Major Crackdown in Kolar: Over 40 Private Luxury Buses Seized for Massive Tax Evasion
x
ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿರುವ ಬಸ್‌ಗಳು

ಕೋಲಾರದಲ್ಲಿ ಕಾರ್ಯಾಚರಣೆ: ತೆರಿಗೆ ವಂಚನೆ ಆರೋಪದಡಿ 40ಕ್ಕೂ ಹೆಚ್ಚು ಖಾಸಗಿ ಬಸ್‌ಗಳ ವಶ

ವಶಪಡಿಸಿಕೊಳ್ಳಲಾದ ಬಸ್‌ಗಳಲ್ಲಿ ಬಹುತೇಕವು ನಾಗಾಲ್ಯಾಂಡ್ (NL), ಅರುಣಾಚಲ ಪ್ರದೇಶ (AR) ಸೇರಿದಂತೆ ಈಶಾನ್ಯ ರಾಜ್ಯಗಳ ನೋಂದಣಿ ಸಂಖ್ಯೆಯನ್ನು ಹೊಂದಿವೆ.


Click the Play button to hear this message in audio format

ಕರ್ನಾಟಕ ಸಾರಿಗೆ ಇಲಾಖೆಯು ಬುಧವಾರ ಕೋಲಾರ ಜಿಲ್ಲೆಯಲ್ಲಿ ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಿದ್ದು, ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ 40ಕ್ಕೂ ಹೆಚ್ಚು ಐಷಾರಾಮಿ ಖಾಸಗಿ ಬಸ್‌ಗಳನ್ನು ವಶಪಡಿಸಿಕೊಂಡಿದೆ. ಈಶಾನ್ಯ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು, ಕರ್ನಾಟಕದಲ್ಲಿ ಅಕ್ರಮವಾಗಿ ಸಂಚರಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಸೇರಬೇಕಾದ ತೆರಿಗೆಯನ್ನು ವಂಚಿಸುತ್ತಿದ್ದ ಜಾಲವೊಂದಕ್ಕೆ ಈ ಮೂಲಕ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಹಠಾತ್ ದಾಳಿ ನಡೆಸಿದರು. ಈ ವೇಳೆ ತಪಾಸಣೆಗೆ ಒಳಪಡಿಸಿದ ನೂರಾರು ಬಸ್‌ಗಳ ಪೈಕಿ, ಸುಮಾರು 40ಕ್ಕೂ ಹೆಚ್ಚು ಬಸ್‌ಗಳು ಕರ್ನಾಟಕದ ರಸ್ತೆ ತೆರಿಗೆಯನ್ನು ಪಾವತಿಸದೆ, ನಿಯಮಬಾಹಿರವಾಗಿ ಸಂಚರಿಸುತ್ತಿರುವುದು ಪತ್ತೆಯಾಗಿದೆ.

ವಶಪಡಿಸಿಕೊಳ್ಳಲಾದ ಬಸ್‌ಗಳಲ್ಲಿ ಬಹುತೇಕವು ನಾಗಾಲ್ಯಾಂಡ್ (NL), ಅರುಣಾಚಲ ಪ್ರದೇಶ (AR) ಸೇರಿದಂತೆ ಈಶಾನ್ಯ ರಾಜ್ಯಗಳ ನೋಂದಣಿ ಸಂಖ್ಯೆಯನ್ನು ಹೊಂದಿವೆ. ಇವುಗಳು 'ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್' (AITP) ಅಡಿಯಲ್ಲಿ ಸಂಚರಿಸುತ್ತಿದ್ದರೂ, ಕರ್ನಾಟಕದಲ್ಲಿ ಸಂಚರಿಸುವಾಗ ಪಾವತಿಸಬೇಕಾದ ರಾಜ್ಯದ ಪ್ರವೇಶ ತೆರಿಗೆ ಅಥವಾ ರಸ್ತೆ ತೆರಿಗೆಯನ್ನು ಪಾವತಿಸಿಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ:

ಸಾರಿಗೆ ಇಲಾಖೆಯ ಅಂದಾಜಿನ ಪ್ರಕಾರ, ಇಂತಹ ಅಕ್ರಮ ಬಸ್‌ಗಳ ಸಂಚಾರದಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ವಾರ್ಷಿಕವಾಗಿ 500 ರಿಂದ 1000 ಕೋಟಿ ರೂಪಾಯಿಗಳಷ್ಟು ತೆರಿಗೆ ನಷ್ಟವಾಗುತ್ತಿದೆ. ಈ ಬಸ್‌ಗಳು ಕೇವಲ ತೆರಿಗೆ ವಂಚಿಸುವುದಲ್ಲದೆ, ಸ್ಥಳೀಯವಾಗಿ ನೋಂದಣಿಯಾದ ಮತ್ತು ನಿಯಮಿತವಾಗಿ ತೆರಿಗೆ ಪಾವತಿಸುವ ಬಸ್ ನಿರ್ವಾಹಕರಿಗೆ ಅನ್ಯಾಯ ಮಾಡುತ್ತಿವೆ ಎಂಬ ದೂರುಗಳೂ ಕೇಳಿಬಂದಿವೆ.

ಹಿಂದಿನ ಕಾರ್ಯಾಚರಣೆಗಳು ಮತ್ತು ಕಠಿಣ ಕ್ರಮ:

2025ರ ಸಾಲಿನಲ್ಲಿ ಸಾರಿಗೆ ಇಲಾಖೆ ಇಂತಹ ಅಕ್ರಮಗಳ ವಿರುದ್ಧ ಸಮರ ಸಾರಿದೆ. ಕಳೆದ ವಾರವಷ್ಟೇ ಚಿಕ್ಕಬಳ್ಳಾಪುರ ಬಳಿ ಇದೇ ಮಾದರಿಯ 10ಕ್ಕೂ ಹೆಚ್ಚು ಐಷಾರಾಮಿ ಬಸ್‌ಗಳನ್ನು ಜಪ್ತಿ ಮಾಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ೩೦ಕ್ಕೂ ಹೆಚ್ಚು ಬಸ್‌ಗಳನ್ನು ಸೀಜ್ ಮಾಡಲಾಗಿತ್ತು. ಈವರೆಗೆ ನಡೆಸಲಾದ ಕಾರ್ಯಾಚರಣೆಗಳಲ್ಲಿ ಸುಮಾರು 4 ಕೋಟಿ ರೂಪಾಯಿಗೂ ಹೆಚ್ಚು ದಂಡ ಮತ್ತು ಬಾಕಿ ತೆರಿಗೆಯನ್ನು ವಸೂಲಿ ಮಾಡಲಾಗಿದೆ.

ಕೋಲಾರದಲ್ಲಿ ಇದೇ ವೇಳೆ ಒಂದೇ ನೋಂದಣಿ ಸಂಖ್ಯೆಯನ್ನು (Registration Number) ಎರಡು ವಿಭಿನ್ನ ಬಸ್‌ಗಳಿಗೆ ಬಳಸಿ ವಂಚಿಸುತ್ತಿದ್ದ ಪ್ರಕರಣವನ್ನೂ ಅಧಿಕಾರಿಗಳು ಪತ್ತೆಹಚ್ಚಿದ್ದು, ಎರಡು ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.

ವಶಪಡಿಸಿಕೊಂಡ ಬಸ್‌ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಬಾಕಿ ಇರುವ ತೆರಿಗೆ ಮತ್ತು ದಂಡವನ್ನು ಪಾವತಿಸಿದ ನಂತರವಷ್ಟೇ ಬಸ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Read More
Next Story