
ಧರ್ಮಸ್ಥಳ ಪ್ರಕರಣ | ಬೆಳ್ತಂಗಡಿ ಠಾಣೆ, ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾದ ಮಹೇಶ್ ತಿಮರೋಡಿ
ತಿಮರೋಡಿ ಮನೆಯ ಮೇಲೆ ದಾಳಿ ನಡೆಸಿದಾಗ ಆರೋಪಿಯ ಮೊಬೈಲ್, ಬಟ್ಟೆಗಳು ಸಿಕ್ಕಿದ್ದವು. ಈ ಕುರಿತಂತೆ ಹೆಚ್ಚಿನ ಮಾಹಿತಿ ಕಲೆಹಾಕಲು ಎಸ್‌ಐಟಿ ಅಧಿಕಾರಿಗಳು ಮಹೇಶ್ ತಿಮರೋಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಶುಕ್ರವಾರ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದರೆಂಬ ಆರೋಪದ ಮೇಲೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆ ಪೊಲೀಸರು ಆ.21 ರಂದು ಮಹೇಶ್ ಶೆಟ್ಟಿ ಬಂಧಿಸಲು ತೆರಳಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮೂರನೇ ಆರೋಪಿಯಾಗಿದ್ದರು. ಆ.29 ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ, ಆರೋಪಿ ಮುಸುಕುಧಾರಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಎಸ್.ಐ.ಟಿ ವಿಚಾರಣೆಗೆ ಹಾಜರಾದರು. ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾಗಿ ಮುಸುಕುಧಾರಿ ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿದ್ದ. ಈ ಹೇಳಿಕೆ ಆಧಾರದ ಮೇಲೆ ಅಧಿಕಾರಿಗಳು ತಿಮರೋಡಿ ಮನೆಯ ಮೇಲೆ ದಾಳಿ ನಡೆಸಿದಾಗ ಆರೋಪಿಯ ಮೊಬೈಲ್, ಬಟ್ಟೆಗಳು ಸಿಕ್ಕಿದ್ದವು. ಈ ಕುರಿತಂತೆ ಹೆಚ್ಚಿನ ಮಾಹಿತಿ ಕಲೆಹಾಕಲು ಎಸ್‌ಐಟಿ ಅಧಿಕಾರಿಗಳು ಮಹೇಶ್ ತಿಮರೋಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿಗೆ ಬೇಟಿ ನೀಡಿದ ಪ್ರಣಬ್ ಮೊಹಾಂತಿ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಈ ಮಧ್ಯೆ, ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರು ಬೆಳ್ತಂಗಡಿಗೆ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ರಜೆಯಲ್ಲಿ ತೆರಳಿರುವ ಕಾರಣ ಮೊಹಾಂತಿ ಅವರು ವಿಚಾರಣೆ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಅವರು ಎಸ್‌ಐಟಿ ಕಚೇರಿಯಲ್ಲೇ ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ.