ಹಿಂದೂ ದೇವರ ಅವಹೇಳನ ಆರೋಪ: ಮಂಗಳೂರಿನ ಶಿಕ್ಷಕಿ ವಜಾ
x
ಸೈಂಟ್‌ ಜೆರೋಸ ಶಾಲಾ ಮುಂಭಾಗದಲ್ಲಿ ಪ್ರತಿಭಟನೆ | ಫೋಟೋ: X

ಹಿಂದೂ ದೇವರ ಅವಹೇಳನ ಆರೋಪ: ಮಂಗಳೂರಿನ ಶಿಕ್ಷಕಿ ವಜಾ

ಮಂಗಳೂರಿನ ಖಾಸಗಿ ಶಾಲೆಯ ಶಿಕ್ಷಕರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ಬಿಜೆಪಿ ಶಾಸಕರ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.


ಮಂಗಳೂರು ಫೆ.13: ನಗರದ ಖಾಸಗಿ ಶಾಲೆಯ ಶಿಕ್ಷಕರು ಶ್ರೀರಾಮ, ಅಯೋಧ್ಯೆ ಮಂದಿರ, ನರೇಂದ್ರ ಮೋದಿ ಹಾಗೂ ಸ್ವಾಮಿ ಕೊರಗಜ್ಜನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ಮತ್ತು ಸಂಘಪರಿವಾರದ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಸಂಬಂಧಪಟ್ಟ ಶಿಕ್ಷಕಿಯೊಬ್ಬರನ್ನು ವಜಾ ಮಾಡಿದೆ.

ಏನಿದು ವಿವಾದ?

ಸಂತ ಜೆರೊಸಾ ಶಾಲೆಯ ಶಿಕ್ಷಕಿ ಸಿಸ್ಟರ್‌ ಪ್ರಭಾ ಅವರು ʼವರ್ಕ್‌ ಈಸ್‌ ವರ್ಶಿಪ್ʼ ಎಂಬ ವಿಚಾರಗೋಷ್ಠಿ ವೇಳೆ ಅಯೋಧ್ಯೆಯ ಮಂದಿರ, ಶ್ರೀರಾಮ, ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು.‌ ಅದೇ ಶಾಲೆಯ ಇನ್ನೋರ್ವ ಶಿಕ್ಷಕ ಸ್ಟೀಫನ್‌ ಎಂಬವವರು ಸ್ವಾಮಿ ಕೊರಗಜ್ಜರ ಬಗ್ಗೆ ಅಗೌರವದ ಮಾತುಗಳನ್ನಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಬಿಜೆಪಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ

ಕ್ರೈಸ್ತ ಸಮುದಾಯದ ಶಾಲೆಯಲ್ಲಿ ಹಿಂದೂ ದೇವರುಗಳಿಗೆ ಅವಮಾನವಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದಂತೆ ಶನಿವಾರ ಶಾಲೆ ಬಳಿ ಕೆಲ ಪೋಷಕರು ಹಾಗೂ ಸಂಘಪರಿವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಕಾರ್ಪೊರೇಟರ್‌ ಭರತ್‌ ಮತ್ತು ಸಂದೀಪ್‌ ಗರೋಡಿ ಅವರು ಪ್ರತಿಭಟನಾಕಾರರನ್ನು ಸಮಾಧಾನಿಸಿ, ಸೋಮವಾರದವರೆಗೆ ಸಹಕಾರ ನೀಡಬೇಕು ಎಂದು ಮರಳಿ ಕಳುಹಿಸಿದ್ದರು.

ಸೋಮವಾರ ಮತ್ತೆ ಪ್ರತಿಭಟನೆ ಶುರುವಾಗಿದ್ದು, ಪ್ರತಿಭಟನಾಕಾರರಿಗೆ ಸ್ಥಳೀಯ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಭರತ್‌ ಶೆಟ್ಟಿ ಸಾಥ್‌ ನೀಡಿದ್ದರು.

ಭಾರತದ ಪ್ರತೀ ಮಕ್ಕಳೂ ಜೈಶ್ರೀರಾಮ್ ಎನ್ನಲಿದ್ದಾರೆ.!

ಪ್ರತಿಭಟನಾ ಸ್ಥಳಕ್ಕೆ ಶಾಸಕರಾದ ವೇದವ್ಯಾಸ್‌ ಕಾಮತ್‌ ಹಾಗೂ ಡಾ. ಭರತ್‌ ಶೆಟ್ಟಿ ಆಗಮಿಸುತ್ತಿದ್ದಂತೆ ಪ್ರತಿಭಟನೆ ತೀವ್ರಗೊಂಡಿತ್ತು. ಈ ವೇಳೆ ಮಾತನಾಡಿದ ಶಾಸಕ ಭರತ್‌ ಶೆಟ್ಟಿ, “ನಾನು ಇಲ್ಲಿ ಶಾಸಕನಾಗಿ ಬಂದಿಲ್ಲ. ಓರ್ವ ಹಿಂದೂವಾಗಿ ಈ ಪ್ರತಿಭಟನೆಗೆ ಬಂದಿದ್ದೇನೆ, ಸಣ್ಣ ಮಕ್ಕಳ ತಲೆ ಕೆಡಿಸುವ ಕೆಲಸ ಶಿಕ್ಷಕರು ಮಾಡಬಾರದು. ಬಾಬರಿ ಮಸೀದಿ, ರಾಮ ಮಂದಿರ ಬಗ್ಗೆ ಇವರಿಗೆ ಯಾಕೆ? ಶಿಕ್ಷಕಿಯನ್ನು ಅಮಾನತು ಮಾಡಲೇಬೇಕು” ಎಂದು ಪಟ್ಟು ಹಿಡಿದಿದ್ದಾರೆ.

ಶಾಸಕ ವೇದವ್ಯಾಸ್‌ ಕಾಮತ್‌ ಅವರು ಪ್ರತಿಭಟನಾಕಾರರೊಂದಿಗೆ ಶಾಲೆಯತ್ತ ನುಗ್ಗಲು ಪ್ರಯತ್ನಿಸಿದ್ದು, ಈ ವೇಳೆ ʼಭಾರತ್‌ ಕಾ ಹರ್‌ ಏಕ್‌ ಬಚ್ಚಾ ಜೈ ಶ್ರೀರಾಮ್‌ ಬೋಲೇಗʼ (ಭಾರತದ ಪ್ರತೀ ಮಕ್ಕಳೂ ಜೈ ಶ್ರೀರಾಮ್‌ ಎಂದು ಹೇಳಲಿದ್ದಾರೆ) ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.

ಶಾಲೆ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ವೇದವ್ಯಾಸ್‌ ಕಾಮತ್‌ ಅವರು ಶಾಲಾ ವಿದ್ಯಾರ್ಥಿಗಳಿಂದ ʼಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿಸಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಶಿಕ್ಷಕಿ ಅಮಾನತು

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಶಾಸಕರು, ಸಂಘಟನೆಗಳ ಜತೆ ಮಾತುಕತೆ ನಡೆಸಿದ್ದಾರೆ.

ಅದಾಗ್ಯೂ, ಪ್ರತಿಭಟನಾಕಾರರು ತಮ್ಮ ಪಟ್ಟು ಬಿಡದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಕಾವು ತೀವ್ರವಾಗುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಆರೋಪಿತ ಶಿಕ್ಷಕಿಯನ್ನು ಅಮಾನತುಗೊಳಿಸಿ ಪ್ರಕಟಣೆ ಹೊರಡಿಸಿದೆ. ಶೀಘ್ರದಲ್ಲೇ ಅವರ ಬದಲಿಗೆ ಬೇರೆ ಶಿಕ್ಷಕರನ್ನು ನೇಮಿಸುವುದಾಗಿ ಶಾಲಾ ಮುಖ್ಯ ಶಿಕ್ಷಕರು ಭರವಸೆ ನೀಡಿದ್ದಾರೆ.

ಕೊರಗಜ್ಜನ ಬಗ್ಗೆಯೂ ಅವಹೇಳನ?

ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ವಜಾ ಮಾಡಿದ ಬಳಿಕ, ಶಿಕ್ಷಕ ಸ್ಟೀಫನ್‌ರ ವಿರುದ್ಧ ಕ್ರಮಕ್ಕೂ ಪ್ರತಿಭಟನಾಕಾರರು ಆಗ್ರಹಿಸಿದ ಪ್ರಸಂಗ ನಡೆದಿದೆ. ಸ್ಟೀಫನ್‌ ಅವರು ಸ್ಥಳೀಯ ದೈವ ಕೊರಗಜ್ಜರನ್ನು ಅವಮಾನಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸ್ಟೀಫನ್‌ರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದರು.

Read More
Next Story