
ಹೊತ್ತಿ ಉರಿದ ಬಸ್
ಹೊತ್ತಿ ಉರಿದ ಶಾಲಾ ವಾಹನ ; ವ್ಯಕ್ತಿ ಸಜೀವ ದಹನ
ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಬಸ್ ಕಳೆದ 3 ತಿಂಗಳಿಂದ ಕೆಟ್ಟು ನಿಂತಿತ್ತು.
ಬೆಂಗಳೂರಿನ ಬಾಣಸವಾಡಿಯ ಅಗ್ನಿಶಾಮಕದಳ ಕಚೇರಿ ಬಳಿ ಶಾಲಾ ವಾಹನವೊಂದು ಹೊತ್ತಿ ಉರಿದಿದ್ದು, ಅದರೊಳಗಿದ್ದ ವ್ಯಕ್ತಿ ಸಜೀವ ದಹನವಾಗಿದ್ದಾರೆ.
ಮಂಗಳವಾರ ರಾತ್ರಿ 10.45 ರ ಸುಮಾರಿಗೆ ಘಟನೆ ನಡೆದಿದ್ದು, ಬಸ್‌ನೊಳಗೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಾಮಮೂರ್ತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಬಸ್ ಕಳೆದ 3 ತಿಂಗಳಿಂದ ಕೆಟ್ಟು ನಿಂತಿತ್ತು. ಎಫ್.ಸಿ. (FC), ವಿಮೆ (Insurance) ಸಹ ಮುಗಿದಿದ್ದರಿಂದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಲಾಗಿತ್ತು. ಬಸ್ ಬಾಗಿಲು ಸರಿಯಾಗಿ ಲಾಕ್ ಆಗಿರಲಿಲ್ಲ ಎಂದು ಬಸ್ ಮಾಲೀಕ ಅರುಣ್ ತಿಳಿಸಿದ್ದಾರೆ.
ಮೃತ ವ್ಯಕ್ತಿ ಬಸ್‌ನಲ್ಲಿ ಮಲಗಲು ಹಾಸಿಗೆ ಮತ್ತು ದಿಂಬು ತಂದಿರುವುದು ಪತ್ತೆಯಾಗಿದೆ. ಆತ ಬಸ್‌ನೊಳಗೆ ಧೂಮಪಾನ ಮಾಡಿ ಮಲಗಿರಬಹುದು ಎಂದು ಶಂಕಿಸಲಾಗಿದೆ. ಬಸ್‌ನಲ್ಲಿ ಕೆಲ ಬಿಡಿ ತುಂಡುಗಳು ಸಹ ಪತ್ತೆಯಾಗಿವೆ. ಈ ತುಂಡುಗಳಿಂದಲೇ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಯಾರಾದರೂ ಬಸ್‌ಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಸಾಧ್ಯತೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿಕಳುಹಿಸಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.