Maha kumbh Stampede | ಮಹಾಕುಂಭ ಕಾಲ್ತುಳಿತ: ಘಟನೆ ಕುರಿತು ಪ್ರತ್ಯಕ್ಷದರ್ಶಿ ಭಾನುಪ್ರಕಾಶ್‌ ಶರ್ಮಾ ಹೇಳಿದ್ದೇನು?
x
ಭಾನು ಪ್ರಕಾಶ್‌ ಶರ್ಮಾ

Maha kumbh Stampede | ಮಹಾಕುಂಭ ಕಾಲ್ತುಳಿತ: ಘಟನೆ ಕುರಿತು ಪ್ರತ್ಯಕ್ಷದರ್ಶಿ ಭಾನುಪ್ರಕಾಶ್‌ ಶರ್ಮಾ ಹೇಳಿದ್ದೇನು?

ʼʼಮುಂಜಾನೆ 3 ಗಂಟೆಗೆ ಸುಮಾರಿಗೆ ಭಕ್ತರ ಮಧ್ಯೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತು'' ಎಂದು ಪ್ರತ್ಯಕ್ಷದರ್ಶಿಯಾದ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ವಿವರಿಸಿದ್ದಾರೆ.


ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ 10ಕ್ಕೂ ಹೆಚ್ಚು ಭಕ್ತರ ಸ್ಥಿತಿ ಚಿಂತಾಜನಕವಾಗಿದ್ದು, 60 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಘಟನೆಯ ಕುರಿತು ಪ್ರತ್ಯಕ್ಷದರ್ಶಿ, ಖ್ಯಾತ ಜ್ಯೋತಿಷಿಯಾದ ವಿ ಭಾನುಪ್ರಕಾಶ್‌ ಶರ್ಮಾ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ವಿವರ ನೀಡಿದ್ದು, ಸ್ವತಃ ಕುಂಭ ಮೇಳದಲ್ಲಿ ಪುಣ್ಯ ಸ್ನಾನದಲ್ಲಿ ಭಾಗವಹಿಸಿದ್ದ ಅವರು ಬುಧವಾರ ಬೆಳಗಿನ ಜಾವ ಸಂಭವಿಸಿದ ದುರ್ಘಟನೆಯ ಇಂಚಿಂಚೂ ಮಾಹಿತಿಯನ್ನು ನೀಡಿದ್ದಾರೆ.

"ತ್ರಿವೇಣಿ ಸಂಗಮದ ಸಮೀಪ ಬುಧವಾರ ಮುಂಜಾನೆ 3ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ರಾತ್ರಿ ಎಂಟು ಗಂಟೆಗೆ ಅಮೃತ ಸ್ನಾನ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಪ್ರತಿ ಸ್ನಾನಘಟ್ಟದಲ್ಲೂ ಅಂದಾಜು 50-60 ಲಕ್ಷ ಭಕ್ತರು ತುಂಬಿದ್ದರು. ಯಾವುದೇ ಅಡೆತಡೆ ಇಲ್ಲದೇ ಎಲ್ಲರೂ ಪುಣ್ಯಸ್ನಾನ ಮಾಡುತ್ತಿದ್ದರು. ಅದಾಗಲೇ ಸ್ಥಳದಲ್ಲಿ 4 ಕೋಟಿಗೂ ಹೆಚ್ಚು ಭಕ್ತರು ಅಮೃತ ಸ್ನಾನಕ್ಕಾಗಿ ಕಾಯುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಭಕ್ತರ ಮಧ್ಯೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತು'' ಎಂದು ಶ್ರೀರಂಗಪಟ್ಟಣ ಮೂಲದ ಭಾನುಪ್ರಕಾಶ್ ಶರ್ಮಾ ಅವರು ಘಟನೆಯನ್ನು ವಿವರಿಸಿದರು.


"ಘಟನೆಯ ಸ್ಥಳದಲ್ಲಿ ನಾವು ಕಂಡಂತೆ ಯಾವುದೇ ಸಾವು ಸಂಭವಿಸಿಲ್ಲ. ಆದರೆ, ಹತ್ತಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದರು. ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅಲ್ಲದೆ, ಸುಮಾರು 60 ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಎಲ್ಲರನ್ನೂ ಕೂಡಲೇ ಅಂಬುಲೆನ್ಸ್‌ಗಳ ಮೂಲಕ ಅಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆʼʼ ಎಂದು ವಿವರಿಸಿದರು.


ಅಖಾಡ ಸ್ನಾನದ ವೇಳೆ ನೂಕುನುಗ್ಗಲು

ʼʼಕುಂಭ ಮೇಳದಲ್ಲಿ ಒಟ್ಟು 60 ಸ್ನಾನಘಟ್ಟಗಳಿವೆ. 13 ಅಖಾಡಗಳಿವೆ. ಮೌನಿ ಅಮಾವಾಸ್ಯೆಯಂದು ಈ ಅಖಾಡಗಳಲ್ಲಿ ಸಪ್ತ ಋಷಿಗಳು ಬ್ರಾಹ್ಮಿ ಮುಹೂರ್ತದಲ್ಲಿ ಪುಣ್ಯ ಸ್ನಾನ ಮಾಡಿರುತ್ತಾರೆ ಎಂಬ ಪ್ರತೀತಿ ಇದೆ. ಹಾಗಾಗಿ ಅಖಾಡಗಳಲ್ಲಿ ಮೊದಲಿಗೆ ನಾಗಸಾಧುಗಳು ಪುಣ್ಯಸ್ನಾನ ಮಾಡಿದ ಮೇಲೆ ಜನಸಾಮಾನ್ಯರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಮುಂಜಾನೆ 3ಗಂಟೆಯಲ್ಲಿ ನಾಗಸಾಧುಗಳ ಅಮೃತ ಸ್ನಾನ ಮುಗಿಯುತ್ತಿದ್ದಂತೆ ಸ್ನಾನಕ್ಕೆ ಇಳಿಯಲು ಜನರ ಮಧ್ಯೆ ನೂಕು ನುಗ್ಗಲು ಉಂಟಾಗಿದೆ. ಸಣ್ಣ ಪ್ರಮಾಣದಲ್ಲಿ ಕಾಲ್ತುಳಿತ ಸಂಭವಿಸಿದೆ. ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ಸ್ನಾನಘಟ್ಟಗಳನ್ನು ಮೂರು ಗಂಟೆಗಳ ಕಾಲ ಬಂದ್ ಮಾಡಿತು. ಪರಿಸ್ಥಿತಿ ಸಂಪೂರ್ಣ ಸಹಜ ಸ್ಥಿತಿಗೆ ಬಂದ ಬಳಿಕ ಅಮೃತ ಸ್ನಾನಕ್ಕೆ ಅವಕಾಶ ನೀಡಲಾಯಿತು. ಅಮೃತ ಸ್ನಾನದ ಅವಕಾಶ ಸಿಗದವರಿಗೆ ಫೆ.5 ರ ನಂತರ ಬರುವಂತೆ ಸೂಚನೆ ನೀಡಲಾಗಿದೆʼʼ ಎಂದೂ ಭಾನುಪ್ರಕಾಶ್‌ ಶರ್ಮಾ ಅವರು ಹೇಳಿದರು.

ʼʼಮುಂಜಾನೆ 3 ಗಂಟೆಗೆ ಸ್ನಾನಕ್ಕೆ ನಿಂತ ನಮಗೆ ಮಧ್ಯಾಹ್ನ1 ಗಂಟೆಗೆ ಅಮೃತ ಸ್ನಾನದ ಅವಕಾಶ ದೊರೆಯಿತು. ಈಗಾಗಲೇ ಒಟ್ಟು 8 ಕೋಟಿ ಭಕ್ತರು ಪುಣ್ಯ ಸ್ನಾನ ಮುಗಿಸಿದ್ದಾರೆ. ನಾವು ಬೆಂಗಳೂರಿನ ಮಲ್ಲೇಶ್ವರಂನ ಪ್ರಕಾಶ್ ಅಯ್ಯಂಗಾರ್ ನೇತೃತ್ವದಲ್ಲಿ 15 ಜನರು ಬಂದಿದ್ದೇವೆ. ನಮ್ಮ ಮಾಹಿತಿ ಪ್ರಕಾರ ಕರ್ನಾಟಕದಿಂದ 2 ಲಕ್ಷ ಮಂದಿ ಭಕ್ತರು ಅಮೃತ ಸ್ನಾನಕ್ಕೆ ಆಗಮಿಸಿದ್ದಾರೆʼʼಎಂದು ವಿವರಿಸಿದರು.


13 ಕಿ.ಮೀ. ನಡೆದೇ ಸ್ನಾನ ಮಾಡಬೇಕು

ʼʼಅಖಾಡಗಳಲ್ಲಿ ಅಮೃತ ಸ್ನಾನ ಮಾಡುವವರು 13 ಕಿ.ಮೀ. ನಡೆದು ಬರಬೇಕು. ಎರಡು ನದಿಗಳ ಸಂಗಮ ಸ್ಥಳದಲ್ಲಿ ಮೌನಿ ಅಮಾವಾಸ್ಯೆಯಂದು ಅಮೃತ ಸ್ನಾನ ಮಾಡುವುದರಿಂದ ಪುನರ್ಜನ್ಮಗಳ ಪಾಪ ಕಳೆಯಲಿದೆ ಎಂಬ ನಂಬಿಕೆ ಇದೆ. ಇಲ್ಲಿ ಅಮೃತ ಸ್ನಾನ ಮುಗಿಸಿದವರು ಕಾಶಿಗೆ ತೆರಳಿ ವಿಶ್ವನಾಥನ ದರ್ಶನ ಪಡೆಯಬೇಕುʼʼ ಎಂದು ʼʼದ ಫೆಡರಲ್‌ ಕರ್ನಾಟಕʼದ ಜೊತೆ ಮಹಾ ಕುಂಭ ಮೇಳದ ಮಹತ್ವವನ್ನು ವಿವರಿಸಿದರು.


ಭಾನುಪ್ರಕಾಶ್‌ ಶರ್ಮಾ ಯಾರು?

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಭಾನುಪ್ರಕಾಶ್‌ ಶರ್ಮಾ ಅವರು ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಅಧ್ಯಕ್ಷರು. ಪ್ರಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞರು. ಕೃಷ್ಣ ಯಜುರ್ವೇದ, ಶೈವಾಗಮ ಪ್ರವರ ಸಾಹಿತ್ಯದಲ್ಲಿ ಪಾಂಡಿತ್ಯ ಹೊಂದಿದ್ದಾರೆ.

೧೯೮೭ ರಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಮನೆಯಲ್ಲಿ ವಿಶ್ವಶಾಂತಿ ಮಹಾಯಾಗ ನೆರವೇರಿಸಿದ್ದರು. ಅಲ್ಲದೇ ಅಮೆರಿಕದಲ್ಲಿ ವಿವಿಧೆಡೆ ಚಂಡಿಕಾ ಹೋಮ ನೆರವೇರಿಸಿದ ಖ್ಯಾತಿ ಭಾನು ಪ್ರಕಾಶ ಶರ್ಮಾ ಅವರಿಗೆ ಸಂದಿದೆ. ಇವರಿಗೆ ಅಮೆರಿಕದ ವಿಶ್ವವಿದ್ಯಾಲಯಗಳು ಹಾಗೂ ಶ್ರೀಲಂಕಾದ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್‌ ಪದವಿಯೋ ದೊರೆತಿದೆ.

Read More
Next Story