Mango purchase | Rs. 101 crore released from the state for price difference payment
x
ಹಣ ಬಿಡುಗಡೆ ಮಾಡುವಂತೆ ಸರ್ಕಾರ ಹೊರಡಿಸಿರುವ ಆದೇಶ

ಮಾವು ಖರೀದಿ| ಬೆಲೆ ವ್ಯತ್ಯಾಸ ಪಾವತಿಗೆ ರಾಜ್ಯದಿಂದ 101ಕೋಟಿ ರೂ. ಬಿಡುಗಡೆ

ರಾಜ್ಯದಲ್ಲಿ ಮಾವು ಬೆಲೆ ಕುಸಿತವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸ ಪಾವತಿ ಮಾಡಬೇಕೆಂದು ಕೇಂದ್ರ ಕೃಷಿ ಸಚಿವರಿಗೆ ರಾಜ್ಯ ಸರ್ಕಾರ ಮನವಿ ಮಾಡಿತ್ತು.


ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸ ಪಾವತಿಗೆ 101 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.

ಆವರ್ತ ನಿಧಿಯಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಣ ಬಿಡುಗಡೆ ಮಾಡುವಂತೆ ರಾಜ್ಯ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದು, ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವಂತೆ ಶೇ.50 ರಷ್ಟು ಮೊತ್ತವನ್ನು ಮರುಪಾವತಿ ಪಡೆಯಲು ಕ್ರಮ ವಹಿಸುವಂತೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಾವು ಬೆಲೆ ಕುಸಿತವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವರಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸ ಪಾವತಿ ಮಾಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರೆಡು ಶೇ. 50 ರ ಅನುಪಾತದಲ್ಲಿ ಯೋಜನೆ ಅನುಷ್ಠಾನಕ್ಕೆ ಇತ್ತೀಚೆಗೆ ಆದೇಶ ಹೊರಡಿಸಿದ್ದವು.

ರಾಜ್ಯದಲ್ಲಿ 10 ಲಕ್ಷ ಟನ್‌ ಮಾವು ಉತ್ಪಾದನೆ

ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲೊಂದಾಗಿದ್ದು 2025 -26ನೇ ಋತುವಿನಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರಮುಖ ಮಾವು ಬೆಳೆಯುವ ಪ್ರದೇಶಗಳಾಗಿವೆ. ಈ ಬಾರಿ ರಾಜ್ಯದಲ್ಲಿ ಅಂದಾಜು 8- 10 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ.

2025 ಮೇ ತಿಂಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿಗೆ ಕ್ವಿಂಟಾಲ್‌ಗೆ 1,200 ರಿಂದ 2,500 ರೂ. ವರೆಗೆ ಇತ್ತು. ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ 450 - 550 ರೂ. ಗೆ ಕುಸಿದಿತ್ತು ಎಂದು ತಿಳಿಸಿದ್ದಾರೆ.

2.5 ಲಕ್ಷ ಟನ್‌ ಖರೀದಿಗೆ ಒಪ್ಪಿಗೆ

ಕರ್ನಾಟಕ ಕೃಷಿ ಬೆಲೆ ಆಯೋಗವು ಮಾವಿನ A1 + FL ಕೃಷಿ ವೆಚ್ಚವನ್ನು ಕ್ವಿಂಟಲ್‌ಗೆ 3,460 ರೂ. ಮತ್ತು C-3 ವೆಚ್ಚಕ್ಕೆ 5,466 ರೂ. ಎಂದು ಶಿಫಾರಸು ಮಾಡಿದೆ. ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿಯನ್ನು ಪಿಡಿಪಿಎಸ್‌ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದ್ದು, 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ರಸ್ತೆಗೆ ಮಾವು ಸುರಿದು ಪ್ರತಿಭಟನೆ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾವಿಗೆ ಬೆಂಬಲ ಬೆಲೆ ನೀಡುವ ಮೊದಲು ಕೋಲಾರ ಹಾಗೂ ಶ್ರೀನಿವಾಸಪುರದಲ್ಲಿ ಮಾವು ಬೆಳೆಗಾರರು ರಸ್ತೆಗೆ ಮಾವಿನ ಕಾಯಿ ಸುರಿದು ಪ್ರತಿಭಟನೆ ನಡೆಸಿದ್ದರು. ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರದಲ್ಲಿ ಬಂದ್‌ ಆಚರಿಸಿ ಸರ್ಕಾರ ವಿರುದ್ದ ಘೋಷಣೆ ಕೂಗುತ್ತಾ ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದ್ದರು. ಕೋಲಾರದ ಜೆಡಿಎಸ್‌ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಿದ್ದರು. ಈ ಕುರಿತಂತೆ ಕೇಂದ್ರ ಸಚಿವ ಹೆಚ್‌. ಡಿ. ಕುಮಾರಸ್ವಾಮಿ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಮಾವು ಬೆಳೆಗಾರರ ನೆರವಿಗೆ ಶೀಘ್ರ ಧಾವಿಸುವಂತೆ ಮನವಿ ಮಾಡಿದ್ದರು.

Read More
Next Story