
ಹಲಸೂರು ದೇವಾಲಯದಲ್ಲಿ ಪ್ರೇಮಿಗಳಿಗೆ ಮದುವೆಯಿಲ್ಲ! ಮದುವೆ ಮಾಡಿಸಿ ನ್ಯಾಯಾಲಯಕ್ಕೆ ಅಲೆಯುತ್ತಿರುವ ಅರ್ಚಕರು!
ಕಳೆದೊಂದು ದಶಕದಿಂದ ಹಲಸೂರಿನ ಸೋಮೇಶ್ವರ ದೇವಾಲಯದ ಆವರಣದಲ್ಲಿ ಮಂಗಳವಾದ್ಯಗಳ ಸದ್ದು ನಿಂತುಹೋಗಿದೆ. ಈ ಸನ್ನಿಧಾನದಲ್ಲಿ, ಈಗ ಮದುವೆಗೆ ಅವಕಾಶವಿಲ್ಲ ಎಂದು ಆಡಳಿತ ಮಂಡಳಿ ಫಲಕ ಹಾಕಿದೆ.
ಬೆಂಗಳೂರು ಮಹಾನಗರದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಹೆಸರು ಹಲಸೂರು ಸೋಮೇಶ್ವರ ದೇವಾಲಯ.
ಚೋಳರ ಕಾಲದ ಈ ಅದ್ಭುತ ವಾಸ್ತುಶಿಲ್ಪದ ದೇಗುಲವು ಕೇವಲ ಭಕ್ತಿಯ ಕೇಂದ್ರವಾಗಿರದೆ, ಶತಮಾನಗಳಿಂದ ನೂರಾರು ಜೋಡಿಗಳ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ ಪವಿತ್ರ ವೇದಿಕೆಯಾಗಿತ್ತು. ಆದರೆ, ಕಳೆದ ಒಂದು ದಶಕದಿಂದ ಈ ದೇವಾಲಯದ ಆವರಣದಲ್ಲಿ ಮಂಗಳವಾದ್ಯಗಳ ಸದ್ದು ನಿಂತು ಹೋಗಿದೆ. ಸಾವಿರಾರು ಜೋಡಿಗಳು ಸಪ್ತಪದಿ ತುಳಿದ ಈ ಸನ್ನಿಧಾನದಲ್ಲಿ, ಈಗ ಮದುವೆಗೆ ಅವಕಾಶವಿಲ್ಲ ಎಂದು ಆಡಳಿತ ಮಂಡಳಿ ಫಲಕ ಹಾಕಿದೆ. ಇದಕ್ಕೆ ಪ್ರಮುಖ ಕಾರಣ, ದಾಂಪತ್ಯ ಜೀವನದ ಬಿರುಕುಗಳು ಮತ್ತು ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಅರ್ಚಕರನ್ನು ದೇವಾಲಯದ ಗರ್ಭಗುಡಿಯಿಂದ ನ್ಯಾಯಾಲಯದ ಕಟಕಟೆಗೆ ಎಳೆದು ತರುತ್ತಿರುವುದಾಗಿದೆ.
ದೇವಸ್ಥಾನದಲ್ಲಿ 2014ಕ್ಕೂ ಮೊದಲು ರಾಜ್ಯದ ಅನೇಕ ಪ್ರಮುಖ ಹಾಗೂ ಗ್ರಾಮೀಣ ದೇವಸ್ಥಾನಗಳಲ್ಲಿ ನಿತ್ಯ ವಿವಾಹಗಳು ನಡೆಯುತ್ತಿದ್ದವು. ಆದರೆ 2014ರ ನಂತರ ಪರಿಸ್ಥಿತಿ ಬದಲಾಯಿತು. ಪವಿತ್ರ ತಾಣ ಎಂದು ನಂಬಿ ದೇವಸ್ಥಾನಗಳಲ್ಲಿ ಮದುವೆಗೆ ಅವಕಾಶ ನೀಡಿದರೆ, ಅದನ್ನು ದುರುಪಯೋಗಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಯಿತು. ಪ್ರೇಮಿಗಳು ಮನೆಯವರ ವಿರೋಧದ ನಡುವೆ ಓಡಿ ಬಂದು ಮದುವೆಯಾಗಲು ದೇವಸ್ಥಾನಗಳನ್ನು ಸುಲಭದ ತಾಣವನ್ನಾಗಿ ಮಾಡಿಕೊಂಡರು. ಇದು ಸಾಮಾಜಿಕ ಮತ್ತು ಕಾನೂನಾತ್ಮಕ ಸಂಘರ್ಷಗಳಿಗೆ ನಾಂದಿ ಹಾಡಿತು. ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಮತ್ತು ಕಾನೂನು ಸಂಘರ್ಷಗಳು ಘಟನೆ ಮರುಕಳಿಸುತ್ತಿರುವ ಕಾರಣ ಕಳೆದ ಒಂದು ದಶಕಗಳಿಂದ ದೇವಾಲಯದ ಆಡಳಿತ ಮಂಡಳಿಯು ವಿವಾಹ ಸಮಾರಂಭಗಳನ್ನು ನಡೆಸಲು ಅನುಮತಿ ನಿರಾಕರಿಸುತ್ತಿದೆ.
ಅರ್ಚಕರ ಸಂಕಷ್ಟ: ಪೂಜೆ ಬಿಟ್ಟು ಕೋರ್ಟ್ ಅಲೆದಾಟ
ವಿವಾಹ ನಿಷೇಧದ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ ಅರ್ಚಕರು ಎದುರಿಸುತ್ತಿರುವ ಕಾನೂನು ಸಂಕಷ್ಟ. ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮತ್ತು ಸಾಮಾನ್ಯ ಪದ್ಧತಿಯಂತೆ, ದೇವಾಲಯದಲ್ಲಿ ಮದುವೆ ಮಾಡಿಸಿದ ಅರ್ಚಕರು ಆ ಮದುವೆಗೆ ಪ್ರಮುಖ ಸಾಕ್ಷಿಯಾಗಿರುತ್ತಾರೆ. ಯಾವಾಗ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿ ಅವರು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರುತ್ತಾರೋ, ಆಗ ಮದುವೆಯ ಸಿಂಧುತ್ವವನ್ನು ಸಾಬೀತುಪಡಿಸಲು ಅರ್ಚಕರನ್ನು ಸಾಕ್ಷಿಗಳನ್ನಾಗಿ ಕರೆಯಲಾಗುತ್ತದೆ. ಅರ್ಚಕರು ದೇವರ ಸೇವೆ, ಅಭಿಷೇಕ ಮತ್ತು ನಿತ್ಯ ಪೂಜೆಗಳಲ್ಲಿ ತೊಡಗಿರಬೇಕಾದವರು. ಆದರೆ, ವಿಚ್ಛೇದನ ಪ್ರಕರಣಗಳ ಸಂಖ್ಯೆ ಏರಿಕೆಯಾದಂತೆ, ಅವರು ವಾರಗಟ್ಟಲೆ ಕೋರ್ಟ್ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಜಗಳವಾಡುವ ದಂಪತಿಗಳ ನಡುವಿನ ಕಾನೂನು ಸಮರದಲ್ಲಿ ಅರ್ಚಕರು ಬಲಿಪಶುಗಳಾಗುತ್ತಿದ್ದರು. ಈ ಕಾರಣಕ್ಕಾಗಿ ಮದುವೆ ಮಾಡಿಸುವುದನ್ನು ನಿಲ್ಲಿಸಲಾಗಿದೆ ಎಂದು ಅಲ್ಲಿನ ಆಡಳಿತ ಮಂಡಳಿ ಹೇಳಿದೆ.
ಈ ಹಿಂದೆ ದೇವಾಲಯಕ್ಕೆ ಸಂಬಂಧಿಸಿದಂತೆ ವರ್ಷಕ್ಕೆ 5ಕ್ಕಿಂತ ಕಡಿಮೆ ವಿಚ್ಛೇದನ ಅಥವಾ ಮದುವೆ ಸಂಬಂಧಿತ ದೂರುಗಳು ಬರುತ್ತಿದ್ದವು. ಆದರೆ ಕಳೆದ ಈ ಸಂಖ್ಯೆ 50ಕ್ಕೂ ಅಧಿಕಕ್ಕೆ ಏರಿಕೆಯಾಯಿತು. ವಿಚ್ಛೇದನ ಸಂಬಂಧಿತ ದೂರುಗಳನ್ನು ನಿಭಾಯಿಸುವುದು ದೇವಾಲಯದ ಆಡಳಿತ ಮಂಡಳಿಗೆ ಮತ್ತು ಅರ್ಚಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು ಎಂದು ಹೇಳಲಾಗಿದೆ.
ನಕಲಿ ದಾಖಲೆಗಳು ಮತ್ತು ಓಡಿಹೋದ ಜೋಡಿಗಳು
ಕೇವಲ ವಿಚ್ಛೇದನವಷ್ಟೇ ಅಲ್ಲ, ಮದುವೆಗೆ ಮುನ್ನ ನಡೆಯುವ ಅಕ್ರಮಗಳೂ ಸಹ ಈ ಕಠಿಣ ನಿರ್ಧಾರಕ್ಕೆ ಕಾರಣವಾಗಿವೆ ಎಂದು ದೇವಾಲಯದ ಮುಖ್ಯ ಆಡಳಿತಾಧಿಕಾರಿ ವಿ. ಗೋವಿಂದರಾಜು ದ ಫೆಡರಲ್ ಕರ್ನಾಟಕಕ್ಕೆ ಹೇಳಿದ್ದಾರೆ. ಅನೇಕ ಯುವ ಜೋಡಿಗಳು ಮನೆಯಲ್ಲಿ ಯಾರಿಗೂ ತಿಳಿಸದೆ, ಓಡಿಬಂದು ದೇವಾಲಯದಲ್ಲಿ ಮದುವೆಯಾಗಲು ಬಯಸುತ್ತಾರೆ. ವಯಸ್ಸಿನ ದೃಢೀಕರಣ ಅಥವಾ ವಿಳಾಸದ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ದೇವಾಲಯಕ್ಕೆ ಸಲ್ಲಿಸುತ್ತಾರೆ. ಅರ್ಚಕರು ನಂಬಿ ಮದುವೆ ಮಾಡಿಸಿದರೆ, ಕೆಲವೇ ದಿನಗಳಲ್ಲಿ ಹುಡುಗ ಅಥವಾ ಹುಡುಗಿಯ ಪೋಷಕರು ಬಂದು ದೇವಾಲಯದ ಸಿಬ್ಬಂದಿಯೊಂದಿಗೆ ಜಗಳವಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಪೋಷಕರು ಪೋಲೀಸ್ ಠಾಣೆಯಲ್ಲಿ ಅಪಹರಣದ ದೂರು ನೀಡಿರುತ್ತಾರೆ. ಆಗ ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರು ಅನಗತ್ಯವಾಗಿ ಪೋಲೀಸ್ ಠಾಣೆ ಮೆಟ್ಟಿಲೇರಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಘಟನೆಗಳು ಐತಿಹಾಸಿಕ ದೇವಾಲಯದ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ದೇವಾಲಯವು ಶಾಂತಿ ಮತ್ತು ಭಕ್ತಿಯ ತಾಣವಾಗಬೇಕೇ ಹೊರತು, ಕೌಟುಂಬಿಕ ಕಲಹಗಳ ಮತ್ತು ಪೋಲೀಸ್ ತನಿಖೆಯ ಕೇಂದ್ರವಾಗಬಾರದು ಎಂಬುದು ಅವರ ಉದ್ದೇಶ. ಈ ಕಾರಣಕ್ಕಾಗಿ ದೇವಾಲಯದಲ್ಲಿ ಮದುವೆ ಮಾಡಿಸುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ಸ್ಥಳೀಯ ನಿವಾಸಿ ರಮೇಶ್ ಮಾತನಾಡಿ, ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡಲು ಮತ್ತು ಅರ್ಚಕರು ಪೂಜಾ ಕೈಂಕರ್ಯಗಳಲ್ಲಿ ನಿರತರಾಗಿರಲು ಇದು ಸರಿಯಾದ ಕ್ರಮ. ದೇವರ ಸೇವೆ ಮಾಡಬೇಕಾದವರು ಕೋರ್ಟ್ ಬಾಗಿಲಲ್ಲಿ ನಿಲ್ಲುವುದು ಸರಿಯಲ್ಲ ಎಂದು ಬೆಂಬಲ ಸೂಚಿಸಿದ್ದಾರೆ. ಈ ನಡುವೆ, ದೇವಾಲಯದಲ್ಲಿ ಮದುವೆ ಮಾಡಿಸುವುದನ್ನು ನಿಲ್ಲಿಸಿರುವುದಕ್ಕೆ ವಿರೋಧವೂ ಸಹ ವ್ಯಕ್ತವಾಗಿದೆ. ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗುವುದು ನಮ್ಮ ಸಂಸ್ಕೃತಿ. ಬಡವರು ಮತ್ತು ಮಧ್ಯಮ ವರ್ಗದವರು ಲಕ್ಷಾಂತರ ರೂಪಾಯಿ ಕೊಟ್ಟು ಕಲ್ಯಾಣ ಮಂಟಪ ಪಡೆಯಲು ಸಾಧ್ಯವಿಲ್ಲ. ಕೆಲವರ ತಪ್ಪುಗಳಿಗೆ ಎಲ್ಲರಿಗೂ ಶಿಕ್ಷೆ ನೀಡುವುದು, ನಮ್ಮ ಸಾಂಸ್ಕೃತಿಕ ಆಚರಣೆಯನ್ನು ಸವೆಸಿದಂತೆ ಎಂಬ ಅಭಿಪ್ರಾಯಗಳು ಸಹ ವ್ಯಕ್ತವಾಗಿದೆ.
ನಕಲಿ ಪೋಷಕರ ಹಾವಳಿ
ಬಾಲ್ಯವಿವಾಹ ನಿಷೇಧ ಕಾಯ್ದೆಯನ್ವಯ ವಧುವಿಗೆ 18 ಮತ್ತು ವರನಿಗೆ 21 ವರ್ಷ ತುಂಬಿರಲೇಬೇಕು. ಆದರೆ, ಅನೇಕ ಜೋಡಿಗಳು ಫೋಟೋಶಾಪ್ ಮಾಡಿದ ಅಥವಾ ನಕಲಿ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್‌ಗಳನ್ನು ನೀಡಿ ದೇವಸ್ಥಾನದ ಆಡಳಿತ ಮಂಡಳಿಯನ್ನು ಯಾಮಾರಿಸಲು ಶುರುಮಾಡಿದರು. ದೇವಸ್ಥಾನಗಳಲ್ಲಿ ಸಬ್-ರಿಜಿಸ್ಟ್ರಾರ್ ಕಚೇರಿಯಂತೆ ದಾಖಲೆಗಳನ್ನು ಕರಾರುವಾಕ್ಕಾಗಿ ಪರಿಶೀಲಿಸುವ ತಂತ್ರಜ್ಞಾನವಾಗಲಿ, ಪರಿಣತಿಯಾಗಲಿ ಇರುವುದಿಲ್ಲ. ಇದನ್ನು ದುರುಪಯೋಗಪಡಿಸಿಕೊಳ್ಳಲಾಯಿತು. ದೇವಸ್ಥಾನದಲ್ಲಿ ಮದುವೆಯಾಗಲು ಪೋಷಕರ ಅಥವಾ ಪಾಲಕರ ಒಪ್ಪಿಗೆ ಮತ್ತು ಉಪಸ್ಥಿತಿ ಕಡ್ಡಾಯ ಎಂದು ನಿಯಮವಿದ್ದರೂ, ಅದಕ್ಕೂ ಕಳ್ಳಮಾರ್ಗ ಹುಡುಕಲಾಯಿತು. ದೂರದ ಸಂಬಂಧಿಗಳನ್ನೋ ಅಥವಾ ಸ್ನೇಹಿತರನ್ನೋ ಕರೆತಂದು, ಅವರನ್ನೇ ತಂದೆ-ತಾಯಿ ಎಂದು ಬಿಂಬಿಸಿ ಮದುವೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾದವು. ಅರ್ಚಕರಿಗೆ ಅಥವಾ ದೇವಾಲಯದ ಸಿಬ್ಬಂದಿಗೆ ಅಪರಿಚಿತರ ಕೌಟುಂಬಿಕ ಹಿನ್ನೆಲೆ ತಿಳಿಯುವುದು ಅಸಾಧ್ಯವಾದ್ದರಿಂದ, ಅವರು ನಂಬಿ ಮದುವೆ ಮಾಡಿಸುತ್ತಿದ್ದರು. ಇದು ಕಾನೂನು ಸಂಕಷ್ಟಕ್ಕೆ ಅರ್ಚಕರನ್ನು ದೂಡಿತು ಎನ್ನಲಾಗಿದೆ.
ಮದುವೆ ಅನುವು ಮಾಡಿಕೊಡುವಂತೆ ಮನವಿ
ಈ ನಡುವೆ, ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ವಿವಾಹ ಮಾಡಿಸಲು ಇದ್ದ ಅಡೆತಡೆಗಳನ್ನು ನಿವಾರಿಸಿ, ಸೂಕ್ತ ಕಾನೂನು ರಕ್ಷಣೆಯೊಂದಿಗೆ ಷರತ್ತುಬದ್ಧ ಅನುಮತಿ ನೀಡುವಂತೆ ದೇವಾಲಯಗಳ ಅರ್ಚಕರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ. ಹಿಂದೆ ದೇವಾಲಯಗಳಲ್ಲಿ ಸಹಜವಾಗಿ ನಡೆಯುತ್ತಿದ್ದ ಮದುವೆಗಳು, ಇತ್ತೀಚಿನ ವರ್ಷಗಳಲ್ಲಿ ಕಾನೂನಿನ ತೊಡಕುಗಳಿಂದಾಗಿ ಸ್ಥಗಿತಗೊಂಡಿವೆ. ಇದರಿಂದ ಭಕ್ತರಿಗೆ ಮತ್ತು ಅರ್ಚಕರಿಗೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಅವರು ಮುಜರಾಯಿ ಸಚಿವರಿಗೆ ಮತ್ತು ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಒಕ್ಕೂಟವು ಪ್ರಮುಖವಾಗಿ ಅರ್ಚಕರು ಎದುರಿಸುತ್ತಿರುವ ಕಾನೂನು ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದಿದೆ. ದೇವಸ್ಥಾನದಲ್ಲಿ ಮದುವೆ ಮಾಡಿಸಿದ ಅರ್ಚಕರು, ದಂಪತಿಗಳ ನಡುವೆ ಭವಿಷ್ಯದಲ್ಲಿ ವಿಚ್ಛೇದನ ಪ್ರಕರಣಗಳು ನಡೆದಾಗ ಸಾಕ್ಷಿಗಳಾಗಿ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ಇದೆ. ದಂಪತಿಗಳು ಕೌಟುಂಬಿಕ ಕಲಹಗಳ ಕಾರಣ ಕೋರ್ಟ್ ಮೆಟ್ಟಿಲೇರಿದಾಗ, ಮದುವೆ ಮಾಡಿಸಿದ ಅರ್ಚಕರನ್ನು ಅಥವಾ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಾಕ್ಷ್ಯ ನುಡಿಯಲು ಕರೆಯಿಸಲಾಗುತ್ತಿದೆ. ನಿತ್ಯ ದೇವರ ಪೂಜೆ, ಕೈಂಕರ್ಯಗಳಲ್ಲಿ ತೊಡಗಿರಬೇಕಾದ ಅರ್ಚಕರು, ವಾರಗಟ್ಟಲೆ ಕೋರ್ಟ್ ಕಚೇರಿಗಳಿಗೆ ಅಲೆಯುವುದು ಕಷ್ಟಕರವಾಗಿದೆ. ಈ ಭಯದಿಂದಾಗಿ ಅನೇಕ ಅರ್ಚಕರು ದೇವಾಲಯದಲ್ಲಿ ಮದುವೆ ಮಾಡಿಸಲು ನೇರವಾಗಿ ನಿರಾಕರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎ, ಬಿ ಮತ್ತು ಸಿ ವರ್ಗದ ದೇವಾಲಯಗಳಲ್ಲಿ ಮದುವೆ ನಡೆಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಬೇಕು. ವಧು-ವರರು ನೀಡುವ ದಾಖಲೆಗಳು ನಕಲಿಯಾಗಿದ್ದರೆ ಅಥವಾ ಭವಿಷ್ಯದಲ್ಲಿ ಅವರು ವಿಚ್ಛೇದನ ಪಡೆದರೆ, ಅದಕ್ಕೆ ಮದುವೆ ಮಾಡಿಸಿದ ಅರ್ಚಕರು ಹೊಣೆಯಲ್ಲ ಎಂಬ ರಕ್ಷಣೆ ನೀಡಬೇಕು. ಮದುವೆಗೆ ಮುನ್ನ ವಧು-ವರರ ದಾಖಲೆಗಳನ್ನು ವಕೀಲರು ಅಥವಾ ನೋಟರಿ ಮೂಲಕ ದೃಢೀಕರಿಸಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು. ವಿವಾಹ ನಡೆಸಲು ಕನಿಷ್ಠ ಮೂಲಸೌಲಭ್ಯವಿರುವ ದೇವಾಲಯಗಳನ್ನು ಗುರುತಿಸಿ ಪಟ್ಟಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ದೇವಸ್ಥಾನಗಳು ಕೇವಲ ಪೂಜಾ ಕೇಂದ್ರಗಳಲ್ಲ, ಅವು ಸಮಾಜದ ಸಾಂಸ್ಕೃತಿಕ ಕೇಂದ್ರಗಳು. ಬಡವರ ಪಾಲಿಗೆ ದೇವಸ್ಥಾನದ ಮದುವೆ ಆರ್ಥಿಕ ಹೊರೆ ತಗ್ಗಿಸುವ ಮಾರ್ಗವಾಗಿದೆ. ಅರ್ಚಕರಿಗೆ ಕಾನೂನಿನ ರಕ್ಷಣೆ ನೀಡಿ, ದೇವಸ್ಥಾನಗಳಲ್ಲಿ ಮತ್ತೆ ಮಂಗಳವಾದ್ಯ ಮೊಳಗುವಂತೆ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಒಕ್ಕೂಟ ಮನವಿ ಮಾಡಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಹಲಸೂರಿನ ಸೋಮೇಶ್ವರ ದೇವಾಲಯದ ಮುಖ್ಯ ಆಡಳಿತಾಧಿಕಾರಿ ವಿ. ಗೋವಿಂದರಾಜು, ದೇವಾಲಯಗಳ ಅರ್ಚಕರ ಒಕ್ಕೂಟ ಮನವಿ ಮಾಡಿದೆ. ಆದರೆ, ಮೊದಲು ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದ ನಂತರ ದೇವಾಲಯಕ್ಕೆ ಬಂದು ಕೇವಲ ಹಾರ ಬದಲಿಸಲು ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ. ಅದನ್ನು ಹೊರತುಪಡಿಸಿ ಮದುವೆ ಮಾಡಿಸುವುದನ್ನು ನಿಲ್ಲಿಸಲಾಗಿದೆ ಎಂದರು.

