
ಬೆಳಗಾವಿಯ ಹಿಂಡೆಲಗಾ ಜೈಲು
ಹಿಂಡಲಗಾ ಜೈಲಿನಲ್ಲಿ ಡ್ರಗ್ಸ್ ದರ್ಬಾರ್: ಅಧಿಕಾರಿಯತ್ತ ʼಪೊಟ್ಟಣʼ ಎಸೆದ ದುಷ್ಕರ್ಮಿಗಳು
ಮಧ್ಯರಾತ್ರಿಯ ವೇಳೆ ಬಟ್ಟೆಯಲ್ಲಿ ಸುತ್ತಿದ ಈ ಅಕ್ರಮ ವಸ್ತುಗಳನ್ನು ಜೈಲಿನ ಗೋಡೆಯ ಮೇಲಿಂದ ಎಸೆಯಲಾಗಿದ್ದು, ಈ ದೃಶ್ಯಗಳು ಜೈಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ರಾಜ್ಯದ ಅತಿ ಸುರಕ್ಷಿತ ಹಾಗೂ ಹಳೆಯ ಕಾರಾಗೃಹಗಳಲ್ಲಿ ಒಂದಾದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಅಕ್ರಮವಾಗಿ ಮಾದಕ ವಸ್ತು ಹಾಗೂ ಮೊಬೈಲ್ ಪೂರೈಸುವ ಜಾಲ ಮತ್ತೆ ಸಕ್ರಿಯವಾಗಿದೆ. ಮುಖಕ್ಕೆ ಮಾಸ್ಕ್ ಧರಿಸಿದ ಕಿಡಿಗೇಡಿಗಳು ಜೈಲಿನ ಹೊರಭಾಗದಿಂದ ಒಳಕ್ಕೆ ಮೊಬೈಲ್ ಮತ್ತು ಡ್ರಗ್ಸ್ ಎಸೆದು ಪರಾರಿಯಾಗಿರುವ ಘಟನೆ ಡಿ.29ರ ಮಧ್ಯರಾತ್ರಿ ಘಟನೆ ನಡೆದಿದೆ.
ಘಟನೆ ಏನು?
ಮಧ್ಯರಾತ್ರಿಯ ವೇಳೆಯಲ್ಲಿ ಜೈಲಿನ ಹೊರಭಾಗಕ್ಕೆ ಬಂದ ಕಿಡಿಗೇಡಿಗಳು, ಬಟ್ಟೆಯಲ್ಲಿ ಬಿಗಿಯಾಗಿ ಕಟ್ಟಿದ್ದ ವಸ್ತುಗಳನ್ನು ಗೋಡೆಯ ಮೇಲಿಂದ ಜೈಲಿನ ಆವರಣಕ್ಕೆ ಎಸೆದಿದ್ದಾರೆ. ಇದರಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಹಾಗೂ ಗಾಂಜಾದಂತಹ ಮಾದಕ ವಸ್ತುಗಳಿದ್ದವು ಎಂದು ತಿಳಿದುಬಂದಿದೆ. ಈ ಎಲ್ಲಾ ಕೃತ್ಯಗಳು ಜೈಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಜೈಲಿನ ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರ ಅವರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಡಿ.29ರಂದು ಕಾರಾಗೃಹದ ಮುಖ್ಯ ವೀಕ್ಷಕ ಡಿ.ಎಂ.ಗೋಠೆ ಅವರು ಕರ್ತವ್ಯ ನಿರ್ವಹಿಸುತ್ತಿರುವಾಗ ಸರ್ಕಲ್ ನಂ.2, ಬ್ಯಾರೆಕ್ ನಂ.2 ಮೂಲೆಯಲ್ಲಿ ಒಂದು ಮೊಬೈಲ್ ಪತ್ತೆಯಾಗಿದೆ. ನಿಷೇಧಿತ ವಸ್ತುವನ್ನು ಇಟ್ಟುಕೊಂಡಿರುವ ಮತ್ತು ಬಳಸಿರುವ ಕೈದಿಗಳನ್ನು ಪತ್ತೆ ಮಾಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಬೆಂಗಳೂರಿನಲ್ಲಿ ಮಾಧ್ಯಮದರಿಗೆ ಪ್ರತಿಕ್ರಿಯಿಸಿದ್ದು, ಈ ಘಟನೆ ಬೆಳಕಿಗೆ ಬರುತ್ತಿದ್ದಂತಯೆ ಡಿಜಿಪಿ ಅಲೋಕ್ ಕುಮಾರ್ ಅವರನ್ನು ಬೆಳಗಾವಿಗೆ ಕಳುಹಿಸಲಾಗುತ್ತಿದ್ದು, ಅವರು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜೈಲು ಅಧಿಕಾರಿಗಳ ಮೇಲೆಯೇ ದಾಳಿ
2024ರ ಡಿಸೆಂಬರ್ ತಿಂಗಳಿನಲ್ಲಿ ಗಾಂಜಾ ಪ್ಯಾಕೆಟ್‌ಗಳನ್ನುವಶಪಡಿಸಿಕೊಳ್ಳಲು ಮುಂದಾದ ಸಹಾಯಕ ಜೈಲರ್ ಜಿ.ಆರ್. ಕಾಂಬಳೆ ಅವರ ಮೇಲೆ ವಿಚಾರಣಾಧೀನ ಕೈದಿ ಶಾಹೀದ್ ಖುರೇಶಿ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿರುವುದು ಜೈಲಿನ ಆಡಳಿತ ಮಂಡಳಿಯಲ್ಲಿ ಆತಂಕ ಮೂಡಿಸಿತ್ತು.
ಇದಲ್ಲದೆ, ಜೈಲಿನ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಕೈದಿಗಳು ಮೊಬೈಲ್ ಫೋನ್‌ಗಳನ್ನು ಬಳಸಿ ಹೊರಜಗತ್ತಿನೊಂದಿಗೆ ಸಂಪರ್ಕ ಹೊಂದಿರುವ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಹಿಂಡಲಗಾ ಜೈಲಿನಿಂದಲೇ ಬೆದರಿಕೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಮೂಡಿಸಿತ್ತು. ಈ ಘಟನೆ ಜೈಲಿನ ಆಂತರಿಕ ಭದ್ರತೆಯ ಪೊಳ್ಳುತನವನ್ನು ಬಯಲು ಮಾಡಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಪ್ರಶಾಂತ್ ಮೊಗವೀರ್ ಎಂಬ ಕೈದಿ ಜೈಲಿನೊಳಗಿನ ಅವ್ಯವಸ್ಥೆ ಮತ್ತು ಭ್ರಷ್ಟಾಚಾರದ ಕುರಿತು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿ ಬಿಡುಗಡೆ ಮಾಡಿದ್ದು, ಇಲಾಖೆಗೆ ಮುಜುಗರ ಉಂಟುಮಾಡಿತ್ತು. ಈ ಘಟನೆಯ ನಂತರ ಇಬ್ಬರು ಉನ್ನತ ಜೈಲಾಧಿಕಾರಿಗಳನ್ನು ಕರ್ತವ್ಯದಿಂದ ಎತ್ತಂಗಡಿ ಮಾಡಲಾಗಿತ್ತು.
ವಿಶೇಷವೆಂದರೆ, ಜೈಲಿನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಅಲ್ಲಿ 5G ಜಾಮರ್‌ಗಳನ್ನು ಅಳವಡಿಸಲಾಗಿದ್ದರೂ ಸಹ ಮೊಬೈಲ್ ಬಳಕೆ ಮತ್ತು ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಜೈಲು ಸಿಬ್ಬಂದಿಯೇ ಕೈದಿಗಳಿಗೆ ಗಾಂಜಾ ಮತ್ತು ಮದ್ಯ ಸರಬರಾಜು ಮಾಡುವಲ್ಲಿ ಭಾಗಿಯಾಗಿರುವುದು ಈ ಹಿಂದಿನ ತನಿಖೆಗಳಲ್ಲಿ ಸಾಬೀತಾಗಿತ್ತು.
ಪ್ರಸ್ತುತ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ತರುತ್ತಿರುವ ಜಾಲದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಜೈಲುಗಳಲ್ಲಿ ಹೆಚ್ಚಿದೆ ಮೊಬೈಲ್, ಡ್ರಗ್ಸ್ ದರ್ಬಾರ್
ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ 'ಶುದ್ಧೀಕರಣ' ಕಾರ್ಯಾಚರಣೆ ನಡೆಸಲಾಗಿತ್ತು. ಇದೇ ಮೊದಲ ಬಾರಿಗೆ ಬರೋಬ್ಬರಿ 30 ಮೊಬೈಲ್ ಫೋನ್‌ಗಳು, ಚಾರ್ಜರ್‌ಗಳು ಮತ್ತು ಹೆಡ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಡಿಜಿ (ಕಾರಾಗೃಹ) ಅಲೋಕ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಜೈಲು ವ್ಯವಸ್ಥೆಯಲ್ಲಿ ಉಂಟಾಗಿರುವ ಬದಲಾವಣೆಗೆ ಈ ದಾಳಿ ಸಾಕ್ಷಿಯಾಗಿದೆ. ಕೈದಿಗಳು ಜೈಲಿನ ಒಳಗಿನಿಂದಲೇ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿತ್ತು. ಎಸ್‌ಪಿ ಅಂಶು ಕುಮಾರ್ ಮತ್ತು ಜೈಲರ್ ಶಿವಕುಮಾರ್ ಅವರ ನೇತೃತ್ವದ ತಂಡವು ಅತ್ಯಂತ ಗುಪ್ತವಾಗಿ ಈ ಯೋಜನೆ ರೂಪಿಸಿತ್ತು. ತಡರಾತ್ರಿ ಕೈದಿಗಳು ನಿದ್ರೆಯಲ್ಲಿದ್ದಾಗ ಏಕಾಏಕಿ ಬ್ಯಾರಕ್‌ಗಳ ಮೇಲೆ ದಾಳಿ ನಡೆಸಿದ ತಂಡವು ಹಾಸಿಗೆಗಳ ಅಡಿ, ಗೋಡೆಯ ಬಿರುಕುಗಳು ಮತ್ತು ಶೌಚಾಲಯದ ಪೈಪ್‌ಗಳ ನಡುವೆ ಅಡಗಿಸಿಟ್ಟಿದ್ದ 30 ಸ್ಮಾರ್ಟ್‌ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು.
ಅಲೋಕ್ ಕುಮಾರ್ ಕಾರಾಗೃಹ ಇಲಾಖೆಯ ಡಿಜಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಜೈಲುಗಳಲ್ಲಿ ಶಿಸ್ತು ತರಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಹಿಂದೆ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ದೃಶ್ಯಗಳು ವೈರಲ್ ಆದ ನಂತರ, ಇಡೀ ಇಲಾಖೆಯ ಪ್ರತಿಷ್ಠೆ ಧೂಳೀಪಟವಾಗಿತ್ತು.

