Cabinet Approves Separate Ministry for Kalyana Karnataka Region
x

ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.

ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮನ್ನಣೆ: 'ಶಾಖೆ'ಗೆ ಪರೋಕ್ಷ ಬ್ರೇಕ್ ಹಾಕಿದ ಸಚಿವ ಸಂಪುಟ

ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರ್ಕಾರವು ಹೊಸ ನಿಯಮ ಜಾರಿಗೆ ತೀರ್ಮಾನ. ಈ ಮೂಲಕ ಆರ್‌ಎಸ್‌ಎಸ್‌ ಹೆಸರನ್ನು ಪ್ರಸ್ತಾಪಿಸಿದೆ ಪರೋಕ್ಷವಾಗಿ ನಿಯಂತ್ರಣಕ್ಕೆ ಮುಂದಾಗಿದೆ.


ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಹೊಸ ನಿಯಮ ಜಾರಿಗೆ ತೀರ್ಮಾನಿಸಿದೆ. ಈ ಮೂಲಕ ಆರ್‌ಎಸ್‌ಎಸ್‌ ಹೆಸರನ್ನು ಪ್ರಸ್ತಾಪಿಸಿದೆ ಪರೋಕ್ಷವಾಗಿ ನಿಯಂತ್ರಣಕ್ಕೆ ಮುಂದಾಗಿದೆ. ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ದವಾಗಿ ನಡೆಸಲು ಅನುಮತಿ ಪಡೆಯಲು ಮಾರ್ಗಸೂಚಿ ರೂಪಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಬೈಠಕ್‌ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದು ರಾಜ್ಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಇದರ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ತಮಿಳುನಾಡು ಮಾದರಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಆರ್ ಎಸ್ ಎಸ್ ಹೆಸರು ಉಲ್ಲೇಖಿಸದೆ ನಿಯಮ ಜಾರಿಗೆ ಮುಂದಾಗಿದೆ. ಇತ್ತೀಚೆಗೆ ನಡೆದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಕೆಲವು ಸರ್ಕಾರಿ ನೌಕರರು ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಗಂಭೀರವಾಗಿ ಚರ್ಚೆ ನಡೆಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ಇದೇ ವೇಳೆ ಸಂಘ ಸಂಸ್ಥೆಗಳು ನಡೆಸಲು ಉದ್ದೇಶಿಸಿರುವ ಯಾವುದೇ ಚುಟುವಟಿಕೆಯಿಂದ ಸಾರ್ವಜನಿಕರಿಗೆ ಅನಾನುಕೂಲ, ಸಂಸ್ಥೆಗಳ ಮೂಲ ಧ್ಯೇಯಕ್ಕೆ ಧಕ್ಕೆ ಉಂಟಾಗುವಂತಿದ್ದರೆ ಅನುಮತಿ ನೀಡುವಂತಿಲ್ಲ ಎಂದು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ವಿವರವಾದ ಮಾರ್ಗಸೂಚಿಯೊಂದಿಗೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌, ಸಾರ್ವಜನಿಕ ಸ್ಥಳ, ಸರ್ಕಾರಿ ಶಾಲೆಗಳ ಮೈದಾನಗಳ ಸದ್ಬಳಕೆ ಮಾಡುವ ಸಂಬಂಧ ಸ್ಪಷ್ಟ ನೀತಿ ನಿಯಮಗಳೊಳಗೊಂಡ ವಿಸ್ತೃತ ಸರ್ಕಾರಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ . ಅನುಮತಿ ನೀಡುವ ಸಂದರ್ಭದಲ್ಲಿ ಸಂವಿಧಾನ ಬದ್ದವಾದ ನಾಗರಿಕರ ಹಕ್ಕುಗಳಿಗೆ ಚ್ಯುತಿ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಸರ್ಕಾರಿ ಸ್ವಾಮ್ಯದ, ನಿಗಮ-ಮಂಡಳಿಗಳ, ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತು ಇತರೆ ಆಸ್ತಿಗಳು ನಾಗರಿಕರ ಸದ್ಬಳಕೆಗೆ ನಿರ್ದಿಷ್ಟಪಡಿಸಲಾಗಿರುತ್ತದೆ. ಇವುಗಳನ್ನು ಸಾರ್ವಜನಿಕರು ಬಳಸಲು ಯಾವುದೇ ಅಡಚಣೆಗಳು, ಬೆದರಿಕೆಗಳು ಉದ್ಭವಿಸದಂತೆ ಕ್ರಮವಹಿಸುವುದು ಅತ್ಯಗತ್ಯವಾಗಿರುತ್ತದೆ. ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು, ಸಾರ್ವಜನಿಕರ ಸಾರ್ವತ್ರಿಕ ಅಸಮಾಧಾನಗಳನ್ನು ನಿವಾರಿಸುವ ದೃಷ್ಟಿಯಿಂದ ಕಾರ್ಯನೀತಿ ಸಂಬಂಧ ವಿಸ್ತೃತ ಸರ್ಕಾರಿ ಆದೇಶ ಹೊರಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಲವಾರು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆ, ಪ್ರಚಾರ, ತರಬೇತಿ, ಉತ್ಸವ, ಸದಸ್ಯರ ಮತ್ತು ಬೆಂಬಲಿಗರ ಸಭೆಗಳನ್ನು ಸಂಬಂಧಪಟ್ಟ ಸಂಸ್ಥೆ, ಪ್ರಾಧಿಕಾರದಿಂದ ಅನುಮತಿ ಪಡೆಯದೆ ಮಾಡುತ್ತಿದ್ದಾರೆ. ಈ ರೀತಿ ಸಾರ್ವಜನಿಕ ಸ್ಥಳ, ಆಸ್ತಿ, ಜಮೀನು, ಆಟದ ಮೈದಾನ, ಸಾರ್ವಜನಿಕ ರಸ್ತೆ ಬಳಸಿಕೊಳ್ಳುವುದು ಅತಿಕ್ರಮ ಅಥವಾ ಅಕ್ರಮ ಪ್ರವೇಶ ಎಂದು ಪರಿಗಣಿಸಲ್ಪಡುತ್ತವೆ. ಇದು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆ ಉಂಟು ಮಾಡುತ್ತವೆ. ಹೀಗಾಗಿ ಯಾವುದೇ ಸಂಘಟನೆ, ಸಂಘ-ಸಂಸ್ಥೆಗಳು ಆಯಾ ಸಾರ್ವಜನಿಕ ಆಸ್ತಿ ಅಥವಾ ಸ್ಥಳದ ಮಾಲೀಕತ್ವ ಹೊಂದಿರುವ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದರು.

ಸರ್ಕಾರಿ, ಸರ್ಕಾರಿ ಸ್ವಾಮ್ಯದ ಶಾಲಾ-ಕಾಲೇಜು, ಅನುದಾನಿತ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಉನ್ನತ ಶಿಕ್ಷಣ ಇಲಾಖೆ, ಶಾಲಾ ಮತ್ತು ಸಾಕ್ಷರತಾ ಇಲಾಖೆಯ ಅನುಮತಿಪಡೆದುಕೊಳ್ಳಬೇಕು. ಉದ್ಯಾನವನ, ಆಟದ ಮೈದಾನ, ಇತರೆ ತೆರೆದ ಸ್ಥಳಗಳಲ್ಲಿ ಆಯೋಜನೆ ಮಾಡಬೇಕಾದರೆ ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅನುಮತಿ ಬೇಕಾಗುತ್ತದೆ. ಸಾರ್ವಜನಿಕ ರಸ್ತೆ, ಸರ್ಕಾರದ ಇತರೆ ಆಸ್ತಿ, ಸ್ಥಳಗಳಲ್ಲಿ ನಡೆಸಬೇಕಾದರೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಅಥವಾ ಪೊಲೀಸ್ ಅಧೀಕ್ಷಕ ಅನುಮತಿ ಬೇಕಾಗುತ್ತದೆ ಎಂದು ಹೇಳಿದರು.

Read More
Next Story