
ಉದ್ಯಮಿಗಳಿಗೆ ಸಾಲದ ಆಮಿಷ ತೋರಿಸಿ 200 ಕೋಟಿ ರೂ. ವಂಚನೆ; ಮಂಗಳೂರಿನ 'ಮದ್ಯದ ದೊರೆ' ಅರೆಸ್ಟ್
ಮಂಗಳೂರಿನ ಜಪ್ಪಿನಮೊಗರು ಪ್ರದೇಶದಲ್ಲಿರುವ ತನ್ನ ಐಷಾರಾಮಿ ಬಂಗಲೆಗೆ ಹಲವು ಉದ್ಯಮಿಗಳನ್ನು ಕರೆದು ವ್ಯವಹಾರ ಮತ್ತು ಸಾಲ ನೀಡುವ ನೆಪದಲ್ಲಿ ನಂಬಿಸಿ ಈತ ಮೋಸ ಮಾಡುತ್ತಿದ್ದ.
ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ 200 ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚಿಸಿದ ಆರೋಪದಡಿ ಮಂಗಳೂರಿನ 'ಮದ್ಯದ ದೊರೆ' ಎಂದೇ ಪ್ರಸಿದ್ಧನಾದ ರೋಹನ್ ಸಲ್ಡಾನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಜಪ್ಪಿನಮೊಗರು ಪ್ರದೇಶದಲ್ಲಿರುವ ತನ್ನ ಐಷಾರಾಮಿ ಬಂಗಲೆಗೆ ಹಲವು ಉದ್ಯಮಿಗಳನ್ನು ಕರೆದು ವ್ಯವಹಾರ ಮತ್ತು ಸಾಲ ನೀಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ. ರೋಹನ್ ಸಲ್ಡಾನಾನ ಬಂಗಲೆ, ಜೀವನ ಶೈಲಿ, ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ತರಹೇವಾರಿ ಮದ್ಯಗಳನ್ನು ಕಂಡು ಉದ್ಯಮಿಗಳು ಯಾಮಾರಿದ್ದಾರೆ. 5 ರಿಂದ 100 ಕೋಟಿ ರೂ.ವರೆಗೆ ವ್ಯವಹಾರ ಕುದುರಿಸಿ, 50-100 ಕೋಟಿ ರೂ. ಮೊತ್ತದ ಸಾಲ ನೀಡಲು 5-10 ಕೋಟಿ ಸ್ಟ್ಯಾಂಪ್ ಡ್ಯೂಟಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎನ್ನುವ ಆರೋಪ ಈತನ ಮೇಲಿದೆ.
ಈಗಾಗಲೇ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿದ್ದ ರೋಹನ್, ಹಲವು ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ. ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಮಂಗಳೂರು ಪೊಲೀಸರು ರೋಹನ್‌ನನ್ನು ಬಂಧಿಸಿದ್ದಾರೆ.
ಮನೆಯಲ್ಲಿ ಅಡುಗುತಾಣ ನಿರ್ಮಾಣ
ಆರೋಪಿ ರೋಹನ್ ಸಲ್ಡಾನಾನ ಐಷಾರಾಮಿ ಬೆಡ್ ರೂಮ್ ಬಳಿ ಹೈಡ್ ಔಟ್ ರೂಮ್ ಇದೆ. ಬೆಡ್ ರೂಮ್ ಕಬೋರ್ಡ್ ಒಳಗೆ ಒಂದು ಹಿಡನ್ ಡೋರ್ ಇದೆ. ಅದನ್ನು ತಳ್ಳಿದ್ದರೆ ವಿಶಾಲವಾದ ರೂಮ್ ಇದೆ. ಪೊಲೀಸರು ಅಥವಾ ಮೋಸ ಹೋದವರು ಬಂದರೆ ಇದೇ ರೂಮ್ನಲ್ಲಿ ಆತ ಅಡಗಿಕೊಳ್ಳುತ್ತಿದ್ದ ಎನ್ನಲಾಗಿದೆ.
ಐಷಾರಾಮಿ ಬಾರ್ ಕೌಂಟರ್, ದುಬಾರಿ ವಿಸ್ಕಿ
ರೋಹನ್ ಸಲ್ಡಾನಾ ಅವರ ಐಷಾರಾಮಿ ಬಂಗಲೆಯಲ್ಲಿ ಬಾರ್ ಕೌಂಟರ್, ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ಮದ್ಯ ಹಾಗೂ ಮೂರು ಲಕ್ಷ ರೂ ಬೆಲೆಬಾಳುವ ಸ್ಕಾಚ್ ಶೋ ಕೇಸ್‌ನಲ್ಲಿ ಇಟ್ಟಿದ್ದ. ಶ್ಯಾಂಪೇನ್, ಸ್ಕಾಚ್, ವೈನ್, ಬಿಯರ್ ಸೇರಿದಂತೆ ತರಹೇವಾರಿ ಮದ್ಯಗಳು ಮೂರು ಫ್ರಿಡ್ಜ್ ಗಳಲ್ಲಿ ತುಂಬಿಟ್ಟಿದ್ದ. ಜೊತೆಗೆ ಮನೆಯಲ್ಲಿ ಐಷಾರಾಮಿ ಫರ್ನೀಚರ್ ಗಳನ್ನು ಬಾರ್ ಕೌಂಟರ್ ನಲ್ಲಿ ಹಾಕಿಸಿ ಬಂದವರಿಗೆಲ್ಲಾ ವಂಚಿಸಿದ್ದ ಎನ್ನಲಾಗಿದೆ.
ಮಲೇಷ್ಯಾ ಯುವತಿಯೊಂದಿಗೆ ಪಾರ್ಟಿ
ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಬಾರ್ ಕೌಂಟರ್, ರೋಹನ್ ಮನೆಯ ಮುಂಭಾಗದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೋನ್ಸಾಯಿ ಗಿಡಗಳು ಹಾಗೂ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಈತ ಮಲೇಷ್ಯಾ ಯುವತಿಯೊಂದಿಗೆ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿಯೇ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.