
ಕಸಾಪ ಅಧ್ಯಕ್ಷರ ವಿರುದ್ಧ ಸಾಹಿತಿಗಳ ಬಂಡಾಯ; ಮಹೇಶ್ ಜೋಶಿ ಪದಚ್ಯುತಿಗೆ ಪಟ್ಟು
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ವಿರುದ್ಧ ಸಾಹಿತ್ಯ ವಲಯದ ಅಸಮಾಧಾನ ಸ್ಫೋಟಗೊಂಡಿದೆ. ಅಧ್ಯಕ್ಷ ಮಹೇಶ್ ಜೋಶಿ ಅವರ ಪದಚ್ಯುತಿಗೆ ಸಾಹಿತಿಗಳು ಪಟ್ಟು ಹಿಡಿದಿದ್ದು, ಜನಾಂದೋಲನ ರೂಪಿಸಲು ಮುಂದಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಸಾಹಿತಿಗಳಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಇದೀಗ ಸ್ಫೋಟಗೊಂಡಿದೆ. ಕಸಾಪ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ ಹಾಗೂ ಸಂಘ ಪರಿವಾರದ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬ ಆರೋಪಗಳನ್ನು ಹೊರಿಸಿರುವ ಸಾರಸ್ವತ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದ ಹೋರಾಟಗಾರರು ಮಹೇಶ್ ಜೋಶಿ ಪದಚ್ಯುತಿಗೆ ಆಗ್ರಹಿಸಿದ್ದಾರೆ.
ಮಹೇಶ್ ಜೋಶಿ ವಿರುದ್ಧ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬೃಹತ್ ಜನಾಂದೋಲನ ರೂಪಿಸಲು ಈ ಮೂರು ಕ್ಷೇತ್ರಗಳ ಸಮಾನ ಮನಸ್ಕರ ವೇದಿಕೆ ನಿರ್ಣಯ ಕೈಗೊಂಡಿದೆ. ಅಲ್ಲದೇ ಕಸಾಪ ಅಧ್ಯಕ್ಷರನ್ನು ಆರ್ಥಿಕ ಅಶಿಸ್ತಿಗೆ ಸಂಬಂಧಿಸಿ ವಿಚಾರಣೆ ನಡೆಸುವಂತೆಯೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಬೆಂಗಳೂರಿನ ಗಾಂಧಿಭವನದಲ್ಲಿ ಹಿರಿಯ ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ ನೇತೃತ್ವದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಸರ್ವಾಧಿಕಾರಿಯ ಕಪಿಮುಷ್ಠಿಯಿಂದ ರಕ್ಷಿಸಬೇಕೆಂಬ ಕೂಗು ಪ್ರಬಲವಾಗಿ ಕೇಳಿ ಬಂದಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಹೇಶ್ ಜೋಶಿ ಅವರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು, ಪರಿಷತ್ತಿನಲ್ಲಿ ಸಂಘ ಪರಿವಾರದ ಬೇರುಗಳನ್ನು ಬೆಳೆಸುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿರುವ ಸಂಪುಟ ಸ್ಥಾನಮಾನವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ತಿಳಿಸಿದ್ದಾರೆ.
ಲಂಗು ಲಗಾಮು ಇಲ್ಲದಂತಾಗಿದೆ
ಕನ್ನಡ ಸಾಹಿತ್ಯ ಪರಿಷತ್ ಲಂಗು ಲಗಾಮಿಲ್ಲದೇ ಓಡುವ ಹುಚ್ಚು ಕುದುರೆಯಂತಾಗಿದೆ. ಅಲ್ಲಿ ಕುಳಿತಿರುವ ಅಧ್ಯಕ್ಷರು ಸಾಹಿತ್ಯ ಚಟುವಟಿಕೆ ಬಿಟ್ಟು ಆಜೀವ ಸದಸ್ಯರು ಮತ್ತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರ ಮೇಲೆ ಕ್ರಮ ಜರುಗಿಸುವಂತಹ ನಿರ್ಧಾರ ಕೈಗೊಂಡಿದ್ದಾರೆ. ಪರಿಷತ್ತಿನ ಬೈಲಾ ತಿದ್ದುಪಡಿಗೆ ಕೈ ಹಾಕಿ, ತಮಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದಾರೆ.
ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಕಸಾಪ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡಲೇ ಅದನ್ನು ಹಿಂಪಡೆಯಬೇಕು. ಸಾಹಿತ್ಯ ಪರಿಷತ್ತು ಮೋಜು ಮತ್ತು ಲೂಟಿ ಮಾಡುವ ಕೇಂದ್ರವಾಗಿದೆ. ಹೀಗಾಗಿ ಪರಿಷತ್ತಿನ ಅಧ್ಯಕ್ಷರ ಅವಧಿಯನ್ನು 5 ವರ್ಷದ ಬದಲಾಗಿ 3 ವರ್ಷಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಸಾಪ ಅಧ್ಯಕ್ಷರ ಆಡಳಿತ ಅವಧಿಯಲ್ಲಿ ಮಾಡಲಾಗಿರುವ 2 ತಿದ್ದುಪಡಿಗಳನ್ನು ರದ್ದು ಮಾಡಬೇಕು. ಅಲ್ಲದೇ ಹಾಲಿ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಗೆ ಛೀಮಾರಿ ಹಾಕುವ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಂ.ವೀರಭದ್ರಪ್ಪ ವಿರುದ್ಧ ಕಿಡಿ
ಕಸಾಪ ನಡೆಯ ವಿರುದ್ಧ ಮಾತನಾಡಿದ್ದ ಸಾಹಿತಿ ಕುಂ.ವೀರಭದ್ರಪ್ಪ ಅವರು ಪರಿಷತ್ತಿಗೆ ತಪ್ಪು ಪತ್ರ ಬರೆದಿದ್ದಾರೆ ಎಂಬ ಮಾಹಿತಿಯಿದೆ. ಬಂಡಾಯ, ಕ್ರಾಂತಿಕಾರಿ ಸಾಹಿತಿಗಳು ತಪ್ಪುಪತ್ರ ಬರೆದಿದ್ದಾರೆ ಎಂದರೆ ನಾಚಿಕೆಗೇಡಿನ ಸಂಗತಿ ಎಂದು ಜಾಣಗೆರೆ ವೆಂಕಟ ರಾಮಯ್ಯ ಕಿಡಿಕಾರಿದ್ದಾರೆ.
ಕುಂ.ವೀರಭದ್ರಪ್ಪ ಅವರಿಗೆ ಈಗಾಗಲೇ ಪರಿಷತ್ತಿನ "ನೃಪತುಂಗ ಪ್ರಶಸ್ತಿ' ಬಂದಿದೆ. ನಾಡೋಜ ಕೂಡ ಸಂದಿದೆ. ಬಳ್ಳಾರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಆಮಿಷಕ್ಕೆ ಒಳಗಾಗಿರಬಹುದೇ ಎಂಬ ಅನುಮಾನ ಕಾಡುತ್ತಿದೆ. ಸಾಹಿತಿಗಳ ಇಂತದ ದ್ವಿಮುಖ ನೀತಿ ಬೇಸರ ತಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಮೈಸೂರು ಮಹಾರಾಜರು ಕಸಾಪ ಕಟ್ಟಿ ಬೆಳೆಸಿದರು. ಅವರು ಎಂದೂ ಪರಿಷತ್ತಿನ ಸ್ವಾಯತ್ತತೆಗೆ ಭಂಗ ಬರುವ ಹಾಗೆ ನಡೆದುಕೊಂಡಿರಲಿಲ್ಲ. ಅರಮನೆಯ ತಮಟೆಯಾಗಿ ಬಳಸಿಕೊಂಡಿಲ್ಲ. ಆದರೆ ಬಿಜೆಪಿ ಸರ್ಕಾರ ಕಸಾಪ ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ನೀಡಿ ಪರಿಷತ್ತನ್ನು ಕನಿಷ್ಠ ಮಟ್ಟಕ್ಕೆ ಇಳಿಸಿತು. ರಾಜ್ಯ ಸರ್ಕಾರ ಪರಿಷತ್ತಿನ ಸ್ವಾಯತ್ತತೆ ಉಳಿಸಲು ಕೂಡಲೇ ಹಾಲಿ ಅಧ್ಯಕ್ಷರ ವಿರುದ್ಧ ಶಿಸ್ತುಕ್ರಮ ಜರುಗಿಸಿ, ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸುವ ಬದಲು ಕಟ್ಟಿಹಾಕುವ ಕೆಲಸ ನಡೆಯುತ್ತಿದೆ. ಅಧ್ಯಕ್ಷರು ಶಾಶ್ವತವಲ್ಲ, ಇಲ್ಲಿ ಪರಿಷತ್ತು ಶಾಶ್ವತ. ಪರಿಷತ್ತಿನ ಅಧ್ಯಕ್ಷರ ಸರ್ವಾಧಿಕಾರದ ಧೋರಣೆ ವಿರುದ್ಧ ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಶ್ರೀಕಂಠೇಗೌಡ, ಕರ್ನಾಟಕ ಸಂಘ ಮಂಡ್ಯದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ವಸುಂಧರಾ ಭೂಪತಿ, ದಲಿತ ಸಂಘಟನೆ ಮುಖಂಡ ಮಾವಳ್ಳಿ ಶಂಕರ್, ಶ್ರೀನಿವಾಸ್ ಜಿ.ಕಪ್ಪಣ್ಣ, ಸಿ.ಕೆ.ರಾಮೇಗೌಡ ಸೇರಿ ಹಲವು ಸಾಹಿತಿಗಳು, ಕನ್ನಡಪರ ಹೋರಾಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ನಿರ್ಣಯಗಳೇನು?
1. ಕಸಾಪ ಅಧ್ಯಕ್ಷರ ಆರ್ಥಿಕ ಅಶಿಸ್ತು ಹಾಗೂ ಸಮ್ಮೇಳನಗಳ ಹಣ ದುರುಪಯೋಗದ ಬಗ್ಗೆ ವಿಚಾರಣೆ ನಡೆಸಿ, ಸರ್ವಾಧಿಕಾರದ ಅಧಿಕಾರ ನಡೆಸುತ್ತಿರುವ ಅಧ್ಯಕ್ಷಗಿರಿ ಅಮಾನತ್ತಿನಲ್ಲಿಟ್ಟು, ಆಡಳಿತಾಧಿಕಾರಿ ನೇಮಿಸಬೇಕು.
2. ಅಧ್ಯಕ್ಷರಿಗೆ ಹಿಂದಿನ ಸರ್ಕಾರ ಕೊಟ್ಟಿರುವ ಸಂಪುಟ ದರ್ಜೆ ಸ್ಥಾನಮಾನ ತಕ್ಷಣ ಹಿಂಪಡೆಯಬೇಕು.
3. ಹಿಂದೆ ಆಗಿರುವ ಬೈಲಾಗಳಿಗೆ ಆಗಿರುವ ಎರಡು ತಿದ್ದುಪಡಿಗಳನ್ನು ರದ್ದುಪಡಿಸಬೇಕು.
4. ಅಮಾನತು ಮಾಡಿರುವ ಕೆಲ ಆಜೀವ ಸದಸ್ಯರ ಸದಸ್ಯತ್ವವನ್ನು ವಾಪಸು ಪಡೆಯಬೇಕು.
5.ಬಳ್ಳಾರಿ ಸಾಹಿತ್ಯ ಸಮ್ಮೇಳನಕ್ಕೆ 40 ಕೋಟಿ ರೂ.ಕೇಳಲಾಗಿದ್ದು, ಅಷ್ಟು ದೊಡ್ಡ ಮೊತ್ತ ತೆರಿಗೆದಾರರ ಹಣವಾದ್ದರಿಂದ ಸರ್ಕಾರ ಹಣ ನೀಡುವ ಅಗತ್ಯ ಇಲ್ಲ. ಪರಿಷತ್ ಹಣ ಕ್ರೋಢೀಕರಣ ಮಾಡಿಕೊಂಡೇ ಸರಳವಾಗಿ ಸಮ್ಮೇಳನ ನಡೆಸಬೇಕು.
6. ಕಸಾಪ ಅಧ್ಯಕ್ಷರ ಸರ್ವಾಧಿಕಾರ ಧೋರಣೆ ಖಂಡಿಸುವ "ಖಂಡನಾ ನಿರ್ಣಯ"ವನ್ನು ಈ ಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.