Mandya Violence | ನಾಗಮಂಗಲ ಗಲಭೆ ಪೂರ್ವ ನಿಯೋಜಿತ: ಪ್ರತಿಪಕ್ಷ ನಾಯಕ ಆರ್​ ಅಶೋಕ್​
x
ಆರ್‌ ಅಶೋಕ್‌

Mandya Violence | ನಾಗಮಂಗಲ ಗಲಭೆ ಪೂರ್ವ ನಿಯೋಜಿತ: ಪ್ರತಿಪಕ್ಷ ನಾಯಕ ಆರ್​ ಅಶೋಕ್​

ನಾಗಮಂಗಲದ ಘಟನೆಯಿಂದ ʼಹೀಗಾದರೆ ನಮ್ಮ ಗತಿ ಏನುʼ ಎಂದು ಇಡೀ ಹಿಂದೂ ಸಮಾಜ ಆತಂಕಗೊಂಡಿದೆ. ರಾಜ್ಯದ ಹಿಂದೂಗಳ ಮನಸ್ಸಿನಲ್ಲಿ ಕಾಡುತ್ತಿರುವ ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌ ಅಶ಼ೋಕ್‌ ಒತ್ತಾಯಿಸಿದ್ದಾರೆ.


Click the Play button to hear this message in audio format

ಮಂಡ್ಯದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಕೋಮುಗಲಭೆ ಮತ್ತು ಘಟನೆಯ ನಂತರ ಗೃಹ ಸಚಿವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ಹೇಳಿಕೆಗಳನ್ನು ಗಮನಿಸಿದರೆ ರಾಜ್ಯದಲ್ಲಿರುವುದು ಮೂಲಭೂತವಾದಿಗಳಿಗೆ ಬೆಂಬಲ ಕೊಡುವ ತಾಲಿಬಾನ್ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್​ ಅಶೋಕ್​ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, “ಹಿಂದೂಗಳನ್ನೇ ಗುರಿಯಾಗಿಸಿಕೊಂಡು, ಗಣೇಶ ವಿಸರ್ಜನೆಯ ಮೆರವಣಿಗೆಗೆ ಕಾದು, ಕಲ್ಲುಗಳ ರಾಶಿ, ಪೆಟ್ರೋಲ್ ಬಾಂಬು, ತಲ್ವಾರ್​ಗಳನ್ನು ಸಂಗ್ರಹಿಸಿಟ್ಟುಕೊಂಡು ಸಂಪೂರ್ಣ ಪೂರ್ವ ನಿಯೋಜಿತವಾಗಿ ಈ ದುಷ್ಕೃತ್ಯ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ, ಇದೊಂದು ಆಕಸ್ಮಿಕ ಘಟನೆ, ಸಣ್ಣ ಘಟನೆ ಎಂದು ತಿಪ್ಪೆ ಸಾರಿಸುವ ಮಾತಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಮತಾಂಧರನ್ನು ಓಲೈಕೆ ಮಾಡಲು, ಹಿಂದೂಗಳನ್ನು ಬಲಿಕೊಡಲೂ ಸಿದ್ಧ ಎಂದು ನಿರ್ಧಾರ ಮಾಡಿದಂತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾಗಮಂಗಲದ ಘಟನೆಯಿಂದ ʼಹೀಗಾದರೆ ನಮ್ಮ ಗತಿ ಏನುʼ ಎಂದು ಇಡೀ ಹಿಂದೂ ಸಮಾಜ ಆತಂಕಗೊಂಡಿದೆ. ರಾಜ್ಯದ ಹಿಂದೂಗಳ ಮನಸ್ಸಿನಲ್ಲಿ ಕಾಡುತ್ತಿರುವ ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಬೇಕು" ಎಂದು ಒತ್ತಾಯಿಸಿದ್ದಾರೆ.

ಅಶೋಕ್‌ ಸರ್ಕಾರದ ಮುಂದಿಟ್ಟಿರುವ ೧೧ ಪ್ರಶ್ನೆಗಳು

1) ಕಳೆದ ವರ್ಷ ಅದೇ ಸ್ಥಳದಲ್ಲೇ ಗಲಭೆ ಆಗಿದ್ದರೂ ಈ ವರ್ಷ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಿಲ್ಲವೇಕೆ?

2) ಇಂತಹ ಕೃತ್ಯದ ಇತಿಹಾಸವಿದ್ದರೂ ಗುಪ್ತಚರ ವಿಭಾಗದವರು ಇದರ ಬಗ್ಗೆ ಮಾಹಿತಿ ಕೊಡಲಿಲ್ಲವೇಕೆ? ಇದು ಪೊಲೀಸ್ ಇಲಾಖೆಯ ವೈಫಲ್ಯ ಅಲ್ಲವೇ? ಅಥವಾ ಗುಪ್ತಚರ ಮಾಹಿತಿ ಇದ್ದೂ ಸಹ ನಿರ್ಲಕ್ಷ್ಯ ಮಾಡಲಾಯಿತೇ?

3) ಗಣಪತಿ ಮೆರವಣಿಗೆಗೆ ರೂಟ್ ಮ್ಯಾಪ್ ಹಾಕಿಕೊಟ್ಟು ಅನುಮತಿ ನೀಡಿದ್ದರೂ, ಪೊಲೀಸರು ಮಾರ್ಗದುದ್ದಕ್ಕೂ ಯಾಕೆ ಭದ್ರತೆ ನೀಡಲಿಲ್ಲ?

4) ಪಟ್ಟಣದಲ್ಲಿ ಇದ್ದ ಡಿಎಆರ್ ವ್ಯಾನ್ ಅನ್ನು ಮೆರವಣಿಗೆ ಆರಂಭವಾದ ಬಳಿಕ ಬೇರೆಡೆ ಕಳುಹಿಸಿದ್ದು ಏಕೆ?

5) ಬುಧವಾರ ರಾತ್ರಿ ಗಲಭೆ ಆರಂಭವಾಗಿ ಎರಡು ಗಂಟೆ ಕಳೆದರೂ ಕೇವಲ 40ಕಿಮೀ ದೂರದಲ್ಲಿರುವ ಮಂಡ್ಯದಿಂದ ಹೆಚ್ಚಿನ ಸಿಬ್ಬಂದಿಯನ್ನು ಏಕೆ ತುರ್ತಾಗಿ ಕರೆಸಿಕೊಳ್ಳಲಿಲ್ಲ?

6) ಪೊಲೀಸರ ಅನುಮತಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದವರನ್ನೇ ಎಫ್ ಐಆರ್ ನಲ್ಲಿ ಎ 1 ಮಾಡಿರುವುದೇಕೆ?

7) ಎ 1 ನಿಂದ ಎ23 ವರೆಗೆ ಕೇವಲ ಹಿಂದೂಗಳ ಮೇಲೆ ಎಫ್ ಐಆರ್ ಮಾಡಿ ನಂತರ ಮುಸ್ಲಿಮರ ಹೆಸರು ಸೇರಿಸಿರುವುದು ಯಾವ ಸೀಮೆ ನ್ಯಾಯ? ಗಲಭೆಕೋರರನ್ನ ರಕ್ಷಿಸಲು ಸರ್ಕಾರ ಮುಂದಾಗಿರುವುದು ತುಷ್ಟೀಕರಣದ ಪರಮಾವಧಿ ಅಲ್ಲವೇ?

8) ಇಷ್ಟಕ್ಕೂ ಮಸೀದಿ ಅಥವಾ ದರ್ಗಾ ಮುಂದೆ ಗಣೇಶೋತ್ಸವ ಮೆರವಣಿಗೆ ಹಾದು ಹೋಗಬಾರದು ಎನ್ನುವುದಕ್ಕೆ ಕರ್ನಾಟಕವೇನು ಇಸ್ಲಾಮಿಕ್ ರಿಪಬ್ಲಿಕ್ಕಾ?

9) ಪೆಟ್ರೋಲ್ ಬಾಂಬ್, ಕಲ್ಲುಗಳ ರಾಶಿ, ತಲ್ವಾರ್ ಹಾಗೂ ಮಾರಾಕಾಸ್ತ್ರಗಳನ್ನು ಮಸೀದಿಯಲ್ಲಿ ಸಂಗ್ರಹಿಸಿ ದಾಂಧಲೆ ಆರಂಭಿಸಿದ್ದನ್ನು ಗಮನಿಸಿದರೆ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ಸ್ಪಷ್ಟ ಅಲ್ಲವೇ?

10) ಗಲಭೆಯಲ್ಲಿ ಅಪಾಯಕಾರಿ ವಸ್ತುಗಳ ಬಳಕೆಯಾದರೂ, 25 ಕೋಟಿ ರೂಪಾಯಿ ಮೊತ್ತದ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದ್ದರೂ, ಗೃಹ ಸಚಿವರಿಗೆ ಇದೊಂದು ಸಣ್ಣ ಘಟನೆ, ಆಕಸ್ಮಿಕ ಘಟನೆ ಅನ್ನಿಸಲು ಕಾರಣ ಏನು? ಅವರಿಗೆ ಆ ರೀತಿ ಮಾಹಿತಿ ನೀಡಿದವರು ಯಾರು? ಅಥವಾ ಈ ರೀತಿ ಹೇಳಲು ಅವರ ಮೇಲೆ ಯಾರದ್ದಾದರೂ ಒತ್ತಡವಿತ್ತೆ? ಅಥವಾ ಕಾಂಗ್ರೆಸ್ ಸರ್ಕಾರ ಯಾರನ್ನಾದರೂ ರಕ್ಷಿಸಲು ಹೊರಟಿದೆಯೇ?

11) ಇಷ್ಟೆಲ್ಲಾ ಅನಾಹುತ ಆಗಿದ್ದರೂ ಬೆಂಗಳೂರಿನಿಂದ ಕೇವಲ 130 ಕಿಮೀ ದೂರವಿರುವ ನಾಗಮಂಗಲಕ್ಕೆ ಗೃಹ ಸಚಿವರು ಇನ್ನೂ ಭೇಟಿ ನೀಡಿಲ್ಲವೇಕೆ?

ಈ ರೀತಿ ತಪ್ಪು ಎಫ್ಐಆರ್ ದಾಖಲಿಸಲು ಕಾರಣರಾದ ಪೊಲೀಸರನ್ನು ಈ ಕೂಡಲೇ ಅಮಾನತು ಮಾಡಬೇಕು FIRನಲ್ಲಿ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡುವ ಈ ಹುನ್ನಾರ ಕೈಬಿಡದಿದ್ದರೆ ಬಿಜೆಪಿ ನಾಗಮಂಗಲದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಶೋಕ್‌, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ

Read More
Next Story