ಹೃದಯಾಘಾತ ತಡೆಗೆ ಮಹತ್ವದ ಹೆಜ್ಜೆ: ಇನ್ನು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ-ಇಸಿಜಿ ಸೌಲಭ್ಯ
x

ದಿನೇಶ್‌ ಗುಂಡೂರಾವ್‌ 

ಹೃದಯಾಘಾತ ತಡೆಗೆ ಮಹತ್ವದ ಹೆಜ್ಜೆ: ಇನ್ನು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 'ಟೆಲಿ-ಇಸಿಜಿ' ಸೌಲಭ್ಯ

ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಧನಂಜಯ್ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಮಾಹಿತಿ ಕೊಟ್ಟರು.


ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 'ಟೆಲಿ-ಇಸಿಜಿ' ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಧನಂಜಯ್ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವ್ಯವಸ್ಥೆಯು ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಸ್ಥಳೀಯ ಆಸ್ಪತ್ರೆಗಳಲ್ಲೇ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಟೆಲಿ-ಇಸಿಜಿ ಮೂಲಕ ತಜ್ಞ ವೈದ್ಯರು ತಕ್ಷಣವೇ ಮಾರ್ಗದರ್ಶನ ನೀಡಲಿದ್ದು, ಆರಂಭಿಕ ಹಂತದಲ್ಲೇ ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆಹಚ್ಚಿ, ಹಠಾತ್ ಹೃದಯಾಘಾತಗಳನ್ನು ತಡೆಯಲು ಇದು ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ' ವಿಸ್ತರಣೆ

ಸಚಿವ ದಿನೇಶ್ ಗುಂಡೂರಾವ್ ಅವರು 'ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ'ಯ ಯಶಸ್ಸನ್ನು ಶ್ಲಾಘಿಸಿದರು. ಈ ಯೋಜನೆಯು ಈಗಾಗಲೇ ರಾಜ್ಯದ 86 ಸರ್ಕಾರಿ ಆಸ್ಪತ್ರೆಗಳಲ್ಲಿ 'ಹಬ್ ಮತ್ತು ಸ್ಪೋಕ್' ಮಾದರಿಯಲ್ಲಿ ಚಿಕಿತ್ಸೆ ನೀಡುತ್ತಿದೆ ಮತ್ತು ಇದು ಸಾವಿರಾರು ಜನರ ಜೀವ ಉಳಿಸಿದೆ ಎಂದು ಹೇಳಿದರು. ಈ ಯೋಜನೆಯನ್ನು ಎಲ್ಲಾ ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಸದನಕ್ಕೆ ತಿಳಿಸಿದರು.

25,000 ರೂಪಾಯಿ 'ಟೆನೆಕ್ಟೆಪ್ಲೇಸ್' ಚುಚ್ಚುಮದ್ದನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಒದಗಿಸುವಂತೆ ಸದಸ್ಯ ಧನಂಜಯ್ ಸರ್ಜಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಚುಚ್ಚುಮದ್ದನ್ನು ಹೃದಯ ಜ್ಯೋತಿ ಯೋಜನೆಯಡಿ ಈಗಾಗಲೇ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಯೋಜನೆ ವಿಸ್ತರಣೆಯಾದಂತೆ, ಈ ಚುಚ್ಚುಮದ್ದು ಕೂಡ ಎಲ್ಲಾ ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಾಗಲಿದೆ ಎಂದರು.

ಆರೋಗ್ಯ ಮೂಲಸೌಕರ್ಯ ಬಲವರ್ಧನೆ

ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಹೊಸ ಕ್ಯಾಥ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಘೋಷಿಸಿದರು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ, ಬೆಂಗಳೂರಿನ ಸಿ.ವಿ. ರಾಮನ್ ನಗರ ಆಸ್ಪತ್ರೆ ಹಾಗೂ ಹೊಸಪೇಟೆ ಆಸ್ಪತ್ರೆಗಳಲ್ಲಿ ಹೃದಯ ರಕ್ತನಾಳಗಳ ಚಿಕಿತ್ಸೆಗಾಗಿ ಈ ಕ್ಯಾಥ್ ಲ್ಯಾಬ್‌ಗಳು ಕಾರ್ಯನಿರ್ವಹಿಸಲಿವೆ.

ಹೃದಯಾಘಾತ, ಪಾರ್ಶ್ವವಾಯು ಮತ್ತು ಕಿಡ್ನಿ ವೈಫಲ್ಯದಂತಹ ಕಾಯಿಲೆಗಳಿಗೆ ರಕ್ತದೊತ್ತಡ ಮತ್ತು ಮಧುಮೇಹವೇ ಮೂಲ ಕಾರಣ ಎಂಬುದನ್ನು ಸಚಿವರು ಒತ್ತಿ ಹೇಳಿದರು. ಈ ರೋಗಗಳನ್ನು ಆರಂಭದಲ್ಲೇ ನಿಯಂತ್ರಿಸಿದರೆ ದೊಡ್ಡ ಅಪಾಯಗಳಿಂದ ಪಾರಾಗಬಹುದು ಎಂದರು. ಈ ಉದ್ದೇಶದಿಂದ 'ಗೃಹ ಆರೋಗ್ಯ' ಯೋಜನೆಯಡಿ 30 ವರ್ಷ ಮೇಲ್ಪಟ್ಟವರನ್ನು ಮನೆ ಬಾಗಿಲಲ್ಲೇ ತಪಾಸಣೆ ಮಾಡಿ, ರಕ್ತದೊತ್ತಡ, ಮಧುಮೇಹ ಸೇರಿದಂತೆ 14 ಕಾಯಿಲೆಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡುವ ಯೋಜನೆ ಪ್ರಾರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಯೋಜನೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದು, ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಸಚಿವರು ತಿಳಿಸಿದರು.

Read More
Next Story