ಮುಡಾ ಪಾದಯಾತ್ರೆ | ಬಿಜೆಪಿ ಮುಖಂಡ ಪ್ರೀತಂ ಗೌಡ ಫ್ಲೆಕ್ಸ್, ಬ್ಯಾನರ್‌ಗೆ ಬೆಂಕಿ
ಮಂಡ್ಯದ ಹೊರವಲಯದ ಉಮ್ಮಡಹಳ್ಳಿ ಬಳಿ ಬುಧವಾರ (ಆ.7) ರಾತ್ರಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರ ಚಿತ್ರವಿರುವ ಫ್ಲೆಕ್ಸ್ ಬ್ಯಾನರ್ ಅನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ.
ಮಂಡ್ಯದ ಹೊರವಲಯದ ಉಮ್ಮಡಹಳ್ಳಿ ಬಳಿ ಬುಧವಾರ (ಆ.7) ರಾತ್ರಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರ ಚಿತ್ರವಿರುವ ಫ್ಲೆಕ್ಸ್ ಬ್ಯಾನರ್ ಅನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿ(ಎಸ್) ಮೈತ್ರಿ ಪಕ್ಷಗಳು ಬೆಂಗಳೂರಿನಿಂದ ಮೈಸೂರಿನವರೆಗೆ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆಯ ಅಂಗವಾಗಿ ಫ್ಲೆಕ್ಸ್ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ರ್ಯಾಲಿ ಬುಧವಾರ ಮಂಡ್ಯ ತಲುಪಿತು. ಮೈಸೂರು-ಬೆಂಗಳೂರು ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ರ್ಯಾಲಿಯಲ್ಲಿ ಭಾಗವಹಿಸುವ ಮುಖಂಡರನ್ನು ಸ್ವಾಗತಿಸಲು ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಕೆಲ ಕಿಡಿಗೇಡಿಗಳು ಪ್ರೀತಂ ಗೌಡ ಅವರ ಚಿತ್ರವಿದ್ದ ಬ್ಯಾನರ್‌ಗಳಿಗೆ ಬೆಂಕಿ ಹಚ್ಚಿದ್ದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಗುರುವಾರ (ಆ.8) ಬೆಳಗ್ಗೆ ತೂಬಿನಕೆರೆಯಿಂದ ಆರಂಭವಾದ ಪಾದಯಾತ್ರೆ ಸಂಜೆ ಶ್ರೀರಂಗಪಟ್ಟಣ ತಲುಪಲಿದೆ. ಎರಡೂ ಪಕ್ಷಗಳ ನೂರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಮುಖಂಡರ ಜತೆಗೆ ಭಾಗವಹಿಸುತ್ತಿದ್ದಾರೆ.
ಬಿಜೆಪಿ-ಜೆಡಿಎಸ್ ಘರ್ಷಣೆ
ಬುಧವಾರ ರ್ಯಾಲಿ ವೇಳೆ ಪ್ರೀತಂ ಗೌಡ ಹಾಜರಿದ್ದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಬುಧವಾರ ನಡೆದ ರ್ಯಾಲಿಯಲ್ಲಿ ಕೆಲವು ಬೆಂಬಲಿಗರು ಪ್ರೀತಂ ಗೌಡ ಪರ ಘೋಷಣೆಗಳನ್ನು ಕೂಗಿದರು, ಇದನ್ನು ಜೆಡಿಎಸ್ ಕಾರ್ಯಕರ್ತರು ವಿರೋಧಿಸಿದರು. ಹಾಸನದ ಅವರ ಬೆಂಬಲಿಗರ ದೊಡ್ಡ ದಂಡು ಬುಧವಾರ ರ್ಯಾಲಿಗೆ ಸೇರಿತ್ತು. ಪ್ರೀತಂ ಗೌಡ ಪರ ಘೋಷಣೆ ಕೂಗಿದ ಬಳಿಕ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ಎರಡೂ ಪಕ್ಷಗಳ ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.