Malnad Distress | ಭೂಮಿ ಬಿಕ್ಕಟ್ಟು ಇತ್ಯರ್ಥಕ್ಕೆ ವಿಶೇಷ ಕಾರ್ಯಪಡೆ: ಸರ್ಕಾರದ ಭರವಸೆ ಬೆನ್ನಲ್ಲೇ ಧರಣಿ ವಾಪಸ್‌
x

Malnad Distress | ಭೂಮಿ ಬಿಕ್ಕಟ್ಟು ಇತ್ಯರ್ಥಕ್ಕೆ ವಿಶೇಷ ಕಾರ್ಯಪಡೆ: ಸರ್ಕಾರದ ಭರವಸೆ ಬೆನ್ನಲ್ಲೇ ಧರಣಿ ವಾಪಸ್‌

ಶರಾವತಿ ಮತ್ತಿತರ ಯೋಜನಾ ಸಂತ್ರಸ್ತರು ಸೇರಿದಂತೆ ಮಲೆನಾಡಿನ ರೈತರಿಗೆ ಭೂ ಹಕ್ಕಿಗಾಗಿ ಒತ್ತಾಯಿಸಿ ಕಳೆದ ಹನ್ನೊಂದು ದಿನಗಳಿಂದ ಸಾಗರದಲ್ಲಿ ನಡೆಯುತ್ತಿದ್ದ ಆಹೋರಾತ್ರಿ ಧರಣಿಯನ್ನು ಪ್ರತಿಭಟನಾಕಾರರು ಕೈಬಿಟ್ಟಿದ್ದಾರೆ.


ಶರಾವತಿ ಮತ್ತಿತರ ಯೋಜನಾ ಸಂತ್ರಸ್ತರು ಸೇರಿದಂತೆ ಮಲೆನಾಡಿನ ರೈತರ ಭೂ ಹಕ್ಕಿಗಾಗಿ ಒತ್ತಾಯಿಸಿ ಕಳೆದ ಹನ್ನೊಂದು ದಿನಗಳಿಂದ ಶಿವಮೊಗ್ಗ ಜಿಲ್ಲೆಯ ಸಾಗರ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿದ್ದ ಆಹೋರಾತ್ರಿ ಧರಣಿಯನ್ನು ಪ್ರತಿಭಟನಾಕಾರರು ಕೈಬಿಟ್ಟಿದ್ದಾರೆ.

ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ನಡೆದ ಮುಖ್ಯ ಕಾರ್ಯದರ್ಶಿಗಳು ನಡೆಸಿದ ರೈತ ಮುಖಂಡರ ಸಭೆಯಲ್ಲಿ ಮಲೆನಾಡಿನ ಭೂ ಹಕ್ಕು ಸಂಬಂಧಿತ ಎಲ್ಲಾ ವಿಷಯಗಳ ಇತ್ಯರ್ಥಕ್ಕೆ ವಿಶೇಷ ಕಾರ್ಯಪಡೆ ರಚನೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಆ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪ ಅವರು ಗುರುವಾರ ಬೆಳಿಗ್ಗೆ ಸಾಗರದಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾಗಿ ಪ್ರತಿಭಟನೆ ಹಿಂತೆಗೆದುಕೊಳ್ಳಲು ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತರು ತಮ್ಮ ಹೋರಾಟ ಕೈಬಿಟ್ಟಿದ್ದಾರೆ.

ಕಳೆದ ಹನ್ನೊಂದು ದಿನಗಳಿಂದ ಸಾಗರದಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಸಾಗರ ಪಟ್ಟಣದಿಂದ ಪಾದಯಾತ್ರೆ ನಡೆಸಿದ್ದರು. ಆ ವೇಳೆ ಕಾರ್ಗಲ್ ಪಟ್ಟಣದಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದರು.

ಅದಾದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ರೈತ ಮುಖಂಡರನ್ನು ಬೆಂಗಳೂರಿಗೆ ಕರೆದು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ವಿಶೇಷ ಸಮಾಲೋಚನಾ ಸಭೆ ನಡೆಸಿದ್ದರು. ಸಭೆಯಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಕಾನೂನು ಇಲಾಖೆಯ ಕಾರ್ಯದರ್ಶಿಗಳು ಕೂಡ ಹಾಜರಿದ್ದರು.

ಶರಾವತಿ, ವಾರಾಯಿ, ಚಕ್ರಾ, ಸಾವೆಹಕ್ಲು, ತುಂಗಾ, ಭದ್ರಾ ಜಲಾಶಯಗಳ ಸಂತ್ರಸ್ತರು ಹಾಗೂ ಅರಣ್ಯ ಭೂಮಿ ಸಾಗುವಳಿದಾರರು ಮತ್ತು ಬಗರ್ಹುಕುಂ ಸಾಗುವಳಿದಾರರಿಗೆ ಭೂಮಿ ನೀಡಲು ಸಮಸ್ಯೆಯಾಗಿರುವ ಇಂಡೀಕರಣ, ಅರಣ್ಯ ಹಕ್ಕು ಕಾಯ್ದೆ, ಬಗರ್ಹುಕುಂ ಸಮಿತಿಗಳು, ಸರ್ಕಾರ ಮತ್ತು ನ್ಯಾಯಾಲಯದ ಹಂತದಲ್ಲಿ ಆಗಬೇಕಾದ ಪ್ರಕ್ರಿಯೆಗಳ ವಿಷಯದಲ್ಲಿ ಸಂತ್ರಸ್ತರ ಪರವಾಗಿ ಸರ್ಕಾರ ನಿಲ್ಲಲಿದೆ. ಸರ್ಕಾರ ರೈತರನ್ನು ಅರಣ್ಯ ಒತ್ತುವರಿ ಅಥವಾ ಸರ್ಕಾರಿ ಭೂಮಿ ತೆರವು ಕಾರ್ಯಾಚರಣೆಯ ಭಾಗವಾಗಿ ಎತ್ತಂಗಡಿ ಮಾಡಲು ಬಿಡುವುದಿಲ್ಲ ಎಂದು ಮುಖ್ಯ ಕಾರ್ಯದರ್ಶಿಗಳು ರೈತರಿಗೆ ಭರವಸೆ ನೀಡಿದರು.

ಅಲ್ಲದೆ, ವಿವಿಧ ಯೋಜನಾ ಸಂತ್ರಸ್ತರು ಸೇರಿದಂತೆ ಮಲೆನಾಡಿನ ಭೂಮಿ ಹಕ್ಕು ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದೂ ಮುಖ್ಯಕಾರ್ಯದರ್ಶಿಗಳು ಈ ಸಭೆಯಲ್ಲಿ ಘೋಷಿಸಿದರು. ಅಲ್ಲದೆ, ಕಾರ್ಯಪಡೆ ರಚನೆಯಾಗಿ ಭೂಮಿ ಹಕ್ಕು ವಿಷಯ ಇತ್ಯರ್ಥವಾಗುವವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ರೈತರನ್ನು ಅರಣ್ಯ ಅಥವಾ ಸರ್ಕಾರಿ ಭೂಮಿಯಿಂದ ತೆರವು ಮಾಡುವುದಿಲ್ಲ ಮತ್ತು ಈಗಾಗಲೇ ನೀಡಲಾಗಿರುವ ತೆರವು ನೋಟಿಸ್ ಹಿಂಪಡೆಯಲಾಗುವುದು ಎಂದೂ ಅವರು ರೈತರಿಗೆ ಭರವಸೆ ನೀಡಿದರು.

ಅರಣ್ಯಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ 2011ರ ವಿಶೇಷ ನ್ಯಾಯಾಲಯದಲ್ಲಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸುವ ಮೂಲಕ ರೈತರಿಗೆ ತೊಂದರೆಕೊಡಲಾಗುತ್ತಿದೆ. ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್ 04ರ ಅಡಿಯಲ್ಲಿ ಮೀಸಲು ಅರಣ್ಯ ಪ್ರಾಥಮಿಕ ಅಧಿಸೂಚನೆಯಿಂದ ರೈತರ ಹಿಡುವಳಿ ಭೂಮಿ, ಬಗರ್ ಹುಕುಂ ಭೂಮಿ ಹಾಗೂ ಜನವಸತಿ ಪ್ರದೇಶಗಳನ್ನು ಕೈಬಿಟ್ಟು ಸೆಕ್ಷನ್ 17ರ ಅಡಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ, ಭೂಮಿ ಹಾಗೂ ವಸತಿ ಹಕ್ಕನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆದರು.

ಸುಪ್ರೀಂಕೋರ್ಟ್‌ನಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿಗೆ ಸಂಬಂಧಿಸಿದಂತೆ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಇದನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಕ್ರಮವಹಿಸಬೇಕು ಎಂದೂ ಸಚಿವರು ತಿಳಿಸಿದರು.

ಸಭೆಯಲ್ಲಿ ರೈತ ಮುಖಂಡರಾದ ಬಿ ಆರ್ ಜಯಂತ್, ತಿ.ನಾ.ಶ್ರೀನಿವಾಸ್, ದಿನೇಶ್ ಶಿರವಾಳ, ವಿ ಜಿ ಶ್ರೀಕರ್, ಬಿ.ಎ.ರಮೇಶ್ ಹೆಗಡೆ, ಜಿ ಟಿ ಸತ್ಯನಾರಾಯಣ ತುಮರಿ, ದುಗೂರು ಪರಮೇಶ್, ರಾಘವೇಂದ್ರ ಸಂಪೋಡಿ, ಗಣೇಶ್ ತುಮರಿ ಮತ್ತಿತರರು ಭಾಗವಹಿಸಿದ್ದರು.

ಕಾಗೋಡು ತಿಮ್ಮಪ್ಪ ಭರವಸೆ

ಬೆಂಗಳೂರು ಸಭೆಯ ಬಳಿಕವೂ ಮಾರನೇ ದಿನ ಗುರುವಾರ, ಸಾಗರದಲ್ಲಿ ರೈತರು ತಮ್ಮ ಆಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದರು. ಈ ವಿಷಯ ತಿಳಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರೈತ ಮುಖಂಡರೊಂದಿಗೆ ಮಾತನಾಡಿ, ಸರ್ಕಾರ ವಿಶೇಷ ಕಾರ್ಯಪಡೆ ರಚಿಸುವ ಮತ್ತು ಯಾವುದೇ ರೈತರನ್ನು ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುವ ಭರವಸೆ ನೀಡಿದೆ. ಸಚಿವ ಮಧು ಬಂಗಾರಪ್ಪ ಹಾಗೂ ಮುಖ್ಯಕಾರ್ಯದರ್ಶಿಗಳು ಖುದ್ದು ಆಸಕ್ತಿ ವಹಿಸಿ ರೈತ ಪರ ಕಾಳಜಿ ತೋರಿದ್ದಾರೆ. ಹಾಗಾಗಿ ರೈತರು ಧರಣಿ ಹಿಂಪಡೆಯಬೇಕು ಎಂದು ಕೋರಿದರು.

ಹಿರಿಯ ನಾಯಕರ ಮನವಿಗೆ ಸ್ಪಂದಿಸಿ ರೈತ ಮುಖಂಡರಾದ ತೀ ನಾ ಶ್ರೀನಿವಾಸ್, ದಿನೇಶ್ ಶಿರವಾಳ ಮತ್ತಿತರ ಧರಣಿನಿರತರು ಧರಣಿ ಕೈಬಿಡುವುದಾಗಿ ಘೋಷಿಸಿದರು. ಆದರೆ, ಒಂದು ವೇಳೆ ಮಲೆನಾಡಿನಲ್ಲಿ ಯಾವುದೇ ರೈತರ ಎತ್ತಂಗಡಿ ಯತ್ನವಾದಲ್ಲಿ, ಒತ್ತುವರಿ ತೆರವು ನೋಟಿಸ್ ನೀಡಿದ್ದಲ್ಲಿ ಕೂಡಲೇ ಹೋರಾಟ ಪುನರಾರಂಭಿಸುವುದಾಗಿಯೂ ಅವರು ಹೇಳಿದ್ದಾರೆ.

Read More
Next Story