Pahalgam Terror Attack | ಕಾಶ್ಮೀರ ನೋಡುವಾಸೆಯೇ ಮಂಜುನಾಥ್​ ಜೀವಕ್ಕೆ ಎರವಾಯ್ತು
x

Pahalgam Terror Attack | ಕಾಶ್ಮೀರ ನೋಡುವಾಸೆಯೇ ಮಂಜುನಾಥ್​ ಜೀವಕ್ಕೆ ಎರವಾಯ್ತು

ಎರಡು ದಿನಗಳ ಕಾಲ ಸಂತೋಷದಿಂದ ಪ್ರವಾಸ ಎಂಜಾಯ್‌ ಮಾಡಿದ್ದ ಕುಟುಂಬಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆಯುತ್ತದೆ ಎಂಬ ಅರಿವಿರಲಿಲ್ಲ.


ಒಮ್ಮೆಯಾದರೂ ಕಾಶ್ಮೀರ ಪ್ರವಾಸ ಮಾಡಲೇ ಬೇಕೆಂಬ ಉತ್ಕಟ ಆಸೆಯೇ ಮಂಜುನಾಥ್‌ ರಾವ್‌ ಪ್ರಾಣಕ್ಕೆ ಎರವಾಯಿತು ಎಂಬ ಸಂಕಟ ಅವರ ಕುಟುಂಬದಲ್ಲಿದೆ.

ಮಗನ ಪಿಯುಸಿ ಫಲಿತಾಶ ಉತ್ತಮವಾಗಿ ಬಂದಿದ್ದು, ಇದೇ ನೆವದಲ್ಲಿ ಒಂದು ಪ್ರವಾಸ ಮಾಡೋಣ ಎಂದು ನಿರ್ಧರಿಸಿದ್ದ ಮಂಜುನಾಥ್‌ ಕುಟುಂಬ ಮೊದಲು ಆಯ್ಕೆ ಮಾಡಿದ್ದು ರಾಜಸ್ಥಾನ. ಆದರೆ ಮಂಜುನಾಥ್‌ ಅವರು ಒಮ್ಮೆ ಯಾದರೂ ಕಾಶ್ಮೀರವನ್ನು ನೋಡಬೇಕೆಂಬ ತಮ್ಮ ಮನದಿಂಗಿತ ವ್ಯಕ್ತಪಡಿಸುತ್ತಾರೆ. ಮಂಜುನಾಥ್‌ ತಾಯಿ ಕೂಡಾ ಕಾಶ್ಮೀರ ಪ್ರವಾಸ ಬೇಡ ಎಂಬ ಸಲಹೆ ನೀಡಿದ್ದರಂತೆ. ಆದರೆ ಕಾಶ್ಮೀರ ನೋಡುವಾಸೆಯಿಂದ ಅವರೆಲ್ಲರ ಸಲಹೆಯನ್ನು ಪ್ರೀತಿಯ ನಿರಾಕರಿಸುವಂತೆ ಮಾಡಿತು.

ಎರಡು ದಿನಗಳ ಕಾಲ ಸಂತೋಷದಿಂದ ಪ್ರವಾಸ ಎಂಜಾಯ್‌ ಮಾಡಿದ್ದ ಕುಟುಂಬಕ್ಕೆ ಪಹಲ್ಗಾಮ್‌ನಲ್ಲಿ ರಕ್ಕಸ ದಾಳಿ ನಡೆಯುತ್ತದೆ ಎಂಬ ಅರಿವಿರಲಿಲ್ಲ. ಹುಲ್ಲುಗಾವಲಿನಲ್ಲಿ ಖುಷಿ ಪಡುತ್ತಿದ್ದ ಮಂಜುನಾಥ್ ಅವರನ್ನು ಉಗ್ರರು ಪತ್ನಿ ಮತ್ತು ಮಗನ ಮುಂದೆಯೇ ಗುಂಡಿಕ್ಕಿ ಕೊಂದಿದ್ದರು.

ಭಯೋತ್ಪಾದಕರ ದಾಳಿಗೆ ಬಲಿಯಾದ ಮಂಜುನಾಥ್‌ ರಾವ್‌ ಅವರ ಶಿವಮೊಗ್ಗದ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಬುಧವಾರ ಭೇಟಿ ನೀಡಿದ್ದರು. ಈ ಸಂದರ್ಭ ಮಾತನಾಡಿ, ಈ ದುರಂತ ನೋವು ತಂದಿದೆ. ಭಯೋತ್ಪಾದಕ ಕೃತ್ಯ ಖಂಡಿಸುವೆ. ಮೃತರ ಪತ್ನಿ ಪಲ್ಲವಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಸರ್ಕಾರದ ಕಡೆಯಿಂದ ಕಾಶ್ಮೀರಕ್ಕೆ ತೆರಳಿರುವ ಸಚಿವ ಸಂತೋಷ್‌ ಲಾಡ್‌ ಅವರೊಂದಿಗೂ ಮಾತನಾಡಿದ್ದೇನೆ. ಕುಟುಂಬದೊಂದಿಗೆ ನಾವು ಇರುತ್ತೇವೆ. ಅವರ ಪಾರ್ಥೀವ ಶರೀರವನ್ನು ಆದಷ್ಟು ಬೇಗ ಶಿವಮೊಗ್ಗಕ್ಕೆ ತರಲು ಪ್ರಯತ್ನ ಮಾಡಲಾಗುವುದು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಮಂಜುನಾಥ್‌ ತಂದೆಯವರು ನನಗೆ ಪರಿಚಿತರಾಗಿದ್ದರು. ಅವರ ಕುಟುಂಬದೊಂದಿಗೆ ನಾವಿರುತ್ತೇವೆ. ಕೇಂದ್ರ ಸರಕಾರ ಭದ್ರತೆ ವಿಚಾರದಲ್ಲಿ ಎಡವಿದೆ. ಭಯೋತ್ಪಾದಕರ ಆತಂಕ ಇರುವ ಕಡೆ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಟ್ಟಿರುವುದೇ ತಪ್ಪು. ಭಯೋತ್ಪಾದಕರ ರಾಕ್ಷಸೀ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಬೆಂಗಳೂರಿಗೆ ತೆರಳಿದ ಕುಟುಂಬಸ್ಥರು

ಮಂಜುನಾಥ ಅವರ ಮೃತ ದೇಹದೊಂದಿಗೆ ಪತ್ನಿ ಪಲ್ಲವಿ ಹಾಗೂ ಪುತ್ರನನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ. ಕಾಶ್ಮೀರದಿಂದ ನವದೆಹಲಿ ಬಂದು ಅಲ್ಲಿಂದ ಮುಂಬಯಿ ಮೂಲಕ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೃತದೇಹ ತರುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. ಈ ನಡುವೆ ಜಿಲ್ಲಾಡಳಿತವು ವಿಶೇಷ ಆಂಬ್ಯುಲೆನ್ಸ್‌ ಮಾಡಿ ಮಂಜುನಾಥ್‌ ಕುಟುಂಬದ ಆಪ್ತರನ್ನು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿದೆ. ಮೃತದೇಹ ಬೆಂಗಳೂರಿಗೆ ಬರುತ್ತಿದ್ದಂತೆ ಅಲ್ಲಿಂದ ಶಿವಮೊಗ್ಗಕ್ಕೆ ರಸ್ತೆ ಮಾರ್ಗವಾಗಿ ಕರೆತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪಲ್ಲವಿಯವರ ಧೈರ್ಯಕ್ಕೆ ಪ್ರಶಂಸೆ

ಸುಮುಧುರ ಸಂಸಾರದಲ್ಲಿದ್ದ ಪಲ್ಲವಿ ಅವರಿಗೆ ತಮ್ಮ ಕಣ್ಣೆದುರೇ ಭಯೋತ್ಪಾದಕರು ಗಂಡನನ್ನು ಹತ್ಯೆ ಮಾಡಿದ್ದಾರೆ. ಮಗನೊಂದಿಗೆ ಪರಿಸ್ಥಿತಿಯನ್ನು ಎದುರಿಸಿದ ಪಲ್ಲವಿ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಒಡಲಲ್ಲಿ ಕಡಲಿನಷ್ಟು ದುಃಖ ಇಟ್ಟುಕೊಂಡ ಪಲ್ಲವಿ, ಗಂಡನನ್ನು ಕೊಂದಿದ್ದೀಯ ನಮ್ಮನ್ನೂ ಕೊಂದು ಬಿಡು ಎಂದು ಭಯೋತ್ಪಾದಕನ ಬಳಿ ವಾಗ್ವಾದ ಮಾಡಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಪಲ್ಲವಿ ಅವರ ಧೈರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಸಂಗಾತಿಯನ್ನು ಕಳೆದುಕೊಂಡು ಆ ಹೆಣ್ಣು ಮಗಳು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮೆಚ್ಚುವಂತದ್ದು ಎಂದು ಸಾಮಾಜಿಕ ಕಾರ್ಯಕರ್ತೆ ಕವಿತಾ ಅಭಿಪ್ರಾಯಪಟ್ಟರು.

ಭಯೋತ್ಪಾದಕರ ಕೃತ್ಯಕ್ಕೆ ತೀವ್ರ ಖಂಡನೆ

ಮಂಜುನಾಥ್‌ ಅವರ ಹತ್ಯೆಯ ಬಳಿಕ ಶಿವಮೊಗ್ಗದಲ್ಲಿ ಭಯೋತ್ಪಾದಕರ ಕೃತ್ಯವನ್ನು ಎಲ್ಲರೂ ತೀವ್ರವಾಗಿ ಖಂಡಿಸಿದ್ದಾರೆ. ಜಾಮಿಯಾ ಮಸೀದಿ ಸಮಿತಿ ಹಾಗೂ ಮುಸ್ಲಿಂ ವಕೀಲರ ಸಂಘದ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ ಭಯೋತ್ಪಾದನೆಯನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಕೀಲರ ಸಂಘ, ಸಾರ್ವಜನಿಕ ಸಂಘಟನೆಗಳು ಘಟನೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

ಮಂಜುನಾಥ್‌ರಾವ್‌ ಮೃತದೇಹದ ಶಿವಮೊಗ್ಗಕ್ಕೆ ಬಂದ ಮೇಲೆ ಮೆರವಣಿಗೆ ನಡೆಸುವ ಸಾಧ್ಯತೆಯಿದೆ. ಈ ಬಗ್ಗೆ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಶಿವಮೊಗ್ಗ ಶಾಸಕ ಎಸ್.ಎನ್.‌ ಚೆನ್ನಬಸಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Read More
Next Story