ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ. ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವು ಸಂಭವಿಸುತ್ತಿದ್ದು, ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಈ ಮಧ್ಯೆ, ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷ ಕೂಡ ಸಜ್ಜಾಗಿದೆ.
ಬಳ್ಳಾರಿ ಆಸ್ಪತ್ರೆಯಲ್ಲಿ ನಿಷೇಧಿತ ಐವಿ ದ್ರಾವಣ ಬಳಕೆಗೆ ಕೇಂದ್ರದ ಔಷಧ ಪ್ರಯೋಗಾಲಯ ನೀಡಿದ ಪ್ರಮಾಣಪತ್ರವನ್ನು ವಿಪಕ್ಷಗಳ ಮುಂದಿರಿಸಿ, ತಮ್ಮ ಮೇಲಿನ ಆರೋಪವನ್ನು ಬಿಜೆಪಿಯತ್ತ ತಿರುಗಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅವಧಿಯಲ್ಲಿನ ತಾಯಿ ಮರಣ ಪ್ರಮಾಣದ (MMR- ಒಂದು ನಿರ್ದಿಷ್ಟ ಅವಧಿಯಲ್ಲಿ 1,00,000 ಜೀವಂತ ಜನನಗಳಿಗೆ ತಾಯಂದಿರ ಮರಣಗಳ ಸಂಖ್ಯೆ) ಅಂಕಿ ಅಂಶಗಳನ್ನು ರಾಜ್ಯ ಸರ್ಕಾರ ಸೋಮವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಆ ಮೂಲಕ ಬಿಜೆಪಿ ಅವಧಿಯಲ್ಲೇ ತಾಯಂದಿರ ಮರಣ ಪ್ರಮಾಣ ಹೆಚ್ಚಿದೆ ಎಂದು ಗಂಭೀರ ಆರೋಪ ಮಾಡಿದೆ.
2019 ರಿಂದ 23 ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರದ ಅವಧಿ, 2024 ರಿಂದ 2024 ನವೆಂಬರ್‌ವರೆಗಿನ ಕಾಂಗ್ರೆಸ್ ಅವಧಿಯಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಶಿಶುಗಳ ಜನನ, ತಾಯಂದಿರ ಮರಣ ಹಾಗೂ ಮರಣ ಪ್ರಮಾಣವನ್ನು ಬಿಡುಗಡೆ ಮಾಡಿದೆ.
2019-20 ನೇ ಸಾಲಿನಲ್ಲಿ 8,94,946 ಶಿಶುಗಳು ಜನಿಸಿದ್ದು, 662 ತಾಯಂದಿರು ಮರಣ ಹೊಂದಿದ್ದಾರೆ. ತಾಯಂದಿರ ಮರಣ ಪ್ರಮಾಣ ಶೇ 74 ರಷ್ಟಿತ್ತು. 2020-21 ರಲ್ಲಿ8,52,874 ಶಿಶುಗಳ ಜನನ, 714 ತಾಯಂದಿರ ಮರಣ ಹಾಗೂ ತಾಯಂದಿರ ಮರಣ ಪ್ರಮಾಣ ಶೇ 84 ರಷ್ಟಿದೆ. 2021-22ರಲ್ಲಿ 8,67, 419 ಶಿಶುಗಳ ಜನನ, 595 ತಾಯಂದಿರ ಮರಣ ಹಾಗೂ ಶೇ 68 ರಷ್ಟು ತಾಯಂದಿರ ಮರಣ ಪ್ರಮಾಣವಿತ್ತು,
ಕಾಂಗ್ರೆಸ್ ಅವಧಿಯಲ್ಲಿ ತಾಯಂದಿರ ಮರಣ ಕುಸಿತ
ರಾಜ್ಯದಲ್ಲಿ 2022-23ರ ಮೇ ತಿಂಗಳಿಂದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿತು. ಆ ವರ್ಷದ 8,10,769 ಶಿಶುಗಳ ಜನನ, 527 ತಾಯಂದಿರ ಮರಣ ಹಾಗೂ ಶೇ 65 ರಷ್ಟು ಮರಣ ಪ್ರಮಾಣ ದಾಖಲಾಗಿದ್ದು, ಇಳಿಮುಖದತ್ತ ಸಾಗಿದೆ ಎಂದು ಸರ್ಕಾರ ಹೇಳಿದೆ.
2023-24ರಲ್ಲಿ 8,13,275 ಶಿಶುಗಳ ಜನನ, 518 ತಾಯಂದಿರ ಮರಣ ಹಾಗೂ ಮರಣ ಪ್ರಮಾಣ ಶೇ 64 ರಷ್ಟಿದೆ. 2024-25ನವೆಂಬರ್ವರೆಗೆ 5,42,183 ಶಿಶುಗಳ ಜನನ, 348 ತಾಯಂದಿರ ಮರಣದೊಂದಿಗೆ ಮರಣ ಪ್ರಮಾಣ ಶೇ 64 ಇದೆ ಎಂದು ಸರ್ಕಾರ ಅಂಕಿ ಅಂಶಗಳಲ್ಲಿ ತಿಳಿಸಿದೆ.
ದೇಶದಲ್ಲಿ ಕುಸಿಯುತ್ತಿದೆ ತಾಯಂದಿರ ಮರಣ ಪ್ರಮಾಣ
ಆರೋಗ್ಯ ವ್ಯವಸ್ಥೆಯ ಸುಧಾರಣೆ, ಮಾತೃತ್ವದ ಸಂಬಂಧಿ ಕಾರ್ಯಕ್ರಮಗಳಿಂದಾಗಿ ದೇಶದಲ್ಲಿ ತಾಯಂದಿರ ಮರಣ ಪ್ರಮಾಣ(ಎಂಎಂಆರ್) ಕುಸಿತ ಕಾಣುತ್ತಿದೆ. 2020 ರಲ್ಲಿ ಕೇಂದ್ರ ಸರ್ಕಾರ ಒಂದು ಲಕ್ಷ ಜೀವಂತ ಜನನಗಳಿಗೆ ತಾಯಂದಿರ ಮರಣವನ್ನು 100ಕ್ಕೆ ಇಳಿಸುವ ಗುರಿಯೊಂದಿಗೆ ರಾಷ್ಟ್ರೀಯ ಆರೋಗ್ಯ ನೀತಿ (ಎನ್‌ಎಚ್‌ಪಿ) ಜಾರಿಗೊಳಿಸಿತ್ತು.
2030 ರ ವೇಳೆಗೆ ಪ್ರತಿ ಲಕ್ಷ ಜೀವಂತ ಜನನಗಳ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವ ಅಂದರೆ ತಾಯಂದಿರ ಮರಣ ಪ್ರಮಾಣವನ್ನು 70ಕ್ಕೆ ಇಳಿಸುವ ಹಾದಿಯಲ್ಲಿದೆ.
ಕೇರಳ, ಮಹಾರಾಷ್ಟ್ರ, ತೆಲಂಗಾಣ , ತಮಿಳುನಾಡು, ಆಂಧ್ರಪ್ರದೇಶ, ಜಾರ್ಖಂಡ್ , ಗುಜರಾತ್, ಕರ್ನಾಟಕ ಹಾಗೂ ಹರಿಯಾಣ ರಾಜ್ಯಗಳು ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಿವೆ.
ಅತಿ ಹೆಚ್ಚಿನ ತಾಯಂದಿರ ಮರಣ ಪ್ರಮಾಣ ಅಂದರೆ ಒಂದು ಲಕ್ಷ ಜೀವಂತ ಜನನಗಳಿಗೆ 130 ಹಾಗೂ ಅದಕ್ಕಿಂತ ಹೆಚ್ಚಿನ ತಾಯಂದಿರ ಮರಣವು ಬಿಹಾರ, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಅಸ್ಸಾಂ ರಾಜ್ಯದಲ್ಲಿದೆ.
ತಾಯಂದಿರ ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವೇನು?
ಸಂತಾನೋತ್ಪತ್ತಿ ವಯಸ್ಸಿನಲ್ಲಿ ವಿವಿಧ ಕಾರಣಗಳಿಂದಾಗಿ ತಾಯಂದಿರ ಮರಣ ಸಂಭವಿಸುತ್ತದೆ.
ಗರ್ಭಧಾರಣೆ ಮತ್ತು ಹೆರಿಗೆ ಸಮಯದಲ್ಲಿ ರೋಗ ಹರಡುವಿಕೆ, ಅರಿವಿನ ಕೊರತೆ, ಪೌಷ್ಟಿಕಾಂಶದ ಕೊರತೆ, ಅನಾರೋಗ್ಯಕರ ಜೀವನಪದ್ಧತಿ, ರಕ್ತಸ್ರಾವ ಹಾಗೂ ತಪ್ಪಾದ ಚಿಕಿತ್ಸಾ ಕ್ರಮಗಳಿಂದಾಗಿ ತಾಯಂದಿರ ಸಾವು ಸಂಭವಿಸುತ್ತದೆ.
ಮರಣ ಪ್ರಮಾಣ ತಗ್ಗಿಸಲು ಉಪಕ್ರಮ
ದೇಶದಲ್ಲಿ ತಾಯಂದಿರ ಮರಣ ಪ್ರಮಾಣ ತಗ್ಗಿಸಿ, ಸುರಕ್ಷಿತ ಶಿಶುಗಳ ಜನನ ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಉಪಕ್ರಮಗಳನ್ನುಜಾರಿಗೊಳಿಸಿದೆ.
ಸುರಕ್ಷಿತ್ ಮಾತ್ರತ್ವ ಆಶ್ವಾಸನ್ (ಸುಮನ್), ಮೊಬೈಲ್ ಟ್ಯಾಬ್ಲೆಟ್ ಆಧಾರಿತ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ಮೋಲ್, ಲಕ್ಷ್ಯ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಜನನಿ ಸುರಕ್ಷಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ರಾಜ್ಯಾವಾರು ಜಾರಿಯಲ್ಲಿವೆ.
ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ಬೆಳಗಾವಿ ಜಿಲ್ಲೆ ಒಂದರಲ್ಲೇ 325 ಮಕ್ಕಳು ಮೃತರಾಗಿದ್ದಾರೆ. ಯಾವ ಇಲಾಖೆಯ ಮೇಲೂ ಸಿಎಂಗೆ ಹಿಡಿತ ಇಲ್ಲ. ಬಾಣಂತಿಯರು, ಮಕ್ಕಳು ಸಾಯುತ್ತಿದ್ದರೂ ಸರ್ಕಾರ ನಿದ್ದೆಗೆ ಜಾರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಸರ್ಕಾರ 17 ತಿಂಗಳಲ್ಲಿ 17 ಅವಾಂತರಗಳನ್ನು ಮಾಡಿಕೊಂಡಿದೆ. ಅಭಿವೃದ್ದಿ ಕಾರ್ಯ ಮರೆತಿರುವುದು, ವಕ್ಫ್ ಅವಾಂತರ, ಬಾಣಂತಿಯರ ಸಾವು, ಲಿಕ್ಕರ್ ಹಗರಣದ ಜೊತೆ ಈಗ ಮೆಡಿಕಲ್ ಮಾಫಿಯಾ ಸೇರಿಕೊಂಡಿದೆ ಎಂದು ಅಧಿವೇಶನದಲ್ಲಿ ಭಾಗವಹಿಸುವುದಕ್ಕೂ ಮುನ್ನ ವಾಗ್ದಾಳಿ ನಡೆಸಿದ್ದಾರೆ.