
"ಸಂಚಾರ್ ಸಾಥಿ ಆ್ಯಪ್" ಕಡ್ಡಾಯ ಇನ್‌ಸ್ಟಾಲ್ ಆದೇಶ ವಾಪಸ್
ಹೊಸ ಮೊಬೈಲ್‌ಗಳಲ್ಲಿ "ಸಂಚಾರ್ ಸಾಥಿ ಆ್ಯಪ್" ಇನ್‌ಸ್ಟಾಲ್ ಮಾಡಬೇಕೆಂಬ ಕೇಂದ್ರ ಸರ್ಕಾರದ ಆದೇಶವು ಸುಪ್ರೀಂಕೋರ್ಟ್‌ನ ಗೌಪ್ಯತಾ ಹಕ್ಕಿನ ಕುರಿತ ತೀರ್ಪಿಗೆ ವಿರುದ್ಧವಾಗಿದೆ.
ದೇಶದಲ್ಲಿ ಮಾರಾಟವಾಗುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ʼಸಂಚಾರ್ ಸಾಥಿ ಆ್ಯಪ್ʼ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಬೇಕೆಂಬ ವಿವಾದಾತ್ಮಕ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ ಹಿಂಪಡೆದಿದೆ.
ಹೊಸ ಮೊಬೈಲ್‌ಗಳಲ್ಲಿ "ಸಂಚಾರ್ ಸಾಥಿ ಆ್ಯಪ್" ಇನ್‌ಸ್ಟಾಲ್ ಮಾಡಬೇಕೆಂಬ ಕೇಂದ್ರ ಸರ್ಕಾರದ ಆದೇಶವು ಸುಪ್ರೀಂಕೋರ್ಟ್‌ನ ಗೌಪ್ಯತಾ ಹಕ್ಕಿನ ಕುರಿತ ತೀರ್ಪಿಗೆ ವಿರುದ್ಧವಾಗಿದೆ. ಅಲ್ಲದೇ ಪ್ರತಿ ಭಾರತೀಯ ಪ್ರಜೆಯ ಮೇಲೆ ಅಕ್ರಮವಾಗಿ ಬೇಹುಗಾರಿಕೆ ನಡೆಸುವ ಪ್ರಯತ್ನವಾಗಿದೆ ಎಂದು ವಿರೋಧ ಪಕ್ಷಗಳು, ಕಾನೂನು ತಜ್ಞರು ಆರೋಪಿಸಿದ ಹಿನ್ನೆಲೆಯಲ್ಲಿ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಆದೇಶವನ್ನು ವಾಪಸ್ ಪಡೆಯಲಾಯಿತು.
ಲೋಕಸಭೆಯಲ್ಲಿ ಸಿಂದಿಯಾ ಹೇಳಿದ್ದೇನು?
ʼಸಂಚಾರ್ ಸಾಥಿ ಆ್ಯಪ್ʼ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕೆಂಬ ಆದೇಶವನ್ನು ಹಿಂಪಡೆಯುವುದಕ್ಕೂ ಮುನ್ನ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಆ್ಯಪ್ ಮೂಲಕ ಅಕ್ರಮ ನಿಗಾ ವಹಿಸುವಿಕೆ ಮತ್ತು ಗೌಪ್ಯತೆಯ ಉಲ್ಲಂಘನೆ ಆರೋಪ ತಳ್ಳಿಹಾಕಿದರು.
ಕಾಂಗ್ರೆಸ್ ಸಂಸದ ದೀಪೇಂದ್ರ ಸಿಂಗ್ ಹೂಡಾ ಅವರು "ಸಂಚಾರ್ ಸಾಥಿ ಆ್ಯಪ್" ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಂಧಿಯಾ ಅವರು, "ಭಾರತದಲ್ಲಿ ಒಂದು ಬಿಲಿಯನ್‌ಗೂ ಹೆಚ್ಚು ಮೊಬೈಲ್ ಬಳಕೆದಾರರಿದ್ದಾರೆ. ಸೈಬರ್ ತಂತ್ರಜ್ಞಾನ ದುರುಪಯೋಗದ ಅಂಶಗಳಿಂದ ಜನರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ, ಈ ಉದ್ದೇಶದಿಂದ 2023ರಲ್ಲಿ "ಸಂಚಾರ್ ಸಾಥಿ ಪೋರ್ಟಲ್" ಹಾಗೂ ಈ ವರ್ಷ "ಸಂಚಾರ್ ಸಾಥಿ ಆ್ಯಪ್" ಆರಂಭಿಸಿದ್ದೇವೆ ಎಂದು ವಿವರಿಸಿದರು.
"ಸಂಚಾರ್ ಸಾಥಿ ಪೋರ್ಟಲ್"ಗೆ 20 ಕೋಟಿಗೂ ಹೆಚ್ಚು ಹಿಟ್‌ಗಳು ಬಂದಿವೆ. 1.5 ಕೋಟಿ ಜನರು ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. ಇದುವೇ ಆ್ಯಪ್ ಯಶಸ್ಸಿನ ರಹಸ್ಯ. ಈ ಆ್ಯಪ್ ಮೂಲಕ ನೀಡಲಾದ ವರದಿ ಆಧರಿಸಿ ನಾವು 1.5 ಕೋಟಿಗೂ ಹೆಚ್ಚು ವಂಚಿತ ಮೊಬೈಲ್ ಸಂಪರ್ಕಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದ್ದೇವೆ, 26 ಲಕ್ಷಕ್ಕೂ ಹೆಚ್ಚು ಕಳುವಾದ ಮೊಬೈಲ್‌ಗಳನ್ನು ಮರುಪಡೆದಿದ್ದೇವೆ, ಆರು ಲಕ್ಷ ವಂಚನೆ ಪ್ರಕರಣಗಳನ್ನು ತಡೆದಿದ್ದೇವೆ ಎಂದು ಸಿಂಧಿಯಾ ವಿವರಿಸಿದರು.

