ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಕ್ಯಾತೆ; ಸಿಎಂಗೆ ಪತ್ರ ಬರೆದ ಫಡ್ನವಿಸ್
x

ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಕ್ಯಾತೆ; ಸಿಎಂಗೆ ಪತ್ರ ಬರೆದ ಫಡ್ನವಿಸ್

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮೇ 9ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಅಣೆಕಟ್ಟೆಯ ಎತ್ತರ ಹೆಚ್ಚಿಸಿದರೆ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳು ಪ್ರವಾಹ ಸಮಸ್ಯೆ ಎದುರಿಸಲಿವೆ. ಹೀಗಾಗಿ ಮರು ಪರಿಶೀಲನೆ ಮಾಡಿ ಎಂದು ಮನವಿ ಮಾಡಿದ್ದಾರೆ.


ಕೃಷ್ಣಾ ನ್ಯಾಯಮಂಡಳಿ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದ 524.25 ಮೀಟರ್‌ಗೆ ಹೆಚ್ಚಿಸಲು ಕರ್ನಾಟಕ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರುತ್ತಿರುವಾಗಲೇ, ಮಹಾರಾಷ್ಟ್ರ ಸರ್ಕಾರ ಇದಕ್ಕೆ ತಕರಾರು ತೆಗೆದಿದೆ. ನೆರೆಯ ಆತಂಕವನ್ನು ಮುಂದೊಡ್ಡಿ ಎತ್ತರ ಮಾಡಬಾರದು ಎಂದಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮೇ 9ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಅಣೆಕಟ್ಟೆಯ ಎತ್ತರ ಹೆಚ್ಚಿಸಿದರೆ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳು ಪ್ರವಾಹ ಸಮಸ್ಯೆ ಎದುರಿಸಲಿವೆ. ಹೀಗಾಗಿ ಮರು ಪರಿಶೀಲನೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಾರಾಷ್ಟ್ರ ಮುಖ್ಯಮಂತ್ರಿಯ ಪತ್ರದಿಂದ ಆಘಾತವಾಗಿದೆ ಎಂದಿದ್ದಾರೆ. ಯೋಜನೆಯ ವಿಚಾರದಲ್ಲಿ ಮಹಾರಾಷ್ಟ್ರ ಎಂದೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಮಂಡಳಿ 2010ರ ಡಿಸೆಂಬರ್ 30ರಂದು ನೀಡಿದ್ದ ತೀರ್ಪಿನ ಬಗ್ಗೆ ಎಲ್ಲೂ ಪ್ರಶ್ನೆ ಎತ್ತಿರಲಿಲ್ಲ. ಅಲ್ಲದೆ, ಯೋಜನೆ ಜಾರಿ ಮಾಡಲಿ ಎಂದು ಪ್ರಮಾಣಪತ್ರವನ್ನೂ ಸಲ್ಲಿಸಿತ್ತು" ಎಂದು ಶಿವಕುಮಾರ್ ಹೇಳಿದರು.

, "ನಮ್ಮ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಕೃಷ್ಣಾ ನ್ಯಾಯಮಂಡಳಿ ತೀರ್ಪಿನಂತೆ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಬೇಕಿದೆ. ನ್ಯಾಯಮಂಡಳಿ ತೀರ್ಪು ನೀಡಿದಾಗ ಸುಮ್ಮನಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ.

ರಾಜ್ಯದ ಹಿತಾಸಕ್ತಿಗೆ ಒತ್ತು: ಡಿಕೆಶಿ ಮನವಿ

ಶಿವಕುಮಾರ್ ಅವರು ಅಣೆಕಟ್ಟೆಯ ಎತ್ತರ ಹೆಚ್ಚಿಸುವ ಯೋಜನೆಯು ನ್ಯಾಯಮಂಡಳಿಯಿಂದ ರಾಜ್ಯಕ್ಕೆ ಸಿಕ್ಕಿರುವ ಹಕ್ಕು ಎಂದು ವಾದಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಒಂದೆರಡು ದಿನಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯಲಿದ್ದಾರೆ. ರಾಜ್ಯ ಹಾಗೂ ರೈತರ ಹಿತ ಕಾಯಲು ಎಲ್ಲ ಸಂಸದರು, ಕೇಂದ್ರ ಸಚಿವರು ಸಹಕರಿಸಬೇಕು" ಎಂದು ಇದೇ ವೇಳೆ ಮನವಿ ಮಾಡಿದ್ದಾರೆ.

"ನಮ್ಮ ರೈತರ ಹಿತ ಕಾಯಲು ನೀವು (ರಾಜ್ಯದ ಸಂಸದರು, ಕೇಂದ್ರ ಸಚಿವರು) ಯಾವಾಗ ಎಲ್ಲಿಗೆ ಕರೆಯುತ್ತೀರೋ ಅಲ್ಲಿಗೆ ಬರಲು ನಮ್ಮ ಸರ್ಕಾರ ಸಿದ್ಧವಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಬರೆದಿರುವ ಪತ್ರ ಮತ್ತು ಅದಕ್ಕೆ ನಮ್ಮ ಮುಖ್ಯಮಂತ್ರಿ ಬರೆಯುವ ಪತ್ರವನ್ನು ಎಲ್ಲ ಸಂಸದರಿಗೆ ರವಾನಿಸುತ್ತೇವೆ" ಎಂದು ಶಿವಕುಮಾರ್ ತಿಳಿಸಿದರು.

ಮಹಾರಾಷ್ಟ್ರ ಸರ್ಕಾರ ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ವೈಜ್ಞಾನಿಕ ನೆಲೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, "ಅವರ ಆಕ್ಷೇಪಗಳ ಬಗ್ಗೆ ಚರ್ಚಿಸಿದ ನಂತರವೇ ನ್ಯಾಯಮಂಡಳಿ ತೀರ್ಪು ನೀಡಿದೆ. ಕೇಂದ್ರ ಸರ್ಕಾರದ ಅಧಿಸೂಚನೆ ಹೊರಡಿಸಲು ಮಾತ್ರ ಬಾಕಿ" ಎಂದರು.

ಅಣೆಕಟ್ಟು ಎತ್ತರಿಸುವುದರಿಂದ ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ರಾಯಚೂರು, ಮತ್ತು ಗದಗ ಜಿಲ್ಲೆಗಳ 5.30 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸಿಗಲಿದೆ.

Read More
Next Story