ಕೇಂದ್ರ ಮತ್ತು ಕರ್ನಾಟಕದ ನಡುವೆ ಮತ್ತೆ ಮಹದಾಯಿ ಯೋಜನೆ ಸಂಘರ್ಷ; ರಾಜ್ಯಕ್ಕೆ ಕಹಿ; ಗೋವಾಗೆ ಸಿಹಿ
ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಮತ್ತು ಕರ್ನಾಟಕ ನಡುವೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಸಿಕ್ಕಬೇಕಿರುವ ಪಾಲಿಗಾಗಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಂಘರ್ಷ ಈಗ ಮಹದಾಯಿ ಯೋಜನೆಯ ಕಾರಣದಿಂದ ಹೊಸ ರೂಪ ಪಡೆದುಕೊಂಡಿದೆ. ತನ್ನ ನ್ಯಾಯಯುತ ಪಾಲನ್ನು ತನಗೆ ನೀಡುವಂತೆ ಕೇಳಲು ಕರ್ನಾಟಕ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಲು ತೀರ್ಮಾನಿಸಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಮುಂದುವರಿಸಿದರೆ, ಸರ್ವೋಚ್ಛ ನ್ಯಾಯಾಲಯದ ಕದ ತಟ್ಟಲು ಸಜ್ಜಾಗಿದೆ
ಕರ್ನಾಟಕದ ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಯೋಜಿಸಲಾಗಿರುವ ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿರುವ ರೀತಿಯಿಂದಾಗಿ ಈಗ ಕೇಂದ್ರ ಮತ್ತು ಕರ್ನಾಟಕದ ನಡುವೆ ಸಂಘರ್ಷ ಆರಂಭವಾಗಿದೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿ ಮಹದಾಯಿ ಯೋಜನೆಗೆ ಅನುಮೋದನೆ ನೀಡದೆ, ನೆರೆಯ ಗೋವಾಕ್ಕೆ 400 ಕೆ.ವಿ.ಸಾಮಾರ್ಥ್ಯದ ವಿದ್ಯುತ್ ಮಾರ್ಗ ನಿರ್ಮಿಸುವ ʼಗೋವಾ-ತಮ್ನಾರ್ ವಿದ್ಯುತ್ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಷರತ್ತು ಬದ್ಧ ಅನುಮತಿ ನೀಡಿರುವುದು, ಕೇಂದ್ರ ಮತ್ತು ರಾಜ್ಯದ ನಡುವಿನ ಒಕ್ಕೂಟ ವ್ಯವಸ್ಥೆಯಡಿಯ ಸಂಘರ್ಷಕ್ಕೆ ಕಾರಣವಾಗಿದೆ.
ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸಿರುವ ಕರ್ನಾಟಕ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಶೀಘ್ರ ಸರ್ವ ಪಕ್ಷದ ನಿಯೋಗವನ್ನು ತೆಗೆದುಕೊಂದು ಹೋಗಲು ನಿರ್ಧರಿಸಿದೆ. ಕೇಂದ್ರ ಸರ್ಕಾರದಿಂದ ನ್ಯಾಯ ದೊರೆಯುವ ಸಾಧ್ಯತೆ ಕ್ಷೀಣಾಗಿರುವುದರಿಂದಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಏನಿದು ಮಹದಾಯಿ ಯೋಜನೆ
ಪರಿಸ್ಥಿತಿ ಹೀಗಿರುವಾಗ ಮಹದಾಯಿ ನದಿ ನೀರಿನ ವಿವಾದ ಕುರಿತು ಒಂದಿಷ್ಟು ವಿವರ; ಕರ್ನಾಟಕ ಸರ್ಕಾರ ಈ ಯೋಜನೆಗಾಗಿ ತಯಾರಿಸಿದ ಈಗಿನ ವೆಚ್ಚದ ನವೀಕೃತ ಅಂದಾಜು ರೂ. 1,677 ಕೋಟಿ. 2012ರಲ್ಲಿ ಈ ಯೋಜನೆಗೆ ಮೂರ್ತರೂಪ ದೊರೆತಾಗ ಅಂದಾಜಿಸಿದ ವೆಚ್ಚ ರೂ. 840.92 ಕೋಟಿ. ಅಂದರೆ ಯೋಜನೆ ವೆಚ್ಚ ಹೆಚ್ಚೂಕಡಿಮೆ ದುಪ್ಪಟ್ಟು. ಯೋಜನೆಗೆ ಬೇಕಿರುವ ಅರಣ್ಯ ಪ್ರದೇಶದ ವ್ಯಾಪ್ತಿ; 499.13 ಹೆಕ್ಟೇರ್. ಈಗ ಈ ಯೋಜನೆ ಆರಂಭಿಸಲು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಅನುಮತಿಯನ್ನು ಎದುರು ನೊಡುತ್ತಿದೆ. ಆದರೆ, ಸಮಸ್ಯೆ ಎದುರಾಗಿರುವುದು ರಾಷ್ಟ್ರೀಯ ವನ್ಯಜೀವಿ ಮಂಡಳಿಯು ತೆಗೆದುಕೊಂಡಿರುವ ತೀರ್ಮಾನದಿಂದ.
ಮಹದಾಯಿ ಹುಟ್ಟು ಕರ್ನಾಟಕ-ಹರಿಯುವುದು ಗೋವಾದಲ್ಲಿ ಮಾಂಡವಿಯಾಗಿ
ಮಹದಾಯಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮತ್ತು ಕರ್ನಾಟಕ ಸುದೀರ್ಘ ವಿವಾದಗಳನ್ನು ಹೊಂದಿವೆ.ಮಹದಾಯಿ ಪಶ್ಚಿಮಕ್ಕೆ ಹರಿಯುವ ನದಿಯಾಗಿದ್ದು, ಕರ್ನಾಟದ ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟ ಭಾಗದ ಭೀಮಗಢ ವನ್ಯಜೀವಿ ಅಭಯಾರಣ್ಯದಲ್ಲಿ ಹುಟ್ಟುತ್ತದೆ. ಗೋವಾದಲ್ಲಿ ಈ ನದಿಯನ್ನು ಮಾಂಡೋವಿ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ನದಿಯು 35 ಕಿ.ಮೀ. ಅರಬ್ಬಿ ಸಮುದ್ರ ಸೇರುವ ಮುನ್ನ ಗೋವಾದಲ್ಲಿ 82 ಕಿ.ಮೀ ದೂರ ಹರಿಯುತ್ತದೆ. ಈ ಮಹದಾಯಿ ನದಿಯ ನೀರನ್ನು ಬಳಸಿಕೊಂಡು ಕಳಸಾ-ಬಂಡೂರಿ ಯೋಜನೆಯನ್ನು ಜಾರಿಗೊಳಿಸುವುದು ಕರ್ನಾಟಕದ ಮಹತ್ವಾಕಾಂಕ್ಷೆ.
ಯೋಜನೆ ರೂಪುಗೊಂಡಿದ್ದು 35 ವರ್ಷದ ಹಿಂದೆ
ಈ ಕಳಸಾ-ಬಂಡೂರಿ ನಾಲಾ ಯೋಜನೆಯಿಂದ ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆ ಇದು. ಈ ಯೋಜನೆ ಹುಟ್ಟಿಕೊಂಡಿದ್ದು 1989ರಲ್ಲಿ. ಆಗಲೇ ಗೋವಾ ಸರ್ಕಾರ ಈ ಯೋಜನೆಯ ಬಗ್ಗೆ ತನ್ನ ತಕರಾರು ಎತ್ತಿತ್ತು. ಈ ಯೋಜನೆಗಾಗಿ ಕಳಸಾ ಮತ್ತು ಬಂಡೂರಿ ಉಪನದಿಗಳಿಂದ 3.9 ಟಿಎಂಸಿ ನೀರನ್ನು ಬಳಸಿಕೊಳ್ಳಲು ಯೋಜಿಸಿರುವ ಕರ್ನಾಟಕ ಕಳಸಾ ನದಿಯಿಂದ 2.18 ಟಿಎಂಸಿ, ಬಂಡೂರಿಯಿಂದ 1.72 ಟಿಎಂಸಿ ನೀರನ್ನು ಬಳಸಿಕೊಳ್ಳಲಿದೆ. ಕರ್ನಾಟಕ ಮತ್ತು ಗೋವಾ ನಡುವಿನ ಈ ಅಂತರ್ರಾಜ್ಯ ನದಿ ನೀರಿನ ವಿವಾದವನ್ನು ಬಗೆಹರಿಸಲು 2010ರಲ್ಲಿ ಮಹದಾಯಿ ಜಲವಿವಾದ ನ್ಯಾಯಾಧಿಕರಣವನ್ನು ಸ್ಥಾಪಿಸಲಾಯಿತು.
ನ್ಯಾಯಾಧೀಕರಣ
ಈ ನ್ಯಾಯಾಧೀಕರಣ ಮಹದಾಯಿ ನದಿಯ 13.42 ಟಿಎಂಸಿ ನೀರನ್ನು ಕರ್ನಾಟಕಕ್ಕೆ ನೀಡಿ ಆದೇಶ ಹೊರಡಿಸಿತು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಫೆಬ್ರುವರಿ 2020ರಲ್ಲಿ ಆದೇಶವನ್ನು ಕೂಡ ಹೊರಡಿಸಿತು. ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಡಿಸೆಂಬರ್ 29, 2022 ರಲ್ಲಿ ಒಪ್ಪಿಗೆ ನೀಡಿತು. ಈ ಒಪ್ಪಿಗೆಯ ಹಿನ್ನೆಲೆಯಲ್ಲಿಯೇ ನೋಡುವುದಾದರೆ, 1.78 ಟಿಎಂಸಿ ಅಡಿ ನೀರನ್ನು ಮೀಸಲಿಡಲಾಯಿತು. ಈ ಯೋಜನೆಗೆ ಬೆಳೆಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್ ವೆಲ್ ನಿರ್ಮಾಣ, ಪಂಪ್ ಹೌಸ್, ಎಲೆಕ್ಟ್ರಿಕ್ ಸಬ್ ಸ್ಟೇಷನ್, ಪೈಪ್ ಲೈನ್) ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರವು, ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 10.68 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತದೆ ಎಂದು ತನ್ನ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಈ ಪ್ರಸ್ತಾವನೆಗೆ ರಾಜ್ಯ ವನ್ಯಜೀವಿ ಮಂಡಳಿ ಅನುಮತಿ ನೀಡಿ, ಕೇಂದ್ರಕ್ಕೆ ಕಳುಹಿತ್ತು. ಆದರೆ, ಕೇಂದ್ರ ವನ್ಯಜೀವಿ ಮಂಡಳಿ ತನ್ನ ಹಿಂದಿನ ಸಭೆಯಲ್ಲಿ ಅನುಮತಿಯನ್ನು ನಿರಾಕರಿಸಿತ್ತು.
ವಾಸ್ತವಾಂಶದ ಅಧ್ಯಯನ
ಮಹದಾಯಿ ಯೋಜನಾ ಪ್ರದೇಶದ ವಾಸ್ತವಾಂಶದ ಅಧ್ಯಯನಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ತನ್ನ ತಜ್ಞರ ತಂಡವೊಂದನ್ನು ಕಳುಹಿಸಿತ್ತು. ಈ ತಂಡವು ಹಲವಾರು ಶಿಫಾರಸುಗಳನ್ನು ಮಾಡಿತ್ತು. ಈ ಬಗ್ಗೆ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿಕ್ರಿಯೆಯನ್ನೂ ಕೇಳಲಾಗಿತ್ತು. ಆದರೆ ವಿಷಯ ನ್ಯಾಯಾಂಗದ ಮುಂದಿರುವುದರಿಂದ ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಹುಲಿ ಸಂರಕ್ಷಣ ಪ್ರಾಧಿಕಾರ ಪ್ರತಿಕ್ರಿಯೆ ನೀಡದಿರುವ ಕಾರಣದಿಂದ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಕೇಂದ್ರ ವನ್ಯಜೀವಿ ಮಂಡಳಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದೆ.
“ಹೌದು. ಇದು ಕರ್ನಾಟಕ ಸರ್ಕಾರದ ಯೋಜನೆ. ಗೋವಾ ಸರ್ಕಾರವೂ ಮಹದಾಯಿ ಯೋಜನೆಯನ್ನು ವಿರೋಧಿಸಿ, ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದೆ” ಎಂದು ಕರ್ನಾಟಕದ ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹೇಳಿರುವ ಹಿನ್ನೆಲೆಯಲ್ಲಿ ಮತ್ತೊಂದು ಸಭೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. “ಹಾಗಾಗಿ ಸದ್ಯಕ್ಕೆ ಕೇಂದ್ರ ವನ್ಯಜೀವಿ ಮಂಡಳಿಯ ತೀರ್ಮಾನ ತಾತ್ಕಾಲಿಕ, ಮುಂದಿನ ಸಭೆಯಲ್ಲಿ ಮಂಡಳಿಯ ತೀರ್ಮಾನ ಬದಲಾಗುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗುವುದಿಲ್ಲಿ” ಎಂದು ರಾಜ್ಯ ನೀರಾವರಿ ಇಲಾಖೆಯ ಅಧಿಕಾರಿಗಳು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.
ರಾಜ್ಯಕ್ಕೆ ಕಹಿ; ಗೋವಾಕ್ಕೆ ಸಿಹಿ
ಸದ್ಯಕ್ಕೆ ಕರ್ನಾಟಕಕ್ಕೆ ಮಹದಾಯಿ ಯೋಜನೆಗೆ ಅಡ್ಡಗಾಲು ಹಾಕಿರುವ ಕೇಂದ್ರ ಗೋವಾದಲ್ಲಿರುವ ಬಿಜೆಪಿ ಸರ್ಕಾರಕ್ಕೆ ನೆರವಾಗಲು ಮುಂದಾಗಿರುವುದು ಈಗ ಕೇಂದ್ರ ಮತ್ತು ಕರ್ನಾಟಕದ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನಿರಾಕರಿಸಿರುವ ರಾಷ್ಟ್ರೀಯ ವನ್ಯ ಜೀವಿ ಮಂಡಳಿ, ಕರ್ನಾಟಕದ 435 ಎಕರೆ ಅರಣ್ಯ ಪ್ರದೇಶ ಬಳಕೆಯಾಗುವ ಗೋವಾ-ತಮ್ನಾರ್ 400 ಕಿ.ವ್ಯಾ.ವಿದ್ಯುತ್ ಮಾರ್ಗಕ್ಕೆ ಷರತ್ತು ಬದ್ಧ ಅನುಮತಿ ನೀಡಿದೆ. ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೋವಾಗೆ ಸಿಹಿಯುಣಿಸುವ ಆದೇಶವನ್ನು ನೀಡಲಾಗಿದೆ. ಈ ಯೋಜನೆಗೆ ಸಹಕರಿಸುವಂತೆ, ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದೆ.
ಸೂಕ್ಷ್ಮವಲಯ ಹಾದು ಹೋಗುವ ವಿದ್ಯುತ್ ಮಾರ್ಗ
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಈ ಯೋಜನೆಗೆ ಮಹಾವೀರ ವನ್ಯಜೀವಿ ಧಾಮದ 27 ಹೆಕ್ಟೇರ್ ಅರಣ್ಯ ಬಳಕೆಗೆ ಗೋವಾ ಸರ್ಕಾರ ಒಪ್ಪಿಗೆ ಕೇಳಿದೆ. ಈ ಅರಣ್ಯ ಬಳಕೆಗೆ ಈಗ ಒಪ್ಪಿಗೆ ಸಿಕ್ಕಿದೆ. ಈ ಯೋಜನೆಗೆ ಕರ್ನಾಟಕದ 435 ಎಕರೆ ಅರಣ್ಯ ಪ್ರದೇಶದ ಬಳಕೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಉದ್ದೇಶಿತ ವಿದ್ಯುತ್ ಮಾರ್ಗವು ದಾಂಡೇಲಿ ಆನೆ ಕಾರಿಡಾರ್, ಭೀಮಗಢ ಅಭಯಾರಣ್ಯ ಸೂಕ್ಷ್ಮ ವಲಯ, ಕಾಳಿ ಹುಲಿ ಸಂರಕ್ಷಿತ ಸೂಕ್ಷ್ಮ ವಲಯ ಹಾಗೂ ದಾಂಡೇಲಿ ಅಭಯಾರಣ್ಯಗಳನ್ನು ಹಾದು ಹೋಗುತ್ತದೆ. ಇದರಿಂದ ದೊಡ್ಡ ಪ್ರಮಾಣದ ಅರಣ್ಯ ಸಂಪತ್ತಿಗೆ ಧಕ್ಕೆಯಾಗುತ್ತದೆ ಎಂಬುದು ಕರ್ನಾಟಕದ ಆತಂಕ.
ಹೆಸರಿಗಷ್ಟೇ ಷರತ್ತು ಬದ್ಧ ಅನುಮತಿ
ಕರ್ನಾಟಕದ ಭಾಗದಲ್ಲಿ ಸ್ಥಾಯಿ ಸಮಿತಿ ಶಿಫಾರಸು ಮಾಡುವವರೆಗೆ ಕಾಮಗಾರಿ ಅರಂಭಿಸಬಾರದು ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ಷರತ್ತು ವಿಧಿಸಿದೆ. ಆದರೆ, ಈ ಹಿಂದೆ ಇದೇ ರೀತಿಯ ಪ್ರಸ್ತಾವನೆಗೆ ಅಂದರೆ 2021ರಲ್ಲಿ ಕರ್ನಾಟಕ “ಆಗೊಲ್ಲ” ಎಂದು ಸ್ಪಷ್ಟ ಉತ್ತರ ನೀಡಿ, ತನ್ನ ಪರಿಸರ ಪ್ರಜ್ಞೆಯನ್ನು ಮೆರೆದಿತ್ತು. ಅಷ್ಟೇ ಅಲ್ಲಿ ಈ ಯೋಜನೆಗೆ ಯಾವುದೇ ರೀತಿಯಲ್ಲಿ ಅವಕಾಶ ನೀಡಬಾರದು ಎಂದು ಗೋವಾ ಫೌಂಡೇಷನ್ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಕುರಿತು ವರದಿ ನೀಡುವಂತೆ ನ್ಯಾಯಾಲಯ ಸೆಂಟ್ರಲ್ ಎಂಪವರಿಂಗ್ ಕಮಿಟಿ-ಸಿಇಸಿ ಗೆ ಸೂಚಿಸಿತ್ತು. “ಈ ಮಾರ್ಗದಲ್ಲಿ ಈಗಾಗಲೇ 220 ಕಿ ವ್ಯಾ ವಿದ್ಯುತ್ ಮಾರ್ಗವಿದೆ. ಹೊಸ ಮಾರ್ಗಕ್ಕಾಗಿ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಅದರ ಬದಲಾಗಿ ಈಗಿರುವ ಮಾರ್ಗವನ್ನೇ ಬಳಸಿಕೊಳ್ಳಬಹುದು. ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಾದರೆ, ಕರ್ನಾಟಕ ಸರ್ಕಾರದ ಅನುಮತಿಯನ್ನು ಪಡೆದುಕೊಳ್ಳಲೇಬೇಕು” ಎಂದು ಸಿಇಸಿ, ಸ್ಪಷ್ಟವಾಗಿ ತನ್ನ ವರದಿಯಲ್ಲಿ ತಿಳಿಸಿತ್ತು.
ತರಾತುರಿ ತೀರ್ಮಾನ
ಈಗಿರುವ ಪ್ರಶ್ನೆಯೆಂದರೆ; “ಗೋವಾ-ತಮ್ನಾರ್ ಯೋಜನೆಯ ಬಗ್ಗೆ ಕರ್ನಾಟಕದ ವನ್ಯಜೀವಿ ಮಂಡಳಿ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡೇ ಇಲ್ಲ. ಹೀಗಿರುವಾಗ ಈ ಕುರಿತು ರಾಷ್ಟ್ರೀಯ ವನ್ಯಜೀವಿ ಮಂಡಳಿ ತರಾತುರಿಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದೇಕೆ” ಎಂದು ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸುತ್ತಾರೆ.
“ಕೇಂದ್ರ ಸರ್ಕಾರವು ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮೂಲಕ ಮಹದಾಯಿಯ ಕಳಸಾ-ಬಂಡೂರಿ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ” ಎಂದು ಆ ಭಾಗದ ಶಾಸಕ ಕೋನರೆಡ್ಡಿ ಆರೋಪಿಸುತ್ತಾರೆ. ಅಷ್ಟೇ ಅಲ್ಲ.” ಕರ್ನಾಟಕದ ಪರವಾಗಿ ಈಗ ಸಂಸದರಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮತ್ತು ಜಗದೀಶ ಶೆಟ್ಟರ್ ಅವರು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಕರ್ನಾಟಕದ ಹಿತ ಕಾಪಾಡಬೇಕು. ಬಿಜೆಪಿ ಪಕ್ಷದ ಹಿತವನ್ನಲ್ಲ” ಎಂದು ಅವರು ಹೇಳಿದ್ದಾರೆ.
ಮಂಗಳವಾರ ಕಲಬುರಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ನೀತಿಯ ಬಗ್ಗೆ ತೀವ್ರತರ ಟೀಕೆ ವ್ಯಕ್ತವಾಗಿದೆ. “ಮಹದಾಯಿ ಯೋಜನೆಯ ಜಾರಿಗಾಗಿ ನಾವು ಕಾತುರದಿಂದ ಕಾಯುತ್ತಿದ್ದೆವು. ಹಿಂದೆ ಕೆಲವು ಬಿಜೆಪಿಯ ಪ್ರತಿಷ್ಠಿತ ಹಿರಿಯ ನಾಯಕರು ಲೋಕಸಭಾ ಚುನಾವಣೆಯ ನಂತರ ಅನುಮತಿ ಕೊಡಿಸುತ್ತೇವೆ. ಮಹದಾಯಿ ಯೋಜನೆ ಜಾರಿಗಾಗಿ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿ ಕೇಂದ್ರದ ಸಂಸದರು ಮಂತ್ರಿಗಳಾದ ನಂತರ ತಮ್ಮ ವಾಗ್ದಾನವನ್ನೇ ಮರೆತಿದ್ದಾರೆ. ಈಗ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಕರ್ನಾಟಕ ಸರ್ಕಾರವನ್ನು ಉಕ್ಕಿನ ಕೊಂಡಿಯಲ್ಲಿ ಸಿಕ್ಕಿಸಿ ನೇತುಹಾಕಿದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಕೇಂದ್ರ ಸರ್ಕಾರ, ಬಿಜೆಪಿ ಸರ್ಕಾರವೇ ಇರುವ ಗೋವಾದ ಪರವಾಗಿ ವಕಾಲತ್ತು ಮಾಡುತ್ತಿದೆ. ಒಕ್ಕೂಟ ಪ್ರಜ್ಞೆಯನ್ನು ಕಳೆದುಕೊಂಡಿದೆ. ಹಾಗಾಗಿ ಬಿಜೆಪಿ ನಾಯಕರಿಗೆ, ಮಂತ್ರಿಗಳಾಗಿರುವ ಜೆಡಿಎಸ್ ನಾಯಕರಿಗೆ ಚುನಾವಣಾ ಪೂರ್ವ ವಾಗ್ದಾನವನ್ನು ನೆನಪಿಸಲು ಸರ್ವಪಕ್ಷದ ಸಭೆಯನ್ನು ಶೀಘ್ರವಾಗಿ ಕರೆಯಲಾಗುವುದು ಎಂದು ಕಾನೂನು ಸಚಿವ ಎಚ್. ಕೆ. ಪಾಟೀಲ್ ಹೇಳಿದ್ದಾರೆ.
“ಹುಲಿ ಸಂರಕ್ಷಿತ ಅರಣ್ಯವೆಂಬ ನೆವವೊಡ್ಡಿ ಮಹದಾಯಿ ಯೋಜನೆಗೆ ಅನುಮತಿ ನೀಡಲು ನಿರಾಕರಿಸಿರುವ ಕೇಂದ್ರ ಅರಣ್ಯ ಸಚಿವರ ನೇತೃತ್ವದ ರಾಷ್ಟ್ರೀಯ ವನ್ಯಜೀವಿ ಮಂಡಳಿ, ಅದೇ ಹುಲಿ ಸಂರಕ್ಷಿತ ಅರಣ್ಯ ತಾಣದ 435 ಎಕರೆ ಪ್ರದೇಶದಲ್ಲಿ ಗೋವಾ ವಿದ್ಯುತ್ ಸ್ಥಾವರಕ್ಕೆ ಅನುಮತಿ ನೀಡಿರುವುದು ಕರ್ನಾಟಕ್ಕೆ ತೋರುತ್ತಿರುವ ತಾರತಮ್ಯ ನೀತಿಯಲ್ಲವೇ?” ಎಂದು ಅವರು ಪ್ರಶ್ನಿಸುತ್ತಾರೆ.
ಆದರೆ ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರು “ಕರ್ನಾಟಕದ ಮಹದಾಯಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿಲ್ಲ. ರಾಜ್ಯದ ಪ್ರಸ್ತಾವನೆಗೆ ಸ್ಪಷ್ಟೀಕರಣ ಕೇಳಿದೆ. ಪ್ರಸ್ತಾವನೆಯಲ್ಲಿ ಕೇಳಿರುವ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಧಾಮಗಳಿವೆಯೇ? ಈ ಪ್ರದೇಶ ಹೊರತುಪಡಿಸಿ, ಬೇರೆ ಪ್ರದೇಶದಲ್ಲಿ ಈ ಯೋಜನೆ ಜಾರಿಗೊಳಿಸಲು ಸಾಧ್ಯತೆಗಳಿವೆಯೇ? ಕಡಿಮೆ ಪ್ರದೇಶದಲ್ಲಿ ಈ ಯೋಜನೆ ಜಾರಿ ಸಾಧ್ಯವಿಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದೆ ಅಷ್ಟೇ” ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಕೇಂದ್ರ ಸರ್ಕಾರದ ಈ ತಾರತಮ್ಯ ನೀತಿಯನ್ನು ಕರ್ನಾಟಕದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ತೀವ್ರವಾಗಿ ಖಂಡಿಸಿದ್ದಾರೆ. ನೀರಾವರಿ ವಿಚಾರದಲ್ಲಿ ಕೇಂದ್ರವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಹಾಗಾಗಿ ದೆಹಲಿಗೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಆಗಲೂ ಸಾಧ್ಯವಾಗದಿದ್ದರೆ, ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸಜ್ಜಾಗಬೇಕು” ಎಂದು ಅವರು ಹೇಳಿದ್ದಾರೆ.
ಸದ್ಯದ ಸಂಗತಿಯೆಂದರೆ, ಇನ್ನೇನು ಮಹದಾಯಿ ಯೋಜನೆಗೆ ಕಾಯಕಲ್ಪ ಎಂದು ಕಾಯುತ್ತಿದ್ದ ಮಂದಿಗೆ ಮತ್ತಷ್ಟು ಕಾಯಬೇಕಾದ ಅನಿವಾರ್ಯ ಅಗತ್ಯ.