Malnad Distress | ಎರಡನೇ ದಿನಕ್ಕೆ ಮಲೆನಾಡು ಭೂ ಹಕ್ಕು ಹೋರಾಟ: ಅಧಿಕಾರಿಗಳಿಗೆ ದಿಗ್ಬಂಧನ
x
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಭೂ ಹಕ್ಕಿಗಾಗಿ ನಡೆಯುತ್ತಿರುವ ಮುಳುಗಡೆ ಸಂತ್ರಸ್ತರ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.

Malnad Distress | ಎರಡನೇ ದಿನಕ್ಕೆ ಮಲೆನಾಡು ಭೂ ಹಕ್ಕು ಹೋರಾಟ: ಅಧಿಕಾರಿಗಳಿಗೆ ದಿಗ್ಬಂಧನ

ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಪರವಾಗಿ ಭೇಟಿ ನೀಡಿದ್ದ ಜಿಲ್ಲಾ ಪಂಚಾಯತ್‌ ಸಿ.ಇ.ಒ ಹೇಮಂತ್‌ ಹಾಗೂ ಸಾಗರ ಉಪವಿಭಾಗಧಿಕಾರಿ ಯತೀಶ್‌ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಮಾತುಕತೆ ಮಗಿಸಿ ಅವರು ಹೊರಬರುವಾಗ ಧರಣಿನಿರತರು ಹೊರಗಡೆಯಿಂದ ಗೇಟ್ ಹಾಕಿ ದಿಗ್ಧಂಧನ ವಿಧಿಸಿದರು.


ಭೂಮಿ ಹಕ್ಕು ನೀಡುವಂತೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆಸುತ್ತಿರುವ ಮಲೆನಾಡು ಮುಳುಗಡೆ ಸಂತ್ರಸ್ತರು. ಅರಣ್ಯಭೂಮಿ ಸಾಗುವಳಿದಾರರು ಮತ್ತು ಭೂ ಹಕ್ಕು ವಂಚಿತರ ಹೋರಾಟ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಮಂಗಳವಾರ ಬೆಳಿಗ್ಗೆ ಪ್ರತಿಭಟನಾನಿರತರನ್ನು ಮನವೊಲಿಸಲು ಜಿಲ್ಲಾಧಿಕಾರಿಗಳ ಪ್ರತಿನಿಧಿಯಾಗಿ ಜಿಲ್ಲಾ ಪಂಚಾಯ್ತಿ ಸಿಇಒ ಹೇಮಂತ್‌ ಹಾಗೂ ಉಪವಿಭಾಗಾಧಿಕಾರಿ ಯತೀಶ್‌ ರೈತರೊಂದಿಗೆ ಸಭೆ ನಡೆಸಿದರು. ಆದರೆ, ಅಧಿಕಾರಿಗಳು ನೀಡಿದ ಭರವಸೆಯಿಂದ ಸಮಾಧಾನಗೊಳ್ಳದ ಪ್ರತಿಭಟನಾನಿರತರು ಕಚೇರಿಯ ಗೇಟ್‌ ಬಂದ್‌ ಮಾಡಿ ಅಧಿಕಾರಿಗಳಿಗೆ ದಿಬ್ಬಂಧನ ವಿಧಿಸಿ ಪ್ರತಿಭಟನೆಯ ಬಿಸಿ ಮುಟ್ಟಿಸಿದರು. ಈ ಸಂದರ್ಭ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು.

ಸೋಮವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪಮತ್ತು ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು ಚಾಲನೆ ನೀಡಿದ್ದ ಭೂ ಹಕ್ಕಿಗಾಗಿನ ರೈತ ಚಳವಳಿ ಮಂಗಳವಾರ ಮತ್ತಷ್ಟು ಬಿರುಸು ಪಡೆದುಕೊಂಡಿದೆ.

ಸಂಸದ ಬಿ ವೈ ರಾಘವೇಂದ್ರ ಭೇಟಿ

ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸಂಸದ ಬಿ ವೈ ರಾಘವೇಂದ್ರ ಭೇಟಿ ನೀಡಿದರು. ಈ ವೇಳೆ ಅರಣ್ಯ ಹಕ್ಕು ಕಾಯ್ದೆಯ ತಿದ್ದುಪಡಿ ಅಗತ್ಯ ಮತ್ತು ಶಿವಮೊಗ್ಗದ ವಿವಿಧ ಯೋಜನಾ ಸಂತ್ರಸ್ತರಿಗೆ ಭೂ ಹಕ್ಕು ನೀಡಲು ಈಗಿರುವ ನಿಯಮಗಳು ತೊಡಕಾಗಿರುವ ಬಗ್ಗೆ ಪ್ರತಿಭಟನಾಕಾರರು ಸಂಸದರ ಗಮನ ಸೆಳೆದರು. ಅಲ್ಲದೆ, ನಾಡಿಗಾಗಿ ತ್ಯಾಗ ಮಾಡಿದ ಮಲೆನಾಡು ರೈತರನ್ನು ಸರ್ಕಾರಗಳು ಭೂಗಳ್ಳರಂತೆ ನಡೆಸಿಕೊಳ್ಳುತ್ತಿರುವುದು ಮತ್ತು ಅವರ ಭೂ ಹಕ್ಕು ನೀಡಲು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ, ಅರಣ್ಯ ಹಕ್ಕು ಕಾಯ್ದೆಯಲ್ಲಿ ಸದ್ಯ ಇರುವ 75 ವರ್ಷಗಳ ಸಾಕ್ಷ್ಯ ಒದಗಿಸುವ ನಿಯಮವನ್ನು 25 ವರ್ಷಗಳಿಗೆ ತಗ್ಗಿಸುವ ಕುರಿತು ಈಗಾಗಲೇ ಹಲವು ಬಾರಿ ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಸರ್ಕಾರದ ಗಮನ ಸೆಳೆಯಲು ನನ್ನೊಬ್ಬನ ದನಿ ಸಾಲದು. ಹಾಗಾಗಿ ಪಕ್ಷದ ಮತ್ತು ರಾಜ್ಯದ ಇತರೆ ಸಂಸದರ ಬೆಂಬಲವನ್ನೂ ಕ್ರೋಡೀಕರಿಸಿಕೊಂಡು ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ಗಮನಕ್ಕೆ ತರಲಾಗುವುದು ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅರಣ್ಯ ಸಚಿವರೊಂದಿಗೆ ನಿಯೋಗ ತೆರಳಿ ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ಕಾನೂನು ತಿದ್ದುಪಡಿ ಮೂಲಕ ಮಲೆನಾಡು ಯೋಜನಾ ಸಂತ್ರಸ್ತರಿಗೆ ನೆರವಾಗಲು ಕೋರಲಾಗುವುದು ಎಂದೂ ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ, ಜಿ ಟಿ ಸತ್ಯನಾರಾಯಣ ತುಮರಿ, ತೀ ನಾ ಶ್ರೀನಿವಾಸ್‌, ವಿ ಜಿ ಶ್ರೀಕರ್‌, ಬಿ ಆರ್‌ ಜಯಂತ್‌, ಮಾಜಿ ಶಾಸಕ ಹರತಾಳು ಹಾಲಪ್ಪ, ಮಲ್ಲಿಕಾರ್ಜುನ ಹಕ್ರೆ, ಟಿ.ಡಿ.ಮೇಘರಾಜ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.

Read More
Next Story