
Human-Elephant Conflict| ಪಶ್ಚಿಮ ಘಟ್ಟದ ತಪ್ಪಲಿನ ಸುಳ್ಯದಲ್ಲಿ ಹೆಚ್ಚಿದ ಕಾಡಾನೆ ಹಾವಳಿ; ಕಂಗೆಟ್ಟ ಹಳ್ಳಿಗರು
ಮಕ್ಕಳು ಶಾಲೆಗೆ ಹೋಗಲು ಹೆದರಿಕೆ, ಉದ್ಯೋಗಿಗಳಿಗೆ ಮನೆಗೆ ಮರಳಲು ಆತಂಕ, ಕೃಷಿ ನಾಶ .. ಹೀಗೆ ಒಂದಲ್ಲ ಒಂದು ತೊಂದರೆ. ಹೆಚ್ಚೇಕೆ, ಇಲ್ಲಿನ ಯುವಕ-ಯುವತಿಯರಿಗೆ ಮದುವೆ ಪ್ರಸ್ತಾಪಗಳಿಗೂ ಆನೆ ಹಾವಳಿಯಿಂದ ತಡೆ!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಾದ್ಯಂತ ಪ್ರತೀದಿನ ಕೇಳಿ ಬರುವ ಮಾತೆಂದರೆ `ಅಲ್ಲಿ ಕಾಡಾನೆ ಹಿಂಡು ಇದೆಯಂತೆ, ಮತ್ತೊಂದೆಡೆ ತೋಟಕ್ಕೆ ಒಂಟಿ ಆನೆ ಬಂದಿದೆಯಂತೆ’ ಎಂಬುದಾಗಿದೆ. ಇದರಿಂದ ಪಶ್ಚಿಮಘಟ್ಟದ ತಪ್ಪಲಿನ ಇಲ್ಲಿನ ಹಳ್ಳಿಗರು ಸರಿಯಾದ ನಿದ್ದೆಮಾಡದೇ ವರ್ಷಗಳೇ ಕಳೆದಿವೆ.
ಈ ಭಾಗದಲ್ಲಿ ಅಡಿಕೆ, ಬಾಳೆ, ತೆಂಗು ಮುಂತಾದ ಸಮ್ಮಿಶ್ರ ಕೃಷಿ ತೋಟಗಳು, ರಬ್ಬರ್ ಬೆಳೆ ಹೆಚ್ಚಾಗಿದೆ. ಒಂದು ಬಾರಿ ಒಂದು ಆನೆ ನುಗ್ಗಿದರೆ ತೋಟದ ಬಹುಪಾಲು ನಾಶವಾಗುತ್ತದೆ.
ಕಳೆದೊಂದು ವಾರದಿಂದ ಸುಳ್ಯದ ಅಜ್ಜಾವರ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ಹಿಂಡಿನ ಆನೆಗಳು ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಾದ ಮೇದಿನಡ್ಕ, ಪಟ್ಟಂಬೈಲು,ಕರ್ಬಪಾಡಿ, ಮಂಡೆಕೋಲು, ಮಾವಂಜಿ ಮೊದಲಾದ ಕಡೆ ರಾತ್ರಿವೇಳೆ ಸಂಚರಿಸಿವೆ. ಹೀಗಾಗಿ ಹಲವರ ತೋಟಗಳಲ್ಲಿ ದಾಂಧಲೆ ನಡೆಸಿ,ಕೃಷಿಗೆ ಹಾನಿ ಮಾಡಿವೆ.
`ಆನೆ ಏನು ತಿನ್ನುತ್ತದೆ, ಎನ್ನುವುದಕ್ಕಿಂತಲೂ ಅದು ತನ್ನ ಎದುರಿಗೆ ಕಂಡದ್ದೆಲ್ಲವನ್ನೂ ನಾಸಪಡಿಸುತ್ತದೆ. ಅಡಿಕೆ ಮರ-ಗಿಡ, ಬಾಳೆಗಿಡ, ತರಕಾರಿ,ತೆಂಗು, ರಬ್ಬರ್ ಗಿಡಗಳು ಎಲ್ಲವನ್ನೂ ನಾಶ ಮಾಡುತ್ತದೆ. ಅದು ತಿನ್ನುವುದಕ್ಕಿಂತ ಅದರ ವರ್ತನೆಯೇ ವಿಚಿತ್ರವಾಗಿದೆ’’ ಎನ್ನುತ್ತಾರೆ ಮಂಡೆಕೋಲಿನ ಕೃಷಿಕ ರಾಮಣ್ಣ ಗೌಡರು.
ಆನೆದಾಳಿಯಿಂದ ಎಷ್ಟು ನಷ್ಟವಾಯಿತು ಎಂದು ಲೆಕ್ಕಾಚಾರ ಸರಕಾರದ ಲೆಕ್ಕದಲ್ಲಿ ನಮಗೇನೂ ಸಿಗುವುದಿಲ್ಲ. ಒಂದೊಮ್ಮೆ ಸಿಕ್ಕರೂ ಅದರಿಂದ ದೊಡ್ಡ ಲಾಭವೇನೂ ಆಗುವುದಿಲ್ಲ. ನಮಗೆ ಶಾಶ್ವತ ಪರಿಹಾರವಾಗಿ ಕಾಡಾನೆಗಳು ನಾಡಿಗೆ ಬಾರದ ಹಾಗೆ ಆಗಬೇಕು, ಎಂದವರು ಆಗ್ರಹಿಸಿದ್ದಾರೆ.
ಮನವಿ ಕೊಡುವುದು, ಪ್ರತಿಭಟನೆ ಮಾಡುವುದು, ಇವೆಲ್ಲವುಗಳಿಗೆ ವರ್ಷಗಳೇ ಆದವು. ಸರಕಾರದ ಮಟ್ಟದಲ್ಲಿ ಬರೀ ಆಶ್ವಾಸನೆ ಮಾತ್ರ ಸಿಗುತ್ತಿದೆ. ಹೊರತು ಪರಿಣಾಮಕಾರಿಯಾಗಿ ಯಾವುದೇ ಕೆಲಸಗಳಾಗುತ್ತಿಲ್ಲ. ರಾಜಕಾರಣಿಗಳನ್ನು ಯಾರೂ ನಂಬದಿರುವ ಪರಿಸ್ಥಿತಿ ಇಲ್ಲಿದೆ. ಅಧಿಕಾರಿಗಳನ್ನು ಆಶ್ರಯಿಸಿದರೆ ಅವರು ಸಂಪನ್ಮೂಲದ ಕೊರತೆ ಬಗ್ಗೆ ಮಾತನಾಡುತ್ತಾರೆ. ``ಆನೆಗಳನ್ನು ಊರವರು ಹಿಡಿದರೆ ಅಥವಾ ಕಟ್ಟಿಹಾಕಿದರೆ ಅಧಿಕಾರಿಗಳು ಬರಬಹುದು, ಬಂದು ಅವರ ಕೆಲಸಮಾಡಬಹುದು’’ ಎಂದವರು ವ್ಯಂಗ್ಯವಾಗಿ ಹೇಳುತ್ತಾರೆ.
ಸುಳ್ಯ ಸುತ್ತಮುತ್ತ ನಾಗರಿಕ ಸಮಿತಿಗಳು!
ಇತ್ತೀಚೆಗೆ ಸುಳ್ಯದ ವಿವಿಧ ಗ್ರಾಮಗಳ ನಾಗರಿಕರು ಸೇರಿ ಸಮಿತಿ ರಚಿಸಿ, ಸರಕಾರದ ವತಿಯಿಂದ ಟಾಸ್ಕ್ ಫೋರ್ಸ್ ರಚನೆಯ ಬೇಡಿಕೆ ಇಡಲಾಗಿದೆ. ಆದರೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಮಿತಿ ಅಧ್ಯಕ್ಷ ಸುರೇಶ್ ಅವರು ಮಾತನಾಡಿ, "ನಮ್ಮ ಬೇಡಿಕೆ ಈಡೇರುವ ವರೆಗೆ ಹೋರಾಟ ಮಾಡುತ್ತೇವೆ. ಶಾಸಕರು, ಮಂತ್ರಿಗಳಿಗೆ ಮನವಿ ನೀಡಿದ್ದೇವೆ. ಪರಿಸ್ಥಿತಿ ಗಂಭೀರತೆಗೆ ತಲುಪುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕು," ಎಂದು ಒತ್ತಾಯಿಸುತ್ತಾರೆ.
ಮಕ್ಕಳನ್ನು ಶಾಲೆಗೆ ಕಳುಹಿಸುವ ಕಷ್ಟ
``ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕೂಡಾ ಭಯದ ವಿಚಾರವೇ ಆಗಿದೆ. ಮಕ್ಕಳು ಶಾಲೆಯಿಂದ ಮನೆ ತಲುಪುವವರೆಗೆ ಜೀವ ಕೈಯಲ್ಲಿ ಹಿಡಿದುಕೊಂಡು ಇರಬೇಕು. ಆನೆಗಳು ಮಕ್ಕಳು, ದೊಡ್ಡವರು ಎಂದು ವ್ಯತ್ಯಾಸ ಮಾಡೋಲ್ಲ. ಹಾಗೆಯೇ ವಾಹನದಲ್ಲಿ ಹೋಗುವವರು ಕೂಡಾ ಬಹಳ ಎಚ್ಚರಿಕೆಯಿಂದಲೇ ಹೋಗಬೇಕಾಗುತ್ತದೆ," ಎನ್ನುತ್ತಾರೆ ಮೇದಿನಡ್ಕದ ಗೃಹಿಣಿ ಜಾನಕಿ.
ಇಲ್ಲಿ ಹೆಚ್ಚಿನ ರಸ್ತೆಗಳು ತೋಟ ಇಲ್ಲವೇ ಕಾಡು ಮಧ್ಯೆ ಇದೆ, ರಬ್ಬರ್ ತೋಟಗಳೂ ಕಾಡಿನಂತೆ ಇರುವುದರಿಂದ ಅಲ್ಲೆಲ್ಲಾ ಹೋಗುವಾಗ ಮಕ್ಕಳೇಕೆ, ದೊಡ್ಡವರೇ ಹೆದರುತ್ತಾರೆ. ಸಂಜೆಯಾಗುತ್ತಲೇ ಪೇಟೆ-ಪಟ್ಟಣ ಅಂತ ಹೋದವರು, ಮನೆ ಸೇರಿಬಿಡಬೇಕು, ಸಂಜೆ-ರಾತ್ರಿಯಾದೊಡನೆ ಆನೆಗಳ ಓಡಾಟ ಜಾಸ್ತಿಯಾಗುತ್ತದೆ, ಎನ್ನುತ್ತಾರವರು. `` ಈಗೀಗ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಶುರುವಾಗಿದೆ. ಏಕೆಂದರೆ ಇರುವ ಒಬ್ಬರು ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸದೇ ವಿಧಿಯಿಲ್ಲ ಆದರೆ ಜೊತೆಗೆ ಆನೆಗಳ ಭಯ ಒಂದೆಡೆಯಾದರೆ, ದೂರದ ಊರುಗಳಲ್ಲಿ, ಹಾಸ್ಟೆಲ್ ಅಥವಾ ಸಂಬಂಧಿಕರ ಮನೆಗಳಲ್ಲಿ ಇದ್ದು ವಿದ್ಯಾಭ್ಯಾಸ ಮಾಡಿಸುವುದು ಆರ್ಥಿಕ ಮತ್ತು ಕೆಲವೊಂದು ಕೌಟುಂಬಿಕ ಕಾರಣಗಳಿಂದ ಕಷ್ಟವಾಗುತ್ತದೆ.’’ಎನ್ನುತ್ತಾರೆ ಜಾನಕಿ.
ಪುತ್ತೂರಿನಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿರುವ ಆರಂತೋಡು ನಿವಾಸಿ ಜೀವನ್, ತಾವು ವಾರಕ್ಕೊಂದು ಸಲ ಮನೆಗೆ ಬರುವಾಗ ಕೂಡಾ ಆನೆಗಳ ಬಗ್ಗೆ ಮಾಹಿತಿ ಪಡೆದೇ ಬರಬೇಕಾಗಿದೆ. ಹಾಗೆಯೇ ಆದಷ್ಟು ಹಗಲು ಹೊತ್ತಿನಲ್ಲಿಯೇ ಪ್ರಯಾಣಿಸುವುದಾಗಿ ಹೇಳುತ್ತಾರೆ. ``ಕಾಡಾನೆಗಳ ಹಾವಳಿ ಸಣ್ಣ ಮಗುವಿನಿಂದ ಹಿಡಿದು ವೃದ್ಧರವರೆಗೂ ನಿದ್ದೆಗೆಡಿಸಿದೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವಾದರೆ ಸುಳ್ಯದ ಎಲ್ಲಾ ರೀತಿಯ ಅಭಿವೃದ್ಧಿ ಕುಂಠಿತ ಆಗಬಹುದು. ಮುಖ್ಯವಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾದರೆ ಭವಿಷ್ಯವೇ ಗೊಂದಲದ ಗೂಡಾಗಬಹುದು’ ಎನ್ನುತ್ತಾರೆ ಅವರು.
ದೈನಂದಿನ ಕೆಲಸ ಕಷ್ಟ
ದೈನಂದಿನ ಕೆಲಸಕ್ಕಾಗಿ ಸುಳ್ಯ ಪಟ್ಟಣವನ್ನೇ ಅವಲಂಬಿಸಿರುವ ಕಾರ್ಪೆಂಟರ್ ಪುರುಷೋತ್ತಮ ಅವರು ಆನೆಗಳ ಭಯದಿಂದ ತನ್ನ ಮನೆ ಕರ್ಬಪಾಡಿಯಿಂದ ಪಟ್ಟಣಕ್ಕೆ ಬರುವುದೇ ಕಷ್ಟವಾಗುತ್ತದೆ. ಆನೆಗಳ ಹಿಂಡು ಬಂದಿದೆ ಎಂದು ಸುದ್ದಿಯಾದ ದಿನ ಮನೆಯಲ್ಲಿ ಸಂಸಾರ ಬಿಟ್ಟು ಹೊರಡುವುದು ಭಯವಾಗುತ್ತದೆ. ಇದರಿಂದಾಗಿ ಹಲವುದಿನಗಳ ಕೆಲಸ ನಷ್ಟವಾಗುತ್ತದೆ. ಹಾಗೆಯೇ ಕೆಲಸಕ್ಕೆ ಹೋದರೆ ಸಂಜೆವರೆಗೆ ದುಡಿಯದೇ ವಿಧಿಯಿಲ್ಲ. ಸಂಜೆಯಾಗುತ್ತಲೇ ಆನೆಗಳ ಸಂಚಾರ ಶುರುವಾಗುವ ಕಾರಣ ಭಯ ಜಾಸ್ತಿ. "ಕುಟುಂಬ ನಿರ್ವಹಣೆಗೆ ಹಣ ಹೊಂದಾಣಿಕೆಯೂ ಕಷ್ಟವಾಗುತ್ತಿದೆ. ಕೆಲಸಕ್ಕೆ ಹೋಗದಿದ್ದರೆ ಹಣಕಾಸಿನ ಸಮಸ್ಯೆ, ಹೋದರೆ ಜೀವದ ಭಯ’’ ಹೀಗೆ ತಮ್ಮ ಜೀವನ ಕಷ್ಟದಲ್ಲಿದೆ," ಎನ್ನುತ್ತಾರೆ.
ದೃಷ್ಟಿಕೋನವೇ ಬದಲಾಗಿದೆ!
ಸುಳ್ಯ ತಾಲೂಕನ್ನು ಇತರ ತಾಲೂಕಿನ ಜನ ನೋಡುವ ದೃಷ್ಟಿಕೋನವೇ ಬದಲಾಗಿದೆ ಎನ್ನುತ್ತಾರೆ ಅರ್ಚಕ ವೃತ್ತಿಯ ಶ್ರೀನಿವಾಸ ಭಟ್. ಸುಳ್ಯದ ಹೆಸರಿನ ಜೊತೆಗೆ ಕಾಡಾನೆ ಎಂಬ ಶಬ್ದ ಜೊತೆಯಲ್ಲಿ ಬರುತ್ತದೆ. ಈ ಊರಿಗೆ ಬೇರೆ ಊರಿನವರು ಬರಲು ಹೆದರುತ್ತಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳನ್ನು ಕೇಳುವವರಿಲ್ಲ. ಇಲ್ಲಿ ಎಲ್ಲಾ ಜಾತಿಯ ಜನರಿದ್ದಾರೆ. ಹೆಚ್ಚಿನ ಮನೆಗಳಲ್ಲಿ ಒಂದಲ್ಲ ಒಂದು ಯುವಕ ಮದುವೆಯಾಗಲು ಹೆಣ್ಣು ಸಿಗದೇ ಬೇಸರದಲ್ಲಿರುತ್ತಾನೆ. ಯಾಕೆಂದರೆ ಬೇರೆ ಊರಿನ ಜನ ವಿವಾಹ ಪ್ರಸ್ತಾಪಕ್ಕೆ ಹೆದರುತ್ತಾರೆ. ಬೇರೆ ಊರಿನವರು ಇಲ್ಲಿನವರಿಗೆ ಹೆಣ್ಣುಕೊಡಲು ತಯಾರಿಲ್ಲ, ಎಂದು ಯುವಕರ ಬವಣೆಯನ್ನು ವಿವರಿಸುತ್ತಾರೆ.
ಒಳ್ಳೆಯ ವಿದ್ಯಾಭ್ಯಾಸ ಪಡೆದು ಒಳ್ಳೆಯ ಉದ್ಯೋಗಗಳಿಸಿದವರು ಸುಳ್ಯದ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಬಹುತೇಕ ಯುವಕರ ಕನಸೇ ಈಗ ಪಟ್ಟಣಸೇರುವುದಾಗಿದೆ. ಕೃಷಿಯತ್ತ ಯುವಕರಿಗೆ ಆಸಕ್ತಿ ಇದ್ದರೂ ಸುಳ್ಯ ತಾಲೂಕಿನಲ್ಲಿ ಬೇಡ ಎನ್ನುತ್ತಿದ್ದಾರೆ. ಹಾಗಾಗಿ ಕಾಡಾನೆ ಹಾವಳಿ ನಿಲ್ಲದೇ ಇದ್ದರೆ ಸುಳ್ಯ ಸ್ವಾತಂತ್ರ್ಯಪೂರ್ವದಂತೆ ಕುಗ್ರಾಮಗಳ ನಾಡೇ ಆಗಬಹುದು ಎನ್ನುತ್ತಾರೆ, ಶ್ರೀನಿವಾಸ ಭಟ್.
ಕಾಡಿನ ಅಧ್ಯಯನ ಅಗತ್ಯವಿದೆ!
ಮಂಗಳೂರು ಅರಣ್ಯ ವಲಯದ ನಿವೃತ್ತ ರೇಂಜ್ ಫಾರೆಸ್ಟ್ ಆಫೀಸರ್ ಸಂಜೀವ ಶೆಟ್ಟಿ ಪ್ರಕಾರ ಕಾಡಿನಲ್ಲಿ ಆಗಿರುವ ಸಮಸ್ಯೆಯಿಂದ ಆನೆಗಳು ಕಾಡು ಬಿಟ್ಟು ನಾಡಿಗೆ ಬರುತ್ತಿದೆ. ಕಾಡಿನಲ್ಲಿ ಆಹಾರದ ಕೊರತೆ, ಮನುಷ್ಯರಿಂದ ಆಗಿರುವ ಒತ್ತುವರಿ ಅಥವಾ ಬೇಟೆಗಾರಿಕೆಯಂತಹಾ ಕಿರುಕುಳ ಇತ್ಯಾದಿ ಸಮಸ್ಯೆಗಳನ್ನು ಪತ್ತೆ ಹಚ್ಚಿ, ಆನೆ ಪಾರ್ಕ್ ನಂತಹಾ ವಲಯಗಳನ್ನು ಸೃಷ್ಟಿಸಬೇಕಾಗಿದೆ. ಸುಳ್ಯದ ಸಮಸ್ಯೆಗೆ ಸದ್ಯಕ್ಕೆ ಆನೆಗಳನ್ನು ಕಾಡಿಗೆ ಅಟ್ಟುವುದು ಮತ್ತು ಅಟ್ಟಿದ ನಂತರ ಅವುಗಳು ಅಲ್ಲಿಯೇ ಇರುವಂತಹಾ ವಾತಾವರಣ ನಿರ್ಮಿಸಬೇಕಾಗಿದೆ. ಇದಕ್ಕೆ ಮಾನವ ಶ್ರಮದ ಜೊತೆಗೆ ವನ್ಯಜೀವಿ ತಜ್ಞರುಗಳು, ಅಧಿಕಾರಿಗಳು ಸೇರಿ ಪ್ರಯತ್ನ ಪಡಬೇಕು, ಎಂದು ಅಭಿಪ್ರಾಯ ಪಡುತ್ತಾರೆ.
ತಂತ್ರಜ್ಞಾನ ಫಲಿಸಿಲ್ಲ!
ಕಳೆದೊಂದು ದಶಕಗಳಿಂದ ಸ್ಥಳೀಯರು, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಇನ್ನೂ ಹಲವರು ವಿವಿಧ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ವಿಧಾನಗಳ ಮೂಲಕ ಆನೆಗಳಿಗೆ ಭಯ ಹುಟ್ಟಿಸಿ ಅವನ್ನು ಅಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಮೋಷನ್ ಸೆನ್ಸಾರ್ ಮೂಲಕ ಶಬ್ದ ಬರುವುದು, ಬೆಳಕು ಬರುವುದು, ಸೋಲಾರ್ ಪವರ್‌ನ ಬೇಲಿ, ಕಂದರಗಳನ್ನು ಸೃಷ್ಟಿಸುವುದು, ಮುಳ್ಳು ಬೇಲಿ ನೆಡುವುದು ಇತ್ಯಾದಿ ಪ್ರಯತ್ನಗಳು ಯಾವುದೂ ಕೂಡಾ ಕಾಡಿನ ದೈತ್ಯಗಳ ಪಾಲಿಗೆ ನಗಣ್ಯ!
ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, "ಕಾಡಾನೆ ಹಾವಳಿ ಬಗ್ಗೆ ಹಲವಾರು ಬಾರಿ ಸದನದಲ್ಲಿ ಮಾತನಾಡಿದ್ದೇನೆ. ಅರಣ್ಯ ಸಚಿವರ ಬಳಿ ಮಾತನಾಡಿದ್ದೇನೆ. ಅರಣ್ಯ ಇಲಾಖೆ ವತಿಯಿಂದ ಸಾಧ್ಯವಾದಷ್ಟು ಕೆಲಸ ಆಗುತ್ತಿದೆ, ಎಂದರು. ಸ್ಥಳೀಯರು ಮತ್ತು ಅಧಿಕಾರಿಗಳ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಸಿ, ಆನೆ ಹಾವಳಿ ತಡೆಗಟ್ಟುವ ಬಗ್ಗೆ ಕೂಡಾ ಪ್ರಸ್ತಾಪವಾಗಿದೆ," ಎಂದಿದ್ದಾರೆ.

