ಮಹದಾಯಿ ಯೋಜನೆ | ವನ್ಯಜೀವಿ ಮಂಡಳಿ ಅನುಮತಿ ತಿರಸ್ಕರಿಸಿಲ್ಲ: ಸಚಿವ ಪ್ರಲ್ಹಾದ ಜೋಶಿ
x
ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಮಹದಾಯಿ ಯೋಜನೆ | ವನ್ಯಜೀವಿ ಮಂಡಳಿ ಅನುಮತಿ ತಿರಸ್ಕರಿಸಿಲ್ಲ: ಸಚಿವ ಪ್ರಲ್ಹಾದ ಜೋಶಿ

ರಾಜ್ಯ ಸರ್ಕಾರ ಸಲ್ಲಿಸಿದ ಮಹದಾಯಿ ಯೋಜನೆಯ ಪ್ರಸ್ತಾವದ ವಿಷಯ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಅದನ್ನು ಯಾವುದೇ ತೀರ್ಮಾನ ಕೈಗೊಳ್ಳದೇ ಮುಂದೂಡಿದೆಯೇ ಹೊರತು ತಿರಸ್ಕರಿಸಿಲ್ಲ ಎಂದು ಕೇಂದ್ರ ಸಚಿವ ಜೋಷಿ ಸ್ಪಷ್ಟಪಡಿಸಿದ್ದಾರೆ


Click the Play button to hear this message in audio format

ರಾಜ್ಯ ಸರ್ಕಾರ ಸಲ್ಲಿಸಿದ ಮಹದಾಯಿ ಯೋಜನೆಯ ಪ್ರಸ್ತಾವದ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಕಾರಣ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಯಾವುದೇ ತೀರ್ಮಾನ ಕೈಗೊಳ್ಳದೇ ಆ ಪ್ರಸ್ತಾವವನ್ನು ಮುಂದೂಡಿದೆಯೇ ಹೊರತು ತಿರಸ್ಕರಿಸಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕರ್ನಾಟಕ ಹಾಗೂ ಗೋವಾ ಸರ್ಕಾರಗಳು ಮಹದಾಯಿ ವಿಷಯದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ಅದು ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚಿಸುವುದು ಬೇಡ ಎಂದು ಅಧಿಕಾರಿಗಳು ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಮನವರಿಕೆ ಮಾಡಿದ್ದಾರೆ. ಇದನ್ನು ರಾಜ್ಯ ಸರ್ಕಾರ ನಮ್ಮ ಗಮನಕ್ಕೆ ತಂದಿರಲಿಲ್ಲ. ತಂದಿದ್ದರೆ ನಾವು ಒತ್ತಡ ಹೇರಬಹುದಿತ್ತು. ಮಹದಾಯಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಏನೂ ಮಾಡಿಲ್ಲ. ಈವರೆಗೆ ಕೇವಲ ಬಂಡೂರಾ ಪ್ರಸ್ತಾವನೆ ಮಾತ್ರ ಕಳಿಸಿದೆ. ಕಳಸಾ ಪ್ರಸ್ತಾವನೆ ಕಳಿಸಿಲ್ಲ. ಈ ಯೋಜನೆಗೆ ಪರಿಸರ ಅನುಮೋದನೆ ನಾವೇ (ಬಿಜೆಪಿ) ಕೊಡಿಸಿದ್ದೇವೆ. ನ್ಯಾಯಮಂಡಳಿಗೆ ನ್ಯಾಯಾಧೀಶರನ್ನು ನೇಮಿಸಿದ್ದಲ್ಲದೇ, ವರದಿ ನೀಡಲು ಸಮಯ ನಿಗದಿ ಮಾಡಿದ್ದೆವು. ಅಧಿಸೂಚನೆ ಹೊರಡಿಸಿದೆವು. ವಿಸ್ತ್ರತಾ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ಕೂಡ ನೀಡಿದ್ದೇವೆ' ಎಂದರು.

'ದೆಹಲಿಗೆ ನಿಯೋಗ ಕರೆದೊಯ್ಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಬಂದರೆ, ನಾವು ಸ್ವಾಗತಿಸುತ್ತೇವೆ. ಈವರೆಗೆ ಮಹದಾಯಿ ಕುರಿತು ಒಮ್ಮೆಯೂ ಚರ್ಚಿಸಿಲ್ಲ. ನಮಗೆ ಬದ್ಧತೆ ಇದೆ. ನಾವು ಇದನ್ನು ಬಗೆಹರಿಸುತ್ತೇವೆ. ಇದು ನ್ಯಾಯಾಲಯದಲ್ಲಿ ಇರುವುದರಿಂದ ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಿ, ತೀರ್ಮಾನಿಸಬೇಕಿದೆ' ಎಂದು ಅವರು ತಿಳಿಸಿದರು.

Read More
Next Story