ಬೆಂಗಳೂರು ಸುರಂಗ ಮಾರ್ಗ ಯೋಜನೆಗೆ ವಿರೋಧ: ಪರಿಸರವಾದಿಗಳು, ನಾಗರಿಕರಿಂದ ಪ್ರತಿಭಟನೆ
x

ಬೆಂಗಳೂರು ಸುರಂಗ ಮಾರ್ಗ ಯೋಜನೆಗೆ ವಿರೋಧ: ಪರಿಸರವಾದಿಗಳು, ನಾಗರಿಕರಿಂದ ಪ್ರತಿಭಟನೆ

'ಬೆಂಗಳೂರು ಟೌನ್​ಹಾಲ್' ಸಂಘಟನೆಯ ನೇತೃತ್ವದಲ್ಲಿ, ಸಾವಿರಾರು ನಾಗರಿಕರು, ಪರಿಸರವಾದಿಗಳು ಮತ್ತು ವಿಷಯ ತಜ್ಞರು ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.


ರಾಜ್ಯ ಸರ್ಕಾರವು ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಯ ಹೆಸರಿನಲ್ಲಿ ಮುಂದಿಟ್ಟಿರುವ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಸುರಂಗ ರಸ್ತೆ ಯೋಜನೆ ಸೇರಿದಂತೆ ಹಲವು ವಿವಾದಾತ್ಮಕ ಪ್ರಸ್ತಾಪಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.

'ಬೆಂಗಳೂರು ಟೌನ್​ಹಾಲ್' ಸಂಘಟನೆಯ ನೇತೃತ್ವದಲ್ಲಿ, ಸಾವಿರಾರು ನಾಗರಿಕರು, ಪರಿಸರವಾದಿಗಳು ಮತ್ತು ವಿಷಯ ತಜ್ಞರು ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ಜನವಿರೋಧಿ ಮತ್ತು ಪರಿಸರ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

'ನಮ್ಮ ನಗರ, ನಮ್ಮ ಹಕ್ಕು' – ಪ್ರತಿಭಟನೆಯ ಮೊರೆ

'ನಮ್ಮ ನಗರ, ನಮ್ಮ ಹಕ್ಕು, ನಮ್ಮ ಆಯ್ಕೆ' ಎಂಬ ಘೋಷವಾಕ್ಯದಡಿ ಜಮಾಯಿಸಿದ ಪ್ರತಿಭಟನಾಕಾರರು, "ಸುರಂಗ ರಸ್ತೆ ಬೇಡವೇ ಬೇಡ, ಬಲವಾದ ಸಾರ್ವಜನಿಕ ಸಾರಿಗೆ ಬೇಕೇ ಬೇಕು," "ಕೆರೆಗಳ ಬಫರ್ ವಲಯ ತಿದ್ದುಪಡಿ ನಿಲ್ಲಿಸಿ, 74ನೇ ತಿದ್ದುಪಡಿಯನ್ನು ಅನುಷ್ಠಾನಗೊಳಿಸಿ," ಮತ್ತು "ನಮ್ಮ ಕೆರೆ, ಕಾಲುವೆಗಳನ್ನು ಉಳಿಸಿ" ಎಂಬ ಫಲಕಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸುರಂಗ ಮಾರ್ಗಕ್ಕೆ ತೀವ್ರ ವಿರೋಧವೇಕೆ?

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಲವು ತಜ್ಞರು, ಸುರಂಗ ರಸ್ತೆ ಯೋಜನೆಯ ಅವೈಜ್ಞಾನಿಕ ಮತ್ತು ವಿನಾಶಕಾರಿ ಸ್ವರೂಪವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. "ಈ ಯೋಜನೆಯ ಪ್ರಯಾಣ ಶುಲ್ಕವು ಸಾಮಾನ್ಯ ವಾಹನ ಸವಾರರು ಭರಿಸುವ ಪೆಟ್ರೋಲ್-ಡೀಸೆಲ್ ವೆಚ್ಚಕ್ಕಿಂತಲೂ ದುಬಾರಿಯಾಗಲಿದೆ. ಇದು ಶ್ರೀಮಂತರನ್ನು ಹೊರತುಪಡಿಸಿ, ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನ ನೀಡದ ಯೋಜನೆ," ಎಂದು ಪ್ರತಿಭಟನಾಕಾರರು ಆರೋಪಿಸಿದರು.

"ಈ ಯೋಜನೆಗಾಗಿ ನಗರದ ಶ್ವಾಸಕೋಶದಂತಿರುವ ಲಾಲ್ಬಾಗ್ ಸೇರಿದಂತೆ ಹಲವು ಹಸಿರು ತಾಣಗಳಿಗೆ ಧಕ್ಕೆ ಒದಗಲಿದೆ. ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ, ಇದು ನಗರದ ಹಸಿರು ಹೊದಿಕೆಯನ್ನು ನಾಶಪಡಿಸಿ, ಶುದ್ಧ ಗಾಳಿ ಮತ್ತು ಅಂತರ್ಜಲ ಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪೆರಿಫೆರಲ್ ರಿಂಗ್ ರೋಡ್, ಸಬ್-ಅರ್ಬನ್ ರೈಲು ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಬಿಟ್ಟು, ಇಂತಹ ವಿನಾಶಕಾರಿ ಯೋಜನೆಗೆ ಸಾವಿರಾರು ಕೋಟಿ ಸುರಿಯುವುದು ಎಷ್ಟು ಸರಿ?" ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.

ಪ್ರತಿಭಟನಾಕಾರರು ಮುಂದಿಟ್ಟ ಪರ್ಯಾಯ ಸಲಹೆಗಳು

ಸರ್ಕಾರವು ಜನಸ್ನೇಹಿ ಮತ್ತು ಪರಿಸರ ಸ್ನೇಹಿ ಪರ್ಯಾಯಗಳತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಸುಸ್ಥಿರ ಬೆಂಗಳೂರಿಗಾಗಿ ಹಲವು ಸಲಹೆಗಳನ್ನು ಮುಂದಿಟ್ಟರು. ನಗರದಾದ್ಯಂತ ಸುರಕ್ಷಿತ ಸೈಕಲ್ ಪಥಗಳ ನಿರ್ಮಾಣ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು (ಬಿಎಂಟಿಸಿ) ಬಲಪಡಿಸುವುದು, ಕಚೇರಿಗಳು ಮತ್ತು ಕಂಪನಿಗಳಿಗೆ ಬಸ್ ಸೌಲಭ್ಯ ಒದಗಿಸುವುದು, ಅಪಾರ್ಟ್​​ಮೆಂಟ್​ಗಳಲ್ಲಿ ಮಳೆನೀರು ಕೊಯ್ಲನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಹಾಗೂ 'ಪ್ರತಿ ಫ್ಲ್ಯಾಟ್​ಗೆ ಒಂದು ಮರ, ಪ್ರತಿ ವಿಲ್ಲಾಗೆ ಐದು ಮರ' ಎಂಬ ನಿಯಮವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಟ ಪ್ರಕಾಶ್ ಬೆಳವಾಡಿ, ಸಾರ್ವಜನಿಕ ಸಾರಿಗೆಯ ಪ್ರಚಾರಕ ರಾಜ್​​ಕುಮಾರ್​ದುಗರ್, ಸಿವಿಕ್ ಬೆಂಗಳೂರಿನ ಕಾತ್ಯಾಯಿನಿ ಚಾಮರಾಜ್, ಪ್ರಿಯಾ ಚೆಟ್ಟಿ ರಾಜಗೋಪಾಲ್ ಸೇರಿದಂತೆ ಹಲವು ಗಣ್ಯರು, ಪರಿಸರ ಹೋರಾಟಗಾರರು ಮತ್ತು ಸಾವಿರಾರು ನಾಗರಿಕರು ಪಾಲ್ಗೊಂಡು ತಮ್ಮ ವಿರೋಧ ದಾಖಲಿಸಿದರು.

Read More
Next Story