ಮಂಗಳೂರಿನಲ್ಲಿ ಖಾಸಗಿ ಬಸ್‌ಗಳಿಗೆ ಬಾಗಿಲು ಕಡ್ಡಾಯ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ
x

ಮಂಗಳೂರಿನಲ್ಲಿ ಖಾಸಗಿ ಬಸ್‌ಗಳಿಗೆ ಬಾಗಿಲು ಕಡ್ಡಾಯ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಮುಡಿಪು ತರಬೇತಿ ಕೇಂದ್ರದಲ್ಲಿ ಪ್ರಾಯೋಗಿಕ ತರಬೇತಿಗೆ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಇದನ್ನು ಪರಿಗಣಿಸಿ, ಅಗತ್ಯವಿರುವವರಿಗೆ ತರಬೇತಿ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು.


ನಗರದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಕಡ್ಡಾಯವಾಗಿ ಬಾಗಿಲುಗಳನ್ನು ಹೊಂದಿರಬೇಕು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ. ಬಾಗಿಲುಗಳಿಲ್ಲದ ಬಸ್‌ಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ನೀಡದಂತೆ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಶುಕ್ರವಾರ ಮುಡಿಪುವಿನಲ್ಲಿರುವ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ವೀಕ್ಷಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ್ ಅವರಿಗೆ ನಿರ್ದೇಶನ ನೀಡಿದರು. "ಬಾಗಿಲುಗಳಿಲ್ಲದೆ ರಸ್ತೆಗೆ ಇಳಿಯುವ ಬಸ್‌ಗಳಿಗೆ ಯಾವುದೇ ಕಾರಣಕ್ಕೂ ಎಫ್‌ಸಿ ನೀಡಬೇಡಿ," ಎಂದು ಅವರು ಹೇಳಿದರು.

ತರಬೇತಿ ಕೇಂದ್ರಕ್ಕೆ ಸೌಲಭ್ಯ

ಮುಡಿಪು ತರಬೇತಿ ಕೇಂದ್ರದಲ್ಲಿ ಪ್ರಾಯೋಗಿಕ ತರಬೇತಿಗೆ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಇದನ್ನು ಪರಿಗಣಿಸಿ, ಅಗತ್ಯವಿರುವವರಿಗೆ ತರಬೇತಿ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು. ತರಬೇತಿಗಾಗಿ ಕೆಎಸ್‌ಆರ್‌ಟಿಸಿಯಿಂದ ಒಂದು ಬಸ್ ಪಡೆಯಲಾಗುವುದು, ಆದರೆ ಟ್ರಕ್ ಖರೀದಿಗೆ ಆರ್ಥಿಕ ಇಲಾಖೆಯ ಅನುಮತಿ ಬೇಕಾಗುತ್ತದೆ ಎಂದು ಸಚಿವರು ವಿವರಿಸಿದರು.

ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ಹೆಚ್ಚುವರಿ ದರ ವಸೂಲಿಯನ್ನು ತಡೆಯಲು 2,300 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುವುದು ಎಂದು ಅವರು ತಿಳಿಸಿದರು. ಇತ್ತೀಚೆಗೆ ಗಣೇಶ ಹಬ್ಬದ ವೇಳೆ 1,200 ಬಸ್‌ಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.

ರಾಜ್ಯಕ್ಕೆ ಇ-ಬಸ್‌ಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ, ಟೆಂಡರ್ ಪ್ರಕ್ರಿಯೆಗೆ ಕನಿಷ್ಠ ಆರು ತಿಂಗಳು ಬೇಕಾಗಬಹುದು. ಬಸ್‌ಗಳು ಲಭ್ಯವಾದರೆ ಮಂಗಳೂರಿಗೂ ಹಂಚಲಾಗುವುದು ಎಂದು ಅವರು ಭರವಸೆ ನೀಡಿದರು.

ಕಟೀಲು ದೇವಸ್ಥಾನದ ವಿವಾದ

ಕಟೀಲು ದೇವಸ್ಥಾನದಲ್ಲಿ ಸೇವೆಗಳ ದರ ಹೆಚ್ಚಳದ ಆರೋಪದ ಕುರಿತು ಮಾತನಾಡಿದ ಮುಜರಾಯಿ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿ, "ಮುಜರಾಯಿ ದೇವಸ್ಥಾನಗಳ ಆಡಳಿತದಲ್ಲಿ ಸರ್ಕಾರ ಮೂಗು ತೂರಿಸಲು ಅಧಿಕಾರವಿಲ್ಲ. ಈ ವಿಚಾರದಲ್ಲಿ ಸುಖಾಸುಮ್ಮನೆ ಸರ್ಕಾರವನ್ನು ದೂರುತ್ತಾ ಬಿಜೆಪಿಯವರು ಗೊಂದಲ ಸೃಷ್ಟಿಸುತ್ತಿದ್ದಾರೆ," ಎಂದು ಆರೋಪಿಸಿದರು.

Read More
Next Story