Shrimati Shetty murder case| ಇಬ್ಬರಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ನಗರದಲ್ಲಿ 2019ರಲ್ಲಿ ನಡೆದ ಚಿಟ್ ಫಂಡ್ ಆಪರೇಟರ್ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಶ್ರೀಮತಿ ಶೆಟ್ಟಿ ಅವರ ಭೀಕರ ಹತ್ಯೆಗೆ ಸಂಬಂಧಿಸಿದಂತೆ ಜೋನಸ್ ಸ್ಯಾಮ್ಸನ್ (35) ಮತ್ತು ವಿಕ್ಟೋರಿಯಾ ಮಥಿಯಾಸ್ (47) ಅವರಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ)ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿನ ಆರೋಪಗಳ ಆಧಾರದ ಮೇಲೆ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಶಿಕ್ಷೆಯನ್ನು ಪ್ರಕಟಿಸಿದರು.
ಪ್ರಕರಣದ ವಿವರ: ಶ್ರೀಮತಿ ಶೆಟ್ಟಿ(42) ಮಂಗಳೂರಿನ ಅತ್ತಾವರ ನಿವಾಸಿಯಾಗಿದ್ದು, ಎಲೆಕ್ಟ್ರಾನಿಕ್ಸ್ ಅಂಗಡಿ ಹೊಂದಿದ್ದು, ಚಿಟ್ ಫಂಡ್ ವ್ಯವಹಾರ ನಿರ್ವಹಿಸುತ್ತಿದ್ದರು. ಜೋನಸ್ ಸ್ಯಾಮ್ಸನ್ ಚಿಟ್ ಫಂಡ್‌ನಲ್ಲಿ ಎರಡು ಸದಸ್ಯತ್ವ ಹೊಂದಿದ್ದು, ಸರಿಯಾಗಿ ಮಾಸಿಕ ಪಾವತಿ ಮಾಡುತ್ತಿ ರಲಿಲ್ಲ. ಶ್ರೀಮತಿ ಶೆಟ್ಟಿ ಅವರು ಮೇ 11, 2019 ರಂದು ಬೆಳಗ್ಗೆ 9:15 ರ ಸುಮಾರಿಗೆ ಹಣ ಪಡೆಯಲು ಜೋನಸ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಜೋನಸ್ ಮರದ ವಸ್ತುವಿನಿಂದ ಆಕೆಯ ತಲೆ ಮೇಲೆ ಹೊಡೆದರು. ಪ್ರಜ್ಞಾಹೀನ ಗೊಂಡ ಆಕೆಯನ್ನು ಪತ್ನಿ ವಿಕ್ಟೋರಿಯಾ ನೆರವಿನಿಂದ 29 ತುಂಡುಗಳಾಗಿ ಕತ್ತರಿಸಿದರು. ಶೆಟ್ಟಿ ಅವರ ಚಿನ್ನಾಭರಣ ದೋಚಿ, ಅವರ ವ್ಯಾನಿಟಿ ಬ್ಯಾಗ್ ಮತ್ತು ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳನ್ನು ಸುಟ್ಟು ಹಾಕಲಾಯಿತು. ಶವದ ತುಣುಕುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ರಾತ್ರಿ ವೇಳೆ ನಗರದ ವಿವಿಧೆಡೆ ಎಸೆಯಲಾಯಿತು.
ಮೂರು ದಿನಗಳ ನಂತರ ಕದ್ರಿಯ ಅಂಗಡಿಯೊಂದರ ಬಳಿ ದೇಹದ ಭಾಗ ಪತ್ತೆಯಾಗಿದ್ದು, ಅಪರಾಧ ಬೆಳಕಿಗೆ ಬಂದಿತು. ಅಂತಿಮವಾಗಿ ನಂದಿಗುಡ್ಡೆಯಲ್ಲಿ ಆಕೆಯ ದೇಹದ ಭಾಗಗಳು ಲಭ್ಯವಾದವು.
ಜೋನಸ್ ಸ್ಯಾಮ್ಸನ್ ಮತ್ತು ವಿಕ್ಟೋರಿಯಾ ಮಥಿಯಾಸ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರೂ. ದಂಡ, ದಂಡ ಪಾವತಿಸಲು ವಿಫಲವಾದರೆ, ಒಂದು ವರ್ಷ ಹೆಚ್ಚುವರಿ ಸರಳ ಜೈಲು ಶಿಕ್ಷೆ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 201 (ಸಾಕ್ಷ್ಯದ ಕಣ್ಮರೆ) ಮತ್ತು ಸೆಕ್ಷನ್ 34 ರ ಅಡಿಯಲ್ಲಿ ಏಳು ವರ್ಷ ಸರಳ ಜೈಲು ಶಿಕ್ಷೆ ಮತ್ತು ತಲಾ 5,000 ರೂ. ದಂಡ, ಪಾವತಿಸಲು ಆಗದಿದ್ದಲ್ಲಿ ಹೆಚ್ಚುವರಿ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಐಪಿಸಿ ಸೆಕ್ಷನ್ 392 ಮತ್ತು 34 ರ ಅಡಿಯಲ್ಲಿ ಸುಲಿಗೆಗೆ ಐದು ವರ್ಷ ಸೆರೆವಾಸ ಮತ್ತು 5,000 ರೂ. ದಂಡ, ಪಾವತಿಸದಿದ್ದರೆ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಕದ್ದ ಸೊತ್ತುಗಳನ್ನು ಮರೆಮಾಚಲು ಸಹಕರಿಸಿದ ಮೂರನೇ ಆರೋಪಿ ರಾಜು ಎಂಬಾತನಿಗೆ ಆರೂವರೆ ತಿಂಗಳು ಸರಳ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಲಾಗಿದೆ.
ಶ್ರೀಮತಿ ಶೆಟ್ಟಿ ಅವರ ತಾಯಿಗೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ 75,000 ರೂ. ನೀಡಬೇಕೆಂದು ನ್ಯಾಯಾಲಯ ಹೇಳಿದೆ.
ವಿಚಾರಣೆ ವೇಳೆ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಅವರು 48 ಸಾಕ್ಷಿ ಮತ್ತು 141 ದಾಖಲೆಗಳನ್ನು ಪರಿಶೀಲಿಸಿದರು.