Bhatkal to Pakistan: Part 2|ಪಾಕಿಸ್ತಾನ-ಭಟ್ಕಳದ ಮಧ್ಯೆ ವೈವಾಹಿಕ ನಂಟು; ಇತಿಹಾಸವೇನು? ಎದುರಾದ ಆತಂಕವೇನು?
x

ಎಐ ಚಿತ್ರ

Bhatkal to Pakistan: Part 2|ಪಾಕಿಸ್ತಾನ-ಭಟ್ಕಳದ ಮಧ್ಯೆ ವೈವಾಹಿಕ ನಂಟು; ಇತಿಹಾಸವೇನು? ಎದುರಾದ ಆತಂಕವೇನು?

ಸುಂದರ‌ ಕಡಲ ತೀರ ಹಾಗೂ ಹಸಿರಿನ ಪಶ್ಚಿಮ ಘಟ್ಟಗಳ ನಡುವೆ ಇರುವ ಭಟ್ಕಳದಲ್ಲಿ ಪಾಕಿಸ್ತಾನದೊಂದಿಗೆ ವೈವಾಹಿಕ ಸಂಬಂಧ ಹೊಂದಿರುವ ಕುಟುಂಬಗಳಲ್ಲಿ ಕೇಂದ್ರ ಸರ್ಕಾರದ ರಾಜತಾಂತ್ರಿಕ ನಿರ್ಬಂಧ ಆತಂಕ ಮೂಡಿಸಿದೆ.


ಪಾಕಿಸ್ತಾನ ಹಾಗೂ ಭಟ್ಕಳ ನಡುವಿನ ವೈವಾಹಿಕ ಸಂಬಂಧಕ್ಕೆ ಶತಮಾನಗಳ ಇತಿಹಾಸವಿದೆ. ವಿಜಯನಗರ ಅರಸರ ಕಾಲದಲ್ಲಿ ಕುದುರೆ ವ್ಯಾಪಾರಕ್ಕಾಗಿ ಅರಬ್‌ ರಾಷ್ಟ್ರದಿಂದ ಬಂದ ಮುಸ್ಲಿಮರು ಭಟ್ಕಳದಲ್ಲಿ ನೆಲೆ ನಿಂತು ಇಲ್ಲಿಯವರೇ ಆಗಿದ್ದಾರೆ.

ಪಾಕಿಸ್ತಾನ ಹಾಗೂ ಭಟ್ಕಳ ನಡುವಿನ ವೈವಾಹಿಕ ನಂಟು ಚರ್ಚೆಗೆ ಬಂದ ನಂತರ ಕಡಲ ತೀರದ ಭಟ್ಕಳದಲ್ಲಿರುವ ಪಾಕಿಸ್ತಾನಿ ಮಹಿಳೆಯರ ಪಾಡೇನು? ಪಹಲ್ಗಾಮ್‌ ದಾಳಿಯ ನಂತರ ಅವರಿಗೆ ಎದುರಾಗಿರುವ ಆತಂಕವೇನು? ತನಿಖಾ ಸಂಸ್ಥೆಗಳು ಹಾಗೂ ಸ್ಥಳೀಯರು ಏನು ಹೇಳುತ್ತಾರೆ ಎಂಬ ಬಗ್ಗೆ ʼದ ಫೆಡರಲ್‌ ಕರ್ನಾಟಕʼದಿಂದ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ಪಾಕ್‌ ಜತೆ ಭಟ್ಕಳದ ನಂಟು ಹೇಗೆ?

ಭಟ್ಕಳದಲ್ಲಿರುವ ಮುಸ್ಲಿಮರ ಸಂಬಂಧಿಗಳು ಪಾಕಿಸ್ತಾನದಲ್ಲಿ ವ್ಯಾಪಾರ, ವ್ಯವಹಾರ ನಡೆಸುತ್ತಿದ್ದಾರೆ. ಆ ಹಿನ್ನಲೆಯಲ್ಲಿ ಅಲ್ಲಿರುವ ಸಂಬಂಧಿಕರ‌ ಕುಟುಂಬದ ನಡುವೆ ಮೊದಲಿನಿಂದಲೂ ಮದುವೆ ಸಂಬಂಧ ಮುಂದುವರಿಸಿಕೊಂಡು ಬರಲಾಗಿದೆ. ಪಾಕಿಸ್ತಾನದಿಂದ ಮದುವೆಯಾಗಿ ಬಂದ ಯುವತಿಯರಿಗೆ ಭಾರತದ ಪೌರತ್ವ ಸಿಗದ ಕಾರಣ ಪಾಕಿಸ್ತಾನದ ವೀಸಾವನ್ನೇ ಎರಡು ವರ್ಷಗಳಿಗೊಮ್ಮೆ ನವೀಕರಣ ಮಾಡಿಸಿಕೊಂಡು ಸಂಸಾರ ಸಾಗಿಸುತ್ತಿದ್ದಾರೆ ಎಂದು ಪಾಕಿಸ್ತಾನ ಯುವತಿಯನ್ನು ವಿವಾಹವಾಗಿರುವ ಭಟ್ಕಳದ ಉದ್ಯಮಿಯ ಪುತ್ರ ಸಲೀಂ(ಹೆಸರು ಬದಲಿಸಲಾಗಿದೆ) ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಭಟ್ಕಳ ನವಾಯತರು ಯಾರು?

ಭಟ್ಕಳದಲ್ಲಿರುವ ಮುಸ್ಲಿಮರಿಗೆ ʼನವಾಯತರುʼ ಎಂದು ಕರೆಯಲಾಗುತ್ತದೆ. ಇವರು ಮೂಲತಃ ಅರಬ್ ದೇಶದವರು . ವಿಜಯನಗರ ಶ್ರೀ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಭಟ್ಕಳ ಬಂದರು ಮೂಲಕ ಕುದುರೆ ವ್ಯಾಪಾರಕ್ಕಾಗಿ ಬಂದು ಇಲ್ಲಿಯೇ ನೆಲೆವೂರಿದ್ದರು. ಬಳಿಕ ಸ್ಥಳೀಯ ಸಮುದಾಯವೊಂದರ ಯುವತಿಯರನ್ನು ಮದುವೆಯಾಗಿ ಸಂಸಾರ ಕಟ್ಟಿಕೊಂಡರು.

ವ್ಯಾಪಾರ, ಉದ್ಯಮಗಳಲ್ಲಿ ತೊಡಗಿಸಿಕೊಂಡ ನವಾಯತ ಮುಸ್ಲಿಮರು ಕೊಲ್ಲಿ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ಆ ದೇಶಗಳಲ್ಲೂ ವ್ಯವಹಾರ ಹೊಂದಿದ್ದಾರೆ. ಸುಂದರ‌ ಕಡಲತೀರ ಹಾಗೂ ಹಸಿರಿನ ಪಶ್ಚಿಮ ಘಟ್ಟಗಳ ನಡುವಿನ ಭಟ್ಕಳದಲ್ಲಿ ಸುಂದರ‌ ಮನೆಗಳನ್ನು ನಿರ್ಮಿಸಿಕೊಂಡು ಐಶಾರಾಮಿ ಜೀವನ ಸಾಗಿಸುತ್ತಿದ್ದಾರೆ. ಬಹುಸಂಖ್ಯಾತರಾಗಿರುವ‌‌ ನವಾಯತ ಮುಸ್ಲಿಮರು ಎಂಜಿನಿಯರಿಂಗ್ ಕಾಲೇಜು ಪದವಿ ಕಾಲೇಜು ಸಹಿತ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ.

ಭಟ್ಕಳದ ಮುಸ್ಲಿಂ ಸಮುದಾಯದ ಜಿ.ಎಸ್.ಶಂಸುದ್ದೀನ್ ಅವರು ಮುಖ್ಯಮಂತ್ರಿ ಬಿ.ಡಿ.ಜತ್ತಿ ಹಾಗೂ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರನ್ನು ಹೊರತುಪಡಿಸಿದರೆ ಎಸ್.ಎಂ.ಯಾಹ್ಯಾ ಭಟ್ಕಳ ಅವರು ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಭಟ್ಕಳ ನವಾಯತ ‌ಮಸ್ಲಿಮರು ಸಕ್ರಿಯ ರಾಜಕಾರಣದಿಂದ ದೂರ ಸರಿದರು.

ಭಟ್ಕಳಕ್ಕೆ ವಿವಾಹವಾಗಿ ಬಂದ ಪಾಕಿಸ್ತಾನಿ ಯುವತಿಯರು

ಭಟ್ಕಳದಲ್ಲಿರುವ ಸಿರಿವಂತ ನವಾಯತ ಯುವಕರನ್ನು ಮದುವೆಯಾಗಲು ಪಾಕಿಸ್ತಾನದ ಸುಂದರಿಯರು ತುದಿಗಾಲ ಮೇಲೆ ನಿಂತಿರುತ್ತಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಮಧುರವಾಗಿದ್ದರೆ, ಪಾಕಿಸ್ತಾನದ ಯುವತಿಯರೊಂದಿಗೆ ಭಟ್ಕಳದ ಯುವಕರ ವಿವಾಹ ಸಂಬಂಧಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದವು. ಆದರೆ ಸಂಬಂಧ ಹಳಸಿರುವುದರಿಂದ ಪಾಕಿಸ್ತಾನದಲ್ಲಿರುವ‌ ಸಂಬಂಧಿಕರ ನಡುವೆ ಮಾತ್ರವೇ ಮದುವೆಗಳು ನಡೆಯುತ್ತಿವೆ. ಇಂತಹ ಮದುವೆಗಳಿಗೆ ನೂರಾರು ಕಾನೂನು ತೊಡಕುಗಳನ್ನು ಎದುರಿಸಬೇಕಾಗಿದೆ.

ಗುಪ್ತಚರ ಇಲಾಖೆಯ ನಿರಂತರ ಕಣ್ಗಾವಲು

ಪಾಕಿಸ್ತಾನದಿಂದ ಮದುವೆಯಾಗಿ ಬಂದಿರುವ 15 ಮಂದಿ ಯುವತಿಯರು ಭಟ್ಕಳದಲ್ಲಿ ವಾಸವಾಗಿದ್ದಾರೆ. ಅವರು ಮದುವೆಯಾಗಿ ಬಂದ ಬಳಿಕ ಅವರ ಪ್ರತಿ ಚಲನವಲನ ಹಾಗೂ ದೂರವಾಣಿ ಕರೆಗಳನ್ನು ಗುಪ್ತಚರ ವಿಭಾಗದ ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ಭಟ್ಕಳದಿಂದ ಬೇರೆ ಊರು, ಜಿಲ್ಲೆಗಳಿಗೂ ಹೋಗುವಾಗಲೂ ಗುಪ್ತಚರ ವಿಭಾಗಕ್ಕೆ ಮಾಹಿತಿ ನೀಡಬೇಕಾಗುತ್ತದೆ ಎಂದು‌ ಪಾಕಿಸ್ತಾನಿ ಯುವತಿಯನ್ನು ಮದುವೆಯಾಗಿ 15 ವರ್ಷಗಳಿಂದ ಸಂಸಾರ ನಡೆಸುತ್ತಿರುವ ಸಲೀಂ ‌ಹೇಳುತ್ತಾರೆ.

ಕಾರವಾರ ಜಿಲ್ಲೆಯಲ್ಲಿ ಪಾಕಿಸ್ತಾನದ 15 ಮಂದಿಯಿದ್ದು ಅವರ ಪೈಕಿ 10 ಮಹಿಳೆಯರು ಭಟ್ಕಳದಲ್ಲಿ ಮದುವೆಯಾಗಿದ್ದಾರೆ. ಮೂವರು ಮಕ್ಕಳಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಭಟ್ಕಳದಲ್ಲಿ ನೆಲೆಸಿದ್ದು, ಇವರೆಗೂ ಯಾರಿಗೂ ಭಾರತದ ಪೌರತ್ವ ಸಿಕ್ಕಿಲ್ಲ. ಅಷ್ಟೇ ಅಲ್ಲದೆ ಅವರಿಗೆ ಹುಟ್ಟಿದ ಮಕ್ಕಳಿಗೂ ಭಾರತದ ಪೌರತ್ವ ಸಿಕ್ಕಿಲ್ಲ 15 ಮಂದಿ ಲಾಂಗ್ ಟರ್ಮ್ ವಿಸಾ (ಎಲ್ ಟಿ ವಿ) ಪಡೆದವರಾಗಿರುವುದರಿಂದ ಸದ್ಯಕ್ಕೆ ಯಾರನ್ನು ಗಡಿಪಾರು ಮಾಡುವುದಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಂ.ನಾರಾಯಣ ಅವರು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಪಾಕಿಸ್ತಾನ ಯುವಕನೊಂದಿಗೆ ಭಟ್ಕಳ ಯುವತಿ ವಿವಾಹ

ಇನ್ನೊಂದು‌ ಪ್ರತ್ಯೇಕ ಪ್ರಕರಣದಲ್ಲಿ ಹೊನ್ನಾವರ ತಾಲ್ಲೂಕಿನ ವಲ್ಕಿಯ ಮುಸ್ಲಿಂ ಯುವತಿ ಪಾಕಿಸ್ತಾನದ ಯುವಕನ ಮದುವೆಯಾಗಿ ಪಾಕಿಸ್ತಾನದಲ್ಲಿ ಸಂಸಾರ ಸಾಗಿಸುತ್ತಿದ್ದಾರೆ.

ಮುಸ್ಲಿಂ ಗೆಳೆಯರೊಬ್ಬರು ಪಾಕಿಸ್ತಾನದ ಯುವತಿಯನ್ನು ಮದುವೆಯಾಗಿ ಕಳೆದ ಹಲವಾರು ವರ್ಷಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆ ಕುಟುಂಬ ಯಾವುದೇ ರೀತಿಯಲ್ಲಿ ಜಾತಿ ಧರ್ಮದ ಗಲಾಟೆಗೆ ಹೋಗದೆ ತಮ್ಮ ವ್ಯಾಪಾರ ಉದ್ಯಮ ನೋಡಿಕೊಂಡು ಎಲ್ಲ ಸಮುದಾಯದವರೊಂದಿಗೆ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಆ ಮುಸ್ಲಿಂ ಗೆಳೆಯ ಹಿಂದೂ ಸಮುದಾಯದವರಿಗೆ ದೇವಸ್ಥಾನ ನಿರ್ಮಿಸಲು ತನ್ನ ಸ್ವಂತ ಜಮೀನನ್ನು ಕಡಿಮೆ ಬೆಲೆಗೆ ನೀಡಿದ್ದಾರೆ ಎಂದು ಸ್ಥಳೀಯ ನಿವಾಸಿ ಅಣ್ಣಪ್ಪ ನಾಯ್ಕ್ ಹೇಳುತ್ತಾರೆ.

ಪಾಕಿಸ್ತಾನ ದಿಂದ ಮದುವೆಯಾಗಿ ಬಂದವರಿಂದ ಭಟ್ಕಳದ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಅವರು ತಮ್ಮ ಪಾಡಿಗೆ ಶಾಂತಿಯುತವಾಗಿ ಜೀವನ ಸಾಗಿಸಿಕೊಂಡು‌ ಹೋಗುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಪಾಕಿಸ್ತಾನಿಯರಿಗೆ ಸರ್ಕಾರದ ಯಾವುದೇ ಸೌಲಭ್ಯವಿಲ್ಲ

ಮಹಿಳಾ ಮತ್ತು ಮಕ್ಕಳ ‌ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಅಂಗನವಾಡಿಗಳ ಮೇಲ್ವಿಚಾರಕಿ ಹೇಳುವ ಪ್ರಕಾರ ಪಾಕಿಸ್ತಾನದಿಂದ ಭಟ್ಕಳಕ್ಕೆ ಮದುವೆಯಾಗಿ ಬಂದವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ. ಹೇರಿಗೆಯಾದಗ ಬಾಣಂತಿಯರಿಗೆ ನೀಡುವ ಮಾತೃತ್ವ ಯೋಜನೆಯ ಲಾಭ ಸಹಿತ ಯಾವ ಸೌಲಭ್ಯಗಳನ್ನು ಅವರಿಗೆ ನೀಡುವುದಿಲ್ಲ. ಈ ಸಂಬಂಧ ಗುಪ್ತಚರ ವಿಭಾಗದವರು ಆಗಾಗ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿ ಮಾಹಿತಿ ಪಡೆಯುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.

ʼಒಂದು ವೇಳೆ ದೀರ್ಘಕಾಲದ ವೀಸಾ ಹೊಂದಿದವರು ಸಹಿತ ಎಲ್ಲಾ ಪಾಕಿಸ್ತಾನಿ ನಾಗರಿಕರು ವಾಪಸ್ ಹೋಗಬೇಕು ಎಂದು ಆದೇಶ ಮಾಡಿದರೆ ಮದುವೆಯಾಗಿ ಭಟ್ಕಳದಲ್ಲಿ ನೆಲೆಸಿದ ಪಾಕಿಸ್ತಾನದ ನಾಗರಿಕರು ಹಾಗೂ ಅವರ ಮಕ್ಕಳು ದೇಶ ತೊರೆಯಬೇಕಾಗುತ್ತದೆʼ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಂ.ನಾರಾಯಣ ತಿಳಿಸಿದ್ದಾರೆ.

ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್‌ ಕಳುಹಿಸಬೇಕೆಂಬ ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೊದಲಿಗೆ ಭಟ್ಕಳದಲ್ಲಿ ನೆಲೆಸಿರುವ ಪಾಕಿಸ್ತಾನಿ ಮಹಿಳೆಯರಿಗೆ ಆತಂಕ ತಂದಿತ್ತು. ಮದುವೆ ಆಗಿರುವವರು ಹಾಗೂ ದೀರ್ಘಾವಧಿ ವೀಸಾದಡಿ ನೆಲೆಸಿರುವವರಿಗೆ ವಿನಾಯ್ತಿ ಇದೆ ಎಂದು ಕರ್ನಾಟಕ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ ಬಳಿಕ ಆತಂಕ ದೂರವಾಗಿದೆ ಎಂದು ಪಾಕಿಸ್ತಾನ ಯುವತಿಯನ್ನು ಮದುವೆಯಾಗಿ ಬದುಕು ಸಾಗಿಸುತ್ತಿರುವ ನವಾಯತ ಕುಟುಂಬದ ಸದಸ್ಯರೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

Read More
Next Story