ಹೈಕೋರ್ಟ್‌ ನ್ಯಾಯಪೀಠದ ಮುಂದೇ ಕತ್ತು ಕೊಯ್ದುಕೊಂಡ ಕಕ್ಷಿದಾರ!
x

ಹೈಕೋರ್ಟ್‌ ನ್ಯಾಯಪೀಠದ ಮುಂದೇ ಕತ್ತು ಕೊಯ್ದುಕೊಂಡ ಕಕ್ಷಿದಾರ!

ಮೈಸೂರಿನ ವಿಜಯನಗರ ನಿವಾಸಿ ಚಿನ್ನಂ ಶ್ರೀನಿವಾಸ್ ಎಂಬವರು ಬೆಂಗಳೂರು ಹೈಕೋರ್ಟ್‌ ನ್ಯಾಯಮೂರ್ತಿ ಅವರ ಎದುರಲ್ಲಿ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.


ಬೆಂಗಳೂರು ಹೈಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ನ್ಯಾಯಪೀಠದ ಮುಂದೆಯೇ ವ್ಯಕ್ತಿಯೊಬ್ಬರು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಬುಧವಾರ ನಡೆದಿದೆ.

ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಕೋರ್ಟ್ ಹಾಲ್ ಸಂಖ್ಯೆ 1ರಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ವಿಚಾರಣೆಯ ಅಂತ್ಯದ ವೇಳೆಗೆ ನ್ಯಾಯಮೂರ್ತಿಗಳ ಮುಂದೆ ಬಂದ ವ್ಯಕ್ತಿ ತನ್ನ ಪ್ರಕರಣದ ಬಗ್ಗೆ ಅರ್ಜಿಯೊಂದನ್ನು ಕೋರ್ಟ್ ಸಿಬ್ಬಂದಿಗೆ ನೀಡಿದ್ದಾರೆ. ಬಳಿಕ ಹರಿತವಾದ ಆಯುಧದಿಂದ ತಮ್ಮ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಮೈಸೂರಿನ ವಿಜಯನಗರ ನಿವಾಸಿ ಚಿನ್ನಂ ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಅವರನ್ನು ಕೂಡಲೇ ಪೊಲೀಸರು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕತ್ತು ಕೊಯ್ದುಕೊಂಡ ಪರಿಣಾಮ ಅನ್ನನಾಳದ ಅಕ್ಕಪಕ್ಕದ ರಕ್ತನಾಳಗಳು ಕಟ್ ಆಗಿದೆ. ಪರಿಸ್ಥಿತಿ ಗಂಭೀರವಾಗಿದೆ, ವೈದ್ಯರು ಆಪರೇಷನ್ ನಡೆಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ʼದ ಫೆಡರಲ್‌ ಕರ್ನಾಟಕʼಕ್ಕೆ ಮಾಹಿತಿ ನೀಡಿದ ಪೊಲೀಸರು, ಶ್ರೀನಿವಾಸ್‌ ಅವರು ಮಾತನಾಡುವಂತಹ ಪರಿಸ್ಥಿತಿಯಲ್ಲಿಲ್ಲ, ಚಿಕಿತ್ಸೆ ನಡೆಯುತ್ತಿದೆ ಎಂದಿದ್ದಾರೆ.

ಲಕ್ಷಾಂತರ ರೂ.ಗಳ ವಂಚನೆ ಮತ್ತು ಜೀವ ಬೆದರಿಕೆ ಸಂಬಂಧ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲು ಹೆಂಡತಿ ಜೊತೆ ಹೈಕೋರ್ಟಿಗೆ ಬಂದಿದ್ದ ಶ್ರೀನಿವಾಸ್ ಅವರು, ಬರುವಾಗ ಆಪರೇಷನ್ ಥಿಯೇಟರಿನಲ್ಲಿ ಬಳಸುವ ಚಾಕುವನ್ನು ತಂದಿದ್ದರು ಎನ್ನಲಾಗಿದೆ. ಹೈಕೋರ್ಟ್ ಆವರಣಕ್ಕೆ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಆಯುಧವನ್ನು ಹೇಗೆ ಸಾಗಿಸಿದರು ಎಂಬ ಬಗ್ಗೆಯೂ ತನಿಖೆ ನಡೆಸಲು ನ್ಯಾಯಾಧೀಶರು ಸೂಚಿಸಿದ್ದಾರೆ.

ಪ್ರಕರಣದ ಬಗ್ಗೆ ಈ ಹಿಂದೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ಶ್ರೀನಿವಾಸ್ ಚಿನ್ನಂ ದೂರು ನೀಡಿದ್ದರಾದರೂ, ಪ್ರಕರಣ ಏಕಸದಸ್ಯ ಪೀಠದಲ್ಲಿ ರದ್ದಾಗಿತ್ತು. ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಲು ಬಂದಿದ್ದರು.

ಪ್ರಕರಣ ಏನು?

ಶ್ರೀನಿವಾಸ್ ಚಿನ್ನಂ ಅವರು ಶ್ರೀಧರ್ ರಾವ್ ಮತ್ತಿತರರೊಂದಿಗೆ ಸೇರಿಕೊಂಡು ಅಪಾರ್ಟ್ಮೆಂಟ್ ನಿರ್ಮಿಸಿ ಲಾಭ ಹಂಚಿಕೊಳ್ಳುವ ವಿಚಾರವಾಗಿ ಒಪ್ಪಂದ ಮಾಡಿಕೊಂಡಿದ್ದರು. ತನ್ನಿಂದ 93 ಲಕ್ಷ ರೂ. ಪಡೆದು, ಒಪ್ಪಂದ ಪಾಲಿಸದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಶ್ರೀನಿವಾಸ್ ಚಿನ್ನಂ 2021ರಲ್ಲಿ ಮೈಸೂರಿನ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವಂಚನೆ ಜೊತೆಗೆ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಲಾಗಿದೆ ಎಂದೂ ಚಿನ್ನಂ ದೂರು ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಎಫ್ಐಆರ್ ಪ್ರಶ್ನಿಸಿ ಶ್ರೀಧರ್ ರಾವ್ ಹಾಗೂ ಮತ್ತಿತರರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಸಿವಿಲ್ ವ್ಯಾಜ್ಯವಾಗಿರುವುದರಿಂದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಸಿವಿಲ್ ಕೋರ್ಟಿನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿತ್ತು. 2023ರ ಜೂನ್ 2ರಂದು ಪ್ರಕರಣ ರದ್ದಾಗಿದ್ದು, ಪ್ರಕರಣದ ವಿಷಯದಲ್ಲಿ ಅಲೆದಾಡಿ ಬೇಸತ್ತಿದ್ದ ಶ್ರೀನಿವಾಸ್ ಚಿನ್ನಂ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ.

Read More
Next Story