ಒಳಮೀಸಲಾತಿ ವಿರೋಧಿಸಿ ಅಲೆಮಾರಿ ಸಮುದಾಯಗಳಿಂದ ಇಂದು ಬೃಹತ್‌ ಪ್ರತಿಭಟನೆ
x
ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸುತ್ತಿರುವ ಅಲೆಮಾರಿ ಜನಾಂಗ

ಒಳಮೀಸಲಾತಿ ವಿರೋಧಿಸಿ ಅಲೆಮಾರಿ ಸಮುದಾಯಗಳಿಂದ ಇಂದು ಬೃಹತ್‌ ಪ್ರತಿಭಟನೆ

ಸರ್ಕಾರದ ನಿರ್ಣಯ ಪರಿಶೀಲಿಸಬೇಕೆಂದು ಮನವಿ ಮಾಡಿದರೂ ಸಕಾರತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಈ ಕಾರಣಕ್ಕಾಗಿ ರಾಜ್ಯದ ಅಲೆಮಾರಿ ಸಮುದಾಯಗಳ ಸಂಘಟನೆಗಳಿಂದ ಬೃಹತ್ ಪ್ರತಿಭಟನ ಸಮಾವೇಶ ಹಮ್ಮಿಕೊಳಲಾಗಿದೆ.


Click the Play button to hear this message in audio format

ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟದಿಂದ 49 ಅಸ್ಪಶ್ಯ ಅಲೆಮಾರಿ ಸಮುದಾಯಗಳು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳ ಮಹಾಒಕ್ಕೂಟದಿಂದ ಶೇ1ರಷ್ಟು ಮೀಸಲಾತಿ ಕಲ್ಪಿಸುವಂತೆ ಬುಧವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ 'ಬೆಂಗಳೂರು ಚಲೋ' ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಸಂಚಾಲಕ ಕೆ. ವೀರೇಶ್ ಮಾತನಾಡಿ, ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರುವ ಸಲುವಾಗಿ ನ್ಯಾ.ನಾಗಮೋಹನ್ ದಾಸ್‌ ಆಯೋಗವು 49 ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಇವುಗಳ ಜತೆಗೆ ಇನ್ನೂ ಹತ್ತು ಸೂಕ್ಷ್ಮ ಪರಿಶಿಷ್ಟ ಜಾತಿ ಸಮುದಾಯಗಳನ್ನು ಸೇರ್ಪಡೆ ಮಾಡಿ ಶೇ 1ರಷ್ಟು ನಿಗದಿ ಮಾಡಿತ್ತು. ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗದ ವರದಿಯು ಅಲೆಮಾರಿಗಳಂತಹ ಕಳಸಮುದಾಯಗಳಲ್ಲಿ ಆಶಾವಾದವನ್ನು ಹುಟ್ಟಿಸಿತ್ತು. ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ದತ್ತಾಂಶಗಳನ್ನು ಸಂಗ್ರಹಿಸಿ ಮೀಸಲಾತಿಯನ್ನು ಹಂಚುವ ವೈಜ್ಞಾನಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅಡಿಯನ್, ಅಜಿಲಾ, ಬುಡ್ಗ ಜಂಗಮ, ಸುಡುಗಾಡು ಸಿದ್ಧ, ಹಂದಿಜೋಗಿ, ದಕ್ಕಲ, ಡೊಂಬರ, ಸಿಲ್ಲೇಕ್ಯಾತ, ಸಿಂಧೋಳ ಸೇರಿದಂತೆ 49 ಅಲೆಮಾರಿ ಸಮುದಾಯಗಳು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಒಳಗೊಂಡಂತೆ 59 ಸಮುದಾಯಗಳಿಗೆ ಶೇ 1 ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿತ್ತು. ಆದರೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲ ಸಮುದಾಯವನ್ನು ಸಿ ಗ್ರೂಪಿಗೆ ಸೇರಿಸುವ ಮೂಲಕ ಪ್ರಬಲ ಸಮುದಾಯಗಳ ಜತೆ ಪೈಪೋಟಿ ನೀಡುವ ವಾತವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಮೀಸಲಾತಿ ಒಳವರ್ಗೀಕರಣದ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ತತ್ವಗಳನ್ನು ಸರ್ಕಾರ ಗಮನಿಸಬೇಕಿತ್ತು. ಆದರೆ ಸರ್ಕಾರವಾಗಲಿ, ಸಚಿವ ಸಂಪುಟ ಸಭೆಯಾಗಲಿ ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಮತ್ತು ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿಯ ಪಾಲನ್ನು ಹಂಚುವ ನಿರ್ಣಯವನ್ನು ಸಚಿವಸಂಪುಟ ಮಾಡಿದೆ. ಈ ಕಾರಣದಿಂದಾಗಿ ಸಾಮಾಜಿಕ ನ್ಯಾಯವೂ ಪರಿಪಾಲನೆಯಾಗಿಲ್ಲ. ಸರ್ಕಾರದ ಈ ನಿರ್ಣಯವನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಮುಖ್ಯಮಂತ್ರಿಯವರಲ್ಲಿ 49 ಅಲೆಮಾರಿ ಸಮುದಾಯಗಳ ಮುಖಂಡರು ನಿಯೋಗದಲ್ಲಿ ತೆರಳಿ ಮನವಿ ಮಾಡಿಕೊಂಡಿತು. ಆದರೆ ಸರ್ಕಾರದ ಕಡೆಯಿಂದ ಕಡೆಯಿಂದ ಸಕಾರತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಈ ಕಾರಣಕ್ಕಾಗಿ ಬುಧವಾರದಂದು ಕರ್ನಾಟಕದ ಎಲ್ಲ ಅಲೆಮಾರಿ ಸಮುದಾಯಗಳ ಸಂಘಟನೆಗಳಿಂದ ಬೃಹತ್ ಪ್ರತಿಭಟನ ಸಮಾವೇಶ ಹಮ್ಮಿಕೊಳಲಾಗಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಅಲೆಮಾರಿ ಸಮುದಾಯಗಳ ಪ್ರತಿಭಾವಂತ ಕಲಾವಿದರು. ಪದ್ಮಶ್ರೀ ಪ್ರಸಸ್ತಿ, ರಾಜ್ಯೋತ್ಸ ಪ್ರಶಸ್ತಿ ಪಡೆದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ, ಶಿವಸುಂದರ್, ವಡ್ಡಗೆರೆ ನಾಗರಾಜಯ್ಯ, ಹುಲಿಕುಂಟೆಮೂರ್ತಿ, ಅಂಬಣ್ಣ ಆರೋಲಿಕರ್ ಅವರಂತಹ ಚಿಂತಕರು ಭಾಗವಹಿಸಲಿದ್ದಾರೆ. ಮುಖ್ಯವಾಗಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಮತ್ತು ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯ ಕುರಿತು ಚಿಂತನ ಮಂಥನಗಳು ನಡೆಯಲಿವೆ ಎಂದು ಹೇಳಿದರು.

Read More
Next Story